ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡದ ಬೇಲಿ

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ದಾರಿಯ ಪಕ್ಕದಲ್ಲಿರುವ ಹೂದೋಟವೊಂದರಲ್ಲಿ ಒಂದು ಹೂವಿನ ಗಿಡ ಇತ್ತು. ವಸಂತಕಾಲ ಬಂದಾಗ ಆ ಗಿಡ ಚಿಗುರಿ ಮೈತುಂಬಾ ಹೊಳೆಯುವ ಹಸಿರು ಎಲೆಗಳನ್ನು ಹೊತ್ತು.... ಸುಂದರವಾದ.... ಗೊಂಚಲು ಗೊಂಚಲು ಕೆಂಪು ಹೂಗಳನ್ನು ಬಿಟ್ಟು ನೋಡುಗರ ಕಣ್ಮನ ಸೆಳೆಯುತ್ತಾ ರಮಣೀಯವಾಗಿ ಕಂಗೊಳಿಸತೊಡಗಿತು. ತೋಟಕ್ಕೆ ಬಂದವರೆಲ್ಲಾ ಆ ಗಿಡದ, ಅದರ ಹೂವಿನ ಸೌಂದರ್ಯವನ್ನು ಮೆಚ್ಚಿ ಕೊಂಡಾಡತೊಡಗಿದರು.

ಎಲ್ಲರ ಮೆಚ್ಚುಗೆ, ಹೊಗಳಿಕೆಯನ್ನು ಕೇಳಿ ಕೇಳಿ ಆ ಗಿಡ ಗರ್ವದಿಂದ ಉಬ್ಬಿಹೋಯಿತು. ದಾರಿಯಲ್ಲಿ ಹೋಗಿಬರುವ ಜನರಿಗೆ ಕಾಣದಂತೆ ದಾರಿಗೂ ಹೂದೋಟಕ್ಕೂ ನಡುವೆ ಅಡ್ಡವಾಗಿದ್ದ ಮುಳ್ಳುಬೇಲಿಯ ಮೇಲೆ ಈಗ ಈ ಗಿಡಕ್ಕೆ ಅಸಹನೆಯುಂಟಾಯಿತು.

“ಏಯ್ ಕೆಟ್ಟ ಬೇಲಿ....! ನನ್ನ ಈ ಚೆಲುವು ದಾರಿಯಲ್ಲಿ ಓಡಾಡುವವರಿಗೆ ಕಾಣದಂತೆ ಅಡ್ಡವಾಗಿ ನಿಂತಿದ್ದೀಯಲ್ಲ.... ಎಷ್ಟು ಹೊಟ್ಟೆಕಿಚ್ಚು ನಿನಗೆ! ನನ್ನ ಸೌಂದರ್ಯಕ್ಕೆ ದೃಷ್ಟಿಬೊಟ್ಟಿನಂತೆ ಆ ನಿನ್ನ ಮುಳ್ಳು ಮುಳ್ಳು ವಿಕಾರವಾದ ಮೈಯನ್ನು ಹೊತ್ತು ನಿಂತಿದ್ದೀಯಲ್ಲ.... ನಾಚಿಕೆಯಾಗುವುದಿಲ್ಲವೇ?
 
ನೀನು ಇಲ್ಲಿರದೇ ಹೋಗಿದ್ದರೆ, ಎಲ್ಲರೂ ಈ ನಿನ್ನ ಅಸಹ್ಯ ರೂಪದ ಬದಲು ನನ್ನ ಅಂದ ಚೆಂದವನ್ನು ನೋಡಿ ಸಂತೋಷಪಟ್ಟುಕೊಳ್ಳುತ್ತಿದ್ದರು. ಇನ್ನಾದರೂ ಇಲ್ಲಿಂದ ತೊಲಗಬಾರದೇ....” ಎಂದು ಬೇಲಿಯನ್ನು ಹೀಯಾಳಿಸಿತು ಗಿಡ.

ಗಿಡದ ಮಾತನ್ನು ಕೇಳಿ ಬೇಲಿಗೆ ತುಂಬಾ ದುಃಖವಾಯಿತು. ಇಷ್ಟೆಲ್ಲಾ ಅವಮಾನ ಸಹಿಸಿಕೊಂಡು ತಾನಾದರೂ ಇನ್ನು ಇಲ್ಲಿ ಯಾಕಿರಬೇಕು.... ಅಂತ ಬೇಜಾರುಪಟ್ಟುಕೊಂಡು ಅದು ಆ ರಾತ್ರಿ ಸದ್ದಿಲ್ಲದೇ ಅಲ್ಲಿಂದ ಎದ್ದು ದೂರ ಹೊರಟು ಹೋಯಿತು.

ಬೆಳಗಾಯಿತು. ಹೂವಿನ ಗಿಡವಿನ್ನೂ ಸರಿಯಾಗಿ ಕಣ್ಣು ಬಿಟ್ಟಿರಲಿಲ್ಲ. ಅಷ್ಟರಲ್ಲಿ ಆ ದಾರಿಯಲ್ಲಿ ಅಡ್ಡಾಡುತ್ತಾ ಬಂದ ಪುಂಡು ದನವೊಂದು, ಬೇಲಿಯಿಲ್ಲದ ತೋಟವನ್ನು ನೋಡಿ ಸಂತೋಷದಿಂದ ಒಳಗೆ ನುಗ್ಗಿ, ಮೈತುಂಬಾ ಸೊಂಪಾದ ಎಲೆ, ಹೂಗಳನ್ನು ಹೊತ್ತು ನಿಂತಿದ್ದ ಈ ಹೂವಿನ ಗಿಡಕ್ಕೇ ಬಾಯಿ ಹಾಕಿತು. ಕೆಲವೇ ಕ್ಷಣಗಳಲ್ಲಿ ಗಿಡದ ಅಷ್ಟೂ ಎಲೆ ಹೂಗಳನ್ನೂ ಮನಬಂದಂತೆ ತಿಂದುಹಾಕಿ ಬರೀ ಬೋಳು ರೆಂಬೆಗಳನ್ನಷ್ಟೇ ಉಳಿಸಿ ಹೊರಟುಹೋಯಿತು.

ನೋವಿನಿಂದ ಕಣ್ಣೀರಿಡುತ್ತಾ ಗಿಡ.... “ಅಯ್ಯೋ.... ಬೇಲಿಯಣ್ಣಾ...., ನೀನಿದ್ದಿದ್ದರೆ.... ನನಗೀ ಸ್ಥಿತಿ ಬರುತ್ತಿರಲಿಲ್ಲ....” ಎಂದು ಬೇಲಿಯನ್ನು ನೆನೆಸಿಕೊಂಡು ಅತ್ತೂ.... ಅತ್ತೂ.... ಸುಸ್ತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT