ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಜವಾಬ್ದಾರಿ ಅರಣ್ಯ ಅಧಿಕಾರಿಗಳನ್ನು ಹೊರಹಾಕಿ

ಬಿಬಿಎಂಪಿ ಸಭೆಯಲ್ಲಿ ನಿರ್ಣಯ
Last Updated 28 ಸೆಪ್ಟೆಂಬರ್ 2013, 19:54 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಅರಣ್ಯ ವಿಭಾಗದಲ್ಲಿ ಸಮರ್ಪಕವಾಗಿ ಕೆಲಸ ಮಾಡದ ಅಧಿಕಾರಿಗಳನ್ನು ಹೊರ ಹಾಕುವ ಬಗ್ಗೆ ಪಾಲಿಕೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ನಿರ್ಣಯ ತೆಗೆದು ಕೊಳ್ಳಲಾಯಿತು.

ಪಾಲಿಕೆಯ ವಿವಿಧ ವಿಷಯಗಳ ಮೇಲಿನ ಚರ್ಚಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಆಡಳಿತ ಪಕ್ಷದ ನಾಯಕ ಎನ್‌.ನಾಗರಾಜು, ‘ಜಯನಗರ 3 ಮತ್ತು 4ನೇ ಹಂತದಲ್ಲಿ ರಸ್ತೆ ಪಕ್ಕದ ದೊಡ್ಡ ದೊಡ್ಡ ಮರಗಳನ್ನು ಕಡಿದು ಬುಡಗಳನ್ನು ಚಪ್ಪಡಿ ಕಲ್ಲುಗಳಿಂದ ಮುಚ್ಚಲಾಗಿದೆ. ಮಾಲ್‌ ಗಳು, ವ್ಯಾಪಾರಿ ಮಳಿಗೆಗಳ ಮುಂಭಾಗದಲ್ಲಿ ಜಾಹೀರಾತು ಕಾಣುವುದಿಲ್ಲ ಎಂಬ ಕಾರಣಕ್ಕೆ ಮರಗಳನ್ನು ಕಡಿಯಲಾಗಿದೆ. ಆದರೆ, ಮರ ಕಡಿದವರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಅರಣ್ಯ ವಿಭಾಗದ ಅಧಿಕಾರಿಗಳು ಪಾಲಿಕೆಗೆ ಬಿಳಿಯಾನೆಗಳಿದ್ದಂತೆ. ತಿಂಗಳಿಗೆ ಲಕ್ಷಾಂತರ ರೂಪಾಯಿಯನ್ನು ಇವರ ವೇತನಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಆದರೆ, ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಮರಗಳನ್ನು ಕಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ಸೋತಿ ದ್ದಾರೆ. ಅಲ್ಲದೆ, ಹೊಸದಾಗಿ ಗಿಡಗಳನ್ನು ನೆಡುವ ಕಾರ್ಯವೂ ಸರಿಯಾಗಿ ಆಗುತ್ತಿಲ್ಲ’ ಎಂದರು.

‘ನಗರದಲ್ಲಿ ಹೊಸದಾಗಿ 25 ಸಾವಿರ ಗಿಡಗಳನ್ನು ನೆಡಲಾಗಿದೆ ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಹೇಳುತ್ತಾರೆ. ಆದರೆ, 25 ಸಾವಿರ ಗಿಡಗಳನ್ನು ಎಲ್ಲಿ ನೆಟ್ಟಿದ್ದಾರೆ. ಗಿಡ ನೆಡುವ ಕಾರ್ಯಕ್ಕೆ ಪ್ರತಿವರ್ಷ ಎಷ್ಟು ಖರ್ಚು ಮಾಡಿದ್ದಾರೆ’ ಎಂದು ಪ್ರಶ್ನಿಸಿದ ಅವರು, ‘ಕೆಲಸ ಮಾಡದ ಅಧಿಕಾರಿಗಳು ಪಾಲಿಕೆಗೆ ಅಗತ್ಯವಿಲ್ಲ. ಇವರನ್ನು ಕೂಡಲೇ ಪಾಲಿಕೆ ಯಿಂದ ಹೊರಹಾಕಿ’ ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಮೇಯರ್‌ ಬಿ.ಎಸ್‌.ಸತ್ಯನಾರಾಯಣ, ‘ಅರಣ್ಯ ವಿಭಾಗದ ಅಧಿಕಾರಿಗಳು ಮರ ಕಡಿ ಯುವವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಗಿಡ ನೆಡುವ ಕಾರ್ಯವೂ ಸರಿಯಾಗಿ ನಡೆಯುತ್ತಿಲ್ಲ. ಕೆಲಸ ಮಾಡದ ಅಧಿಕಾರಿಗಳನ್ನು ಪಾಲಿಕೆಯಿಂದ ಹೊರಹಾಕಲು ಆಯುಕ್ತರು ಕ್ರಮ ಕೈಗೊಳ್ಳಬೇಕು. ಕೂಡಲೇ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಅಧಿಕಾರಿಗಳನ್ನು ಹೊರ ಹಾಕಬೇಕು’ ಎಂದು ಸೂಚಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಎಂ.ಲಕ್ಷ್ಮೀನಾರಾಯಣ, ‘ಅರಣ್ಯ ವಿಭಾಗದ ಅಧಿಕಾರಿಗಳಿಗೆ ಈ ಬಗ್ಗೆ ಷೋಕಾಸ್‌ ನೋಟೀಸ್‌ ನೀಡಿ, ಕರ್ತವ್ಯಲೋಪ ಎಸಗಿರುವ ಅಧಿಕಾರಿ ಗಳನ್ನು ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಈ ವರ್ಷ ನಗರದಲ್ಲಿ ಗಿಡಗಳನ್ನು ನೆಡಲು ₨ 10 ಕೋಟಿ ಬಿಡುಗಡೆ ಮಾಡಲಾಗಿದೆ. ಸ್ಥಾಯಿ ಸಮಿತಿಗಳ  ಅಧ್ಯಕ್ಷರು ಹಾಗೂ ಸದಸ್ಯರ ಚುನಾವಣೆ ತಡವಾಗಿದ್ದ ಕಾರಣಕ್ಕೆ ಟೆಂಡರ್‌ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ’ ಎಂದು ತಿಳಿಸಿದರು.

ನಾಗರಬಾವಿ ವಾರ್ಡ್‌ ಸದಸ್ಯ ಕೆ.ಉಮೇಶ್‌ ಶೆಟ್ಟಿ, ‘ಪ್ರತಿವರ್ಷ ಜಾಹೀರಾತಿನಿಂದ ₨ 130 ಕೋಟಿಗೂ ಹೆಚ್ಚು ಆದಾಯ ಸಂಗ್ರಹ ನಿರೀಕ್ಷಿ ಸಲಾಗುತ್ತದೆ. ಆದರೆ, ಸಂಗ್ರಹ ವಾಗುವುದು ₨ 25 ಕೋಟಿಯಷ್ಟು ಮಾತ್ರ. ಜಾಹೀರಾತಿನ ವಿಚಾರದಲ್ಲಿ ಪಾಲಿಕೆಗೆ ಹೆಚ್ಚು ನಷ್ಟವಾಗುತ್ತಿದೆ. ಆದರೆ, ಅನಧಿಕೃತ ಜಾಹೀರಾತು ತಡೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ಯಡಿಯೂರು ವಾರ್ಡ್‌ ಸದಸ್ಯ ಎನ್‌.ಆರ್‌.ರಮೇಶ್‌ ಮಾತನಾಡಿ, ‘ಪಾಲಿಕೆಯ ಹೊಸ ಐದು ವಲಯಗಳಲ್ಲಿ ಅಕ್ರಮವಾಗಿ ‘ಬಿ’ ಖಾತೆ ಮಾಡಿ ಕೊಡಲಾಗಿದೆ. ಇದರಿಂದ ನಿವೇಶನಗಳ ಮಾಲೀಕರಿಂದ ಅಭಿವೃದ್ಧಿ ಶುಲ್ಕ ವಸೂಲಿ ಮಾಡಲು ಆಗುತ್ತಿಲ್ಲ. ಅಕ್ರಮ ವಾಗಿ ‘ಬಿ’ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾ ಯಿಸಿದರು.

ಇತ್ತೀಚೆಗೆ ನಿಧನರಾದ ಶ್ರೀನಗರ ವಾರ್ಡ್‌ನ ಪಾಲಿಕೆಯ ಮಾಜಿ ಸದಸ್ಯ ಬಸವಲಿಂಗಪ್ಪ ಅವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಅವರ ಹೆಸರನ್ನು ಶ್ರೀನಗರದ ಒಂದು ರಸ್ತೆಗೆ ನಾಮಕರಣ ಮಾಡುವ ಬಗ್ಗೆ ಚರ್ಚೆ ನಡೆಯಿತು.

ಈ ವೇಳೆ ಮಾತನಾಡಿದ ಜೆ.ಪಿ.ಉದ್ಯಾನ ವಾರ್ಡ್‌ ಸದಸ್ಯ ಬಿ.ಆರ್‌.ನಂಜುಂಡಪ್ಪ, ‘ಹಿಂದೆ ಕೃಷ್ಣ ಯ್ಯರ್‌ ಹಾಗೂ ಕರೀಂಖಾನ್‌ ನಿಧನ ರಾಗಿದ್ದಾಗ ರಸ್ತೆಗಳಿಗೆ ಹೆಸರಿಡುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ, ಅದು ಜಾರಿಗೆ ಬರಲಿಲ್ಲ. ಈ ನಿರ್ಣಯವೂ ಹಾಗೆ ಆಗಬಾರದು’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ‘ಈ ನಿರ್ಣಯಗಳನ್ನು ಆದಷ್ಟು ಬೇಗ ಜಾರಿಗೆ ತರಲಾಗುವುದು. ಬಸವನ ಗುಡಿಯಲ್ಲಿ ರಾಮಕೃಷ್ಣ ಹೆಗಡೆ, ಕೃಷ್ಣಯ್ಯರ್‌ ಹಾಗೂ ಮಾಜಿ ಶಾಸಕ ಚಂದ್ರಶೇಖರ್‌ ಅವರ ಪ್ರತಿಮೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ಪ್ರತಿಮೆಗಳ ಸ್ಥಾಪನೆ ಬಗ್ಗೆ ಹೈಕೋರ್ಟ್‌ ತಡೆ ನೀಡಿದೆ. ಈ ಬಗ್ಗೆ ಪುನರ್‌ ಪರಿಶೀಲನೆ ಮಾಡುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸ ಲಾಗುವುದು’ ಎಂದರು.

ಸಭೆಯನ್ನು ಎರಡು ಬಾರಿ ಮುಂಡೂಡಿದ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್‌, ‘ತಿಂಗಳಿಗೊಮ್ಮೆ ನಡೆಯುವ ಸಭೆಗೆ ಸರಿಯಾದ ಸಮಯಕ್ಕೆ ಬರಬೇಕಾದ್ದು ಸದಸ್ಯರ ಜವಾಬ್ದಾರಿ. ಆದರೆ, ಸಭೆಗೆ ನಿಗದಿತ ಸಮಯಕ್ಕೆ ಎಲ್ಲ ಸದಸ್ಯರೂ ಬಂದ ಉದಾಹರಣೆಯೇ ಇಲ್ಲ. ಜನ ನಿಮ್ಮನ್ನು ಚುನಾವಣೆಯಲ್ಲಿ ಆರಿಸಿ, ಅಧಿಕಾರ ಕೊಟ್ಟು ಕಳಿಸಿರುವುದು ಯಾತಕ್ಕೆ’ ಎಂದು ಸದಸ್ಯರನ್ನು ಪ್ರಶ್ನಿಸಿದರು.

ಪಾಲನಹಳ್ಳಿ ಕೆರೆ ಅಭಿವೃದ್ಧಿಗೆ ಗುತ್ತಿಗೆ ನೀಡುವ ವಿಷಯ ಸೇರಿದಂತೆ 23 ವಿಷಯಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ವೀರಪ್ಪನ್‌ ದಂಡು !
‘ಅರಣ್ಯ ವಿಭಾಗದ ಅಧಿಕಾರಿ ಗಳು ಪಾಲಿಕೆಯಲ್ಲಿ ಲೂಟಿ ನಡೆಸು ತ್ತಿದ್ದಾರೆ. ಅರಣ್ಯ ವಿಭಾಗದ ಅಧಿ ಕಾರಿಗಳು ವೀರಪ್ಪನ್‌ ದಂಡು ಬಂದಂತೆ ಬಂದು ಪಾಲಿಕೆ ಸೇರಿ ಕೊಂಡಿದ್ದಾರೆ. ಅರಣ್ಯ ವಿಭಾಗದಲ್ಲಿ ಅಗತ್ಯ ಸಿಬ್ಬಂದಿಯನ್ನಷ್ಟೇ ಉಳಿಸಿ ಕೊಂಡು ಹೊರೆಯಾಗಿರುವವರನ್ನು ಹೊರಹಾಕಬೇಕಾಗಿದೆ’
–ಬಿ.ಎಸ್‌.ಸತ್ಯನಾರಾಯಣ, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT