ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿದೆ ಗುಣಮಟ್ಟದ ಪಠ್ಯಕ್ರಮ

Last Updated 21 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಶಿಕ್ಷಣದ ಒಟ್ಟು ಪ್ರಮಾಣ ಮತ್ತು ಪರಿಣಾಮದಲ್ಲಿ ಗುಣಮಟ್ಟದ ಪಠ್ಯಕ್ರಮಕ್ಕೆ ಸಿಂಹಪಾಲು ಸಲ್ಲುತ್ತದೆ. ಸಮಾಜವಿಜ್ಞಾನಗಳ  ಪಠ್ಯಕ್ರಮಗಳು  ಪ್ರಸ್ತುತ ಸಮಾಜದ ಅಗತ್ಯಗಳಿಗೆ ಅನುಗುಣವಾಗಿಲ್ಲ ಎಂಬಂತಹ ಆರೋಪಗಳಿವೆ.

ಯಾವುದೇ ಒಂದು ವಿಷಯದ ಗಣ್ಯತೆ ಆ ಸಮಾಜದ ಸಕಾಲಿಕ ಅಪೇಕ್ಷೆಗಳನ್ನು ಅವಲಂಬಿಸಿರುತ್ತದೆ. ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ಸಮಾಜವಿಜ್ಞಾನಗಳ ಕ್ಷೇತ್ರದಲ್ಲಿ ಒಂದು ಮಾದರಿಯ ಪಠ್ಯಕ್ರಮವನ್ನು ರೂಪಿಸಬೇಕು ಎನ್ನುವ ನಿಟ್ಟಿನಲ್ಲಿ ತಜ್ಞರ ತಂಡವನ್ನೊಳಗೊಂಡ ಸಮಿತಿಗಳನ್ನು ರೂಪಿಸಿತ್ತಾದರೂ ಆ ಸಮಿತಿಗಳು ಪಠ್ಯಕ್ರಮ ರೂಪಿಸುವ ಗತಿಯನ್ನು ಪ್ರಸ್ತುತ ಸಾಮಾಜಿಕ ಸ್ಥಿತ್ಯಂತರಗಳು ಮೀರಿರುತ್ತವೆ.
 
ಪರಿಣಾಮವಾಗಿ ಪಠ್ಯಕ್ರಮದ ಕರಡು ತಯಾರಾಗಿ, ಮುದ್ರಣಗೊಂಡು ವಿಶ್ವವಿದ್ಯಾಲಯಗಳ ವಿಭಾಗಗಳನ್ನು ತಲುಪುವುದರೊಳಗೆ ಅದರಲ್ಲಿಯ ಸ್ವಲ್ಪ ಭಾಗ ಸಕಾಲಿಕತೆಯನ್ನು ಕಳೆದುಕೊಂಡಿರುತ್ತದೆ. ಸಮಾಜ ವಿಜ್ಞಾನಗಳಲ್ಲಿಯ ಪಠ್ಯಕ್ರಮ ಹೀಗೆ ಅಪ್ರಸ್ತುತಗೊಂಡರೂ, ಪ್ರಸ್ತುತ ಸಂದರ್ಭಕ್ಕೆ ಸಲ್ಲುವಂತಿದೆ ಎನ್ನುವ ಹಾಗೆ ಮುಂದುವರೆದಿರುವುದೇ ಹೆಚ್ಚು.

ಹಾಗಾಗಿಯೇ ಇತಿಹಾಸದಲ್ಲಾಗಲೀ.. ಸಮಾಜಶಾಸ್ತ್ರದಲ್ಲಾಗಲೀ.. ರಾಜ್ಯಶಾಸ್ತ್ರದಲ್ಲಾಗಲೀ.. ಮಾನವಶಾಸ್ತ್ರದಲ್ಲಾಗಲೀ, ಅನೇಕ ತಲೆಮಾರುಗಳ ಅಂತರದ ನಡುವೆಯೂ ಪಠ್ಯಕ್ರಮದ ವಿಷಯವಸ್ತು ಅಷ್ಟಾಗಿ ಭಿನ್ನವಾಗಿರುವುದಿಲ್ಲ.

ಸದ್ಯದ ಸಂದರ್ಭದಲ್ಲಿ ಜಾತಿಪದ್ಧತಿಯನ್ನು ಬೋಧಿಸುವ ಸಮಾಜಶಾಸ್ತ್ರದ ಅಧ್ಯಾಪಕರು ಅವರು ಪಿ.ಯು.ಸಿ. ವಿದ್ಯಾರ್ಥಿಯಾದಾಗಿನಿಂದಲೂ ಅದೇ ರೀತಿಯ ವಿವರ ಮತ್ತು ವಿಶ್ಲೇಷಣೆಗಳನ್ನು ಓದಿರುವುದಿದೆ. 

ಇದು ನಿಜವಾಗಿಯೂ ಸರಿಯಲ್ಲ. ಸುಮಾರು ಮೂರ್ನಾಲ್ಕು ದಶಕಗಳಿಂದಲೂ ಸಕಾಲಿಕವಲ್ಲದ ಮತ್ತು ಸದ್ಯದ ಸಂದರ್ಭಕ್ಕೆ ಯಾವುದೇ ರೀತಿಯಿಂದ ಮುಖಾಮುಖಿಯಾಗದ ವಿಷಯವನ್ನು ಕಲಿಸುವುದರಿಂದಾಗಲೀ, ಕಲಿಯುವುದರಿಂದಾಗಲೀ ಪ್ರಯೋಜನಗಳಿವೆ ಎಂದು ಶೈಕ್ಷಣಿಕ ಪರಿಸರದಲ್ಲಿರುವ ಯಾರಿಗೇ ಆಗಲಿ ಅನಿಸುವುದಿಲ್ಲ. ಹಾಗಾಗಿ ಆಯಾ ಸಂದರ್ಭಕ್ಕೆ ತಕ್ಕುದಾದ ಪಠ್ಯಕ್ರಮ ರೂಪುಗೊಳ್ಳಬೇಕಾದ ಅವಶ್ಯಕತೆ ಇದೆ. ಜಾತಿಪದ್ಧತಿಯನ್ನು ಜಾಗತೀಕರಣಕ್ಕೆ ಮುಖಾಮುಖಿಯಾಗಿಸಿ ಅಧ್ಯಯನ ಮಾಡುವ ಪಠ್ಯಕ್ರಮದ ಪ್ರಸ್ತುತತೆ ಇದೆ.

ಪಠ್ಯಕ್ರಮ ಸಕಾಲಿಕವಾಗಿರಬೇಕು

 ಆದರ್ಶ ಎನ್ನುವುದು ಸರಿ. ಆದರೆ ಅದು ವಾಸ್ತವಿಕವಲ್ಲ ಎನ್ನುವ ಮಾತಿದೆ. ಹಾಗೆಯೇ  ಸಮಾಜವಿಜ್ಞಾನಗಳ ಪಠ್ಯಕ್ರಮ ಆದರ್ಶ ಮಾದರಿಯಾಗಿ ಅನುಸರಣೆಗೆ ಕಷ್ಟಸಾಧ್ಯವಾಗಿ ಉಳಿಯುವಂತೆ ರೂಪುಗೊಳ್ಳಬಾರದು. ಸದ್ಯದಲ್ಲಿ ಕಲಿಸಲಾಗುವ ವಿಷಯ ಮತ್ತು ಸಮಕಾಲೀನ ಸಂದರ್ಭಗಳ ಮಧ್ಯೆ ಒಂದು ಬಗೆಯ ತಾರ್ಕಿಕ ನಂಟು ಇರಬೇಕು.

ಹಾಗೆಯೇ ಮಾರುಕಟ್ಟೆಯ ವ್ಯಾಪ್ತಿಗೆ ಸಮಾಜವಿಜ್ಞಾನಗಳ ಪಠ್ಯಕ್ರಮವನ್ನು ಒಳಪಡಿಸುವ ಅಗತ್ಯವೂ ಇದೆ. ಹಾಗಾಗಬೇಕಾದರೆ ಪಠ್ಯಕ್ರಮ ರೂಪಿಸುವವರಿಗೆ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ಪ್ರಾದೇಶಿಕ ವಲಯಗಳ ಪ್ರಚಲಿತತೆಗಳ ಗ್ರಹಿಕೆ ಇರಬೇಕಾದುದು ತೀರಾ ಅವಶ್ಯಕ. ಕಳೆದ ನಾಲ್ಕೈದು ದಶಕಗಳಲ್ಲಿ ಆಯಾ ವಿಷಯಗಳಲ್ಲಾದ ಬೆಳವಣಿಗೆಯನ್ನು, ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮ ರೂಪಿಸಬೇಕು.

ಹಿಂದೆ ನೋಡಿಯೇ ಮುಂದೆ ಸಾಗಿ

ಎಲ್ಲ ಸಮಾಜವಿಜ್ಞಾನಗಳನ್ನು ಬಹುತೇಕವಾಗಿ ಪ್ರಾಥಮಿಕ ಹಂತದಿಂದಲೇ ಒಂದಿಲ್ಲಾ ಒಂದು ರೀತಿಯಲ್ಲಿ ಬೋಧಿಸಲಾಗುತ್ತದಾದರೂ ಅಲ್ಲಿರುವ ವಿಷಯಗಳ ಸಂಯೋಜನೆಯಲ್ಲಿರುವ ತಾರ್ಕಿಕ ನಿರಂತರತೆಯನ್ನು ಮರೆತು ಪಠ್ಯಕ್ರಮ ರೂಪಿಸಬಾರದು.

ಹಾಗೆಂದು ಕಾಲಬಾಹಿರವಾದ ಯಾವುದೋ ಒಂದು ಹಳೆಯ ವಿಷಯ ವಸ್ತುವಿನ ಮೇಲಿನ ಮೋಹಕ್ಕೆ ಅಂಟಿಕೊಂಡಿರಬಾರದು. ಮುಖ್ಯವಾಗಿ ಜಾತಿ.. ಧರ್ಮ..ಲಿಂಗ.. ವಯಸ್ಸು.. ಪ್ರದೇಶಗಳ ಪ್ರಭೇದವನ್ನು ಮೀರಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ನೆರವಾಗುವ ಪಠ್ಯಕ್ರಮ ರೂಪಿಸುವ ಧೋರಣೆ ತಂಡದ ಸದಸ್ಯರಿಗಿರಬೇಕು.

ಪ್ರತಿಯೊಂದು ಹಂತದಲ್ಲಿಯ ವಿಷಯವಸ್ತು.. ಸೈದ್ಧಾಂತಿಕ ವಿವರಣೆ.. ವಸ್ತುನಿಷ್ಠತೆ..ಅಧ್ಯಯನ ಪದ್ಧತಿ ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಯಾವುದೇ ಒಂದು ವಿಷಯದ ಬೋಧನೆ ಮತ್ತು ಕಲಿಕೆ ಒಂದೇ ರೀತಿಯಾಗಿರುವುದಿಲ್ಲ.
ಹೇಗೆ ಎಲ್ಲ ಅಧ್ಯಾಪಕರು ಒಂದೇ ರೀತಿಯಾಗಿ ಬೋಧಿಸಲಾರರೋ ಹಾಗೆಯೇ ಎಲ್ಲ ವಿದ್ಯಾರ್ಥಿಗಳು ಒಂದೇ ಮಟ್ಟದ ಕಲಿಕೆಯನ್ನು ಹೊಂದಿರುವುದಿಲ್ಲ. ಪಠ್ಯಕ್ರಮ ರೂಪಿಸುವವರಿಗೆ ಈ ಪರಿಜ್ಞಾನವಿರಬೇಕಾದುದು ಔಚಿತ್ಯವೇ.

 ಜೊತೆಗೆ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿಯೂ ಅಲ್ಲಿ ಅನೇಕ ಕೊರತೆಗಳಿವೆ. ಬೋಧನೆಯಾಗಲೀ.. ಕಲಿಕೆಯಾಗಲೀ ಅನೇಕ ದಶಕಗಳಿಂದಲೂ ತನ್ನ ಯಾಂತ್ರಿಕತೆಯಿಂದ ಹೊರ ಬರಲೇ ಇಲ್ಲ.  ಸಮೂಹ ಚರ್ಚೆ ಮತ್ತು ಸೆಮಿನಾರ್‌ಗಳ ಮೂಲಕ ಬೋಧನೆ.. ಮಾರ್ಗದರ್ಶನ ಕಡಿಮೆ. 

ಇವುಗಳ ಬಗ್ಗೆಯೂ ಪಠ್ಯಕ್ರಮ ರೂಪಿಸುವವರಿಗೆ ತಿಳುವಳಿಕೆ ಇರಬೇಕು. ಇವತ್ತಿಗೂ `ಚಾಕ್.. ಟಾಕ್ ಮತ್ತು ನೋಟ್ಸ್ ಮೆಥೆಡ್~ಗಳೇ ನಮ್ಮಲ್ಲಿ ಇಂದಿಗೂ ಜನಪ್ರಿಯವಾಗಿವೆ.  ತರಗತಿಯಲ್ಲಿ ವಿದ್ಯಾರ್ಥಿಗಳ ಮುಕ್ತ ಭಾಗವಹಿಸುವಿಕೆ ನಮ್ಮಲ್ಲಿ ತೀರಾ ಅಪರೂಪವೇ ಹೌದು.

ಸಮಾಜವೇ ಪ್ರಯೋಗಾಲಯ
ಹೀಗೆಂದು ಹೇಳುತ್ತಲೇ ಕಳೆದ ಅನೇಕ ದಶಕಗಳಿಂದಲೂ ತರಗತಿಯ ನಾಲ್ಕು ಗೋಡೆಗಳಿಗೆ ವಿದ್ಯಾರ್ಥಿಗಳನ್ನು ಫಿಕ್ಸ್ ಮಾಡಿ ಬೋಧಿಸುವ ಪರಿಪಾಠದಲ್ಲಿ ಬದಲಾವಣೆಗಳಾಗದಿದ್ದುದಕ್ಕೆ ದೋಷಪೂರಿತ ಪಠ್ಯಕ್ರಮವೇ ಕಾರಣ.
 
ಪಠ್ಯಕ್ರಮದ ರೂಪಧಾರಣೆಯಲ್ಲಿ ಸಮಾಜಕ್ಕೆ ವಿದ್ಯಾರ್ಥಿಗಳು ನೇರವಾಗಿ ಮುಖಾಮುಖಿಯಾಗುವ ಮೂಲಕ ತಾನು ಅಧ್ಯಯನ ಮಾಡುವ ವಿಷಯ.. ವ್ಯಕ್ತಿ.. ಸಂಸ್ಥ್ಥೆಗಳನ್ನು ಖುದ್ದಾಗಿ ಭೇಟಿ ನೀಡಿ, ನೋಡಿ, ಗ್ರಹಿಸಿ ವ್ಯವಹರಿಸಿ ಜ್ಞಾನಾರ್ಜನೆ ಮಾಡುವತ್ತ ನೆರವಾಗುವ ಹಾಗೆ ಪಠ್ಯಕ್ರಮ ರೂಪುಗೊಳ್ಳಬೇಕು.

  ವೃತ್ತಿ-ಪ್ರವೃತ್ತಿ ಬೆಸೆಯುವಂತಿರಬೇಕು
ಯಾವುದೇ ಸಮಾಜವಿಜ್ಞಾನವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಮುತ್ತಲಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಪರಿಸರದ ಸ್ಪಷ್ಟ ಚಿತ್ರಣ ಸಾಧ್ಯವಾಗಬೇಕು. ಅವರನ್ನು ಸಂವೇದನಾಶೀಲರನ್ನಾಗಿ ರೂಪಿಸುವತ್ತ ನೆರವಾಗಬೇಕು.
 
ಸ್ಪರ್ಧಾತ್ಮಕ ಪರಿಸರದಲ್ಲಿ ತಾನು ಯಾವುದೇ ಗೊಂದಲಗಳಿಲ್ಲದೇ ಸಲ್ಲಬಲ್ಲೆ ಎನ್ನುವ ಆತ್ಮವಿಶ್ವಾಸ ಅವರಲ್ಲಿ ವೃದ್ಧಿಯಾಗಬೇಕು. ಆ ದಿಶೆಯಲ್ಲಿ ನೆರವಾಗುವ ಹಾಗೆ ಪಠ್ಯಕ್ರಮವನ್ನು ರೂಪಿಸಬೇಕು. ವೃತ್ತಿ ಭರವಸೆ.. ಪ್ರವೃತ್ತಿ ಸುಧಾರಣೆ..ಯೋಗ್ಯ ನಾಗರಿಕರಾಗಿ ರೂಪುಗೊಳ್ಳುವ ದಿಶೆಯಲ್ಲಿಯೂ ಆ ಪಠ್ಯಕ್ರಮ ಪಥ್ಯವಾಗಬೇಕು.

ಸೃಜನಶೀಲತೆಯ ಮೂಲವಾಗಬೇಕು

ಹಾಗೆ ನೋಡಿದರೆ ಪಠ್ಯಕ್ರಮ ಜ್ಞಾನದ ಏಕೈಕ ಮೂಲ ಎಂದಲ್ಲ, ಅಂತೆಯೇ ಈ ಪಠ್ಯಕ್ರಮ ಮಾತ್ರ ವಿದ್ಯಾರ್ಥಿಗಳಲ್ಲಿ ಜಗತ್ತನ್ನು ಅರಿಯುವ ದೃಷ್ಟಿಕೋನವನ್ನು ಬೆಳೆಸುತ್ತದೆ ಎನ್ನುವ ಅರ್ಥವೂ ಅಲ್ಲ. ಯಾವುದೇ ಒಂದು ವಿಷಯದ ಪಠ್ಯಕ್ರಮ ಎನ್ನುವುದು ಒಂದು ಸೀಮಿತವಾದ ಜ್ಞಾನ.

ಇನ್ನು ಒಂದು ವಿಷಯದ ಪಠ್ಯಕ್ರಮ ಅದನ್ನು ಓದುವ ವಿದ್ಯಾರ್ಥಿಗಳಲ್ಲಿ ಬರೀ ವಿಮರ್ಶಾತ್ಮಕ ನಿಲುವನ್ನು ಮತ್ತು ಜ್ಞಾನವನ್ನು ವೃದ್ಧಿಸಿದರೆ ಸಾಲದು.ರೋಮಿಲಾ ಥಾಪರ್ ಅವರು ಹೇಳುವಂತೆ  `ಪಠ್ಯಕ್ರಮ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಗುಣ ಬೆಳೆಸುವಲ್ಲಿ ನೆರವಾಗಬೇಕು~ 

ಅತ್ಯಂತ ಸಕಾಲಿಕ ಮತ್ತು ಸೂಕ್ತ ಎನ್ನಬಹುದಾದ ಪಠ್ಯಕ್ರಮ ರೂಪಿಸುವ ಮೂಲಕ ಸಮಾಜವಿಜ್ಞಾನಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ ಎಂದು ದೃಢಪಡಿಸಬೇಕಾಗಿದೆ.

ವಿಷಯದ ಬಗೆಗಿನ ವಸ್ತುನಿಷ್ಟ ಗ್ರಹಿಕೆ.. ಯೋಗ್ಯ ಮೌಲ್ಯಮಾಪನ.. ಉದ್ಯೋಗದ ಅವಕಾಶಗಳಲ್ಲಿ ಹೆಚ್ಚಳ.. ವೃತ್ತಿ ಪ್ರವೃತ್ತಿಗಳಲ್ಲಿ ಶ್ರೇಯಸ್ಸು ಇವೆಲ್ಲವೂ ಕೈಗೂಡುವಲ್ಲಿ ಒಂದು ವಸ್ತುನಿಷ್ಠ ಪಠ್ಯಕ್ರಮ ನೆರವಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT