ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರು ಮತ್ತು ರೆಕ್ಕೆ

Last Updated 22 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಎಂಬುದು
ಪೂರ್ತಿ ನಿಜವಲ್ಲ

ಬಾಲ್ಯವೆಂದರೆ ಗೋಳುಗುಟ್ಟಿಸುವ ಗಾಯ
ಬಿಸಿಲೂರಿನಲ್ಲಿ ಇರಲಿಲ್ಲ ಕಾಡು ನದಿ ಕಡಲು
ಕೊನೆಗೆ ನೆರೆಮನೆಯಲೊಬ್ಬ ಕವಿಪುಂಗವ
ದಾಹ ನೀಗುವ ದಾರ್ಶನಿಕ
ಕಬಡ್ಡಿಯಾಟಕು ಸಿಗಲಿಲ್ಲ
ಗಾಂಧಿ ಗೌತಮ ಅಲ್ಲಮ

ಎಮ್ಮೆ ಕರು ಹಾಕಿದ್ದು ಅಮ್ಮ ಹಡೆದಿದ್ದು
ಅಟ್ಟದ ತೊಲೆಯ ಮೇಲೆ ಎರಡೂ ನಮೂದು
ಹೊಗೆ ಹಿಡಿದ ಶ್ರೀಮನ್ನಾರಾಯಣನ ಫೋಟೋ ಹಿಂದೆ
ಅಡಮಾನ ಬ್ಯಾಂಕಿನ ಖಾಯಂ ನೋಟೀಸು
ರೊಟ್ಟಿಹಿಟ್ಟಿನ ಘನಸಾಮ್ರಾಜ್ಯದಲಿ
ಅರಿಸಿನ ಬೆರೆಸಿ ಕೆದಕಿದ ಉಗ್ಗೆದನ್ನವೇ ಕಿರೀಟ
ಉಡಿದಾರದ ತೂತುಕಾಸಿನೊಡವೆ
ಹುಲಿಕೆರೆ ಅಮ್ಮನ ಹುಚ್ಚುಸೋಮನ ಕುಣಿತ
ಕೊಂಡ ಹಾಯುವ ಸಿಡಿ ಚುಚ್ಚುವ
ಬೆರಗಿಗೆ ಬಾಯಿಬೀಗ

ಹಾವು ನಾಯಿಗಳ ಜತೆ ಹೈಸ್ಕೂಲು ವ್ಯಾಸಂಗ
ತತಾನುತೂತಿನ ಪೋಸ್ಟಾಫೀಸು ಚೆಡ್ಡಿಗಳು
ತೂತಿರದ ಖಾಕಿ ಚೆಡ್ಡಿ ಬಿಟ್ಟಿ ಸಿಕ್ಕಿದ್ದರೆ
ಎಲ್ಲ ಕವಾಯತಿಗೂ, ಡಕಾಯಿತಿಗೂ ರೆಡಿ!
ಕಿವಿಯಿಂದ ಕಿವಿವರೆಗೂ ತುಟಿ ವಿಸ್ತರಿಸಿ
ಹತ್ತನೆ ಕ್ಲಾಸಲ್ಲೂ ಅನ್ನುತ್ತಿದ್ದೆ ಯೋನಿಪಾರಮ್ಮು
2
ಬೇರುಗಳ ಬಲೆ ಹರಿದು
ಹೋಗಬೇಕೆನಿಸಿತ್ತು ಹಾರಿ ಹಾರಿ
ಎದುರಿಗೇ ಹೆದ್ದಾರಿ

ಉಗಣಿ ಹಂಬು ಕತ್ತಾಳೆ ಕುರಂಬಳೆ
ಸೋಗೆ ರಾಗಿ ಜೋಳದೆಲೆಗಳ ಜೋಡಿಸಿ
ರೆಕ್ಕೆಪುಕ್ಕವ ಹೆಣೆದು ಪುರ್ರನೆ ಹಾರಿದೆ

ಗೊತ್ತೆ ಬಿಡುಗಡೆಯ ಸುಖ
ಪೃಥ್ವಿ ಪರಿಭ್ರಮಣೆಯ ಸುಖ
ಗಿರಿ ಗಹ್ವರ ಕಾನನ ಕಡಲು ಮರುಭೂಮಿ ಸೀಳುವ ಸುಖ
ಮೂಡಣ ಪಡುವಣ ತೆಂಕಣ ಬಡಗಣ
ತರತರದ ಜನಗಣ

ಆಮಿಷ್ ಅಬೊಜಿರಿನ್ ಜನರೊಂದಿಗೆ ಆಟ
ಮೌರಿಜನರೊಡನೆ ನೃತ್ಯ ಬಾಸ್ಕ್ ಜನರೊಂದಿಗೆ ಕೇಕೆ
ಎಸ್ಕಿಮೋ- ಹಾಗೆನ್ನುವಂತಿಲ್ಲ ಈಗ- ಇನ್ಯುಯಿಟ್‌ಗಳ ಸ್ನೇಹ
ನೀಗ್ರೊ- ಹಾಗೆನ್ನುವಂತಿಲ್ಲ ಈಗ- ಕಪ್ಪು ಜನರ ಕೂಟ
ಸಣ್ಣಕಣ್ಣಿನ ಉದ್ದಮೂಗಿನ ಗುಂಗುರು ಕೂದಲ ಮಾಟ
ನೂರು ನೆಲ ನೂರು ದೇಶ ನೂರಾರು ಘಮಲು

ಮೇಲೆ ನೀಲಾಕಾಶ ಕೆಳಗೆ ನೀಲಿ ಕಡಲು
ನಡುವೆ ನಿರ್ವಾತ ಅಂತರಿಕ್ಷದಲ್ಲೊಂದು ಬೋಧಿವೃಕ್ಷ
ಎಲ್ಲಿಂದ ಬಂದೆ ನಾನು?
ಕಾಡತೊಡಗಿದಳು ನೆಲದವ್ವ
ಊರು ಕೇರಿ ಉಗ್ಗೆದನ್ನ
ಮುರುಕು ಶಾಲೆ ನೆಂದ ಗೋಡೆ
3
ಎಲ್ಲರ ತಡವುತ್ತ ಎಲ್ಲ ತಡಕುತ್ತ
ಪುರ್ರೆಂದವ ಮೆಲ್ಲನೆ ಇಳಿದೆ-ಬೇರು ಹುಡುಕುತ್ತ
ಫಲವತ್ತಾದ ಕಪ್ಪುನೆಲ ಈಗ ಬಂಜೆ
ಬಸವಳಿದ ಬನ್ನೇರಿ ಕರಡಿಗೆ ಕೀಲುನೋವು
ಸವೆದ ಮಂಡಿ ಸೀಳು ಪಾದ
ಕೇರಿ ತುಂಬ ರೋಗ ಮುಪ್ಪು
ಮರಳಿ ಬಾರವು ಹಾರಿದ ಗಿಳಿವಿಂಡು

ಕಿಂದರ ಜೋಗಿಯಂತೆ
ಮುರುಕು ಶಾಲೆಯ ಮುಂದೆ
ನುಡಿಸುತ್ತ ನಿಂತಿದ್ದೇನೆ ಅದೇನೊ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಎಂಬುದು
ಪೂರ್ತಿ ನಿಜವಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT