ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿದೆ ರಸ್ತೆಗಳ ಮಾಹಿತಿ ಬ್ಯಾಂಕ್

Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಸ್ತೆಗಳು ನಮ್ಮ ರಾಷ್ಟ್ರೀಯ ಸ್ವತ್ತು. ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಅವುಗಳೇ ಬೆನ್ನುಹುರಿ. ಭಾರತದ ಒಟ್ಟು ರಸ್ತೆಗಳ ಉದ್ದ 46.9 ಲಕ್ಷ ಕಿ.ಮೀ. ಅದರಲ್ಲಿ ಕರ್ನಾಟಕದ ಪಾಲು ಸುಮಾರು 2.8 ಲಕ್ಷ ಕಿ.ಮೀ. ಜಗತ್ತಿನಲ್ಲಿ ಅಮೆರಿಕ ಹೊರತುಪಡಿಸಿದರೆ ಅತಿಹೆಚ್ಚು ರಸ್ತೆ ಜಾಲ ಹೊಂದಿರುವ ದೇಶ ನಮ್ಮದು.

ನಮ್ಮ ಬಹುಪಾಲು ರಸ್ತೆಗಳು ವೈಜ್ಞಾನಿಕ ವಿನ್ಯಾಸವನ್ನೇ ಹೊಂದಿಲ್ಲ. ಲೋಪದ ಮೂಲ ಇದೇ ಆಗಿದೆ. ರಸ್ತೆಗಳನ್ನು ಬರೀ ನಿರ್ಮಿಸಿದರೆ ಸಾಲದು; ಕಾಲಕಾಲಕ್ಕೆ ನಿರ್ವಹಣೆ ಮತ್ತು ಸಮರ್ಪಕ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸರಿಯಾದ ನಿರ್ವಹಣೆ ಇಲ್ಲದಿರುವುದೇ ನಮ್ಮ ಬಹುದೊಡ್ಡ ಕೊರತೆ.

ಪ್ರತಿ ಕಿಲೋಮೀಟರ್ ರಸ್ತೆಯನ್ನು ನಿರ್ವಹಣೆ ಮಾಡಲು ವಾರ್ಷಿಕವಾಗಿ ರೂ 1ರಿಂದ 1.5 ಲಕ್ಷ ವ್ಯಯವಾಗುತ್ತದೆ. ಅದೇ ಕಿಲೋಮೀಟರ್ ರಸ್ತೆಯನ್ನು ಬಲವರ್ಧನೆಗೊಳಿಸಲು ರೂ 10 ರಿಂದ 20 ಲಕ್ಷ ಬೇಕು. ಪುನರ್‌ನಿರ್ಮಾಣ ಮಾಡಲು ಹೊರಟರೆ ರೂ 2 ಕೋಟಿ ಅಗತ್ಯ. ನಾಲ್ಕು ಪಥ ಒಳಗೊಂಡ ಹೆದ್ದಾರಿ ನಿರ್ಮಾಣಕ್ಕೆ ರೂ 10 ಕೋಟಿ ಖರ್ಚಾಗುತ್ತದೆ.

ಹಳ್ಳಿಯದೇ ಆಗಿರಲಿ, ದಿಲ್ಲಿಯದೇ ಆಗಿರಲಿ, ರಸ್ತೆ ಯಾವುದಿದ್ದರೂ ಅದು ಹೈವೇ (ಎತ್ತರದ ದಾರಿ). ಭೂಮಿಯ ಮೇಲ್ಮೈ ಮೇಲೆ ವಿವಿಧ ಪದರಗಳನ್ನು ಹಾಕಿ ಈ ರಸ್ತೆಗಳನ್ನು ನಿರ್ಮಿಸುವುದರಿಂದ ಅವು `ಹೈವೇ'ಗಳು. ಸಂಚಾರ ಸಾಂದ್ರತೆಯನ್ನು ನೋಡಿಕೊಂಡು ಅದಕ್ಕೆ ಅನುಗುಣವಾದ ರಸ್ತೆಗಳ ನಿರ್ಮಾಣ ಮಾಡಲಾಗುತ್ತದೆ. ಮನೆ ಕಟ್ಟುವಾಗ ಬುನಾದಿ ಹಾಕುವಂತೆ ರಸ್ತೆಗಳಿಗೂ ಅಡಿಪಾಯ ಹಾಕಲಾಗುತ್ತದೆ.

300ರಿಂದ 500 ಮಿ.ಮೀ. ದಪ್ಪದ ಅಡಿಪಾಯ ಹೊಂದಿದ ಮಣ್ಣಿನ ಪದರವನ್ನು (ಸಬ್‌ಗ್ರೇಡ್) ತಳದಲ್ಲಿ ಹಾಕಲಾಗುತ್ತದೆ. ಅದರ ಮೇಲೆ 100ರಿಂದ 250 ಮಿ.ಮೀ. ದಪ್ಪದ ಮಣ್ಣು, ಮರಳು ಮತ್ತು ಕಲ್ಲುಗಳಿಂದ ಕೂಡಿದ ಪದರ (ಸಬ್‌ಬೇಸ್) ಇರುತ್ತದೆ (ಮುಖ್ಯವಾದ ಹೆದ್ದಾರಿಗಳಿಗೆ ಈ ಪದರದ ಮಿಶ್ರಣದಲ್ಲಿ ಮಣ್ಣು ಇರುವುದಿಲ್ಲ). ಅದರ ಮೇಲೆ 150ರಿಂದ 250 ಮಿ.ಮೀ. ಗಾತ್ರದ ಬೇಸ್, 50ರಿಂದ 150 ಮಿ.ಮೀ. ದಪ್ಪದ ಬೈಂಡರ್ ಮತ್ತು 20ರಿಂದ 50 ಮಿ.ಮೀ. ಗಾತ್ರದ ನುಣುಪಾದ ಮೇಲ್ಮೈ (ಸರ್‌ಫೇಸ್) ಪದರಗಳಿಂದ ರಸ್ತೆ ನಿರ್ಮಾಣ ಆಗಿರುತ್ತದೆ.

ಎಷ್ಟೇ ಉತ್ಕೃಷ್ಟ ಸಾಮಗ್ರಿಗಳನ್ನು ಬಳಸಿದ್ದರೂ ರಸ್ತೆಯ ಮೇಲ್ಮೈನಿಂದ ಮಳೆನೀರು ಒಳಗೆ ಇಳಿಯುತ್ತದೆ. ಅದು ಅಲ್ಲಿಯೇ ಸಂಗ್ರಹವಾದರೆ ರಸ್ತೆಗಳು ಬಹುಬೇಗ ಹಾಳಾಗುತ್ತವೆ. ಒಳಸೇರಿದ ನೀರನ್ನು ಹೊರಹಾಕಲು ಸಬ್‌ಬೇಸ್ ಪದರ ಮಹತ್ವದ ಪಾತ್ರ ವಹಿಸುತ್ತದೆ. ಹಳೆಯ ಬಹುಪಾಲು ರಸ್ತೆಗಳಲ್ಲಿ ಈ ಪದರವನ್ನು ಸರಿಯಾದ ರೀತಿಯಲ್ಲಿ ಹಾಕಿಲ್ಲ. ರಸ್ತೆ ಪಕ್ಕ ಉತ್ತಮ ಚರಂಡಿ ವ್ಯವಸ್ಥೆ ಇರುವುದು ಬಹುಮುಖ್ಯ. ರಸ್ತೆಯ ಬಾಳಿಕೆಯನ್ನು ಇದು ಹೆಚ್ಚಿಸುತ್ತದೆ.

ಗುಣಮಟ್ಟ ಭರವಸೆಯುಳ್ಳ ರಸ್ತೆಗಳ ನಿರ್ಮಾಣ ಮಾಡಲು ವಿವಿಧ ಹಂತಗಳಲ್ಲಿ ಮಾಡಬೇಕಾದ ಕಾರ್ಯಗಳು ಕೆಳಗಿನಂತಿವೆ.

ರಸ್ತೆಯ ಸದ್ಯದ ಸ್ಥಿತಿ, ಸಂಚಾರ ದಟ್ಟಣೆ ಮತ್ತು ಅಚ್ಚಿನ (ಆ್ಯಕ್ಸಲ್) ತೂಕದ ಮಾಹಿತಿ ಸಂಗ್ರಹ

ನಿರ್ಮಾಣಕ್ಕಾಗಿ ಉಪಯೋಗಿಸುವ ವಿವಿಧ ಸಾಮಗ್ರಿ ಹಾಗೂ ಮಿಶ್ರಣಗಳ ಪರಿಶೀಲನೆ

ಸ್ಥಳೀಯ ಲಕ್ಷಣಗಳಿಗೆ ಹೊಂದಿಕೊಳ್ಳುವಂತಹ ಚರಂಡಿ ವ್ಯವಸ್ಥೆ ನಿರ್ಮಾಣ

ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸ್ಪಷ್ಟತೆ

ಬಿಡ್ಡಿನ ಸಮಯದಲ್ಲಿ ನಿರ್ಮಾಣ ತಂತ್ರಜ್ಞಾನ ಮತ್ತು ವಿನ್ಯಾಸ, ಸ್ಥಳೀಯವಾಗಿ ದೊರೆಯಬಹುದಾದ ಸಾಮಗ್ರಿಗಳ ಗುಣಲಕ್ಷಣ, ನಿರ್ಮಾಣಕ್ಕೆ ಬೇಕಾದ ಸಂಪನ್ಮೂಲದ (ಹಣ, ಸಾಮಗ್ರಿ, ಯಂತ್ರೋಪಕರಣ, ಎಂಜಿನಿಯರ್‌ಗಳು, ಪರಿಣತ ಕೆಲಸಗಾರರು) ಮಾಹಿತಿ ಸಂಗ್ರಹ

ವಸ್ತುಸ್ಥಿತಿ, ಸಂಪನ್ಮೂಲಗಳ ಪರಿಸ್ಥಿತಿ, ಪ್ರಮಾಣ ಆಧರಿಸಿದ ರಚನಾಕ್ರಮ ಮತ್ತು ವೇಳಾಪಟ್ಟಿ ರಚನೆ

ನಿರ್ಮಾಣ ಹಂತದಲ್ಲಿ ಸಾಮಗ್ರಿ, ಮಿಶ್ರಣ ಮತ್ತು ಪದರಗಳ ಪರೀಕ್ಷೆ

ದೂರದೃಷ್ಟಿಯುಳ್ಳ ಯೋಜನಾಬದ್ಧ ರಸ್ತೆ ನಿರ್ವಹಣಾ ಪದ್ಧತಿಯನ್ನು ಜಾರಿಗೆ ತರುವುದು ಜರೂರಾಗಿ ಆಗಬೇಕಾದ ಕೆಲಸ. ರಾಜ್ಯದಲ್ಲಿ ಇರುವ ಎಲ್ಲ ರಸ್ತೆಗಳ ಮಾಹಿತಿ ಆಧರಿಸಿ ವಿವಿಧ ಸ್ತರಗಳಲ್ಲಿ ಅವುಗಳನ್ನು ವಿಂಗಡಿಸಬೇಕು. ಸಂಪನ್ಮೂಲ ಆಧರಿಸಿ ಆದ್ಯತೆ ಮೇರೆಗೆ ಅನುಕ್ರಮವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇಂತಹ ಮಾಹಿತಿ ಬ್ಯಾಂಕ್ ಇದ್ದರೆ ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಸಲೀಸು.

ಸಂಪನ್ಮೂಲ ಆಧಾರಿತ ದೀರ್ಘಕಾಲಿಕ ವ್ಯವಸ್ಥಿತ ಪದ್ಧತಿಯಿಂದ ಎಲ್ಲಾ ರಸ್ತೆಗಳಿಗೆ ಒಂದು ದಶಕದಲ್ಲಿ ಹೊಸರೂಪ ನೀಡಲು ಸಾಧ್ಯವಾಗಬಹುದು. ವ್ಯಕ್ತಿ ಇಷ್ಟಾನಿಷ್ಟಗಳನ್ನು ಆಧರಿಸಿದ ರಸ್ತೆ ಅಭಿವೃದ್ಧಿ ಪಥದಿಂದ ದೂರ ಸರಿದು, ರಸ್ತೆ ಪರಿಸ್ಥಿತಿ ಆಧರಿಸಿದ ವ್ಯವಸ್ಥಿತ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.

ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಹೊಸ ಪದ್ಧತಿಗಳು ಪರಿಚಯವಾಗಿವೆ. ಅವುಗಳು ಇಂತಿವೆ.
ಸಾಮಗ್ರಿ ಪುನರ್‌ಬಳಕೆ: ಹೊಸ ಪದರ ಹಾಕುವಾಗ ಇಲ್ಲವೇ ರಸ್ತೆ ಪುನಶ್ಚೇತನ, ಪುನರ್‌ನಿರ್ಮಾಣ ಮಾಡುವಾಗ ಹಳೆಯ ಕಲ್ಲು ಮತ್ತು ಡಾಂಬರು ಮರು ಬಳಕೆ ಮಾಡಬೇಕು.

ವಾರ್ಮಿಕ್ಸ್ ತಂತ್ರಜ್ಞಾನ: ಕಲ್ಲು ಮತ್ತು ಡಾಂಬರಿನ ಮಿಶ್ರಣ ತಯಾರಿಸುವ ಮತ್ತು ಪದರ ನಿರ್ಮಾಣದ ಹಂತದಲ್ಲಿ ತಾಪಮಾನ ಸುಮಾರು 100 ಡಿಗ್ರಿಯಿಂದ 150 ಡಿಗ್ರಿಗಳಷ್ಟು ಇರುತ್ತದೆ. ಆದರೆ ವಾರ್ಮಿಕ್ಸ್ ತಂತ್ರಜ್ಞಾನದಿಂದ ತಾಪಮಾನದಲ್ಲಿ ಸುಮಾರು 30 ರಿಂದ 50 ಡಿಗ್ರಿಯಷ್ಟು ಕಡಿಮೆ ಮಾಡಬಹುದು. ಇದರಿಂದಾಗಿ ಕಡಿಮೆ ಇಂಧನ ಬಳಕೆ, ಕಡಿಮೆ ಮಾಲಿನ್ಯ

ಪರ್ಯಾಯ ಮಿಶ್ರಣ: ಕಲ್ಲು ಮತ್ತು ಡಾಂಬರಿನ ಮಿಶ್ರಣಕ್ಕೆ ಹೋಲಿಸಿದರೆ, ಸ್ಟೋನ್ ಮ್ಯಾಸ್ಟಿಕ್ ಆಸ್ಫಾಲ್ಟ್ ಮಿಶ್ರಣದಲ್ಲಿ ದೊಡ್ಡ ಗಾತ್ರದ ಕಲ್ಲುಗಳ ಪ್ರಮಾಣ ಹೆಚ್ಚಿರುತ್ತದೆ. ಜತೆಗೆ ಪಾಲಿಮರ್ ಆಧಾರಿತ ಫೈಬರ್ ಸಹ ಸೇರಿರುತ್ತದೆ. ಹೆಚ್ಚಿನ ಬಾಳಿಕೆ, ಹೆಚ್ಚಿನ ಅಚ್ಚಿನ ತೂಕ ತಡೆಯುವ ಸಾಮರ್ಥ್ಯವಿರುವ ಈ ಮಿಶ್ರಣವನ್ನು ಹೆಚ್ಚು ಅಚ್ಚು ತೂಕದ ಲಾರಿಗಳು ಓಡಾಡುವ ಮೇಲ್ದರ್ಜೆ ರಸ್ತೆಗಳಲ್ಲಿ ಸೂಕ್ತವಾಗಿ ಉಪಯೋಗಿಸಬಹುದು.

ಸ್ಪೆಬಿಲೈಸೇಷನ್: ಅಡಿಪಾಯದಲ್ಲಿ ನಿರ್ಮಾಣಗೊಳ್ಳುವ ಮಣ್ಣಿನ ಸಬ್‌ಗ್ರೇಡ್ ಪದರದ ಸಾಮರ್ಥ್ಯ ಹೆಚ್ಚಾದಂತೆ ವಿನ್ಯಾಸದಲ್ಲಿ ಬೇಸ್ ಮತ್ತು ಬೈಂಡರ್ ಪದರಗಳ ದಪ್ಪ ಕಡಿಮೆಯಾಗುತ್ತದೆ. ಈ ತಂತ್ರಜ್ಞಾನವನ್ನು ಬೇಸ್ ಮತ್ತು ಬೈಂಡರ್ ಪದರುಗಳಿಗೆ ಬಳಸಿ ರಸ್ತೆಯ ಒಟ್ಟಾರೆ ಪದರಗಳ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯ

ವೈಟ್ ಟಾಪಿಂಗ್: ಡಾಂಬರಿನ ಪದರಿನ ಮೇಲೆ ತೆಳುವಾದ ಸಿಮೆಂಟ್ ಕಾಂಕ್ರೀಟ್ ಪದರಗಳ ನಿರ್ಮಾಣವನ್ನು ವೈಟ್‌ಟಾಪಿಂಗ್ ಎಂದು ಕರೆಯುತ್ತಾರೆ. ದೀರ್ಘ ಬಾಳಿಕೆ, ಹೆಚ್ಚಿನ ಅಚ್ಚಿನ ಒತ್ತಡವನ್ನು ತಡೆಯುವ ಸಾಮರ್ಥ್ಯ, ಕಡಿಮೆ ನಿರ್ವಹಣೆ ವೆಚ್ಚ ಈ ಪದರ ನಿರ್ಮಾಣದ ಉಪಯೋಗಗಳು. ಯಾವುದೇ ಋತುಮಾನದಲ್ಲಿ, ಸಾಂಪ್ರದಾಯಿಕ ತಾಪಮಾನದ ಅವಶ್ಯಕತೆ ಇಲ್ಲದೇ ಉಪಯೋಗಿಸಬಹುದಾದ ಕೋಲ್ಡ್ ಮಿಕ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ತುರ್ತು ಗುಂಡಿಮುಚ್ಚುವ ಕಾರ್ಯಗಳಿಗೆ ಇವು ಸೂಕ್ತ. ಆದರೆ ಬೆಲೆ ಹೆಚ್ಚು.

ರಾಸಾಯನಿಕ ಮತ್ತು ಪಾಲಿಮರ್ ಮೂಲದ ಸ್ಟೆಬಿಲೈಸರ್‌ಗಳನ್ನು ಹೊರತುಪಡಿಸಿದರೆ ಇನ್ನಾವುದೇ ಹೊಸ ಪದ್ಧತಿಗಳಿಗೆ ಪುನರ್ ಪರಿಶೀಲನೆ ಪ್ರಯೋಗಗಳ ಅಗತ್ಯವಿಲ್ಲ. ಈ ಪದ್ಧತಿಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ಬಳಸಿಕೊಳ್ಳಲು ಸಾಧ್ಯ. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಂಜಿನಿಯರ್‌ಗಳು ಬರೀ ಮೇಲ್ವಿಚಾರಕರು. ಸಾಮಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಲು ಕೆಲಸಗಾರರಿಗೆ ತರಬೇತಿ ನೀಡುವುದು ಅಗತ್ಯ. ಎಂಜಿನಿಯರುಗಳೂ ತರಬೇತಿ ಪಡೆಯಬೇಕು.

(ಲೇಖಕರು: ಸಹ ಪ್ರಾಧ್ಯಾಪಕ, `ರಾಸ್ತಾ' ಸೆಂಟರ್ ಫಾರ್ ರೋಡ್ ಟೆಕ್ನಾಲಜಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT