ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರೆ ಜಿಲ್ಲೆ ಪಾಲಾದ ರೂ 8 ಕೋಟಿ

Last Updated 20 ಡಿಸೆಂಬರ್ 2013, 5:12 IST
ಅಕ್ಷರ ಗಾತ್ರ

ಮಂಡ್ಯ: ಮಂದಗತಿ ಕಾಮಗಾರಿಯ ಪರಿಣಾಮ ನಿರ್ಮಲ ಭಾರತ ಅಭಿಯಾನಕ್ಕಾಗಿ ಬಿಡುಗಡೆಯಾಗಿದ್ದ ಅನುದಾನವನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಪರಿಣಾಮ ರಾಜ್ಯ ಸರ್ಕಾರವು ಮಂಡ್ಯ ಜಿಲ್ಲೆಗೆ ಬಿಡುಗಡೆಯಾಗಿದ್ದ ₨ 8 ಕೋಟಿ ಬೇರೆ ಜಿಲ್ಲೆಗೆ ವರ್ಗಾಯಿಸಿದೆ.

2012ನೇ ಸಾಲಿಗೆ ಆರಂಭಿಕ ಶಿಲ್ಕಾಗಿ ಕೇಂದ್ರದ ₨ 4.13 ಕೋಟಿ, ರಾಜ್ಯದ ₨ 46.32 ಲಕ್ಷ ಉಳಿದುಕೊಂಡಿದೆ. 2012–13ನೇ ಸಾಲಿಗೆ ಕೇಂದ್ರವು ₨ 9.48 ಕೋಟಿ ಹಾಗೂ ರಾಜ್ಯವು ₨ 1.02 ಕೋಟಿ ಬಿಡುಗಡೆ ಮಾಡಿತ್ತು.
ಪೂರ್ಣ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿಯು ಕೇವಲ ₨ 2.05 ಕೋಟಿಗಳನ್ನಷ್ಟೇ ಖರ್ಚು ಮಾಡಿದ್ದು, ₨ 13.05 ಕೋಟಿ ಬಾಕಿ ಉಳಿದಿತ್ತು.

ಮಂಡ್ಯ ಜಿಲ್ಲಾ ಪಂಚಾಯಿತಿಯು ಅನುದಾನವನ್ನು ಸಮಪರ್ಕವಾಗಿ ಬಳಸದ್ದನ್ನು ಗಮನಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನವನ್ನು ಕಡಿತಗೊಳಿಸಿ, 2013–14ನೇ ಸಾಲಿಗೆ ಕೇಂದ್ರವು ₨ 5.24 ಕೋಟಿ ಹಾಗೂ ರಾಜ್ಯವು ₨ 51 ಲಕ್ಷ ಮಾತ್ರ ಬಿಡುಗಡೆ ಮಾಡಿದವು.

ಒಟ್ಟಾರೆ ಅನುದಾನವು ₨ 18.80 ಕೋಟಿಗೆ ಏರಿತು. ಇಷ್ಟನ್ನೂ ಬಳಸಿಕೊಳ್ಳಲು ಆಗುವುದಿಲ್ಲ ಎನ್ನುವುದನ್ನು ಅರಿತುಕೊಂಡ ರಾಜ್ಯ ಸರ್ಕಾರವು ದಾವಣಗೆರೆ ಜಿಲ್ಲಾ ಪಂಚಾಯಿತಿಗೆ ₨ 7 ಕೋಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಗೆ ₨ 1 ಕೋಟಿಯನ್ನು ವರ್ಗಾಯಿಸುವಂತೆ ಸೂಚಿಸಿತ್ತು. ಆ ಪ್ರಕಾರ ವರ್ಗಾವಣೆ ಮಾಡಲಾಗಿದೆ.

ಶೌಚಾಲಯವಿಲ್ಲದ ಗೋಳು:
2012ರಲ್ಲಿ ನಡೆದ ಸರ್ವೆ ಪ್ರಕಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲದ 3,74,445 ಕುಟುಂಬಗಳಿವೆ. 2005ರಿಂದ ಇಲ್ಲಿಯವರೆಗೆ 1.23 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ 2,51,445 ಕುಟುಂಬಗಳು ಶೌಚಾಲಯವನ್ನೇ ಹೊಂದಿಲ್ಲ.

ಜಿಲ್ಲೆಯಲ್ಲಿರುವ 1,631 ಶಾಲೆಗಳಲ್ಲಿಯೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈಗಾಗಲೇ 914 ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, 204 ಅಂಗನವಾಡಿಗಳಲ್ಲಿ ನಿರ್ಮಾಣ ಕಾರ್ಯ ನಡೆದಿದೆ ಎನ್ನುತ್ತಾರೆ ಅಧಿಕಾರಿಗಳು.

ಸಮುದಾಯ ಶೌಚಾಲಯಗಳಿಗೆ ₨ 2 ಲಕ್ಷದವರೆಗೂ ಅನುದಾನ ನೀಡಲಾಗುತ್ತದೆ. ಇದರಲ್ಲಿ ಶೇ 10ರಷ್ಟನ್ನು ಮಾತ್ರ ಸಾರ್ವಜನಿಕರು ವಂತಿಗೆ ಮೂಲಕ ಭರಿಸಿಕೊಳ್ಳಬೇಕು. ಇಲ್ಲಿಯವರೆಗೆ 25 ಸಮುದಾಯ ಶೌಚಾಲಯಗಳನ್ನು ಮಾತ್ರ ನಿರ್ಮಿಸಲು ಸಾಧ್ಯವಾಗಿದೆ.

ನಿರ್ಮಲ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಿಸಿಕೊಳ್ಳಲು ₨ 4,700 ನೀಡಲಾಗುತ್ತಿದೆ. ನರೇಗಾದಿಂದ ₨ 4,500 ನೀಡಲಾಗುತ್ತಿದೆ. ಜತೆಗೆ ಫಲಾನುಭವಿಯ ₨ 800 ಸೇರಿಸಿಕೊಂಡು ಹತ್ತು ಸಾವಿರ ರೂಪಾಯಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕಾಗಿದೆ. ಪ್ರಚಾರದ ಕೊರತೆ, ಸಾರ್ವಜನಿಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ, ಜಾಗದ ಕೊರತೆಯಿಂದಾಗಿ ಯೋಜನೆ ಕುಂಟುತ್ತಾ ಸಾಗಿದೆ.

ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆಯ ನಾಲ್ಕು ಯೋಜನಾ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅವುಗಳನ್ನು ಸರ್ಕಾರ ತಿರಸ್ಕರಿಸಿದ್ದು, ಪರಿಷ್ಕರಿಸಿ ಮತ್ತೆ ಕಳುಹಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಯ 29 ಗ್ರಾಮಗಳು ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದುಕೊಂಡಿವೆ. ಶೌಚಾಲಯ ಹಾಗೂ ಘನ ತ್ಯಾಜ್ಯ ನಿರ್ವಹಣೆಗಾಗಿ ಸಾಕಷ್ಟು ಅನುದಾನ ಲಭ್ಯವಿದೆ. ಆದರೆ, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕೆಲಸ ಆಗುತ್ತಿಲ್ಲ. ಪರಿಣಾಮ ಅನುದಾನ ಬೇರೆ ಜಿಲ್ಲೆಗಳ ಪಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT