ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಜವಾಬ್ದಾರಿ ಅಕ್ಷಮ್ಯ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಗ್ರಾಮೀಣ ಪ್ರದೇಶದಲ್ಲಿ ಕೂಲಿಯನ್ನೇ ನಂಬಿ ಬದುಕುವ ಜನರಿಗಾಗಿ ವರ್ಷದಲ್ಲಿ 100 ದಿನಗಳಾದರೂ ದುಡಿಮೆಯನ್ನು ನೀಡುವ ಕೇಂದ್ರ ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಭ್ರಷ್ಟಾಚಾರ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕವಾಗಿದೆ. ‘ಈ ಯೋಜನೆಯ ಜಾರಿಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮವನ್ನು ತಡೆಯುವಲ್ಲಿ ನಾನು ಅಸಹಾಯಕನಾಗಿದ್ದೇನೆ’ ಎಂಬುದಾಗಿ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ವ್ಯಕ್ತಪಡಿಸಿರುವ ಬೇಜವಾಬ್ದಾರಿಯನ್ನು ಒಪ್ಪಲಾಗದು. ಹಳ್ಳಿಯ ಬಡವರಿಗೆ ಕೂಲಿ ಒದಗಿಸುವ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಅವರು ಅಸಮರ್ಥರು ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಈ ಯೋಜನೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವಾಗುವಂತಹ ಹಲವು ದೋಷಗಳಿರುವುದಾಗಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಹೇಳಿದ್ದಾರೆಂಬುದನ್ನು ಉಲ್ಲೇಖಿಸಿ, ‘ಭ್ರಷ್ಟಾಚಾರ ನಿಯಂತ್ರಿಸುವುದು ಕಷ್ಟ’ ಎಂದು ಕೈಚೆಲ್ಲಿ ಕುಳಿತರೆ, ಅಕ್ರಮದಲ್ಲಿ ತೊಡಗಿರುವವರಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತೆಯೇ. ಅಧಿಕಾರದ ಚುಕ್ಕಾಣಿ ಹಿಡಿದವರೇ ಹೀಗೆ ಅಸಹಾಯಕರಾದರೆ ಕೆಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸುವವರು ಯಾರು? ತಮ್ಮಿಂದ ಕರ್ತವ್ಯ ನಿರ್ವಹಿಸಲು ಆಗದಿದ್ದರೆ ಸಮರ್ಥರು ನಿರ್ವಹಿಸಲು ಅವಕಾಶವಾಗುವಂತೆ ಸ್ಥಾನ ತೆರವು ಮಾಡಬೇಕು. ಭ್ರಷ್ಟಾಚಾರವನ್ನು ತಡೆಯುವ ಸಲುವಾಗಿ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಓಂಬುಡ್ಸ್‌ಮನ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಅದನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಅವರ ಮಾತಿನ ಪ್ರಾಮಾಣಿಕತೆಯನ್ನೇ ಈಗ ಶಂಕಿಸುವಂತಾಗಿದೆ. 

ಈ ಕಾರ್ಯಕ್ರಮದ ಜಾರಿಯಲ್ಲಿ ಹಣದ ದುರುಪಯೋಗ, ಜಾಬ್‌ಕಾರ್ಡ್ ದುರ್ಬಳಕೆ, ಕಾಮಗಾರಿ ನಡೆಯದಿದ್ದರೂ, ಕೆಲಸ ನಡೆದಿರುವುದಾಗಿ ಹಣ ಪಡೆಯುವುದು, ಅಗತ್ಯ ಇರುವವರಿಗೆ ಕೆಲಸ ನೀಡದೆ ಅವರ ಹೆಸರುಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಹಣ ದೋಚುವಂಥ ನೀಚ ಕೆಲಸವನ್ನು ಅನೇಕ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿ ನಡೆಸುತ್ತಿರುವುದು ಆಘಾತಕಾರಿ ಸಂಗತಿ. ಹಳ್ಳಿಗಳಲ್ಲಿ ಕೆಲಸವಿಲ್ಲದೆ ಹಸಿವಿನಿಂದ ನರಳುವ ಜನರನ್ನು ಪಾರುಮಾಡಲು ಅವರಿಗೆ ಕೆಲಸ ನೀಡುವ ಉದ್ದೇಶ ಈ ಯೋಜನೆಯದ್ದು. ಆದ್ದರಿಂದ ಕೇಂದ್ರ ಸರ್ಕಾರ ಶೇ 90ರಷ್ಟು ಹಣವನ್ನು ನೇರವಾಗಿ ಜಿಲ್ಲಾ ಪಂಚಾಯಿತಿಗಳಿಗೆ ನೀಡುತ್ತಿದೆ. ಇಂತಹ ಮಹತ್ವದ ಯೋಜನೆಯ ಹಣವನ್ನು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗುಳುಂ ಮಾಡುವುದು ಖಂಡನೀಯ. ಗ್ರಾಮಗಳಲ್ಲಿ ಆಯ್ಕೆ ಮಾಡುವ ಕೆಲಸದಲ್ಲಿನ ತಾರತಮ್ಯ, ನಕಲಿ ಹಾಜರಾತಿ, ಜಾಬ್ ಕಾರ್ಡ್ ದುರುಪಯೋಗ ಮತ್ತು ವೇತನ ಬಟವಾಡೆಯಲ್ಲಿನ ವಿಳಂಬವನ್ನು ತಪ್ಪಿಸಲು ಕೇಂದ್ರ ಸರ್ಕಾರ ಬಯೋಮೆಟ್ರಿಕ್ ಡೇಟಾ ಪದ್ಧತಿಯನ್ನು ಜಾರಿಗೆ ತರುವ ಮತ್ತು ಈಗ ನೀಡುತ್ತಿರುವ 100 ರೂಪಾಯಿ ದಿನದ ವೇತನದಲ್ಲಿ ಶೇ 17ರಿಂದ 30ರಷ್ಟು ಹೆಚ್ಚಿಸುವ ಪ್ರಯತ್ನ ನಡೆಸುತ್ತಿದೆ. ಇದು ಸ್ವಾಗತಾರ್ಹ. ಆದ್ದರಿಂದ ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳ್ಳುವಂತೆ ನೋಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ತನ್ನ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಮೆರೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT