ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರೆ ಗುಂಪಿನ ರಕ್ತ ನೀಡಿದ್ದೇ ಕಾರಣ: ಪೋಷಕರ ದೂರು

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಯುವತಿ ಸಾವು
Last Updated 4 ಜುಲೈ 2013, 20:08 IST
ಅಕ್ಷರ ಗಾತ್ರ

ಬೆಂಗಳೂರು: ರಕ್ತಹೀನತೆಯಿಂದ (ಅನಿಮಿಯಾ) ಬಳಲುತ್ತಿದ್ದ ರಾಜೇಶ್ವರಿ (24) ಎಂಬ ಯುವತಿ ಗುರುವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೆ.ಸಿ.ಜನರಲ್ ಆಸ್ಪತ್ರೆ ಸಿಬ್ಬಂದಿ `ಒ-ಪಾಸಿಟಿವ್' ಗುಂಪಿನ ರಕ್ತ ನೀಡುವ ಬದಲು `ಬಿ-ಪಾಸಿಟಿವ್' ಗುಂಪಿನ ರಕ್ತ ನೀಡಿದ್ದರಿಂದಲೇ ಈ ಅನಾಹುತ ಸಂಭವಿಸಿದೆ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ನಾಲ್ಕು ವರ್ಷಗಳಿಂದ ರಕ್ತಹೀನತೆಯಿಂದ ಬಳಲುತ್ತಿದ್ದ ರಾಜೇಶ್ವರಿ ಅವರಿಗೆ ಪ್ರತಿ ಎರಡು ವಾರಗಳಿಗೊಮ್ಮೆ ರಕ್ತ ಕೊಡಿಸಲಾಗುತ್ತಿತ್ತು. ಅಂತೆಯೇ ಶನಿವಾರ (ಜೂನ್ 29) ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿ ರಕ್ತ ಕೊಡಿಸಲಾಗಿತ್ತು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಬದಲಿ ರಕ್ತ ನೀಡಿದ್ದರಿಂದ ಅವರು ತೀವ್ರ ಅಸ್ವಸ್ಥಗೊಂಡಿದ್ದರು. ನಗರದ ವಿವಿಧ ಆಸ್ಪತ್ರೆಗಳಲ್ಲಿ 3-4 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ರಾಜೇಶ್ವರಿ ಅಂತಿಮವಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗುರುವಾರ ನಸುಕಿನ ವೇಳೆ ಕೊನೆಯುಸಿರೆಳೆದಳು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಘಟನೆ ಬಗ್ಗೆ ವಿವರಿಸಿದ ಮೃತರ ಅಕ್ಕ ಜಯಲಕ್ಷ್ಮಿ, `ರಕ್ತಹೀನತೆಯಿಂದ ಬಳಲುತ್ತಿದ್ದ ತಂಗಿಯನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ತಪಾಸಣೆ ನಡೆಸಿದ ಡಾ.ಸುರೇಶ್, ಎರಡು ಬಾಟಲಿ `ಒ-ಪಾಸಿಟಿವ್' ಗುಂಪಿನ ರಕ್ತ ನೀಡುವಂತೆ ಪ್ರಯೋಗಾಲಯ ತಂತ್ರಜ್ಞರಾದ ಭಾಗ್ಯಲಕ್ಷ್ಮಿ ಎಂಬುವರಿಗೆ ಹೇಳಿದರು. ವೈದ್ಯರ ಶಿಫಾರಸಿನಂತೆ ಎರಡು ಬಾಟಲಿ ರಕ್ತ ತೆಗೆದುಕೊಂಡು ಬಂದ ಭಾಗ್ಯಲಕ್ಷ್ಮಿ, ಒಂದು ಬಾಟಲಿ ರಕ್ತವನ್ನು ನೀಡಿದರು. ಸುಮಾರು 30 ನಿಮಿಷಗಳ ನಂತರ ಮತ್ತೊಂದು ಬಾಟಲಿ ರಕ್ತ ನೀಡುವಾಗ ಬಾಟಲಿಯ ಮೇಲೆ `ಬಿ-ಪಾಸಿಟಿವ್' ಎಂದು ಬರೆದಿದ್ದನ್ನು ಕಂಡ ತಂಗಿ, ಈ ವಿಷಯ ನನ್ನ ಗಮನಕ್ಕೆ ತಂದಳು' ಎಂದರು.

ಈ ಅಚಾತುರ್ಯ ನಡೆದ ಬಳಿಕ ಭಾಗ್ಯಲಕ್ಷ್ಮಿ, `ಬಾಟಲಿಯಲ್ಲಿರುವುದು `ಒ-ಪಾಸಿಟಿವ್' ಗುಂಪಿನ ರಕ್ತವೇ. ಆದರೆ, ಬಾಟಲಿ ಮೇಲೆ `ಬಿ-ಪಾಸಿಟಿವ್' ಎಂದು ಚೀಟಿ ಅಂಟಿಸಲಾಗಿದೆ ಅಷ್ಟೆ' ಎಂದರು. ಆದರೆ, ಇದನ್ನು ವೈದ್ಯರ ಗಮನಕ್ಕೆ ತಂದಾಗ ಅನಾಹುತವಾಗಿರುವುದು ಗೊತ್ತಾಯಿತು ಎಂದು ಹೇಳಿದರು.

ವೈದ್ಯರು ಸ್ಥಳಕ್ಕೆ ಬರುವ ವೇಳೆಗಾಗಲೇ ಬದಲಿ ಗುಂಪಿನ ಒಂದು ಬಾಟಲಿ ರಕ್ತ ತಂಗಿಯ ದೇಹ ಸೇರಿತ್ತು. ಸ್ವಲ್ಪ ಹೊತ್ತಿನಲ್ಲೇ ಆಕೆ ವಾಂತಿ-ಭೇದಿ ಮಾಡಿಕೊಂಡು ಅಸ್ವಸ್ಥಳಾದಳು. ಬಳಿಕ ಆಸ್ಪತ್ರೆಯಲ್ಲಿ ಆಕೆಗೆ ನೀಡಿದ ಚಿಕಿತ್ಸೆಗಳೆಲ್ಲಾ ವಿಫಲವಾದವು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬಳಿಕ ಅಲ್ಲಿನ ವೈದ್ಯರ ಶಿಫಾರಸಿನಂತೆ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ, ಗುರುವಾರ ಬೆಳಿಗ್ಗೆ ಆಕೆ ಸಾವನ್ನಪ್ಪಿದಳು ಎಂದು ದುಃಖತಪ್ತರಾದರು.ಪರಿಹಾರ ಕೊಡಲು ಬಂದರು:

`ಬದಲಿ ಗುಂಪಿನ ರಕ್ತ ನೀಡಿ ಮಗಳ ಸಾವಿಗೆ ಕಾರಣಳಾದ ಭಾಗ್ಯಲಕ್ಷ್ಮಿ, ಪರಿಹಾರ ರೂಪದಲ್ಲಿ 50 ಸಾವಿರ ರೂಪಾಯಿ ಕೊಡಲು ಬಂದರು. ಅದೇ ಹಣವನ್ನು ನಾನೇ ಕೊಡುತ್ತೇನೆ. ಮಗಳನ್ನು ಜೀವಂತವಾಗಿ ಉಳಿಸಿಕೊಡುತ್ತಾರೆಯೇ' ಎಂದು ಮೃತರ ತಾಯಿ ಸುಭದ್ರಮ್ಮ ಅವರು ಆಕ್ರೋಶದಿಂದ ನುಡಿದರು.

ಈ ಸಂಬಂಧ ಕೆ.ಸಿ.ಜೆನರಲ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ವಿಮಲಾ ಪಾಟೀಲ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು.

ಘಟನೆ ಸಂಬಂಧ ಮೃತರ ಕುಟುಂಬ ಸದಸ್ಯರು ನೀಡಿದ ದೂರಿನ ಅನ್ವಯ ವೈದ್ಯ ಸುರೇಶ್ ಹಾಗೂ ಪ್ರಯೋಗಾಲಯದ ತಂತ್ರಜ್ಞೆ ಭಾಗ್ಯಲಕ್ಷ್ಮಿ ಸೇರಿದಂತೆ ಕೆ.ಸಿ.ಜನರಲ್ ಆಸ್ಪತ್ರೆಯ ನಾಲ್ವರು ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯದಿಂದ ಸಾವು (ಐಪಿಸಿ 304ಎ) ಹಾಗೂ ಸಾರ್ವಜನಿಕರ ಜೀವಕ್ಕೆ ಅಥವಾ ಸುರಕ್ಷತೆಗೆ ಧಕ್ಕೆ ಉಂಟು ಮಾಡಿದ (ಐಪಿಸಿ 336) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಲ್ಲೇಶ್ವರ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT