ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರುಮಟ್ಟಕ್ಕೆ ಇಳಿದ ಭ್ರಷ್ಟಾಚಾರ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗುಲ್ಬರ್ಗ ಜಿಲ್ಲೆಯ 69 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸುವಂಥ ಪರಿಸ್ಥಿತಿಗೆ ಗ್ರಾಮಪಂಚಾಯತ್ ಆಡಳಿತದ ಹಂತಕ್ಕೂ ಇಳಿದ ಅನಿಯಂತ್ರಿತ ಭ್ರಷ್ಟಾಚಾರ ಕಾರಣ. ಜನಪ್ರತಿನಿಧಿಗಳಿಗೆ, ತಮ್ಮ ಪ್ರದೇಶದ ಅಭಿವೃದ್ಧಿ ಮಾಡಿಕೊಳ್ಳಲು ಸರ್ಕಾರ ನೀಡುತ್ತಿರುವ ಹಣವನ್ನು ಸ್ವಂತಕ್ಕೆ ಮಾಡಿಕೊಳ್ಳುತ್ತಿರುವ ದುಷ್ಟ ಪ್ರವೃತ್ತಿಯನ್ನು ಎದುರಿಸಲಾಗದ ನೌಕರ ವರ್ಗದ ಅಸಹಾಯಕತೆಯ ಪ್ರದರ್ಶನ ಇದು.

ಪಿಡಿಒ ಮಂದಾಕಿನಿ ಆತ್ಮಹತ್ಯೆ ಮಾಡಿಕೊಳ್ಳಲು, ಜನಪ್ರತಿನಿಧಿಗಳು ನೀಡುತ್ತಿದ್ದ ಕಿರುಕುಳ ಕಾರಣವಾಗಿತ್ತೆಂಬ ಸಂಗತಿ ಈ ಪ್ರವೃತ್ತಿಯ ಭೀಕರತೆಯನ್ನು ಪರಿಚಯಿಸುತ್ತದೆ. ಆತ್ಮಹತ್ಯೆಗೆ ಕಾರಣರಾದವರನ್ನು ಕೊಲೆ ಆರೋಪಿಗಳೆಂದೇ ಸರ್ಕಾರ ವಿಚಾರಣೆಗೆ ಒಳಪಡಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಲ್ಲಿಸಿದ ಸಾಮೂಹಿಕ ರಾಜೀನಾಮೆ ಪತ್ರಗಳನ್ನು ಗುಲ್ಬರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ‌್ಯನಿರ್ವಾಹಕ ಅಧಿಕಾರಿ, ತಾಂತ್ರಿಕ ದೃಷ್ಟಿಯಿಂದ ನೋಡುತ್ತಿರುವುದನ್ನು ಗಮನಿಸಿದರೆ, ಪಿಡಿಒಗಳಿಗೆ ಜನಪ್ರತಿನಿಧಿಗಳಿಂದ ಆಗುತ್ತಿರುವ ಕಿರುಕುಳವನ್ನು  ಬಗೆಹರಿಸುವುದಕ್ಕೆ ಸರ್ಕಾರಕ್ಕೂ ಆಸಕ್ತಿ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಆಗದಿರುವ ಕೆಲಸಗಳಿಗೆ ಬಿಲ್ ಮಾಡಿ ಹಣ ನೀಡುವಂತೆ ಜನಪ್ರತಿನಿಧಿಗಳು ಪಿಡಿಒಗಳಿಗೆ ಕಿರುಕುಳ ನೀಡಿದ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ರಕ್ಷಣೆ ನೀಡದಿರುವುದು, ಭ್ರಷ್ಟ ವ್ಯವಹಾರಕ್ಕೆ ಜಿಲ್ಲೆಯ ವರಿಷ್ಠ ಅಧಿಕಾರಿಗಳೂ ಕುಮ್ಮಕ್ಕು ಕೊಟ್ಟಂತೆ. ಇದು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು  ತಪ್ಪಿತಸ್ತರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುವ ಧೈರ್ಯ ಪ್ರದರ್ಶಿಸಬೇಕು.

ಇದು ಗುಲ್ಬರ್ಗ ಜಿಲ್ಲೆಗಷ್ಟೇ ಸೀಮಿತವಾದ ಸಮಸ್ಯೆಯಲ್ಲ. ಕೇಂದ್ರ ಸರ್ಕಾರದ ನೆರವು ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಪಂಚಾಯತ್‌ಗಳಿಗೆ ಬರಲು ಆರಂಭವಾದಂದಿನಿಂದ ಎಲ್ಲ ಜಿಲ್ಲೆಗಳಲ್ಲಿಯೂ ಕಂಡು ಬಂದಿರುವ ವಿದ್ಯಮಾನ. ಗ್ರಾಮೀಣಾಭಿವೃದ್ಧಿಯ ಹಲವು ಯೋಜನೆಗಳ ಅಡಿಯಲ್ಲಿ ಹೆಚ್ಚಿನ ಪ್ರಮಾಣದ ಆರ್ಥಿಕ ನೆರವು ಹರಿದು ಬರುತ್ತಿದೆ. ಹಣ ಬರುತ್ತಿದೆ ಎನ್ನುವ ಕಾರಣಕ್ಕೆ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವುದಕ್ಕೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಾರೆ.

ಗ್ರಾಮೀಣ ಪ್ರದೇಶಗಳ ಆಡಳಿತದಲ್ಲಿ ಅಭಿವೃದ್ಧಿಯೇ ಪ್ರಧಾನವಾಗಿರುವುದರಿಂದ ಅಲ್ಲಿ ಪಕ್ಷಾತೀತ ಚುನಾವಣೆ ನಡೆಸುತ್ತಿದ್ದರೂ ಅಲ್ಲಿ ಸ್ಪರ್ಧಿಸಿ ಗೆಲ್ಲುವುದಕ್ಕೆ ರಾಜಕೀಯ ಪಕ್ಷಗಳ ಅವಲಂಬನೆ ಅನಿವಾರ್ಯ ಎನ್ನುವ ಪರಿಸ್ಥಿತಿ ಗ್ರಾಮೀಣ ಪ್ರದೇಶಗಳಲ್ಲಿ ಬೇರೂರಿದೆ.

ಚುನಾವಣೆಯಲ್ಲಿ ಗೆಲ್ಲಲು ವೆಚ್ಚ ಮಾಡಿದ ಹಣವನ್ನು ಗಳಿಸಲು ಜನಪ್ರತಿನಿಧಿಗಳು ಅಭಿವೃದ್ಧಿಗೆ ಮೀಸಲಾದ ಹಣದ ಲೂಟಿಗೆ ಮುಂದಾಗುತ್ತಾರೆ. ಅಧ್ಯಕ್ಷರು ಮತ್ತು ಪಂಚಾಯತ್ ಕಾರ್ಯದರ್ಶಿ ನಡುವಣ ಅಪವಿತ್ರ ಮೈತ್ರಿಯ ದಿನಗಳು ಈಗ ಬದಲಾಗಿ ಎಲ್ಲ ಸದಸ್ಯರು ಅಕ್ರಮ ಗಳಿಕೆಯಲ್ಲಿ ಕೈಜೋಡಿಸುವ ಅಪಾಯಕಾರಿ ಪ್ರವೃತ್ತಿ ನೆಲೆಯೂರುತ್ತಿದೆ.

ಇದಕ್ಕೆ ಸಹಕರಿಸದ ಪಿಡಿಒಗಳು ಕಿರುಕುಳಕ್ಕೆ ಒಳಗಾಗುತ್ತಾರೆ. ಸಣ್ಣಮಟ್ಟದ ಅಧಿಕಾರ ಸಿಕ್ಕಿದರೂ ಅದರಿಂದ ದುರುಪಯೋಗ ಪಡಿಸಿಕೊಂಡು ಲಾಭ ಮಾಡಿಕೊಳ್ಳುವ ಭ್ರಷ್ಟ ಪ್ರವೃತ್ತಿ ಗ್ರಾಮೀಣ ಮಟ್ಟದಲ್ಲಿಯೂ ಹೀಗೆ ಬೇರು ಬಿಡುತ್ತಿರುವುದರಿಂದ ಪಂಚಾಯತ್‌ರಾಜ್ ವ್ಯವಸ್ಥೆಯೇ ನಿಷ್ಕ್ರಿಯವಾಗುತ್ತದೆ. ಇಂಥ ಬೆಳವಣಿಗೆಗೆ ಸರ್ಕಾರ ಆಸ್ಪದ ನೀಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT