ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಒತ್ತಾಯ

Last Updated 3 ಫೆಬ್ರುವರಿ 2011, 6:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸರ್ಕಾರಿ ನೌಕರರ ಸ್ಥಾನಮಾನ, ಸಮರ್ಪಕ ಪಿಂಚಣಿ ವ್ಯವಸ್ಥೆ, ನಿಯಮಿತ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಆರು ತಾಲ್ಲೂಕುಗಳಿಂದ ಭಾರಿ ಸಂಖ್ಯೆಯಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಿಲ್ಲಾ ಪಂಚಾಯಿತಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಯಾವುದೇ ಕಾರಣಕ್ಕೂ ವಿಳಂಬ ತೋರಬಾರದು ಎಂದು ಆಗ್ರಹಿಸಿದರು.

‘ಸರ್ಕಾರಿ ನೌಕರರ ಸಮಾನವಾಗಿ ಕೆಲಸ ಮಾಡಿದರೂ ಸರ್ಕಾರಿ ನೌಕರರ ಸ್ಥಾನಮಾನ ನೀಡಲಾಗುತ್ತಿಲ್ಲ, ಸಮರ್ಪಕ ರೀತಿಯಲ್ಲಿ ಗೌರವ ಧನ ನೀಡಲಾಗುತ್ತಿಲ್ಲ. ಮಕ್ಕಳನ್ನು ಪೋಷಿಸುವುದರ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಮತ್ತು ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೂ ನಮ್ಮತ್ತ ನಿರ್ಲಕ್ಷ್ಯ ತೋರಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಎಸ್.ವರಲಕ್ಷ್ಮಿ ಮಾತನಾಡಿ, ‘ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಭರವಸೆಗಳನ್ನು ನೀಡುವುದರಲ್ಲೇ ಸರ್ಕಾರ ಸಮಯವನ್ನು ವ್ಯರ್ಥ ಮಾಡುತ್ತಿದೆ. ವರ್ಷಗಳಿಂದ ಹಲವು ಬಾರಿ ಹೋರಾಟ ಕೈಗೊಂಡರೂ, ರಾಜಧಾನಿಯಲ್ಲಿ ದೀರ್ಘ ಕಾಲದವರೆಗೆ ಪ್ರತಿಭಟನೆ ನಡೆಸಿದರೂ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ. ಸಮಸ್ಯೆಗಳ ಪರಿಹಾರಕ್ಕೆ ಆಸಕ್ತಿ ತೋರುತ್ತಿಲ್ಲ’ ಎಂದರು.

ಗೌರವ ಧನದ ರೂಪದಲ್ಲಿ ಮೂರು ಸಾವಿರ ರೂಪಾಯಿ ಮಾತ್ರ ನೀಡಲಾಗುತ್ತಿದೆ. ಅಂಗನವಾಡಿ ಉದ್ಯೋಗವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಮಹಿಳೆಯರಿಗೆ ಮೂರು ಸಾವಿರ ರೂಪಾಯಿ ಗೌರವಧನ ಸಾಕಾಗುವುದಿಲ್ಲ. ಸರ್ಕಾರಿ ನೌಕರರಷ್ಟೇ ಕೆಲಸ ಮಾಡುವ ಅಂಗನವಾಡಿ ನೌಕರರಿಗೆ ಸರ್ಕಾರಿ ನೌಕರರ ಸಮಾನವಾಗಿ ಸೌಲಭ್ಯಗಳನ್ನು ಕಲ್ಪಿಸಬೇಕು.ಗೌರವ ಧನದ ಬದಲು ನಿಯಮಿತವಾಗಿ ಪ್ರತಿ ತಿಂಗಳು ವೇತನ ನೀಡಬೇಕು ಎಂದು ಅವರು ಆಗ್ರಹಿಸಿದರು.

ಹಲವು ಒತ್ತಾಯ ಮತ್ತು ಒತ್ತಡ ಹೇರಿದ ಬಳಿಕ ಅಂಗನವಾಡಿ ನೌಕರರಿಗೆ ನೂತನ ಪಿಂಚಣಿ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರ ಭರವಸೆ ನೀಡಿದೆಯದರೂ ಇದರಿಂದ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಖಾಸಗಿ ಕಂಪೆನಿಯ ಮೂಲಕ ಪಿಂಚಣಿ ವ್ಯವಸ್ಥೆ ಮಾಡುವ ಬಗ್ಗೆ ಸರ್ಕಾರ ಭರವಸೆ ನೀಡುತ್ತದೆ. ಆದರೆ ಖಾಸಗಿ ಕಂಪೆನಿಯಲ್ಲಿನ ಹಣ ಷೇರು ಮಾರುಕಟ್ಟೆ ಹೂಡಲಾಗುವ ಕಾರಣ ಅಂಗನವಾಡಿ ನೌಕರರಿಗೆ ಪಿಂಚಣಿ ರೂಪದಲ್ಲಿ ಆದಾಯ ಸಿಗುವ ಸಾಧ್ಯತೆ ಕಡಿಮೆಯಿದೆ. ಈ ಎಲ್ಲದರ ಬದಲು ಸರ್ಕಾರಿ ಸ್ವಾಮ್ಯದ ಎಲ್‌ಐಸಿ ಸಂಸ್ಥೆಯ ಮೂಲಕ ಪಿಂಚಣಿ ನೀಡಿದಲ್ಲಿ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ಪ್ರತಿಭಟನಾಕಾರರಿಂದ ಮನವಿಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಮಾತನಾಡಿ, ‘ಅಂಗನವಾಡಿ ನೌಕರರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು’ ಎಂದರು. ಸಿಐಟಿಯು ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಲಕ್ಷ್ಮಿದೇವಮ್ಮ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ  ಕಾರ್ಯದರ್ಶಿ ಮಧುಲತಾ, ಸಿಐಟಿಯು  ಮುಖಂಡರಾದ ಗಂಗರೆಡ್ಡಿ, ಬಿ.ಎನ್.ಮುನಿಕೃಷ್ಣಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT