ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡ ಬೇಡ ತಂಬಾಕು ಸೇವನೆ ಬೇಡ..

Last Updated 1 ಜೂನ್ 2011, 10:40 IST
ಅಕ್ಷರ ಗಾತ್ರ

ಮೈಸೂರು: ನಗರದ ವಿವಿಧೆಡೆ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಮಂಗಳವಾರ ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ಜನಜಾಗೃತಿ  ಜಾಥಾ, ವಿಚಾರಗೋಷ್ಠಿ, ರ‌್ಯಾಲಿ, ಸಭೆ, ಕಾರ್ಯಕ್ರಮಗಳು ನಡೆದವು.

`ಧೂಮಪಾನ ಸಾವಿಗೆ ಸೋಪಾನ~, `ಬೀಡಿ, ಸಿಗರೇಟ್ ಬಿಡಿ ಆರೋಗ್ಯದಿಂದ ಬಾಳಿ~ ಎಂಬ ಪ್ಲೆಕಾರ್ಡ್‌ಗಳನ್ನು ಹಿಡಿದ ನರ್ಸಿಂಗ್ ವಿದ್ಯಾರ್ಥಿಗಳು, ಆಶಾ  ಕಾರ್ಯಕರ್ತೆಯರು, ಎನ್‌ಸಿಸಿ ಕೆಡೆಟ್ಸ್‌ಗಳು, ಸ್ವಯಂ ಸೇವಾ ಕಾರ್ಯಕರ್ತರು ನಗರದ ವಿವಿಧ ರಸ್ತೆಗಳಲ್ಲಿ ಸಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.

ತಂಬಾಕು ವಿರೋಧಿ ವೇದಿಕೆ, ಮೈಸೂರು ಗ್ರಾಹಕ ಪರಿಷತ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ಹಮ್ಮಿಕೊಂಡಿದ್ದ ಜಾಥಾವನ್ನು ಮೈಸೂರು ವೈದ್ಯಕೀಯ ಕಾಲೇಜು ನಿರ್ದೇಶಕಿ ಡಾ.ಗೀತಾ  ಅವಧಾನಿ ಉದ್ಘಾಟಿಸಿದರು. `ಬೇಡ ಬೇಡ ತಂಬಾಕು ಸೇವನೆ ಬೇಡ~ ಎಂದು ಘೋಷಣೆ ಕೂಗುತ್ತಾ ವೈದ್ಯಕೀಯ ಕಾಲೇಜು ಬಳಿಯಿಂದ ಮೆರವಣಿಗೆ  ಹೊರಟ ಕಾರ್ಯಕರ್ತರು  ಇರ್ವಿನ್ ರಸ್ತೆಯ ಮೂಲಕ  ಸಾಗಿದರು. 

`ಅನ್ನಕ್ಕಿಂತ ತಂಬಾಕು ಸೇವನೆ ಹೆಚ್ಚು~ 
ಮೇಸ್ತ್ರಿ ತಿಮ್ಮಾಚಾರ್ ಧರ್ಮಛತ್ರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವೈದ್ಯ ಡಾ.ಟಿ.ಎನ್.ಮಂಜುನಾಥ್ ಮಾತನಾಡಿ, `ತಂಬಾಕು ಸೇವನೆ ಯೂರೋಪ, ಅಮೆರಿಕದಲ್ಲಿ ಕಡಿಮೆಯಾಗುತ್ತಿದ್ದು, ಭಾರತದಲ್ಲಿ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಅನ್ನಕ್ಕಿಂತಲೂ ಹೆಚ್ಚು ತಂಬಾಕು ಸೇವನೆ ಮಾಡುತ್ತಿದ್ದಾರೆ. ಒಂದು ವರ್ಷಕ್ಕೆ ದೇಶದಲ್ಲಿ 600 ಮಿಲಿಯನ್ ಕೆಜಿ ತಂಬಾಕು ಬಳಕೆಯಾಗುತ್ತಿದೆ. 15 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಅತಿ ಹೆಚ್ಚು ಜನ ತಂಬಾಕು ವ್ಯಸನಿಗಳಾಗಿದ್ದಾರೆ~ ಎಂದು ಆತಂಕ ವ್ಯಕ್ತಪಡಿಸಿದರು.

`ಬೀಡಿ, ಸಿಗರೇಟ್, ಗುಟ್ಕಾಗಳ ಮೂಲಕ ತಂಬಾಕು ಸೇವನೆ ಮಾಡುವುದು ಯುವ ಸಮೂಹಕ್ಕೆ ಫ್ಯಾಷನ್ ಆಗಿದೆ. ಅದರಲ್ಲಿ ಮಹಿಳೆಯರ ಸಂಖ್ಯೆ  ಹೆಚ್ಚಾಗುತ್ತಿದೆ. ಹೀಗಾಗಿ ಹುಟ್ಟುವ ಮಕ್ಕಳಿಗೆ ಸಮಸ್ಯೆಯಾಗುತ್ತದೆ. ಕ್ಯಾನ್ಸರ್, ಬಿಪಿ, ರಕ್ತದೊತ್ತಡ ಸೇರಿದಂತೆ ಅನೇಕ ಕಾಯಿಲೆಗಳು ಅಂಟಿಕೊಳ್ಳುತ್ತವೆ. ಈ  ಕುರಿತು ಜನರಿಗೆ ಶಿಕ್ಷಣ ನೀಡುವ ಅಗತ್ಯವಿದೆ~ ಎಂದರು.

ಇದಕ್ಕೂ ಮುನ್ನ ಮೇಯರ್ ಪುಷ್ಪಲತಾ ಬಿ.ಟಿ.ಚಿಕ್ಕಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸಿದ್ದರು. ಡಾ.ಸುದರ್ಶನ್ ಉಪಸ್ಥಿತರಿದ್ದರು.

`ಧೂಮಪಾನ ಸಾವಿಗೆ ಸೋಪಾನ~
 ಎನ್‌ಸಿಸಿಯ 3ಕಾರ್ ಗರ್ಲ್ಸ್ ಬೆಟಾಲಿಯನ್ ಹಮ್ಮಿಕೊಂಡಿದ್ದ ಜಾಥಾ ಶ್ಯಾಂ ಸ್ಟೂಡಿಯೋದಿಂದ ಹೊರಟು, ನ್ಯೂ ಕಾಂತರಾಜ ಅರಸು ರಸ್ತೆಯ ಮೂಲಕ ಸರಸ್ವತಿಪುರಂ ಫೈರ್ ಬ್ರೀಗೆಡ್‌ವರೆಗೆ ಸಾಗಿತು. ಮರಿಮಲ್ಲಪ್ಪ ಕಾಲೇಜು, ಜ್ಞಾನಗಂಗಾ ಪ್ರೌಢಶಾಲೆ, ಕಾವೇರಿ ಸಂಯುಕ್ತ ಪದವಿಪೂರ್ವ ಕಾಲೇಜು,  ಸಿಎಫ್‌ಟಿಆರ್‌ಐ ಶಾಲೆಯ ನೂರಾರು ವಿದ್ಯಾರ್ಥಿನಿಯರು `ಧೂಮಪಾನ ಸಾವಿಗೆ ಸೋಪಾನ~ ಎಂಬ ಪ್ಲೆಕಾರ್ಡ್‌ಗಳನ್ನು ಹಿಡಿದು ಜನರಿಗೆ ಅರಿವು  ಮೂಡಿಸಿದರು.

ಜಿಲ್ಲಾಧಿಕಾರಿ ಆವರಣದಿಂದ ಹೊರಟ ಎನ್‌ಸಿಸಿ 13, 14ನೇ ಬೆಟಾಲಿಯನ್ ತಂಬಾಕು ವಿರೋಧಿ ಜಾಗೃತಿ ಮೆರವಣಿಗೆ, ಹುಣಸೂರು ರಸ್ತೆ, ಮೆಟ್ರೋಪೊಲ್ ಮೂಲಕ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ತಿಳಿಸಿದರು.

`ಪ್ರತಿಭಟಿಸದೇ ಹೋದರೆ ಬದಲಾವಣೆ ಅಸಾಧ್ಯ~
ನಿಮ್ಮ ಹಕ್ಕನ್ನು ಚಲಾಯಿಸಿ ಅನ್ಯಾಯವನ್ನು ಪ್ರತಿಭಟಿಸದೇ ಹೋದರೆ ಯಾವುದೇ ಕಾನೂನು ಇದ್ದರೂ ಪರಿಣಾಮಕಾರಿಯಾದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹಿರಿಯ ಸಂಶೋಧಕ ಸಿ.ವಿ.ನಾಗರಾಜು ಅಭಿಪ್ರಾಯಪಟ್ಟರು.

ನಗರದಲ್ಲಿ ಮೈಸೂರು ಎಂಜಿನಿಯರ್ ಸಂಸ್ಥೆ, ತಂಬಾಕು ವಿರೋಧಿ ವೇದಿಕೆ, ಮೈಸೂರು ಗ್ರಾಹಕ ಪರಿಷತ್ ವತಿಯಿಂದ ಮಂಗಳವಾರ ತಂಬಾಕು ರಹಿತ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

 ಗ್ರಾಮಾಂತರ ಪ್ರದೇಶದ ಜನತೆಗೆ  ತಂಬಾಕು ದುಷ್ಟರಿಣಾಮದ ಬಗ್ಗೆ ಅರಿವು ಮೂಡಿಸುವುದು ಅವಶ್ಯವಾಗಿದೆ. ಜೊತೆಗೆ ಗ್ರಾಹಕನಲ್ಲಿ ಗ್ರಾಹಕ ಜಾಗೃತಿ ಮೂಡಿಸುವುದು ಭಾರತದಲ್ಲಿ ಕ್ಲಿಷ್ಟಕರ ಸಮಸ್ಯೆಯಾಗಿದೆ ಎಂದು ತಿಳಿಸಿದರು.

ತಂಬಾಕು ವಿರೋಧಿ ವೇದಿಕೆಯ ಸಂಚಾಲಕ ವಸಂತ ಕುಮಾರ್ ಮೈಸೂರುಮಠ್ ಮಾತನಾಡಿ, ಕೆಲವು ರೈತರು ಜೀವನಾಧಾರವಾಗಿ ತಂಬಾಕು ಬೆಳೆಯುತ್ತಿದ್ದಾರೆ. ಅದರ ಬದಲು ಆಹಾರ ಬೆಳೆಯನ್ನು ಬೆಳೆದು ಸ್ವಾವಲಂಬಿಗಳಾಗಬೇಕು. ಸಾಂಕೇತಿಕವಾಗಿ ತಂಬಾಕು ಬೆಳೆ ಬದಲು ಆಹಾರ ಬೆಳೆ ನೆಡುವ  ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಎಂಜಿನಿಯರ್ ಸಂಸ್ಥೆಯ ಕಾರ್ಯದರ್ಶಿ ಡಾ.ಟಿ.ಅನಂತಪದ್ಮನಾಭ ಮಾತನಾಡಿ, ಮಕ್ಕಳ ಮುಂದೆ ಪೋಷಕರು ಬೀಡಿ, ಸೀಗರೇಟು, ತಂಬಾಕು ಸೇವನೆ ಬಳಸಿದರೆ, ಮಕ್ಕಳಿಗೆ ಸಹಜವಾಗಿ ಅದರ ಬಗ್ಗೆ ಕುತೂಹಲ ಮೂಡುತ್ತದೆ. ಆದ್ದರಿಂದ ಪೋಷಕರು ಮಾದರಿಯಾಗಿರಬೇಕು. ತಂಬಾಕು ಸೇವನೆ ವಿಶ್ವವ್ಯಾಪಿ ರೋಗವಾಗಿದೆ. ಆದ್ದರಿಂದ ಮೊದಲು ತಮ್ಮ ಪರಿಸರದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು.

ಎಂಜಿನಿಯರ್ ಸಂಸ್ಥೆಯ ಅಧ್ಯಕ್ಷ ಎ.ಎಸ್.ಸತೀಶ್, ಹಿರಿಯ ಸದಸ್ಯ ಬಾಪು ಸತ್ಯನಾರಾಯಣ್, ಡಾ.ರೆಡ್ಡಿ ಫೌಂಡೇಶನ್‌ನ ಸಂಯೋಜಕ ಡಾ.ಡಿ. ರಾಘವೇಂದ್ರ ಇತರರು ಇದ್ದರು.

ಕರಪತ್ರ ವಿತರಣೆ:ಭರತ್ ಆಸ್ಪತ್ರೆ ಹಮ್ಮಿಕೊಂಡಿದ್ದ ಜಾಥಾದಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಲಾಯಿತು. ಆಸ್ಪತ್ರೆಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ ಜಾಥಾಗೆ ಚಾಲನೆ ನೀಡಿದರು. ಕೆ.ವೇದಾವತಿ, ಕೆ.ಪಿ.ಶಿವಪ್ರಸಾದ್, ಭಾಸ್ಕರ್ ಹಾಗೂ ಗೋಪಾಲಗೌಡ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT