ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಗೆ ಆಗ್ರಹಿಸಿ ಅರೆಬೆತ್ತಲೆ ಪ್ರತಿಭಟನೆ

Last Updated 1 ಅಕ್ಟೋಬರ್ 2011, 11:05 IST
ಅಕ್ಷರ ಗಾತ್ರ

ಶಿವಮೊಗ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಬೃಹತ್ ಅರೆಬೆತ್ತಲೆ ಪ್ರತಿಭಟನೆ ನಡೆಸಿತು.

ಜಿಲ್ಲಾದಾದ್ಯಂತ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ದಲಿತರ ಜಮೀನಿಗೆ ಕೂಡಲೇ ಸಾಗುವಳಿ ಪತ್ರ ನೀಡಬೇಕು. ಭೂಮಿ ಇಲ್ಲದವರಿಗೆ ಎರಡು ಎಕರೆ ಜಮೀನು ನೀಡಬೇಕು. ಸೊರಬದ ಸೊರಣಗಿ ದೇವಿಕೆರೆ, ಬೆನ್ನೂರು ಮತ್ತಿತರರ ಕಡೆಗಳಲ್ಲಿ ಭೂಮಿ ಸಂಬಂಧ ಸೃಷ್ಟಿಯಾದ ಸಮಸ್ಯೆಗಳನ್ನು ಜಿಲ್ಲಾಡಳಿತ ಶೀಘ್ರ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಾಗರದ ಹಂದಿಗೋಡು ಗ್ರಾಮದಲ್ಲಿ ಕಾಯಿಲೆಗೆ ತುತ್ತಾಗಿರುವವರಿಗೆ ಶಾಶ್ವತ ವೈದ್ಯಕೀಯ ಪರಿಹಾರ ಕಂಡು ಹಿಡಿಯಬೇಕು. ಹಾಗೆಯೇ, ರೋಗಪತ್ತೆ ಹಚ್ಚಲು ಸಮಿತಿ ರಚಿಸಬೇಕು ಎಂದರು.

ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಶೇ. 22.75ರ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸುವುದು ಹಾಗೂ ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಇಲಾಖೆಗಳ ಮುಖ್ಯಸ್ಥರ ಮೇಲೆ ದೌರ್ಜನ್ಯತಡೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಾಗೆಯೇ, ನಕಲಿಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಶಿವಮೊಗ್ಗ- ಭದ್ರಾವತಿ ತಾಲ್ಲೂಕುಗಳಲ್ಲಿನ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಬೇಕು ಎಂದು ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಮಿತಿಯ ರಾಜ್ಯ ಸಂಚಾಲಕ ಸತ್ಯ, ಜಿಲ್ಲಾ ಸಂಚಾಲಕರಾದ ಚಿನ್ನಯ್ಯ, ಕೆ.ಎ. ರಾಜಕುಮಾರ್, ಶಿವಶಂಕರ್, ಹರಮಘಟ್ಟ ರಂಗಪ್ಪ, ಪ್ರಕಾಶ್ ಲಿಗಾಡಿ, ತಾಲ್ಲೂಕು ಸಂಚಾಲಕರಾದ ನರಸಿಂಹಮೂರ್ತಿ, ಸೋಮಶೇಖರ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT