ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ, ಸೆಸ್ಕ್‌ನಿಂದ ದೇಶದಲ್ಲಿಯೇ ಪ್ರಥಮ ಬಾರಿಗೆ ಸ್ಮಾರ್ಟ್ ಮೀಟರ್ ಜಾರಿ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿಯೇ ಇದೇ ಪ್ರಥಮ ಬಾರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಗಳು (ಸೆಸ್ಕ್) ಸ್ಮಾರ್ಟ್ ಮೀಟರ್‌ಗಳನ್ನು ಜಾರಿಗೆ ತಂದಿವೆ.

ಪ್ರಾಯೋಗಿಕವಾಗಿ ನಗರದ ಗಿರಿನಗರದ ಎರಡು ಅಪಾರ್ಟ್‌ಮೆಂರ್ಟ್‌ಗಳಲ್ಲಿ ಇಂತಹ 80 ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗಿದೆ. ಇವುಗಳಿಂದ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಸೋಮವಾರದಿಂದಲೇ ಪ್ರಾರಂಭವಾಗಿದೆ.

ಈ ಮೂಲಕ ಎರಡೂ ಕಂಪೆನಿಗಳು ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆಯ ಪ್ರಮಾಣವನ್ನು ಮನಗಂಡು ಪರಿಸ್ಥಿತಿಯನ್ನು ನಿಭಾಯಿಸಲು ಅನುಕೂಲವಾಗಲಿದೆ. ಮೈಸೂರಿನಲ್ಲಿ 35 ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗಿದೆ. ಖಾಸಗಿ `ಸಿಸ್ಕಾನ್~ ಕಂಪೆನಿಯು ಈ ಸ್ಮಾರ್ಟ್ ಮೀಟರ್‌ಗಳನ್ನು ಉಚಿತವಾಗಿ ಒದಗಿಸಿದೆ.

ಎರಡೂ ಕಡೆ ಸಂವಹನಕ್ಕೆ ಅನುಕೂಲವಾಗುವಂತಹ ಈ ಸ್ಮಾರ್ಟ್ ಮೀಟರ್‌ಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ 15 ಮಂದಿ ಎಂಜಿನಿಯರ್‌ಗಳು ರೂಪಿಸಿರುವ ದತ್ತಾಂಶ ಸಂಗ್ರಹಿಸುವ ಘಟಕಗಳೊಂದಿಗೆ ಗಿರಿನಗರದ ಎರಡು ಅಪಾರ್ಟ್‌ಮೆಂಟ್‌ಗಳಲ್ಲಿ ಸೋಮವಾರ ವಿಧ್ಯುಕ್ತವಾಗಿ ಅಳವಡಿಸಲಾಗಿದೆ.

ಈ ಸ್ಮಾರ್ಟ್ ಮೀಟರ್‌ಗಳು ಜನರಲ್ ಪಾಕೆಟ್ ರೇಡಿಯೋ ಸರ್ವೀಸ್ (ಜಿಪಿಆರ್‌ಎಸ್) ಮೂಲಕ ಪ್ರತಿ 15 ನಿಮಿಷಗಳಿಗೊಮ್ಮೆ ಸೆಂಟ್ರಲ್ ಸರ್ವರ್‌ಗೆ (ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿದೆ) ಮಾಹಿತಿ ರವಾನಿಸಲಿದೆ.  ಈ ಮೀಟರ್‌ಗಳಿಂದ ಗ್ರಾಹಕರು ಹಾಗೂ ವಿದ್ಯುತ್ ಕಂಪೆನಿಗಳೆರಡಕ್ಕೂ ವಿದ್ಯುತ್ ನಿರ್ವಹಣೆ ಮಾಡಲು ಅನುಕೂಲವಾಗಲಿದೆ ಎನ್ನುತ್ತಾರೆ `ಬೆಸ್ಕಾಂ~ ಸ್ಮಾರ್ಟ್ ಗ್ರಿಡ್‌ನ ಪ್ರಧಾನ ವ್ಯವಸ್ಥಾಪಕ ಎಸ್.ಎ. ಸತೀಶ್‌ಕುಮಾರ್.

`ಗ್ರಾಹಕರು ಪ್ರಿ ಪೇಯ್ಡ ಅಥವಾ ಪೋಸ್ಟ್ ಪೇಯ್ಡ ಪೈಕಿ ಯಾವುದಾದರೂ ಮೀಟರ್ ಬಳಸಲಿ. ಕಂಪೆನಿ ಹಾಗೂ ಗ್ರಾಹಕರು ವಿದ್ಯುತ್ ನಿರ್ವಹಣೆ ಮಾಡಲು ಯೋಜನೆ ಹಾಕಿಕೊಳ್ಳುವುದಕ್ಕೆ ಅನುಕೂಲವಾಗಲಿದೆ. ಇನ್ನು ಬೇಡಿಕೆ ಹೆಚ್ಚಿರುವ ಅವಧಿಯಲ್ಲಿ ನಿಯಮಿತವಾಗಿ ವಿದ್ಯುತ್ ಬಳಕೆ ಮಾಡಿಕೊಳ್ಳಲು ಇದರಿಂದ ಸಹಾಯವಾಗಲಿದೆ~ ಎಂದರು.

`ಇಂತಹ ಮೀಟರ್‌ಗಳನ್ನು ಸ್ಮಾರ್ಟ್ ಗ್ರಿಡ್‌ನೊಂದಿಗೆ ಸಂಪರ್ಕ ಕಲ್ಪಿಸಿದಲ್ಲಿ ಮೀಟರ್‌ಗಳ ಮೂಲಕ ವಿದ್ಯುತ್ ಬೇಡಿಕೆಯನ್ನು ತಿಳಿಯಲು ಅನುಕೂಲವಾಗಲಿದೆ. ಅಲ್ಲದೆ, ಈ ಮೀಟರ್‌ಗಳ ಮೂಲಕವೇ ಸಮೀಪದ ಗ್ರಿಡ್ ಮೂಲಕ ವಿದ್ಯುತ್ ಪೂರೈಸಬಹುದು. ಇದರಿಂದ ಅನಗತ್ಯ ವಿದ್ಯುತ್ ಕಡಿತಕ್ಕೂ ಕಡಿವಾಣ ಬೀಳಲಿದೆ~ ಎಂದರು.

`ಒಂದು ವೇಳೆ ಈ ಮೀಟರ್‌ಗಳಿಗೆ ಸ್ಮಾರ್ಟ್ ಗ್ರಿಡ್‌ಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗದಿದ್ದಲ್ಲಿ ಗ್ರಾಹಕರಿಗೆ ವಿದ್ಯುತ್ ನಿರ್ವಹಣೆ ಮಾಡುವ ಸಂಬಂಧ ಸೂಕ್ತ ನಿರ್ದೇಶನ ನೀಡಬಹುದು~ ಎಂದರು.

ಈ ಸ್ಮಾರ್ಟ್ ಮೀಟರ್ ಬಳಕೆಯಿಂದ ಪ್ರತಿ ಮನೆಯ ಪ್ರತಿ ದಿನ/ ನಿಮಿಷದ ವಿದ್ಯುತ್ ಬಳಕೆಯ ಪ್ರಮಾಣವನ್ನು ತಿಳಿಯಬಹುದು. ವಿವಾದಿತ ಬಿಲ್ಲಿಂಗ್ ವ್ಯವಸ್ಥೆಗೂ ಕಡಿವಾಣ ಹಾಕಬಹುದು. ಅಲ್ಲದೆ, ಎ/ಸಿ, ಫ್ರಿಡ್ಜ್ ಮತ್ತಿತರ ಉಪಕರಣಗಳಿಗೆ ಎಷ್ಟು ಪ್ರಮಾಣದ ವಿದ್ಯುತ್ ಬಳಕೆಯಾಗುತ್ತದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT