ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಸಿಐಟಿಯು ಪ್ರತಿಭಟನೆ

Last Updated 21 ಸೆಪ್ಟೆಂಬರ್ 2013, 5:26 IST
ಅಕ್ಷರ ಗಾತ್ರ

ಹಾಸನ: ಮಾಸಿಕ ಹತ್ತು ಸಾವಿರ ರೂಪಾಯಿ ಕನಿಷ್ಠ ವೇತನ ನಿಗದಿ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಸಿಐಟಿಯು ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಸಂಘಟಿತ ವಲಯದ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಮುಂದಿನಿಂದ ಮೆರವಣಿಗೆ ಆರಂಭಿಸಿದ ಸಾವಿರಕ್ಕೂ ಹೆಚ್ಚು ನೌಕರರು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಸಭೆ ನಡೆಸಿದರು.

‘ದುಡಿಯುವ ವರ್ಗದ 20 ಬೇಡಿಕೆ­ಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಜೂನ್‌ 20ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಆದರೆ ಸರ್ಕಾರ ಈವರೆಗೆ ಅವುಗಳ ಈಡೇರಿಕೆಗೆ ಕ್ರಮ ಕೈಗೊಂಡಿಲ್ಲ. ಸಮಾನ ಕನಿಷ್ಠ ವೇತನ, ಗುತ್ತಿಗೆ ಕಾರ್ಮಿಕರು, ಟ್ರೇನಿಗಳನ್ನು ಕಾಯಂ­ಗೊಳಿಸುವುದು, ಅಸಂಘಟಿತ ಕಾರ್ಮಿಕರ ಕಾಯಂ ಭದ್ರತಾ ಮಂಡಳಿ ಯೋಜನೆ ರೂಪಿಸುವುದೇ ಮುಂತಾದ ವಿಚಾರಗಳ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಬಿಡಿಗಾಸನ್ನೂ ನೀಡದೆ ಕೋಟ್ಯಂತರ ಕಾರ್ಮಿಕರನ್ನು ವಂಚಿಸಲಾಗಿದೆ. ಅಂಗನವಾಡಿ ಶಿಕ್ಷಣ, ಬಿಸಿಯೂಟ ಮುಂತಾದ ಖಾಸಗೀ­ಕರಣದ ಬಗ್ಗೆಯೂ ಚಕಾರವೆತ್ತುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋ­ ಪಿಸಿದರು.

ಗುತ್ತಿಗೆ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಪ್ರಜಾಪ್ರಭುತ್ವ ವಿರೋಧಿ ‘ಎಸ್ಮಾ’ ಕಾಯ್ದೆ ರದ್ದು ಮಾಡಬೇಕು, ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರು­ವವ­ರಿಗೂ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ  ನಿಲ್ಲಿಸಬೇಕು, ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿ ಮಾಡಬೇಕು ಮುಂತಾದ 20 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ­ಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸುಕುಮಾರ್‌, ಕಾರ್ಯದರ್ಶಿ ಧರ್ಮೇಶ್‌, ನವೀನ್‌ ಕುಮಾರ್‌ ಹಾಗೂ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT