ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅತಿಥಿ ಪ್ರತಿಭಟನೆ

Last Updated 25 ಜನವರಿ 2011, 11:15 IST
ಅಕ್ಷರ ಗಾತ್ರ

ಉಡುಪಿ: ಅತಿಥಿ ಉಪನ್ಯಾಸಕರ ಸಂಘ ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವತಿಯಿಂದ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೆಳಗಿನಿಂದ ಸಂಜೆ ವರೆಗೆ ಪ್ರತಿಭಟನೆ ನಡೆಸಲಾಯಿತು.

ಅತಿಥಿ ಉಪನ್ಯಾಸಕರಿಗೆ ವೇತನದಲ್ಲಿ, ಪದನಾಮದಲ್ಲಿ, ಗೌರವಧನ ನೀಡಿಕೆಯಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದೆ. ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಪ್ರತಿಭಟನೆಯಲ್ಲಿ ಸೇರಿದ್ದ ನೂರಾರು ಉಪನ್ಯಾಸಕರು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಎಲ್ಲ ಬೇಡಿಕೆಗಳ ಬಗ್ಗೆ ಆಗ್ರಹಿಸಿ ವಿಧಾನಸೌಧದವರೆಗೂ ಹೋದರೂ ಕೂಡ ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿಯೂ ಸ್ಪಂದಿಸಿಲ್ಲ. ಹೀಗಾಗಿ ಅನಿರ್ದಿಷ್ಟ ಅವಧಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾಗಿದ್ದೇವೆ. ಇದಕ್ಕೆ ಯಾರಿಂದಲೂ ಸೂಕ್ತ ಸ್ಪಂದನ ದೊರೆಯದೇ ಇದ್ದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನೂ ನಮ್ಮ ಹೋರಾಟದಲ್ಲಿ ಸೇರಿಸಿಕೊಂಡು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಅತಿಥಿ ಉಪನ್ಯಾಸಕರಿಗೆ ಕನಿಷ್ಠ ವೇತನವಾಗಿ ಯುಜಿಸಿಯ ಮೂಲವೇತನ ರೂ.21,600 ನೀಡಬೇಕು. ಹಾಗೆಯೇ ಪ್ರತಿ ತಿಂಗಳ 5ರೊಳಗೆ ಗೌರವಧನ ಬಿಡುಗಡೆ ಮಾಡಬೇಕು. ಕೆಲಸದಲ್ಲಿ ಮತ್ತು ಆಯ್ಕೆ ಪ್ರಕ್ರಿಯೆಗಳಲ್ಲಿ ಅರೆಕಾಲಿಕ ಹಾಗೂ ಅತಿಥಿ ಉಪನ್ಯಾಸಕರಿಗೆ ಯಾವುದೇ ವ್ಯತ್ಯಾಸವಿಲ್ಲ. ಆದರೆ ಪದನಾಮದಲ್ಲಿ ಮಾತ್ರ ವ್ಯತ್ಯಾಸ ಮಾಡಿದ್ದು ಸರಿಯಲ್ಲ.
 
ಹೀಗಾಗಿ ನಮ್ಮನ್ನು ಈ ಮೊದಲಿನಂತೆ ಅರೆಕಾಲಿಕ ಉಪನ್ಯಾಸಕರು ಎಂದೇ ಪರಿಗಣಿಸಬೇಕು. ಅತಿಥಿ ಉಪನ್ಯಾಸಕರಿಗೆ ವರ್ಷದಲ್ಲಿ ಒಂಬತ್ತು ತಿಂಗಳು ಮಾತ್ರ ಗೌರವಧನ ನೀಡುವ ಬದಲು 12 ತಿಂಗಳು ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಎಸ್‌ಎಫ್‌ಐ ಸಂಚಾಲಕ ಕವಿರಾಜ್, ಕಾರ್ಯದರ್ಶಿ ಭವ್ಯ, ಜೀವನರಾಜ್, ಹರ್ಷ ಪೂಜಾರಿ, ಅತಿಥಿ ಉಪನ್ಯಾಸಕರ ಸಂಘದ ಸಂಚಾಲಕ ವನೀತ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT