ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಏ.2ರಂದು ರೈತರಿಂದ ಹೆದ್ದಾರಿ ಬಂದ್ ಅಂದಾದರೂ ನಮ್ಮ ಗೋಳು ಕೇಳಿಯಾರೇ..?

Last Updated 31 ಮಾರ್ಚ್ 2011, 8:40 IST
ಅಕ್ಷರ ಗಾತ್ರ

ಕಂಪ್ಲಿ: ಅನ್ನದಾತನಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ ಈ ನಾಡಿನಲ್ಲಿ ಅನ್ನದಾತ ಇನ್ನೂ ಸಂಕಷ್ಟದಲ್ಲಿದ್ದಾನೆ ಎನ್ನುವುದಕ್ಕೆ ಇಲ್ಲಿಗೆ ಸಮೀಪದ ದರೋಜಿ ಕೆರೆ ವ್ಯಾಪ್ತಿಯ ಸಾವಿರಾರು ಮಣ್ಣಿನ ಮಕ್ಕಳು ಕಳೆದ 18 ತಿಂಗಳಿನಿಂದ ಅನುಭವಿಸುತ್ತಿರುವ ಸಂಕಷ್ಟಗಳೇ ತಾಜಾ ಉದಾಹರಣೆ.2009ರ ಅಕ್ಟೋಬರ್ ಮಹಾಮಳೆಗೆ ದರೋಜಿ ಕೆರೆ ಕೋಡಿ ಒಡೆದು, ನೀರಿನ ರಭಸಕ್ಕೆ ಅಪಾರ ಪ್ರಮಾಣದ ನಷ್ಟವಾಯಿತು. ಈ ಸಂದರ್ಭದಲ್ಲಿ ಕಾಲುವೆ, ಕಾಲುವೆ ರಸ್ತೆಗಳು, ಒಡ್ಡುಗಟ್ಟುಗಳು(ಪಿಕಪ್), ಮಾಗಣಿ ರಸ್ತೆಗಳು, ನೀರು ವಿತರಣಾ ನಾಲೆಗಳು ಹಾಳಾದವು.
 

ಮಹಾಮಳೆ ನಿಂತ ನಂತರ ಕೆರೆ ಕೋಡಿಯನ್ನು ನಿರ್ಮಿಸಿದರೂ, ಒಂದು ಭಾಗದಲ್ಲಿ ಕಟ್ಟಡ ಇನ್ನೂ ಅಪೂರ್ಣವಾಗಿದೆ. ಅಚ್ಚುಕಟ್ಟು ಭೂಮಿಗೆ ನೀರು ಹರಿಯುವ ಕೆರೆಯ ತೂಬುಗಳ ಸಂಖ್ಯೆ 1,2,3ರ ಕಾಲುವೆಗಳು ಮತ್ತು ಉಪ ಕಾಲುವೆಗಳು ಇಂದಿಗೂ ಹೂಳು, ಬೇಲಿ ಕಡಿಯದೆ ಬಿಟ್ಟಿರುವುದರಿಂದ ಭೂಮಿಗಳಿಗೆ ನೀರು ಸುಲಭವಾಗಿ ಹರಿಯುತ್ತಿಲ್ಲ. ಕೆರೆ ಕೆಳ ಭಾಗದ ಅಚ್ಚುಕಟ್ಟು ಪ್ರದೇಶದ ಅಡಿಯಲ್ಲಿ ಬರುವ ರಸ್ತೆಗಳೂ ದುರಸ್ತಿ ಕಂಡಿಲ್ಲ.
 

ಕೆರೆ ಕೋಡಿ ಕೆಳ ಭಾಗದಲ್ಲಿರುವ ಜೀರಿಗನೂರು ಕಾಲುವೆ ಅರ್ಧದಿಂದ ಒಂದು ಕಿ.ಮೀ.ವರೆಗೆ ತಡೆಗೋಡೆ ಶಿಥಿಲವಾಗಿ ನೀರು ಸೋರಿಕೆಯಾಗುತ್ತಿದ್ದು, ಕೂಡಲೇ ದುರಸ್ತಿ ಮಾಡಿಸುವುದರ ಜೊತೆಗೆ ತಡೆಗೋಡೆ ಎತ್ತರಿಸಬೇಕು ಎಂಬುದು ರೈತರ ಆಗ್ರಹ.2009ರಲ್ಲಿ ಸುರಿದ ಭಾರಿ ಮಳೆಗೆ ಕೆರೆ ಕೋಡಿ ಒಡೆದು ಹಳೆ ದರೋಜಿಯಿಂದ ಸಿದ್ದಮ್ಮನಹಳ್ಳಿಗೆ ಹೋಗುವ ರಸ್ತೆ, ಹಳೆ ದರೋಜಿಯಿಂದ ಹೊಸ ದರೋಜಿಗೆ ಹೋಗುವ ಸರ್ಕಾರ ಬಾವಿ ರಸ್ತೆ ಮತ್ತು ನಾರಿಹಳ್ಳದ ಸೇತುವೆಗಳು ಸಂಪೂರ್ಣ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿರುವುದರಿಂದ ರೈತರು ಈ ಮಾರ್ಗದಲ್ಲಿ  ಸಂಚರಿಸುವುದು ಕಷ್ಟವಾಗಿದೆ.
 

ಕೆರೆ ಅಚ್ಚುಕಟ್ಟು ಪ್ರದೇಶದ ಕೆಳಗೆ ಬರುವ ವಡ್ಡುಕಟ್ಟೆ(ಪಿಕಪ್) ಮತ್ತು ನೀರಿನ ಕಾಲುವೆಗಳ ದುರಸ್ತಿ ಕಾಮಗಾರಿಗಳನ್ನು ಬೇಗ ಕೈಗೆತ್ತಿಕೊಳ್ಳಬೇಕು. ಕೆರೆ ಕೆಳಭಾಗದ ಮುಖ್ಯ ಕಾಲುವೆಗಳ ಶಟರ್ಸ್ ಹಾಗೂ ಕಂಟ್ರೋಲ್ ಪಾಯಿಂಟ್ ದುರಸ್ತಿಯಾಗಬೇಕು. ಕೆರೆಯ 2ನೇ ತೂಬಿನ ಒಳಭಾಗದಲ್ಲಿ ಅಂದರೆ ಕಂಪ್ಲಿ-ಬಳ್ಳಾರಿ ಮುಖ್ಯ ರಸ್ತೆಯ ಕೆಳಭಾಗದಲ್ಲಿ ಹಾದು ಹೋಗಿರುವುದರಿಂದ ಈ ಕಾಲುವೆಯ ಮೇಲಿನ ಬಂಡೆಗಳು ಮುರಿದು ಕಾಲುವೆಯಲ್ಲಿ ಬಿದ್ದಿವೆ. ಈ ಕಾರಣದಿಂದ ರೈತರಿಗೆ ನೀರು ಹಾಯಿಸಿಕೊಳ್ಳಲು ತೊಂದರೆಯಾಗುತ್ತಿದ್ದು, ಇದನ್ನು ಸರಿಪಡಿಸುವಂತೆ ರೈತಾಪಿ ವರ್ಗ ಆಗ್ರಹಿಸಿದೆ.
 

ಈ ಮೊದಲು ದರೋಜಿ ಕೆರೆ 1ನೇ ತೂಬಿನ  900 ಎಕರೆ, 2ನೇ ತೂಬಿನ 500ಎಕರೆ, 3ನೇ ತೂಬಿನ 1100 ಎಕರೆ ಮತ್ತು ಆರ್.ಬಿ.ಎಚ್.ಎಲ್.ಸಿ ವಿತರಣಾ ನಂ.3ರ 6000 ಎಕರೆಗಳ ನೀರು ನಿರ್ವಹಣೆಗಾಗಿ 23 ನೀರಗಂಟಿಗಳು, 5ಜನ ವರ್ಕ್ ಇನ್ಸ್‌ಪೆಕ್ಟರ್‌ಗಳು ಇದ್ದರು. ಆದರೆ ಇಂದು ಒಬ್ಬ ನೀರಗಂಟಿಗಳೂ ಇಲ್ಲ. ಈಗಲಾದರೂ ಎಚ್ಚೆತ್ತು ಕನಿಷ್ಠ 10ಜನ ನೀರಗಂಟಿಗಳನ್ನು ನೇಮಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
 

ಹಳೆ ದರೋಜಿ, ಹೊಸ ದರೋಜಿ, ಮಾದಾಪುರ, ಸೋಮಲಾಪುರ, ಹೊನ್ನಳ್ಳಿ, ಮಾವಿನಹಳ್ಳಿ, ಸುಗ್ಗೇನಹಳ್ಳಿ, ಶ್ರೀರಾಮರಂಗಾಪುರ, ಗೋನಾಳ್ ಗ್ರಾಮಗಳ ರೈತರು ಕಳೆದ 18ತಿಂಗಳಿನಿಂದ ಈ ಎಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
 

ನಿರ್ಧಾರ: ತಮ್ಮ ಸಂಕಷ್ಟಗಳನ್ನು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಅರಿಕೆ ಮಾಡಿ, ಮಾಡಿ, ಇದೀಗ ಬೇಸತ್ತಿರುವ ನೇಗಿಲಯೋಗಿಗಳು ಅನ್ಯ ಮಾರ್ಗ ತೋಚದೇ ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಾಗಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಏ. 2 ರಂದು ದರೋಜಿ ಪ್ರವಾಸಿ ಮಂದಿರದ ಕಂಪ್ಲಿ-ಕುಡುತಿನಿ ರಾಜ್ಯ-29ನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.‘ಅಂದಾದರೂ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ನಮ್ಮ ಬಿನ್ನಹವನ್ನು ಆಲಿಸಬಹುದೇ’ ಎಂದು ನೀರು ಬಳಕೆದಾರರ ಸಹಕಾರ ಸಂಘ ಭಾಗ-1ರ ಅಧ್ಯಕ್ಷ ಸಿ. ರಾಮಾಂಜನೇಯ ಮತ್ತು ಭಾಗ-2ರ ಅಧ್ಯಕ್ಷ ವಿ. ತಿಮ್ಮಪ್ಪ ಕೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT