ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಭಾಗಶಃ ಈಡೇರಿಕೆ: ಮುಷ್ಕರ ಹಿಂದಕ್ಕೆ

Last Updated 12 ಜನವರಿ 2012, 5:40 IST
ಅಕ್ಷರ ಗಾತ್ರ

ಆಲಮಟ್ಟಿ: ಮಂಗಳವಾರ ತಮ್ಮ ವಿವಿಧ ಬೇಡಿಕೆಗಳಿಗೆ ಈಡೇರಿಸಿ ಅರಣ್ಯ ದಿನಗೂಲಿಗಳು ಆರಂಭಿಸಿದ್ದ ಮುಷ್ಕರ ಮಂಗಳವಾರ ರಾತ್ರಿ, ಅಧಿಕಾರಿಗಳ ಭರವಸೆ ಮೇರೆಗೆ ಹಿಂದಕ್ಕೆ ಪಡೆಯಲಾಯಿತು.

ದಿನಗೂಲಿ ಹೆಚ್ಚಳ, ಕೆಲಸದಿಂದ ವಜಾ ಮಾಡದಿರುವುದು ಸೇರಿದಂತೆ ಇನ್ನೀತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಇಲ್ಲಿಯ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ಇಲಾಖೆಯ ದಿನಗೂಲಿಗಳು ನಡೆಸಿದ ಮುಷ್ಕರ ಹಿಂದಕ್ಕೆ ಪಡೆಯಲಾಯಿತು.

ರಾತ್ರಿಯವರೆಗೂ, ಅರಣ್ಯ ದಿನಗೂಲಿಗಳ ಸಂಘದ ಮುಖಂಡರು ಹಾಗೂ ಅಧಿಕಾರಿಗಳ  ನಡುವೆ ವಿವಿಧ ಬೇಡಿಕೆಗಳು, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಅಂತಿಮವಾಗಿ ಪುರುಷ ದಿನಗೂಲಿಗಳಿಗೆ ಪ್ರತಿತಿಂಗಳು 4500 ರೂ ಹಾಗೂ ಮಹಿಳಾ ದಿನಗೂಲಿಗಳಿಗೆ ರೂ. 3000 ವೇತನ ನೀಡಲು ಅರಣ್ಯ ಅಧಿಕಾರಿಗಳು ಪ್ರಸ್ತಾವ ಮುಂದಿಟ್ಟಾಗ ಅದಕ್ಕೆ ಸಂಘದ ಮುಖಂಡರು ಒಪ್ಪಿಕೊಂಡರು.

ಮಹಿಳಾ ದಿನಗೂಲಿಗಳಿಗೆ ಹೆಚ್ಚಿನ ವೇತನ ನೀಡಲು ತೋಟಗಾರಿಕೆ ಇಲಾಖೆ ಅಧಿನಿಯಮ ಅಡ್ಡಿ ಬರುತ್ತದೆ ಎಂಬ ಸಬೂಬು ಹೇಳಿದ ಅರಣ್ಯ ಅಧಿಕಾರಿಗಳ ಪ್ರಸ್ತಾವನೆಯನ್ನೇ ಸಂಘದ ಮುಖಂಡರು ಒಪ್ಪಿಕೊಂಡರು.

ಈಗ ಕಾರ್ಯನಿರ್ವಹಿಸುತ್ತಿರುವ ಅರಣ್ಯ ದಿನಗೂಲಿಗಳನ್ನು ಕೆಲಸದಿಂದ ತೆಗೆಯಲಾಗುವುದಿಲ್ಲ, ಪ್ರತಿ ತಿಂಗಳು 5 ನೇ ತಾರೀಖಿನ ಒಳಗೆ ವೇತನ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿದರು.

ಈ ಚರ್ಚೆ ಸಂದರ್ಭದಲ್ಲಿ ಪ್ರಭಾರ ಮುಖ್ಯ ಎಂಜಿನೀಯರ್ ವಿ.ಕೆ. ಪೋತದಾರ, ಉಪಅರಣ್ಯ ಸಂರಕ್ಷಣಾಧಿಕಾರಿ ಡಿ.ಎನ್. ಅಘೋರೆ, ವಿವಿಧ ಮುಖಂಡರಾದ ಬಸವರಾಜ ಬಾಗೇವಾಡಿ, ಮಲ್ಲಿಕಾರ್ಜುನಯ್ಯ ಗುಮತಿಮಠ, ಕಲ್ಲಪ್ಪ ಕುಂಬಾರ, ವಿರೂಪಾಕ್ಷಿ, ಬಸವರಾಜ ಗುಡಿಮನಿ, ಸಿದ್ದಣ್ಣ ಕೋತಿನ, ಮೃತ್ಯುಂಜಯ ಹಿರೇಮಠ ಮೊದಲಾದವರಿದ್ದರು.

ಈಡೇರದ ಮಹಿಳಾ ದಿನಗೂಲಿಗಳ ಬೇಡಿಕೆ: ಮಹಿಳೆ ಮತ್ತು ಪುರಷರು ಎಲ್ಲಾ ಕ್ಷೇತ್ರದಲ್ಲಿಯೂ ಸಮಾನವಾಗಿ ಪರಿಗಣಿಸಲಾಗುತ್ತದೆ. ಆದರೆ ಸರಕಾರವೇ ನಿಗದಿಪಡಿಸುವ ದಿನಗೂಲಿ ವೇತನದಲ್ಲಿ ಮಾತ್ರ ವ್ಯತ್ಯಾಸ. ಅರಣ್ಯ ದಿನಗೂಲಿಗಳಿಗೆ ಈಗ ಪ್ರತಿ ತಿಂಗಳಿಗೆ ಪುರುಷರಿಗೆ ರೂ. 4500 ಮಹಿಳೆಯರಿಗೆ ಕೇವಲ ರೂ. 3000 ರೂ ನಿಗದಿಪಡಿಸಿದ್ದು ವಿಚಿತ್ರ. 

ಪ್ರಮುಖ ಬೇಡಿಕೆ ಇಟ್ಟು ಹೋರಾಟ ಮಾಡಿದ ಸಂಘವೂ ಕೂಡಾ ಅಧಿಕಾರಿಗಳ ಮಾತಿಗೆ ಮಣಿದು, ಮುಷ್ಕರ ಹಿಂದಕ್ಕೆ ಪಡೆದಿದ್ದು ಎಲ್ಲರಲ್ಲಿಯೂ ಸಂಶಯಕ್ಕೆ ಕಾರಣವಾಗಿದೆ. ಕೇವಲ 15 ರೂ ಹೆಚ್ಚಳಕ್ಕಾಗಿ ಈ ಹೋರಾಟ ಮಾಡಬೇಕಿತ್ತೇ..? ಎಂದು ಅನೇಕ ದಿನಗೂಲಿಗಳು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT