ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರಿನಲ್ಲಿ ಸಂಭ್ರಮದ `ಕನು ಹಬ್ಬ'

Last Updated 15 ಜನವರಿ 2013, 6:21 IST
ಅಕ್ಷರ ಗಾತ್ರ

ಬೇಲೂರು: ಮಕರ ಸಂಕ್ರಾಂತಿಯಂದು ನಡೆಯುವ `ದೇವರ ಬೇಟೆ' ಅಥವಾ `ಕನು ಹಬ್ಬ' ಸೋಮವಾರ ಸಂಜೆ ಧಾರ್ಮಿಕ ವಿಧಿ, ವಿಧಾನದನ್ವಯ ನಡೆ ಯಿತಲ್ಲದೆ, ಅಶ್ವಾರೂಢನಾದ ಶ್ರೀಚೆನ್ನಕೇಶವ ಸ್ವಾಮಿಯ ಉತ್ಸವ ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸರ್ವಾಲಂಕೃತನಾದ ಶ್ರೀಚೆನ್ನಕೇಶವನನ್ನು ಕುದುರೆಯ ಮೇಲೆ ಕುಳ್ಳಿರಿಸಿ  ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಂಗಳ ವಾದ್ಯದ ಮೂಲಕ ನೆಹರು ನಗರಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬಳಿಕ ಬೇಟೆಯ ಆರಂಭದ ಸಂಕೇತವಾಗಿ ದೊಡ್ಡ ಬ್ಯಾಡಗೆರೆಯ ಪಟೇಲರು ಹಿಡಿದು ತಂದಿದ್ದ ಮೊಲದ ಕಿವಿಗೆ ಚಿನ್ನದ ಓಲೆಯನ್ನು ಚುಚ್ಚಿ ದೇವರಿಗೆ ಮುಟ್ಟಿಸಿದ ಬಳಿಕ ಮೊಲವನ್ನು ಕಾಡಿಗೆ ಬಿಡಲಾಯಿತು. ನಂತರ ನೆರೆದಿದ್ದ ಪಟೇಲರು, ಪ್ರಮುಖರಿಗೆ ದೇವಾಲಯದ ಸಂಪ್ರದಾಯದಂತೆ ಎಲೆ ಅಡಿಕೆ ನೀಡಿ ಗೌರವಿಸ ಲಾಯಿತು. ತಹಶೀಲ್ದಾರ್ ಎನ್.ಎಸ್.ಚಿದಾನಂದ್, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಬಿ.ಕೆ.ಶ್ರೀಹರಿ, ವಿಶ್ವನಾಥ್, ಬಿ.ಆರ್.ವೆಂಕಟೇಗೌಡ, ಶ್ರೀನಿವಾಸ್, ದೊಡ್ಡಬ್ಯಾಡಿಗೆರೆ ಗ್ರಾಮದ ಮುಖಂಡ ಹಾಗೂ ತಾ.ಪಂ. ಸದಸ್ಯ ಪರ್ವತಯ್ಯ ಹಾಜರಿದ್ದರು. ದೇವಾಲ ಯದ ಅರ್ಚಕರಾದ ಕೃಷ್ಣಸ್ವಾಮಿ ಭಟ್ಟರ್  ಮತ್ತು ಶ್ರೀನಿವಾಸ್ ಭಟ್ ಪೂಜಾ ಕಾರ್ಯ ನಡೆಸಿದರು.

ವಿಜಯನಗರ ಅರಸರ ಕಾಲದಿಂದ ದೇವರ ಬೇಂಟೆ (ಬೇಟೆ) ಉತ್ಸವ ಆರಂಭಗೊಂಡಿದೆ. ಉತ್ತರಾಯಣ ಆರಂಭದ ಬಳಿಕ ಬೇಟೆಯಾಡಲು ಪ್ರಶಸ್ತವಾದ ದಿನಗಳಾಗಿವೆ. ಸಂಕ್ರಮಣದಂದು ಬೇಟೆಗೆ ಸಿದ್ಧತೆಗಳು ನಡೆಯುತ್ತವೆ. ಅದರ ಸಂಕೇತವಾಗಿ ಬೇಟೆಗಾರರ ಪರವಾಗಿ ದೇವರನ್ನು ಬೇಟೆಗೆ ಸಿದ್ಧಗೊಳಿಸುವ ಸಲುವಾಗಿ ದೇವರನ್ನು ಕುದುರೆ ಮೇಲೆ ಹೊರಡಿಸುವ ಉತ್ಸವ ಇದಾಗಿದೆ.

ಕನು ಹಬ್ಬ: ದಂತ ಕಥೆಯ ಪ್ರಕಾರ ಚೆನ್ನಕೇಶವನ ಪತ್ನಿಯಾದ ಲಕ್ಷ್ಮಿಯು ತವರು ಮನೆಗೆ ಹೋಗುತ್ತಾಳೆ. ಇದರಿಂದ ಮುನಿಸುಗೊಂಡ ಕೇಶವನು ಬೇಟೆಗೆ ಹೊರಡುತ್ತಾನೆ. ಈ ವಿಷಯ ತಿಳಿದ ಲಕ್ಷ್ಮಿಯು ಬೇಟೆಯನ್ನು ತಪ್ಪಿಸುವ ಸಲುವಾಗಿ ದಾರಿಗೆ ಅಡ್ಡಲಾಗಿ ಮೊಲವನ್ನು ಅಡ್ಡ ಬಿಡಿಸುತ್ತಾಳೆ. ಅಪಶಕುನ ವಾಯಿತೆಂದು ಚೆನ್ನಕೇಶವನು ಮತ್ತೆ ಹಿಂದಿರುಗು ತ್ತಾನೆಂಬುದು ಜನರ ನಂಬಿಕೆ. ಈ ದಿನವನ್ನು ಕನು ಹಬ್ಬ ಅಥವಾ ಕನು ಪಾರ್ವಟೆ ಎಂದು ಕರೆಯಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT