ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಂದ್ರೆ ಯುಗದ ಕವಿ: ಕಾಪಸೆ

Last Updated 19 ಫೆಬ್ರುವರಿ 2011, 6:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೇಂದ್ರೆಯಂತೆ ಭಾಷೆ, ಛಂದಸ್ಸಿನ ಲಯ, ಕಲ್ಪನೆಯನ್ನು ಬಳಸಿಕೊಂಡು ಕಾವ್ಯ ರಚಿಸಿದ ಬೇರೊಬ್ಬ ಕವಿ ಇಲ್ಲ. ಬೇಂದ್ರೆ ನಮ್ಮ ಕಾಲದ ಋಷಿ ಕವಿ. ಪಂಪ, ಕುಮಾರವ್ಯಾಸರಂತೆ ಯುಗದ ಕವಿ ಕೂಡ ಎಂದು ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಅಭಿಪ್ರಾಯಪಟ್ಟರು. ಬೇಂದ್ರೆ ಸಂಶೋಧನ ಸಂಸ್ಥೆ ಹಾಗೂ ಬೇಂದ್ರೆ ಸಂಗೀತ ಅಕಾಡೆಮಿ ಆಶ್ರಯದಲ್ಲಿ ಡಾ. ದ.ರಾ. ಬೇಂದ್ರೆಯವರ 116ನೇ ಜನ್ಮ ದಿನದ ಅಂಗವಾಗಿ ಶುಕ್ರವಾರ ನಗರದ ಬೇಂದ್ರೆ ಕುಟೀರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಬಿ.ಬಿ. ರಾಜಪುರೋಹಿತ ಅವರು ರಚಿಸಿದ ‘ಬೇಂದ್ರೆ ಕಾವ್ಯ ವ್ಯಾಕರಣ’ ಕೃತಿ ಬಿಡುಗಡೆ ಮಾಡಿದ ಅವರು, ‘ಬೇಂದ್ರೆಯವರ ಕವಿತೆಯಲ್ಲಿನ ವ್ಯಾಕರಣ ಗುರುತಿಸುವುದು ಕಷ್ಟಕರ ಕೆಲಸ. ಬೇಂದ್ರೆ ಕಾವ್ಯದ ವ್ಯಾಕರಣ, ಪದಪ್ರಯೋಗ ಕುರಿತ ಅಧ್ಯಯನಪೂರ್ಣ ಹಾಗೂ ಮಹತ್ವದ ಗ್ರಂಥ ಇದಾಗಿದೆ’ ಎಂದರು. ಬೇಂದ್ರೆಯವರ ಕಾವ್ಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಕೆಲವರು ಹೇಳುತ್ತಾರೆ. ಬೇಂದ್ರೆ ಅವರು ಕಾವ್ಯವಲ್ಲದೆ, ಗದ್ಯವನ್ನೂ ಬರೆದಿದ್ದು, ಈ ಬರಹಗಳು ತರ್ಕಬದ್ಧವಾಗಿವೆ ಎಂದು ಹಿರಿಯ ವಿಮರ್ಶಕ ಡಾ.ಜಿ.ಎಸ್.ಆಮೂರ್ ಹೇಳಿದರು.

ಡಾ.ವಾಮನ ಬೇಂದ್ರೆ ಸಂಪಾದಿಸಿದ ‘ಸಾಹಿತ್ಯಯೋಗ ಭಾಗ-2’ ಹಾಗೂ ಔದುಂಬರಗಾಥೆಯ 14ನೇ ಸಂಪುಟ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕವಿಗಳಿಗೆ ವಿವೇಕದ ಜೊತೆಗೆ ಹೃದಯವೂ ಇರಬೇಕು ಎಂದು ಬೇಂದ್ರೆ ಹೇಳುತ್ತಿದ್ದರು. ಪುರಾತನ ಮಹಾಕಾವ್ಯಗಳೆಲ್ಲ ದುರಂತದಲ್ಲಿ ಕೊನೆಗೊಳ್ಳುವ ಬಗೆಗೆ ಅವರಿಗೆ ಬೇಸರವಿತ್ತು. ಅವರು ಯಾವಾಗಲೂ ಆಶಾವಾದಿಯಾಗಿದ್ದರು’ ಎಂದರು.

ಡಾ. ವಾಮನ ಬೇಂದ್ರೆ ಸಂಪಾದಿಸಿದ ಹಾಗೂ ಕೃಷ್ಣಾಜಿ ಕುರ್ತಕೋಟಿ ಸಂಗೀತ ಸಂಯೋಜಿಸಿದ ‘ಅಂಬಿಕಾತನಯದತ್ತ ಬೇಂದ್ರೆ ನಮನಗೀತಗಳು’ ಕೃತಿಯನ್ನು ಹಿರಿಯ ಸಾಹಿತಿ ಡಾ. ಕೆ.ರಾಘವೇಂದ್ರ ರಾವ್ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಅವರೂ ಮಾತನಾಡಿದರು. ಬೇಂದ್ರೆ ಸಂಶೋಧನ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಸಹ ನಿರ್ದೇಶಕ ಡಾ. ವಾಮನ ಬೇಂದ್ರೆ ಅತಿಥಿಗಳನ್ನು ಪರಿಚಯಿಸಿದರು. ಸ್ಫೂರ್ತಿ ಶ್ರೀಧರ ಅವರು ಬೇಂದ್ರೆ ಗೀತೆ ಹಾಡಿದರು. ರವೀಂದ್ರ ಶಿರೋಳ್ಕರ್ ಕಾರ್ಯಕ್ರಮ ನಿರೂಪಿಸಿದರು. ಈ ಸಮಾರಂಭದ ನಂತರ ‘ಅಂಬಿಕಾತನಯನ ಹಾಡ ಬೆಳದಿಂಗಳ ನೋಡ’ ಎಂಬ ಸಂಗೀತ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT