ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರಿನಲ್ಲಿ ಸಂಭ್ರಮದ ಮೊಸರು ಕುಡಿಕೆ ಉತ್ಸವ

Last Updated 25 ಆಗಸ್ಟ್ 2011, 10:20 IST
ಅಕ್ಷರ ಗಾತ್ರ

ಬೇಲೂರು: ಇಲ್ಲಿನ ಯಾದವ ಸಂಘದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬುಧವಾರ ರಾತ್ರಿ ಚೆನ್ನಕೇಶವ ದೇಗುಲದ ಮುಂಭಾಗ ಮೊಸರು ಕುಡಿಕೆ ಉತ್ಸವ ಮತ್ತು ಚೆನ್ನಕೇಶವಸ್ವಾಮಿ ಹಾಗೂ ಶ್ರೀಕೃಷ್ಣನ ಉತ್ಸವ ಅದ್ದೂರಿಯಿಂದ ನಡೆಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಯಾದವ ಸಂಘದ ವತಿಯಿಂದ ಶ್ರೀಕೃಷ್ಣಜನ್ಮಾಷ್ಟಮಿ ಅಂಗವಾಗಿ ಚೆನ್ನಕೇಶವಸ್ವಾಮಿಗೆ ಬೆಳಿಗ್ಗೆ ಅಭಿಷೇಕ ಏರ್ಪಡಿಸಲಾಗಿತ್ತು. ಬಳಿಕ ಶ್ರೀಕೃಷ್ಣನ ತೊಟ್ಟಿಲು ಉತ್ಸವ ನಡೆಯಿತು. ಸಂಜೆ ಚೆನ್ನಕೇಶವ ಉತ್ಸವ ಮತ್ತು ಶ್ರೀ ಕೃಷ್ಣೋತ್ಸವ ಏರ್ಪಡಿಸಲಾಗಿತ್ತು.

ಪುಷ್ಪಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತವಾಗಿದ್ದ ಮಂಟಪದಲ್ಲಿ ಶ್ರೀದೇವಿ, ಭೂದೇವಿ ಸಹಿತನಾದ ಶ್ರೀಚೆನ್ನಕೇಶವ ಸ್ವಾಮಿಯನ್ನು ಕೂರಿಸಿ ಮಹಾ ಮಂಗಳಾರತಿ ಮಾಡಿದ ಬಳಿಕ ದೇವಾಲಯದ ಸುತ್ತಲಿನ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ದೇವಾಲಯದ ಮುಂಭಾಗದಲ್ಲಿ ಕಟ್ಟಲಾಗಿದ್ದ ಮೊಸರು ಕುಡಿಕೆಗಳನ್ನು ಉತ್ಸಾಹಿ ಯುವಕರು ಒಡೆದರು. ಈ ಉತ್ಸವ ವೀಕ್ಷಿಸಲು ಸಾವಿರಾರು ಜನರು ಭಾಗವಹಿಸಿದ್ದರು. ಪಟಾಕಿಗಳನ್ನು ಸಿಡಿಸಲಾಯಿತು. ನೆರೆದ ಭಕ್ತರಿಗೆ ಯಾದವ ಸಂಘದ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.

ಉತ್ಸವ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಎಚ್.ಎಂ.ದಯಾನಂದ್, ತಹಶೀಲ್ದಾರ್ ಎನ್.ಎಸ್.ಚಿದಾನಂದ್, ಯಾದವ ಸಂಘದ ಅಧ್ಯಕ್ಷ ಎಸ್.ಕೆ.ನಾಗೇಶ್, ಗೌರವಾಧ್ಯಕ್ಷ ಕೃಷ್ಣಮೂರ್ತಿ, ಅಣ್ಣೇಗೌಡ, ಉಪಾಧ್ಯಕ್ಷ ಎಸ್.ಎಸ್.ರವಿ, ಕಾರ್ಯದರ್ಶಿ ಬಿ.ಸಿ.ಪುರುಷೋತ್ತಮ್,  ಖಜಾಂಚಿ ಎಸ್.ಆರ್.ಶ್ರೀನಿವಾಸ್ ಹಾಜರಿದ್ದರು. ದೇವಾಲಯದ ಅರ್ಚಕ ಕೃಷ್ಣಸ್ವಾಮಿ ಭಟ್ಟರ್ ಪೂಜಾ ಕಾರ್ಯಗಳನ್ನು    ನಡೆಸಿ ಕೊಟ್ಟರು.

ಮೆರವಣಿಗೆ
ಹೊಳೆನರಸೀಪುರ: ಪಟ್ಟಣದಲ್ಲಿ ಬುಧವಾರ ರಾತ್ರಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಯಾದವರು ಇಲ್ಲಿನ ಕೋಟೆ ಕೃಷ್ಣನ ಗುಡಿಯಿಂದ ಮೆರವಣಿಗೆ ನಡೆಸಿದರು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಗೋಪಾಲಕರು (ಯಾದವರು) ಮೆರವಣಿಗೆ ಉದ್ದಕ್ಕೂ ದಾರಿಯಲ್ಲಿ ನಿಂತಿದ್ದ ಜನರಿಗೆ ಹಾಲು ಬೆಣ್ಣೆ ವಿತರಿಸಿದರು. ಕೋಟೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ದೇವಾಲಯದಲ್ಲಿ ಕೃಷ್ಣನಿಗೆ ಮತ್ತೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು. ಗೋಪಿ, ಶೇಖರ್, ನಾರಾಯಣ, ಶ್ರೀಧರ ಇತರರು ನೇತೃತ್ವ ವಹಿಸಿದ್ದರು.

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರಾಮದಾಸ್, ಗೋವಿಂದರಾಜ್ ಗುಪ್ತಾ, ಕರುಣಾಕರ್, ಪ್ರಸನ್ನ, ಆನಂದ್, ವಿಜಯಕುಮಾರ್ ಅವರ ಮನೆಗಳಲ್ಲಿ ಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಿ ಪ್ರಸಾದ ನೀಡಿದರು.

ಅರಸೀಕೆರೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
ಅರಸೀಕೆರೆ: ಪಟ್ಟಣದ ಸೇವಾ ಸಂಕಲ್ಪ ವಿದ್ಯಾ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ಕೃಷ್ಣನ ವೇಷ ಧರಿಸಿ ಜನರನ್ನು ರಂಜಿಸಿದರು.

ಕಳ್ಳ ಕೃಷ್ಣ, ಮುದ್ದು ಕೃಷ್ಣ, ಬೆಣ್ಣೆ ಕೃಷ್ಣ, ಕೊಳಲು ಕೃಷ್ಣ, ಕಾಳಿಂಗ ಮರ್ಧನ, ಕಂಸ ಸಂಹಾರಿ ಗೋವರ್ಧನ ಗಿರಿಧಾರಿ, ವಿಶ್ವರೂಪಿ ಈಗೆ ಬಗೆ ಬಗೆಯ ರೂಪದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ವೇಷ ತೊಡಿಸಿ ಸಂಭ್ರಮಿಸಿದರು.

ವಸ್ತ್ರ ವಿನ್ಯಾಸ ಕೃಷ್ಣ ವೇಷಧಾರಿ ಮಕ್ಕಳೊಂದಿಗೆ ಪೋಷಕರು ಪೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ದುದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT