ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇನಾಮಿ ಗುತ್ತಿಗೆದಾರ ಯಾರು?

‘ಬಸ್‌ಬೇ’ ನಿರ್ಮಾಣ: ನಗರಸಭೆಯಿಂದ ಮತ್ತೊಂದು ವಿವಾದ
Last Updated 4 ಡಿಸೆಂಬರ್ 2013, 6:37 IST
ಅಕ್ಷರ ಗಾತ್ರ

ಮಂಡ್ಯ: ಬೀದಿನಾಯಿಗಳ ವಿರುದ್ಧ ಕಾರ್ಯಾಚರಣೆ, ರಸ್ತೆ ಬದಿ ವ್ಯಾಪಾರಿಗಳ ಎತ್ತಂಗಡಿ ಮಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದ ಮಂಡ್ಯ ನಗರಸಭೆಯು ಈಗ ‘ಬಸ್‌ಬೇ’ ನಿರ್ಮಾಣದ ಕಾಮಗಾರಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ವಿವಾದಕ್ಕೆ ನಾಂದಿ ಹಾಡಿದೆ.

ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಚಾರ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನಾಲ್ಕು ಕಡೆಗಳಲ್ಲಿ ‘ಬಸ್‌ಬೇ‘ ನಿರ್ಮಾಣಕ್ಕೆ ನಗರಸಭೆಯು ಮುಂದಾಗಿದೆ. ಆದರೆ, ಆ ಕಾಮಗಾರಿಯ ಗುತ್ತಿಗೆದಾರರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ರೂ26 ಲಕ್ಷ  ವೆಚ್ಚದಲ್ಲಿ ಕೇಂದ್ರ ಬಸ್‌ ನಿಲ್ದಾಣದ ಮುಂದೆ, ಸಿಲ್ವರ್‌ ಜ್ಯೂಬಿಲಿ ಪಾರ್ಕ್‌, ಆರೋಗ್ಯ ಇಲಾಖೆ ಆವರಣ ಹಾಗೂ ಫ್ಯಾಕ್ಟರಿ ವೃತ್ತದ ಬಳಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಬಸ್‌ ನಿಲ್ದಾಣದ ಕೆಇಬಿ ಆವರಣದಲ್ಲಿ ಹಾಗೂ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸ್‌ಬೇಗಳ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಡಿ.14 ರಂದು ಮಂಡ್ಯ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸುವ ಉದ್ದೇಶದಿಂದ ತರಾತುರಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಕೆಇಬಿ ಆವರಣದ ಹಾಗೂ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ ಆವರಣದಲ್ಲಿನ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಿದೆ. ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸುವ ಉದ್ದೇಶ ಸಚಿವರಿಗೆ ಇರುವುದರಿಂದ ಶೀಘ್ರ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ವಹಿಸಲಾಗಿದ್ದು, ನಗರಸಭೆಯ ಎಂಜಿನಿಯರ್‌ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಪಾಲಿಕೆ ಆಯುಕ್ತ ದಾಸೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮಗೆ ವಹಿಸಲು ಸೂಚಿಸಲಾಗಿತ್ತು. ಕಾಮಗಾರಿ ಅಂದಾಜುಪಟ್ಟಿ ತಯಾರಿಸಿ ನೀಡುವುದಾಗಿ ನಗರಸಭೆ ಎಂಜಿನಿಯರ್‌ ತಿಳಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಸಲ್ಲಿಸಿಲ್ಲ. ಅವರು ಸಲ್ಲಿಸಿದ ಮೇಲಷ್ಟೇ ಕಾಮಗಾರಿ ಆರಂಭಿಸಲಾಗುವುದು. ಈಗ ಯಾರು ಕಾಮಗಾರಿ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎನ್ನುತ್ತಾರೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಭೂ ಸೇನಾ) ಉಪನಿರ್ದೇಶಕ ಶಿವಪ್ರಸಾದ್‌.

ಯಕ್ಷ ಪ್ರಶ್ನೆ: ಪಾರದರ್ಶಕ ಕಾಯ್ದೆ ಅನ್ವಯ 26 ಲಕ್ಷ ರೂಪಾಯಿ ಕಾಮಗಾರಿಯನ್ನು ಟೆಂಡರ್‌ ಕರೆದು ಮಾಡಬೇಕಾಗಿತ್ತು. ತುರ್ತು ಇದೆ ಎನ್ನುವ ಕಾರಣಕ್ಕಾದರೆ ಸರ್ಕಾರದ ಏಜೆನ್ಸಿಗಳಾದ ನಿರ್ಮಿತಿ ಕೇಂದ್ರ ಅಥವಾ ಕೆಆರ್‌ಐಡಿಎಲ್‌ಗೆ ವಹಿಸಬೇಕಿತ್ತು. ಕೆಆರ್‌ಐಡಿಎಲ್‌ಗೆ ಕಾಮಗಾರಿ ವಹಿಸುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆಯಾದರೂ ಅಧಿಕೃತವಾಗಿ ವಹಿಸಿಲ್ಲ.

ಹಲವಾರು ವರ್ಷಗಳಿಂದ ಇಂತಹದೊಂದು ಪ್ರಸ್ತಾವನೆ ಇತ್ತು. ಅಂತಹ ಪಸ್ತಾವನೆಯ ಕಾಮಗಾರಿಯನ್ನು ತುರ್ತಾಗಿ ಮಾಡುತ್ತಿರುವುದರ ಹಿಂದಿನ ಉದ್ದೇಶವೇನು? ಮುಖ್ಯಮಂತ್ರಿಗಳನ್ನು ಮೆಚ್ಚಿಸಲು ತರಾತುರಿಯಲ್ಲಿ ಕಾಮಗಾರಿಯನ್ನು ಮಾಡಲಾಗುತ್ತಿದೆಯೇ? ಅದಕ್ಕಾಗಿ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಲಾಗಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಎದ್ದಿವೆ.

ಕೆಆರ್‌ಐಡಿಎಲ್‌ ಹೆಸರು ಬಳಸಿಕೊಂಡು ಕಾಮಗಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸಲಾಗಿದೆ. ಇದಕ್ಕೆ ಕಾಂಗ್ರೆಸ್ಸಿನ ಮುಖಂಡರಿಬ್ಬರ ಒತ್ತಾಸೆಯೂ ಕಾರಣವಾಗಿದೆ ಎಂಬ ಗುಸುಗುಸು ನಗರಸಭೆ ಆವರಣದಲ್ಲಿ ಸಹ ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಕೇಳಿ ಬರುತ್ತಿದೆ.

ಕಲ್ಲು ಮಾಯ?
ಮಂಡ್ಯ:  ಸಿಲ್ವರ್‌ ಜ್ಯೂಬಿಲಿ ಹಾಗೂ ಕೆಇಬಿ ಬಳಿ ನಿರ್ಮಿಸುತ್ತಿರುವ ಬಸ್‌ಬೇ ಕಾಮಗಾರಿ ಸ್ಥಳದಲ್ಲಿ ಕಲ್ಲುಗಳನ್ನು ಹಾಕಲಾಗಿತ್ತು. ಕಾಮಗಾರಿ ಆರಂಭಿಸುವ ಉದ್ದೇಶದಿಂದ ಕಲ್ಲುಗಳನ್ನು ತೆಗೆದುಕೊಂಡು ಹೋಗಲಾಗಿದೆ. ಅವುಗಳನ್ನು ಎಲ್ಲಿಗೆ ಸಾಗಿಸಲಾಗಿದೆ ಎಂಬುದು ನಿಗೂಢವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT