ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂಗೆ ಜಿ.ಪಂ. ರೂ 17 ಕೋಟಿ ಬಾಕಿ

ನೀರಿನ ಯೋಜನೆಗೆ ವಿದ್ಯುತ್ ಪೂರೈಕೆ: ಹಣ ನೀಡಲು ನಿರ್ಲಕ್ಷ್ಯ
Last Updated 17 ಡಿಸೆಂಬರ್ 2013, 6:05 IST
ಅಕ್ಷರ ಗಾತ್ರ

ಕೋಲಾರ: ನೀರು ಪೂರೈಕೆ ಸಲುವಾಗಿ ಕೊರೆದಿರುವ ಕೊಳವೆಬಾವಿಗಳಿಗೆ ವಿದ್ಯುತ್ ಪೂರೈಕೆ ನೀಡಿರುವ ಬೆಸ್ಕಾಂಗೆ ಜಿಲ್ಲಾ ಪಂಚಾಯತ್ ವತಿಯಿಂದ ₨ 15 ಕೋಟಿ ಬರಬೇಕಾಗಿದೆ. ಆದರೆ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ನೀಡದೇ ಸತಾಯಿಸುತ್ತಿದ್ದಾರೆ. ದಯಮಾಡಿ ಹಣವನ್ನು ಕೊಡಿಸಿ ಎಂದು ಬೆಸ್ಕಾಂನ ಕೋಲಾರ ಮತ್ತು ಕೆಜಿಎಫ್ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳು ಅಲವತ್ತುಕೊಂಡ ಘಟನೆ ಜಿ.ಪಂ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಕೋಲಾರ ಉಪವಿಭಾಗದ ಶಿವರಾಂ ಮತ್ತು ಕೆಜಿಎಫ್ ಉಪವಿಭಾಗದ ರಮೇಶ್‌, ಬೆಸ್ಕಾಂ ಹೊಂದಿದ್ದ ಗುರಿಯನ್ನೂ ಮೀರಿ ಕುಡಿಯುವ ನೀರು ಯೋಜನೆಗೆ ವಿದ್ಯುತ್ ಪೂರೈಸುವ ಸೇವೆಯನ್ನು ನೀಡಲಾಗುತ್ತಿದೆ. ಅದರ ಹಣವನ್ನು ಬಾಕಿ ಉಳಿಸಿಕೊಂಡು, ಸಮಪರ್ಕ ಸೇವೆ ನೀಡುತ್ತಿಲ್ಲ ಎಂದು ದೂರುವುದು ಸರಿಯಲ್ಲ ಎಂದರು.

ಅದಕ್ಕೆ ಪ್ರತಿಕಿ್ರಯಿಸಿದ ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ದೇವರಾಜ್, ಒಮ್ಮೆಗೇ ಏಳೇಳು ಕೋಟಿ ಮೊತ್ತದ ಬಿಲ್ ಅನ್ನು ನೀಡಿದರೆ ಆನ್ ಲೈನ್ ವ್ಯವಸ್ಥೆಯಲ್ಲಿ ಅದನ್ನು ಸೇರ್ಪಡೆ ಮಾಡಲು ಸಾಧ್ಯವಿಲ್ಲ. ಹಣವೂ ಬಿಡುಗಡೆ­ಯಾಗುವುದಿಲ್ಲ. ಕಾಮಗಾರಿವಾರು ಬಿಲ್ ಸಲ್ಲಿಸಿದರೆ ಹಣವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.

ಅದಕ್ಕೆ ಆಕ್ಷೇಪಿಸಿದ ಎಂಜಿನಿಯರ್‌ಗಳು, ದೇವರಾಜ್ ಅವರನ್ನು ಈ ಮುನ್ನ ಹಲವು ಬಾರಿ ಭೇಟಿ ಮಾಡಿ ಬಾಕಿ ಮೊತ್ತದ ಹಣವನ್ನು ಪಾವತಿ­ಸುವ ಬಗ್ಗೆ ಕೋರಿಕೆ ಸಲ್ಲಿಸಲಾಗಿದೆ. ಆದರೆ ಆ ಸಂದರ್ಭದಲ್ಲಿ ಅವರು ಕಾಮಗಾರಿವಾರು ಬಿಲ್ ಸಲ್ಲಿಸಬೇಕು ಎಂದು ಹೇಳುವ ಪ್ರಯತ್ನವನ್ನೇ ಮಾಡಿಲ್ಲ. ಈಗ ಸಭೆಯಲ್ಲಿ ಆ ನಿಯಮವನ್ನು ಹೇಳುತ್ತಿದ್ದಾರೆ.

ಮೊದಲೇ ಹೇಳಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಜಿ.ಪಂ.ಮುಖ್ಯ ಕಾರ್ಯ­ನಿರ್ವಹಣಾಧಿಕಾರಿ ಎಸ್.ಎಂಝುಲ್ಫಿಕರ್ ಉಲ್ಲಾ ಕೂಡ ದೇವರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ಆ ನಿಯಮವನ್ನು ಸಭೆಯಲ್ಲಿ ಹೇಳಬೇಕೆ? ಮೊದಲೇ ಹೇಳಿದ್ದರೆ ಆಗುತ್ತಿರಲಿಲ್ಲವೇ ಎಂದು ಅವರು ಆಕ್ಷೇಪಿಸಿದರು.

ಆರೋಗ್ಯ ಕೇಂದ್ರಕ್ಕೆ ವಿದ್ಯುತ್: ಜಿಲ್ಲೆಯ ಹಲವೆಡೆ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಗಳಿಗೆ ವಿದ್ಯುತ್ ಸೌಕರ್ಯ ಇನ್ನೂ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಬೆಸ್ಕಾಂ ಎಂಜಿನಿಯರ್‌ಗಳು, ಈಗಾಗಲೇ ಕಾರ್ಯಾದೇಶ­ವನ್ನು ನೀಡಲಾಗಿದೆ. ಸಂಬಂಧಿಸಿದ ಗುತ್ತಿಗೆದಾರರು ಬಂದು ಸಾಮಗ್ರಿಗಳನ್ನು ಪಡೆದು ಸಂಪರ್ಕ ಕಲ್ಪಿಸಬೇಕು. ಗುತ್ತಿಗೆದಾರರಿಗೆ ಪಂಚಾಯತ್ ಸೂಚನೆ ನೀಡಬೇಕಷ್ಟೆ ಎಂದು ಸ್ಪಷ್ಟನೆ ನೀಡಿದರು.

ನಡೆಯದ ಕಲಿಕೆ: ಜಿಲ್ಲೆಯ ಗ್ರಾಮ ಪಂಚಾಯಿತಿ ಸಾಕ್ಷರತಾ ಕೇಂದ್ರಗಳಲ್ಲಿ ಸಾಮಗ್ರಿಗಳಿಲ್ಲದೆ ಕಲಿಕಾ ಚಟುವಟಿಕೆ ನಡೆಯದಿರುವ ಕುರಿತು ಅಧ್ಯಕ್ಷ ಆರ್.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.  ಕಲಿಕಾ ಸಾಮಗ್ರಿಗಳನ್ನು ಪೂರೈಸುವ ಟೆಂಡರ್ ಅನ್ನು ಮೂರು ಬಾರಿ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಸಾಮಗ್ರಿ­ಪೂರೈಕೆ­ಯಾಗುತ್ತದೆ. ಆಮೇಲೆ ಕಲಿಕಾ ಪ್ರಕ್ರಿಯೆ ಸುಸೂತ್ರ­ವಾಗಿ ನಡೆಯುತ್ತದೆ ಎಂಬ ಅಧಿಕಾರಿಯ ಮಾತನ್ನು ಅವರು ಒಪ್ಪಲಿಲ್ಲ. ಮತ್ತೆ ಮತ್ತೆ ಟೆಂಡರ್ ಕರೆಯುವ ಪರಿಸ್ಥಿತಿ ಏಕೆ ನಿರ್ಮಾಣ ಮಾಡಬೇಕು ಎಂದು ಪ್ರಶ್ನಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ತೊಟ್ಟಿ ನಿರ್ಮಿಸುವ ಕಾಮಗಾರಿಯ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಿಲ್ಲ ಎಂಬ ಕಾರಣದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ­ನಿರ್ದೇಶಕಿ ಎ.ಶಕುಂತಲಾ ಅವರನ್ನು ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾ­ಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವರದಿ ಸಲ್ಲಿಸಿರಲಿಲ್ಲ. ಹೀಗಾಗಿ ತಾವೇ ಭೇಟಿ ನೀಡಿ ವರದಿ ಸಲ್ಲಿಸಿದ್ದೇವೆ ಎಂಬ ಅವರ ಮಾತಿಗೂ ಅಸಮಾ­ಧಾನ ವ್ಯಕ್ತಪಡಿಸಿದರು. ನೀವೇ ಪರಿಶೀಲಿಸಿ ವರದಿ ಕೊಡಿ ಎಂದರೆ, ನಿಮ್ಮ ಅಧೀನ ಅಧಿಕಾರಿಗೆ ಸೂಚಿ­ಸುವ ಅಗತ್ಯವೇನಿತ್ತು? ನಾಯಿಗೆ ಹೇಳಿದರೆ, ನಾಯಿ ತನ್ನ ಬಾಲಕ್ಕೆ ಹೇಳಿತು ಎಂಬಂತಾಗಿದೆ ನಿಮ್ಮ ವರ್ತನೆ ಎಂದು ಝುಲ್ಫಿಕಾರ್ ಉಲ್ಲಾ ಅತೃಪ್ತಿ ವ್ಯಕ್ತಪಡಿಸಿದರು. ಶುಕ್ರವಾರವಷ್ಟೇ ವರದಿ ಸಲ್ಲಿಸ­ಲಾಗಿದೆ ಎಂದು ಮಹಿಳಾ ಅಧಿಕಾರಿ ಹೇಳಿ­ದರು.ಆದರೆ ಪಂಚಾಯತ್ ಸಿಬ್ಬಂದಿ ವರದಿ ಬಂದಿಲ್ಲ ಎಂದು ನುಡಿದರು.

ಕ್ರೀಡಾಪಟುಗಳಿಗೆ ಭತ್ಯೆ: ಇತ್ತೀಚೆಗೆ ಮುಳಬಾಗಲು ತಾಯಲೂರಿನಲ್ಲಿ ನಡೆದ ತಾಲ್ಲೂಕು ಮಟ್ಟದ ಪೈಕಾ ಕ್ರೀಡಾಕೂಟದಲ್ಲಿ ಪಾಲ್ಗೊಂಡವರಿಗೆ ಪ್ರಯಾಣಭತ್ಯೆ ನೀಡಿಲ್ಲ ಎಂಬ ದೂರುಗಳಿವೆ ಎಂದು ಉಪಾಧ್ಯಕ್ಷೆ ಅಲವೇಲಮ್ಮ ಆಕ್ಷೇಪಿಸಿದಾಗ ಪ್ರತಿಕ್ರಿಯಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ, ಕ್ರೀಡಾಕೂಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಕ್ರೀಡಾಪಟುಗೂ ಭತ್ಯೆ ನೀಡಲಾಗಿದೆ. ಭತ್ಯೆ ಪಡೆದಿರುವ ಬಗ್ಗೆ ಪ್ರತಿಯೊಬ್ಬರಿಂದಲೂ ಸಹಿ ಪಡೆಯಲಾಗಿದೆ ಎಂದು ಹೇಳಿದರು.

ತಾಯಲೂರಿನಲ್ಲಿ ಕ್ರೀಡಾಕೂಟ ನಡೆದ ಸಂದರ್ಭದಲ್ಲಿ ಮೊದಲಿಗೆ ಫುಟ್ಬಾಲ್ ಪಂದ್ಯವನ್ನು ಏರ್ಪಡಿಸಿರಲಿಲ್ಲ. ನಂತರ ಏರ್ಪಡಿಸಿ ಎಲ್ಲರಿಗೂ ಭತ್ಯೆ ನೀಡಲಾಗಿದೆ ಎಂದು ನುಡಿದರು.

ಭತ್ಯೆ ನೀಡಿರುವ ಕುರಿತು ಎಲ್ಲ ದಾಖಲೆಗಳನ್ನು ತಮಗೆ ನೀಡುವಂತೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಮೋಲ್ ಅಧಿಕಾರಿಗೆ ಸೂಚಿಸಿದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಆನಂದ್ ಉಪಸ್ಥಿತ­ರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT