ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡವೇ ಉಡುಗೊರೆ?

Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನ್ನೊಂದು ಸ್ವಲ್ಪ ದೊಡ್ಡ ಮನೆ ಇದ್ದಿದ್ದರೆ, ಇದಕ್ಕಿಂತ ಸ್ವಲ್ಪ ಹೆಚ್ಚಿನ ಸಂಬಳ ಬರುವ ಕೆಲಸ ಸಿಕ್ಕಿದ್ದಿದ್ದರೆ, ಇನ್ನಷ್ಟು ಆಸ್ತಿ ಸಂಪಾದಿಸಿದ್ದಿದ್ದರೆ ಆಗ ಎಷ್ಟು ಸಂತೋಷವಾಗಿ ಇರಬಹುದಿತ್ತು.- ಇದು ಕೆಲವರಿಗೆ ಅಪರೂಪಕ್ಕೆ ಹಾಗೂ ಬಹುತೇಕರಿಗೆ ಸದಾ ಬರುವ ಆಲೋಚನೆ, ಕಾಡುವ ಯೋಚನೆ.
 
ಆಸೆ ಯಾರನ್ನೂ ಬಿಟ್ಟದ್ದಿಲ್ಲ. ಚಿಕ್ಕವರಿಂದ ದೊಡ್ಡವರವರೆಗೆ ಈ ಆಸೆಯೆಂಬ ಹಾಸಿಗೆಯಲ್ಲಿ ನಾವು ಕಾಲು ಚಾಚಿ ಮಲಗೇ ಇರುತ್ತೇವೆ. `ಅಷ್ಟು ದೊರೆತರೆ ಇಷ್ಟು ಬೇಕೆಂಬಾಸೆ, ಇಷ್ಟು ದೊರಕಿದರೆ ಮತ್ತಷ್ಟರ ಆಸೆ' ಎಂಬ ಈ ಆಸೆ ದಾಸರ ಕಾಲದಿಂದ ಈ ಕಾಲದವರೆಗೂ ಬದಲಾಗಿಲ್ಲ, ಬರಿದಾಗಿಲ್ಲ. ಆಸೆ ಒಳ್ಳೆಯದೇ, ಆಸೆಯೇ ಸಾಧನೆಗೆ, ಯಶಸ್ಸಿಗೆ ಮೂಲ.

ಆದರೆ, ಬಹಳಷ್ಟು ಸಲ ಆಸೆ ನಮ್ಮಲ್ಲಿ ಈಗ ಇರುವುದರ ಬೆಲೆಯನ್ನು ನಾವು ಅರಿಯದಂತೆ, ಇರುವುದರ ಕಡೆಗೆ ಮನಸ್ಸು ನೀಡದಂತೆ, ಅದನ್ನು ಸವಿಯದಂತೆ ಮಾಡುವುದಲ್ಲ, ಅದಕ್ಕೆ ಏನು ಮಾಡುವುದು? ಬಹಳಷ್ಟು ಸಲ ಇರುವುದನ್ನು ನಾವು ಕಳೆದುಕೊಂಡ ಮೇಲಷ್ಟೇ ಅದರ ಬೆಲೆ ನಮಗೆ ಅರಿವಾಗುತ್ತದೆ. ಇದು ಸರಿಯೇ?

ಮಕ್ಕಳು ಚಿಕ್ಕವರಿದ್ದಾಗ, ಜೊತೆಯಲ್ಲಿದ್ದಾಗ ಅವರೊಂದಿಗೆ ಕಾಲ ಕಳೆಯಲು ಸಿಗದ ಸಮಯ, ಅವರು ಬೆಳೆದು ದೊಡ್ಡವರಾಗಿ ಪರದೇಶಕ್ಕೆ ಹೋದ ನಂತರ ಅವರ ಪ್ರೀತಿಗೆ, ಮಾತುಕತೆಗೆ ಪರಿತಪಿಸುವ ಹಾಗೆ; ಆರೋಗ್ಯವಿದ್ದಾಗ ಅನುಭವಿಸದ, ಸವಿಯದ ಗಳಿಗೆಗಳು, ನೋಡದ ಸ್ಥಳಗಳು, ಮಾಡದ ಕಾರ್ಯಗಳನ್ನು ಆರೋಗ್ಯ ಕಳೆದುಕೊಂಡ ನಂತರ ನೆನೆ ನೆನೆದು ಹಲುಬುವ ಹಾಗೆ. ನಮ್ಮ ಮುಷ್ಟಿಯಲ್ಲಿ ಹಿಡಿದುದು ಕೈ ಜಾರಿ ಹೋದ ನಂತರವೇ ನಮಗೆ, ಅಷ್ಟೊತ್ತೂ ನಮ್ಮ ಹಿಡಿತದಲ್ಲೇ ಇದ್ದ ವಿಷಯ ಅಥವಾ ವಸ್ತುವಿನ ಬೆಲೆ ಅರಿವಾಗುವುದಲ್ಲ, ಇದು ಮನುಷ್ಯನ ದೌರ್ಬಲ್ಯವೋ, ದೌರ್ಭಾಗ್ಯವೋ?

ಈ ಪಟ್ಟಿಯಲ್ಲಿ ಕಳೆದುಕೊಂಡ ಸಮಯ, ಸಂಬಂಧ, ಸಂಪತ್ತು, ಸಮಾಧಾನ, ಸ್ವಾಸ್ಥ್ಯ, ಸಾಮಾನು, ಸದ್ಗುಣ ಎಲ್ಲವೂ ಸೇರುತ್ತವೆ. ಆದರೆ ಕಳೆದು ಹೋದದ್ದು, ಕಾಲಗರ್ಭದಲ್ಲಿ ಸೇರಿಹೋದದ್ದು ನಮಗೆ ಯಥಾ ರೀತಿ ಮತ್ತೆ ದೊರಕದ ಕಾರಣ, ಕಳೆದು ಹೋದದ್ದರ ಬಗ್ಗೆ ವೃಥಾ ಕಾಲಹರಣ ಮಾಡುವ ಬದಲು, ನಮ್ಮ ಹಿಡಿತಕ್ಕೆ ಸಿಗುವುದರ ಬಗ್ಗೆ, ನಮ್ಮಲ್ಲಿ ಇರುವುದರ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕು.

ಆಗ  ಕಳೆದುಕೊಳ್ಳಬಹುದಾದ ಮತ್ತಷ್ಟು ಸವಲತ್ತುಗಳನ್ನು ಕಳೆದುಕೊಳ್ಳುವ ಮುನ್ನ ಅವನ್ನು ನಾವು ಹಿಡಿಯಬಹುದು, ಭವಿಸಬಹುದು! ಆದ್ದರಿಂದ, ಈ ಕ್ಷಣ ನಿಮಗೆ ಇರಲು ಮನೆಯಿದೆ ಎಂದಾದರೆ, ಅದು ಎಷ್ಟು ಚದರದ್ದೇ ಆದರೂ ಸರಿ, ಮನೆಯೊಂದಿದೆಯಲ್ಲ, ಸಂತೋಷ ಅನುಭವಿಸಲು ಅಡ್ಡಿಯಿಲ್ಲವಲ್ಲ? ನೆಮ್ಮದಿಯ ಕೆಲಸ, ಪ್ರೀತಿಯ ಕುಟುಂಬ ಇದೆಯಲ್ಲ? ಅದು ನೂರಕ್ಕೆ ನೂರರಷ್ಟು ನೀವು ಕಂಡ ಕನಸಿನ ಸೌಧದಂತೆ ಇರಲಿಕ್ಕಿಲ್ಲವಾದರೂ; ಇರುವುದನ್ನು ಆನಂದಿಸಿ. ಈಗಿರುವುದನ್ನು ಇನ್ನಷ್ಟು ಉತ್ತಮಗೊಳಿಸುವ ಪ್ರಯತ್ನ ಮಾಡಲು ಅಡ್ಡಿ ಇಲ್ಲವಲ್ಲ.

ಕಣ್ಣು ಬಿಟ್ಟು ತೆರೆಯುವುದರೊಳಗೆ ಅಪಘಾತ, ಅವಘಡ, ಕಾಯಿಲೆ, ಸಂಕಷ್ಟಗಳ ನಡುವೆ, ಈ ಕ್ಷಣ ಇದ್ದದ್ದು ಇನ್ನೊಂದು ಕ್ಷಣದಲ್ಲಿ ಇಲ್ಲವಾಗುವುದನ್ನು ನಾವು ಓದಿ, ಕೇಳಿ, ನೋಡಿ, ಅನುಭವಿಸಿ ತಿಳಿದಿರುತ್ತೇವಲ್ಲವೇ? ಹಾಗಾದರೆ ಈಗ ನಮ್ಮಲ್ಲಿ ಇರುವುದನ್ನು ನೋಡಿ ಆನಂದಿಸಲು, ಅನುಭವಿಸಲು ಒಳ್ಳೆಯ ಗಳಿಗೆಗಾಗಿ ಕಾಯುವ ಅವಶ್ಯಕತೆ ಇದೆಯೇ? ಇಲ್ಲದ್ದನ್ನು ಗಳಿಸುವುದಕ್ಕೆ, ಪಡೆಯುವುದಕ್ಕೆ, ಸಾಧಿಸುವುದಕ್ಕೆ ನಮಗೆ ನಮ್ಮ ಮುಂದೆ ಕಾಲಾವಕಾಶ ಇದೆ, ಭವಿಷ್ಯವಿದೆ. ಆದರೆ ಇಂದು ಇರುವುದನ್ನು ಅನುಭವಿಸಲು ಈ ಕ್ಷಣ ಮಾತ್ರವಿದೆ, ಹಾಗಾದರೆ ಅದನ್ನು ಮುಂದೂಡುವ ಅಗತ್ಯವಾದರೂ ಏನು?

ಆರೋಗ್ಯವಾಗಲೀ, ಸಂಬಂಧ, ಪ್ರೀತಿಗಳಾಗಲೀ, ಒಳ್ಳೆಯ ಕ್ಷಣಗಳಾಗಲೀ ಕಳೆದು ಹೋಗುವ ಮುನ್ನ ಅವುಗಳನ್ನು ನಿಮ್ಮದಾಗಿಸಿಕೊಳ್ಳಿ. ವರ್ತಮಾನ ಎಂಬುದು ಭೂತ, ಭವಿಷ್ಯಕ್ಕಿಂತ ಸುಂದರ. ಏಕೆಂದರೆ ಕಳೆದು ಹೋದದ್ದನ್ನು ಮರಳಿ ಪಡೆಯುವ ಬಗೆ ನಮಗೆ ತಿಳಿದಿಲ್ಲ. ದೇನು ಎಂದು ಭವಿಷ್ಯವನ್ನು ತಿಳಿಯುವ ಶಕ್ತಿ ನಮಗಿಲ್ಲ. ಈಗ ನಮ್ಮದಾದ ಕ್ಷಣ ಮಾತ್ರ ನಮ್ಮದು.

ವರ್ತಮಾನವಷ್ಟೇ ನಮಗೆ ಸಿಕ್ಕ ಉಡುಗೊರೆ. ಬಹುಶಃ ಅದಕ್ಕಾಗೇ ಆಂಗ್ಲ ಭಾಷೆಯಲ್ಲಿ ವರ್ತಮಾನವನ್ನುPresent’ (ಉಡುಗೊರೆ) ಎಂದಿರಬೇಕು. ಹಾಗಿದ್ದರೆ ನಿಮಗೆ ಬೇಡವೇ ಅಂತಹ ಉಡುಗೊರೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT