ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿ ಕಾಡುವ ಮಕ್ಕಳ ಕತೆ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕಥೆ 1
ಮನೆಯಲ್ಲಿ ಅಪ್ಪನ ಕುಡಿತ ಮತ್ತು ಬೈಗುಳ ಸಹಿಸಲಾರದೇ ಓಡಿ ಬರುವ 9 ವರ್ಷದ ಮೋಹನ್ ರೈಲು ಹತ್ತಿ ಬೆಡಗಿನ ನಗರಿ ಬೆಂಗಳೂರಿಗೆ ಬಂದಿಳಿಯುತ್ತಾನೆ. ಆಸರೆಯಿಲ್ಲದ ಅಪರಿಚಿತ ಊರಿನಲ್ಲಿ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡ ತೊಡಗುತ್ತಾನೆ. ಕ್ರಮೇಣ ಸಮಾಜ ವಿರೋಧಿ ಶಕ್ತಿ ಕೈಗೆ ಸಿಕ್ಕಿ ನಲುಗುತ್ತಾನೆ. ನಂತರ ಆತನ ಬದುಕು ರಕ್ತಮಯ... ಪಾಪಪ್ರಜ್ಞೆ...  ಆತನ ಅಪರಾಧ ಚಟುವಟಿಕೆಗಳನ್ನು ನೋಡಿ ಆತಂಕ ಪಡುವ ಸ್ಥಿತಿ ಪ್ರಜ್ಞಾವಂತ ನಾಗರಿಕ ಸಮಾಜದ್ದು!

ಕಥೆ 2
ಮನೆಯ ಬಡತನವನ್ನು ನೀಗುವ ಸಲುವಾಗಿ ಬಾಲ್ಯದಲ್ಲೇ ದುಡಿಯುವ 12ರ ಹರೆಯದ ರೋಹನ್ ತಾನೂ ದುಡಿದು ಮನೆ ಮಂದಿಯನ್ನು ಸಾಕುವ ಜವಾಬ್ದಾರಿ ಹೊರುತ್ತಾನೆ. ಈ ಸಂದರ್ಭದಲ್ಲಿ ಪರಿಚಯವಾಗುವ ಸ್ನೇಹಿತರಿಂದ  ಡ್ರಗ್ಸ್, ಗಾಂಜಾ, ಅಫೀಮ್‌ನಂತಹ ದುಶ್ಚಟಗಳನ್ನು ಕಲಿತು, ಬಾಲ್ಯ ಮತ್ತು ಬದುಕು ಎರಡನ್ನೂ ಕಳೆದುಕೊಳ್ಳುತ್ತಾನೆ. ಆತನ ಕಥೆ ಕೇಳಿ ಮರುಕಪಡುವ ಸರದಿ ಮತ್ತೆ ಇದೇ ಸಮಾಜದ್ದು.

ಇಂತಹ ಅದೆಷ್ಟು ಕಥೆಗಳಿಗೆ ಸುಂದರನಗರಿ ಬೆಂಗಳೂರು ಸಾಕ್ಷಿಯಾಗುತ್ತಿದೆ. ಲೆಕ್ಕ ಇಟ್ಟವರಾರು?

ಗಗನಚುಂಬಿ ಕ್ರಾಂಕೀಟ್ ಕಟ್ಟಡಗಳು, ವಿಶಾಲ ರಸ್ತೆ, ಮೇಲು ಸೇತುವೆಗಳನ್ನು ಹೊದ್ದು ಮಲಗಿರುವ, ಅಭಿವೃದ್ಧಿಯ ಪಥಕ್ಕೆ ವೇಗವಾಗಿ ತೆರೆದುಕೊಳ್ಳುತ್ತಿರುವ ಮೋಹಕ ನಗರಿ ಬೆಂಗಳೂರಿನ ಬಹುತೇಕ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವ ಮಕ್ಕಳಿದ್ದಾರೆ! ಮರಳಿ ಬಾರದ ಬಾಲ್ಯವನ್ನು ಅಡವಿಟ್ಟು ಹೋಟೆಲ್, ಬಸ್ಸು ನಿಲ್ದಾಣ, ಗ್ಯಾರೇಜ್‌ಗಳಲ್ಲಿ ಅಹೋರಾತ್ರಿ ದುಡಿದು ದಣಿಯುವ ಬಾಲಕಾರ್ಮಿಕರಿದ್ದಾರೆ!

ಹೌದು... ಎಂ.ಜಿ.ರಸ್ತೆಯ ವೈಭವದ ನಡುವೆ ಇರುವ ಕುಂಬ್ಳೆ ವೃತ್ತದ ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡುವ ಮಕ್ಕಳ ಸಂಖ್ಯೆ ಕಡಿಮೆಯೇನಲ್ಲ. `ಇಂದಿನ ಮಕ್ಕಳು ಮುಂದಿನ ಪ್ರಜೆಗಳು~ ಎಂಬ ಸವಕಲು ಪದಗಳ ನಡುವೆಯೇ ಇವರ ಚಾಚಿದ ಕೈಗಳು ಕಾಣುತ್ತವೆ.
ಆದರೆ `ಇಂದಿನ ಮಕ್ಕಳು ಎಂದಿಗೂ ಪ್ರಜೆಗಳು, ಅವರಿಗೂ ಹಕ್ಕಿದೆ~ ಎಂಬುದು ಪುಸ್ತಕಗಳಲ್ಲಿ ಮಾತ್ರ ಕಾಣುತ್ತದೆ. ಇಲ್ಲವೇ ಕೇವಲ ಘೋಷಣೆಗಳಲ್ಲಿ ಕಂಠ ಬಿರಿಯುವಂತೆ ಚೀರಿ, ತಂಪುಪಾನೀಯ ಕುಡಿದು ದಣಿವಾರಿಸಿಕೊಳ್ಳುವ ರಾಜಕಾರಣಿಗಳಿದ್ದಾರೆ. 

ರಸ್ತೆಯಿಂದ ನೆಲೆ ತಲುಪಿದರೆ ಸಾಕು ಎಂಬ ಧಾವಂತ ಎಲ್ಲರಿಗೂ. ಚಾಚಿದ ಕೈಗೆ ಚಿಲ್ಲರೆ ಕಾಸಿಟ್ಟು ಮುನ್ನುಗ್ಗುವುದೇ ಸಮಾಧಾನ ತರುತ್ತದೆ. ಆದರೆ ಅವರ ಭವಿಷ್ಯದ ಬಗ್ಗೆ ಯೋಚಿಸಿದ್ದೇವೆಯೇ?  

 ಒಂಟಿಯಾಗಿ ಅಲೆಯುವ, ಕಾಣೆಯಾದ, ಮನೆ ತೊರೆದು ಬರುವ, ಅನಾಥ ಮಕ್ಕಳು ಭಿಕ್ಷಾಟನೆ ಮತ್ತು ಮಾದಕ ವ್ಯಸನಗಳ ಜಾಲಕ್ಕೆ ಸಿಲುಕುತ್ತಿರುವುದನ್ನು ತಪ್ಪಿಸಲು ಮಕ್ಕಳ ಹಕ್ಕು ಆಯೋಗದ ನಿರ್ದೇಶನದಂತೆ `ಆಪ್ತ~, `ಡಾನ್ ಬಾಸ್ಕೋ~ ಹಾಗೂ `ಸಾಥಿ~ ಸರ್ಕಾರೇತರ ಸಂಸ್ಥೆಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ. 

ಮಕ್ಕಳ ಕಳ್ಳರಿದ್ದಾರೆ
ಬಸ್ಸು, ರೈಲುಗಳಲ್ಲಿ ಪೋಷಕರ ಗಮನ ಬೇರೆಡೆ ಸೆಳೆದು ಮಕ್ಕಳನ್ನು ಕದಿಯುವ ಮತ್ತು ಮಾರಾಟ ಮಾಡುವ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಕದ್ದು ತಂದ ಮಕ್ಕಳನ್ನು ಭಿಕ್ಷಾಟನೆ ಮತ್ತು ಅಪರಾಧ ಚಟುವಟಿಕೆಯಲ್ಲಿ ತೊಡಗಿಸಲಾಗುತ್ತದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಬಸವರಾಜು ಹೇಳುತ್ತಾರೆ.

ಪ್ರತಿ ತಿಂಗಳು 70ರಿಂದ 80ಮಂದಿ ಮಕ್ಕಳನ್ನು ಇಂಥ ಬಲೆಗಳಿಂದ ರಕ್ಷಿಸಲಾಗುತ್ತಿದೆ. ಹೆಚ್ಚಾಗಿ 10-15 ವರ್ಷ ವಯೋಮಾನದವರು. ಬಿಹಾರ, ಒಡಿಶಾ, ರಾಜಸ್ತಾನ್, ಪಶ್ಚಿಮ ಬಂಗಾಳ ರಾಜ್ಯಗಳ ಮಕ್ಕಳೇ ಬಹುಸಂಖ್ಯಾತರು. ಸಮಾಜ ವಿರೋಧಿ ಶಕ್ತಿಗಳು ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಇವರನ್ನು ಭಿಕ್ಷಾಟನೆಗೆ ನೂಕುತ್ತವೆ. ನಂತರದ ಹೆಜ್ಜೆ ಪಾತಕಲೋಕಕ್ಕೆ. 18ರ ಮುಗ್ಧ ಯುವಕರನ್ನು ಪಾತಕ ಲೋಕ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಮಕ್ಕಳ ಬಡತನ ಮತ್ತು ದುಡಿಯುವ ಅನಿವಾರ್ಯವನ್ನೇ ಬಳಸಿಕೊಂಡು ಹೋಟೆಲ್, ಬಟ್ಟೆ ಅಂಗಡಿಗಳಲ್ಲಿ ದುಡಿಸುವ ಪ್ರವೃತ್ತಿಯು ಅವ್ಯಾಹತವಾಗಿಯೇ ಇದೆ. ಬಾಲಕಾರ್ಮಿಕರ ದುಡಿಮೆಯಿಂದ ಹೊಟ್ಟೆಹೊರೆಯುವ ಪೋಷಕರ ಮನೋವೃತ್ತಿಯೇ ಆತಂಕಕಾರಿ. ಕೇವಲ ವರ್ತಮಾನದ ಅಗತ್ಯಗಳನ್ನು ತೀರಿಸಲು ಮಕ್ಕಳಿಗೆ ಕೆಲಸದ ಕಣಕ್ಕೆ ಇಳಿಸುವುದು ಸರಿಯಲ್ಲ. ಪೋಷಕರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಸುರಕ್ಷಿತ ಬಾಲ್ಯದಿಂದಲೇ ಉತ್ತಮ ಭವಿಷ್ಯ ನೀಡಬಹುದು ಎಂಬುದು ತಿಳಿಸಬೇಕಿದೆ ಎನ್ನುತ್ತಾರೆ.

 ಕೌಟುಂಬಿಕ ವಾತಾವರಣವಿಲ್ಲದ ಮಕ್ಕಳ  ಕುರಿತು ಬಾಸ್ಕೋ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪರಿಶೀಲನೆ ನಡೆಸುತ್ತವೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಮಕ್ಕಳನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಗೆ ವಹಿಸಲಾಗುತ್ತದೆ. ಈ ಸಮಿತಿಯಲ್ಲಿ 5 ಮಂದಿ ಸದಸ್ಯರಿರುತ್ತಾರೆ. ಅಪರಾಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಮಕ್ಕಳನ್ನು ಬಾಲಮಂದಿರಗಳಿಗೆ ಕಳುಹಿಸಲಾಗುತ್ತದೆ. ಮಕ್ಕಳನ್ನು ಹುಡುಕಿಕೊಂಡು ಬರುವವರ ಬಳಿ ಜನನ ದಾಖಲಾತಿಗಳು ಸೂಕ್ತವಾಗಿದೆಯೇ ಎಂದು ಪರಿಶೀಲಿಸಿ ಖಾತರಿಪಡಿಸಿಕೊಳ್ಳಲಾಗುತ್ತದೆ.

ನಾವೇನು ಮಾಡಬಹುದು?
ಸಮಾಜ ವಿರೋಧಿ ಶಕ್ತಿಗಳ ಕೈಗೆ ಸಿಗದಂತೆ ಈ ಅಸಹಾಯಕ ಸ್ಥಿತಿಯಲ್ಲಿರುವ ಮಕ್ಕಳ ರಕ್ಷಣೆ ನಾಗರಿಕರು ಸಹಾಯ ಮಾಡಲು ಸಾಧ್ಯವಿದೆ. ಇಂತಹ ಮಕ್ಕಳಿರುವ ಸ್ಥಳವನ್ನು ನಾಗರಿಕರು ಗುರುತಿಸಿ 1098 ಸಹಾಯವಾಣಿಗೆ ಅಥವಾ 9243185637 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

ಮುಂದೇನು?
ಸಂಘಟನೆಗಳ ಸಹಕಾರದಿಂದ ರಕ್ಷಿಸಲ್ಪಟ್ಟ ಕಾಣೆಯಾದ, ದುಶ್ಚಟಗಳಿಗೆ ಬಲಿಯಾದ ಮಕ್ಕಳನ್ನು ಪೋಷಕರು ಮತ್ತು ಬಾಲಮಂದಿರಗಳಿಗೆ ಒಪ್ಪಿಸಲಾಗುತ್ತಿದೆ. ಆದರೆ  ಬಾಲಕಾರ್ಮಿಕರು, ಭಿಕ್ಷಾಟನೆ ಮಾಡುವ, ಅನಾಥ ಮಕ್ಕಳಿಗೆ ಭವಿಷ್ಯ ನೀಡಲು ಸಾಧ್ಯವಿದೆಯೇ? ರಕ್ಷಣೆಯ ನಂತರದ ಆ ಮಕ್ಕಳ ಜವಾಬ್ದಾರಿಯನ್ನು ಯಾರು ಹೊರುತ್ತಾರೆ? ಅವರಿಗೆ ಅಗತ್ಯವಿರುವ ಮೂಲ ಸೌಕರ್ಯ, ಶಿಕ್ಷಣ ಸೇರಿದಂತೆ ಉತ್ತಮ ಜೀವನ ನೀಡಲು ಸಾಧ್ಯವಾಗಿದೆಯೇ?  ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT