ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರಣಿ ಪ್ರತಿಭಟನೆ

Last Updated 2 ಜುಲೈ 2013, 8:02 IST
ಅಕ್ಷರ ಗಾತ್ರ

ಹಾಸನ: `ದುದ್ದ ರಸ್ತೆ ಕಾಮಗಾರಿ ಕೂಡಲೇ ಆರಂಭಿಸಬೇಕು ಮತ್ತು ಈ ರಸ್ತೆಯ ಸಮಸ್ಯೆಗೆ ಕಾರಣರಾದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು' ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಲ್ಲಿನ ಡೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

`ರಸ್ತೆ ಕಾಮಗಾರಿ ಸರಿಯಾದ ಸಮಯದಲ್ಲಿ ಆರಂಭವಾ ಗಿದ್ದರೆ ಈಗಾಗಲೇ ಅರ್ಧ ಕಾಮಗಾರಿ ಪೂರ್ಣಗೊಳಿಸ ಬೇಕಾ ಗಿತ್ತು. ಆದರೆ ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾಡಿ ಹೋಗಿದ್ದಾರೆ. ಈ ಹಿಂದೆಯೂ ಕ.ರ.ವೇ ಹಲವು ಬಾರಿ ಪ್ರತಿ ಭಟನೆ ನಡೆಸಿದ್ದರೂ ಜಿಲ್ಲಾಡಳಿತವಾಗಲಿ ಸಂಬಂಧಪಟ್ಟ ಸಚಿವ ರಾಗಲಿ ಇತ್ತ ಗಮನ ಹರಿಸಿಲ್ಲ. ಈಗ ರಸ್ತೆ ತುಂಬ ದೊಡ್ಡ ಗುಂಡಿಗಳು ನಿರ್ಮಾಣವಾಗಿ ಓಡಾಡುವುದೇ ಸಾಧ್ಯವಿಲ್ಲ ದಂತಾಗಿದೆ. ಜನರಿಗೆ ಅನುಕೂಲ ಕಲ್ಪಿಸಲು ಕೂಡಲೇ ಈ ಕಾಮಗಾರಿ ಆರಂಭಿಸಬೇಕು' ಎಂದು ಆಗ್ರಹಿಸಿದರು.

ಬೆಳಿಗ್ಗೆ 11.30ರ ಸುಮಾರಿಗೆ ದುದ್ದ ರಸ್ತೆಯ ಸಂಚಾರವನ್ನು ತಡೆದು ಪ್ರತಿಭಟನೆ ಆರಂಭಿಸಿದ ಕಾರ್ಯಕರ್ತರು ಜಿಲ್ಲಾಧಿ ಕಾರಿಯೇ ಬಂದು ನಮ್ಮಿಂದ ಮನವಿ ಸ್ವೀಕರಿಸಬೇಕು ಎಂದು ಹಟ ಹಿಡಿದರು. ಅವರು ಬೇರೆ ಸಮಾರಂಭದಲ್ಲಿರುವುದರಿಂದ ಉಪವಿಭಾಗಾಧಿಕಾರಿಗೆ ಮನವಿಪತ್ರ ಸಲ್ಲಿಸುವಂತೆ ಪೊಲೀಸರು ಪ್ರತಿಭಟನಾಕಾರರನ್ನು ವಿನಂತಿಸಿದರು.

ಸುಮಾರು ಅರ್ಧ ಗಂಟೆ ಕಾಲ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೊನೆಗೆ ಉಪವಿಭಾಗಾಧಿಕಾರಿ ಜಗದೀಶ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಕೊನೆಗೊಳಿಸಿದರು.

ಕ.ರ.ವೇ ಜಿಲ್ಲಾ ಘಟಕದ ಅಧ್ಯಕ್ಷ ಮನುಕುಮಾರ್, ಉಪಾಧ್ಯಕ್ಷ ಹರೀಶ್ ಗೌಡ, ಲೋಕೇಶ್, ವಸಂತ ಕುಮಾರ್, ಶಿವು ಮತ್ತಿತರರು ಪಾಲ್ಗೊಂಡಿದ್ದರು.

ಮಾಸಾಶನ ನೀಡಲು ಆಗ್ರಹ
ಹಾಸನ: ಕೃಷಿ ಆದಾಯವನ್ನೇ ನಂಬಿರುವ 60 ವರ್ಷ ತುಂಬಿದ ರೈತರಿಗೆ ಮಾಸಿಕ ಮೂರು ಸಾವಿರ ರೂಪಾಯಿ ಮಾಸಾಶನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜುಲೈ ತಿಂಗಳ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿರುವ ಹಿನ್ನೆಲೆಯಲ್ಲಿ ಸಿಪಿಐ ಅವರಿಗೆ `ಬಜೆಟ್‌ಪೂರ್ವ ಜನಾಗ್ರಹ' ಪತ್ರವನ್ನು ಸಲ್ಲಿಸಿದ್ದು, ಅದರಲ್ಲಿ ನಮೂದಿಸಿದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿತ್ತು. ಅದರಂತೆ ಹಾಸನದಲ್ಲೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

`ಪರಿಶಿಷ್ಟ ಜಾತಿ/ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಬಾರದು, ವಿ. ಬಾಲಸುಬ್ರಹ್ಮಣ್ಯನ್ ವರದಿ ಜಾರಿ ಮಾಡಬೇಕು, ಗಣಿಗಾರಿಕೆಯಿಂದ ಆಗಿರುವ ನಷ್ಟವನ್ನು ಗಣಿ ಕಂಪನಿ ಮಾಲೀಕರು ಹಾಗೂ ಅಧಿಕಾರಿಗಳಿಂದ ವಸೂಲಿ ಮಾಡಬೇಕು, ಎಲ್ಲರಿಗೂ ಶುದ್ಧ ಕುಡಿಯುವ ನೀರು ನೀಡಲು ಕ್ರಮವಹಿಸುವುದೇ ಮುಂತಾದ ಹತ್ತು ಬೇಡಿಕೆಗಳನ್ನು ಈಡೇರಿಸುವಂತೆ ಅವರು ಒತ್ತಾಯಿಸಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಡೋಂಗ್ರೆ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಮೈಕ್ರೋ ಇನ್ಸುರೆನ್ಸ್‌ನಿಂದ ವಂಚನೆ: ಪ್ರತಿಭಟನೆ
ಹಾಸನ: ಭಾರತೀಯ ಜೀವ ವಿಮಾ ನಿಗಮದ ಮೈಕ್ರೋ ಇನ್ಶೂರೆನ್ಸ್ ಯೋಜನೆಯಡಿ ಹೂಡಿಕೆ ಮಾಡಿದ ಜಿಲ್ಲೆಯ 40 ಸಾವಿರಕ್ಕೂ ಹೆಚ್ಚು ಜನರು ಕೋಟ್ಯಂತರ ರೂಪಾಯಿ ಕಳೆದು ಕೊಳ್ಳುವ ಸ್ಥಿತಿ ಬಂದಿದ್ದು, ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿ ಈ ಹಣವನ್ನು ಹೂಡಿಕೆದಾರರಿಗೆ ಮರಳಿಸಲು ಕ್ರಮಕೈಗೊ ಳ್ಳಬೇಕು ಎಂದು ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಎಲ್‌ಐಸಿ ಈ ಯೋಜನೆಯಡಿ ಖಾಸಗಿ ಸಂಸ್ಥೆಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಜನರಿಂದ ಹಣ ಸಂಗ್ರಹಿಸಿತ್ತು. ಆದರೆ ಖಾಸಗಿ ಸಂಸ್ಥೆಯವರು ಜನರಿಂದ ಪಡೆದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆಯರು, ನಿರುದ್ಯೋಗಿ ಯುವತಿಕರು ಇದರಲ್ಲಿ ಸಬ್ ಏಜೆಂಟರಾಗಿ ಕೆಲಸ ಮಾಡಿದ್ದರು, ಇವರು ಹಾಗೂ ಜೀವವಿಮಾ ನಿಗಮದ ಮುಖ ನೋಡಿ ಜನರು ಹಣ ಪಾವತಿ ಮಾಡಿದ್ದರು. ಈಗ ನಿಗಮದವರು ಹಣಕ್ಕೆ ನಾವು ಜವಾಬ್ದಾರರಲ್ಲ ಎನ್ನುತ್ತಿದ್ದಾರೆ. ಜನರು ಈಗ ನಮ್ಮ ಹಣ ವಾಪಸ್ ಕೊಡಿ ಎಂದು ಸಬ್ ಏಜೆಂಟರುಗಳನ್ನು ಒತ್ತಾಯಿಸುತ್ತಿದ್ದಾರೆ' ಎಂದು ಪ್ರತಿಭಟನಾಕಾರರು ನುಡಿದರು.

ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಇಂದಿರಮ್ಮ, ಅರವಿಂದ, ಶಾಂತಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT