ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಉಳಿಸಿಕೊಂಡ ಪರ್ಸನಲ್‌ ಕಂಪ್ಯೂಟರ್‌

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳ ಸಮರದ ನಡುವೆಯೂ, ಪರ್ಸನಲ್‌ ಕಂಪ್ಯೂಟರ್‌ಗಳ (ಪಿ.ಸಿ) ಮಾರಾಟ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 8ರಷ್ಟು ಪ್ರಗತಿ ಕಂಡಿದೆ. ಒಟ್ಟು 32 ಲಕ್ಷ ‘ಪಿ.ಸಿ’ಗಳು ಎರಡನೇ ತ್ರೈಮಾಸಿಕದಲ್ಲಿ ಮಾರಾಟವಾಗಿವೆ. ಆರ್ಥಿಕ ಚೇತರಿಕೆ­ಯಿಂದ ವಾಣಿಜ್ಯ ಚಟುವಟಿಕೆಗಳು ಚುರು­ಕು­ಗೊಂಡಿದ್ದು, ಕಚೇರಿ, ಕಾರ್ಪೊ­ರೇಟ್‌ ಬಳಕೆಗಾಗಿ ‘ಪಿ.ಸಿ’ಗಳಿಗೆ ಮತ್ತೆ ಬೇಡಿಕೆ ಹೆಚ್ಚಿದೆ. ಸರ್ಕಾರಿ ಕಚೇರಿಗಳಲ್ಲಿ  ಕೂಡ ಭಾರಿ ಪ್ರಮಾಣದಲ್ಲಿ ‘ಪಿ.ಸಿ’ ಸಗಟು ಖರೀದಿ ನಡೆದಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ‘ಗಾರ್ಟ್‌ನರ್‌’ ಹೇಳಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ‘ಪಿ.ಸಿ’ ಮಾರಾಟ ಶೇ 8.3ರಷ್ಟಿತ್ತು. ಶೈಕ್ಷಣಿಕ ಉದ್ದೇಶಕ್ಕಾಗಿ ಹೆಚ್ಚಿನ ಖರೀದಿ  ನಡೆದಿತ್ತು. ಈ ಬಾರಿ ಕಂಪೆನಿಗಳು ಹಳೆಯ ಸಂಗ್ರಹವನ್ನೇ ರಿಯಾಯ್ತಿ ದರದಲ್ಲಿ ಮಾರಾಟ ಮಾಡಿವೆ. ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ಬೇಡಿಕೆ ತಗ್ಗಿದೆ. ಹೀಗಾಗಿ ಹೊಸ ‘ಪಿ.ಸಿ’ಗಳ ತಯಾರಿಕೆ ಮಂದಗತಿಯಲ್ಲಿದೆ ಎಂದು ‘ಐಡಿಸಿ’ನ ಮಾರುಕಟ್ಟೆ ವಿಶ್ಲೇಷಕ ಮನೀಷ್‌ ಯಾದವ್‌ ಅಭಿಪ್ರಾಯ­ಪಟ್ಟಿದ್ದಾರೆ.

ಶೈಕ್ಷಣಿಕ ವರ್ಷ ಆರಂಭವಾಗಿರುವು­ದರಿಂದ, ಉತ್ತಮ ಮುಂಗಾರು ಲಭಿಸಿ­ರು­ವುದರಿಂದ, ಹಬ್ಬಗಳ ಸರಣಿಯಿಂದ ಪೋರ್ಟಬಲ್‌ ಪಿ.ಸಿ.ಗಳಿಗೆ ಮತ್ತೆ ಬೇಡಿಕೆ ಕುದುರಬಹುದು. ಪ್ರಸಕ್ತ ವರ್ಷ ಒಟ್ಟು ಮಾರಾಟವಾ­ಗಿರುವ ಗಣಕಯಂತ್ರ­ಗಳಲ್ಲಿ ‘ಪಿ.ಸಿ’ಗಳ ಪಾಲು ಶೇ 40ರಷ್ಟಿದೆ ಎನ್ನುವುದೂ ಗಮನಾರ್ಹ ಎಂದು ಅವರು ವಿಶ್ಲೇಷಿಸಿದ್ದಾರೆ.

ಈ ಬಾರಿ ಉತ್ತರ ಪ್ರದೇಶ ಮತ್ತು ತಮಿಳು­ನಾಡಿನಲ್ಲಿ ಶೈಕ್ಷಣಿಕ ಯೋಜ­ನೆ ಗಳಿಗಾಗಿ ‘ಪಿ.ಸಿ’ ಖರೀದಿ ತಗ್ಗಿದೆ. ಆರ್ಥಿಕ ಅಸ್ಥಿರತೆಯಿಂದ ಬ್ಯಾಂಕಿಂಗ್‌, ವಿಮೆ, ಹಣಕಾಸು ಆಧಾರಿತ ವಲಯಗಳ ಚಟುವಟಿಕೆ ಕ್ಷೀಣಿಸಿದೆ. ಈ ಎಲ್ಲ ಅಂಶಗಳು ‘ಪಿ.ಸಿ’ ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಒಟ್ಟಾರೆ ಡೆಸ್ಕ್‌ಟಾಪ್‌ ಮಾರುಕಟ್ಟೆಯಲ್ಲಿ ಶೇ 40ರಷ್ಟು ಪಾಲು ಹೊಂದಿರುವ ವೈಟ್‌ ಬಾಕ್ಸ್‌ ಆಮದು ಕೂಡ ಶೇ 26ರಷ್ಟು ತಗ್ಗಿದೆ ಎಂದು ಗಾರ್ಟ್‌ನರ್ ಅಧ್ಯಯನ ವಿವರಿಸಿದೆ.

ಇದೇ ವೇಳೆ ಪುಟ್ಟ ಪಿ.ಸಿ.ಗಳ (ಲ್ಯಾಪ್‌ಟಾಪ್‌, ನೋಟ್‌ಬುಕ್‌, ಟ್ಯಾಬ್ಲೆಟ್‌) ಮಾರಾಟ ಶೇ 22ರಷ್ಟು ಹೆಚ್ಚಳ ಕಂಡಿದೆ. ಶೇ 32ರಷ್ಟು ಪಾಲಿ­ನೊಂದಿಗೆ ಎಚ್‌ಪಿ ಈ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿವೆ. ಲೆನೊವೊ, ಡೆಲ್‌ ಮತ್ತು ಏಸರ್‌ ನಂತರದ ಸ್ಥಾನಗಳಲ್ಲಿವೆ.

ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ
ಭಾರತವೂ ಸೇರಿದಂತೆ ಪ್ರವರ್ಧ­ಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಸ್ಮಾರ್ಟ್‌ಫೋನ್‌ ಬೆಲೆ ಗಣನೀಯವಾಗಿ ತಗ್ಗುವ ಸಾಧ್ಯತೆ ಇದೆ ಎಂದು ‘ಐಡಿಸಿ’ ಅಧ್ಯಯನ ಹೇಳಿದೆ. 2017ರ ವೇಳೆಗೆ 170 ಲಕ್ಷ ಸ್ಮಾರ್ಟ್‌ಫೋನ್‌ಗಳು ರಫ್ತಾಗುವ ಸಾಧ್ಯತೆ ಇದ್ದು, ಲ್ಯಾಟಿನ್‌ ಅಮೆರಿಕ, ಏಷ್ಯಾ ಪೆಸಿಫಿಕ್‌, ಆಫ್ರಿಕಾ, ಚೀನಾ, ಬ್ರೆಜಿಲ್‌, ಭಾರತದಲ್ಲಿ ಸರಾಸರಿ ಮಾರಾಟ ಬೆಲೆ (ಎಎಸ್‌ಪಿ) ₨10 ಸಾವಿರದಿಂದ ₨16 ಸಾವಿರದವರೆಗೂ ತಗ್ಗಲಿದೆ ಎಂದು ಈ ಅಧ್ಯಯನ ಹೇಳಿದೆ.

ಇನ್ನು ನಾಲ್ಕು ವರ್ಷಗಳಲ್ಲಿ ವಿಶ್ವದ ಮುಂಚೂಣಿ ಸ್ಮಾರ್ಟ್‌ಫೋನ್‌ ಮಾರು­ಕಟ್ಟೆಯಲ್ಲಿ ಭಾರತ ಮೂರನೇ ಸ್ಥಾನಕ್ಕೆ, ಬ್ರೆಜಿಲ್‌ ನಾಲ್ಕನೇ ಸ್ಥಾನಕ್ಕೆ ಏರಲಿವೆ ಎಂದೂ ‘ಐಡಿಸಿ’ ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT