ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು ಚೆನ್ನಕೇಶವ

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೇಲೂರು ಎಂದ ತಕ್ಷಣ ನೆನಪಿಗೆ ಬರುವುದು ಅಲ್ಲಿನ ಚೆನ್ನಕೇಶವ ದೇವಸ್ಥಾನ. ಹೊಯ್ಸಳರ ಕಾಲದ ಶಿಲ್ಪ ಕಲಾ ಶ್ರೀಮಂತಿಕೆಯ ಸಂಕೇತ ಈ ದೇವಸ್ಥಾನ. ಬೇಲೂರಿನ ಶಿಲ್ಪ ಕಲಾ ವೈಭವ ವಿಶ್ವ ಪ್ರಸಿದ್ಧಿ ಪಡೆದಿವೆ. ಚೆನ್ನಕೇಶವ ದೇವಸ್ಥಾನ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರ.

ಹೊಯ್ಸಳ ದೊರೆ ವಿಷ್ಣುವರ್ಧನ ತನ್ನ ಯುದ್ಧಗಳ ವಿಜಯದ ನೆನಪಿನಲ್ಲಿ ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದನು. ಅಂತಹ ದೇವಸ್ಥಾನಗಳಲ್ಲಿ ಇದೂ ಒಂದು. ಕ್ರಿ.ಶ.1117ರಲ್ಲಿ ಈ ದೇವಸ್ಥಾನ ನಿರ್ಮಾಣವಾಯಿತು.  ಹೊಯ್ಸಳರ ಕಾಲದ ವಾಸ್ತುಶೈಲಿಯ ಎಲ್ಲ ಅಂಶಗಳನ್ನೂ ಈ ದೇವಸ್ಥಾನ ಒಳಗೊಂಡಿದೆ.

ಸುಮಾರು 5 ಅಡಿ ಎತ್ತರದ ವಿಶಾಲವಾದ ಜಗಲಿಯ ಮೇಲೆ ನಿರ್ಮಾಣಗೊಂಡಿರುವ ಈ ಸುಂದರ ದೇವಸ್ಥಾನ  ನಿರ್ಮಾಣ ಪ್ರದಕ್ಷಿಣ ಪಥ, ವಿಶಾಲವಾದ ನವರಂಗ, ಸುಕನಾಸಿ, ಗರ್ಭಗೃಹ ಮುಂತಾದವುಗಳನ್ನು ಒಳಗೊಂಡಿದೆ. ದೇವಸ್ಥಾನದ ಹೊರ, ಒಳ ಬದಿ, ಛಾವಣಿಯ ಮೇಲೆ ಸುಂದರ ಕಲಾಕೃತಿಗಳ ಕೆತ್ತನೆಗಳಿವೆ.

ಚೆನ್ನಕೇಶವ ದೇವಸ್ಥಾನದ `ಶಿಲಾ ಬಾಲಿಕೆಯರ ಶಿಲ್ಪಗಳು~ ಮನ ಸೆಳೆಯುತ್ತವೆ. ಹೊರಗೋಡೆಯ ಮೇಲು ಬದಿಯಲ್ಲಿ ಅಳವಡಿಸಿರುವ 40 ಶಿಲ್ಪಗಳ ಪೈಕಿ 38 ಹಾಗೂ ನವರಂಗದ ಪ್ರಧಾನ ಸ್ತಂಭದ ಮೇಲಿನ ನಾಲ್ಕು ಸೇರಿದಂತೆ ಒಟ್ಟು 42 ಶಿಲಾಬಾಲಿಕೆಯರ ಶಿಲ್ಪಗಳು ಈ ದೇವಸ್ಥಾನಕ್ಕೆ ವಿಶಿಷ್ಟ ಮೆರುಗು ನೀಡಿವೆ.
 
ಈ ದೇವಸ್ಥಾನದ ಇನ್ನೊಂದು ಆಕರ್ಷಣೆ ನೆಲದಲ್ಲಿ ಹೂಳದೆ ನಿಲ್ಲಿಸಿರುವ `ದೀಪ ಸ್ತಂಭ~ ಕಾರ್ತಿಕ ದೀಪೋತ್ಸವಕ್ಕಾಗಿ ಕ್ರಿ.ಶಕ 1414ರಲ್ಲಿ ಬೈಚೇ ದಂಡನಾಯಕರು ವಿಜಯನಗರ ಸಾಮ್ರಾಜ್ಯದ ದೇವರಾಯರ ಆಳ್ವಿಕೆಯ ಅವಧಿಯಲ್ಲಿ ಇದನ್ನು ನಿರ್ಮಿಸಿದರು ಎನ್ನಲಾಗಿದೆ.

ಚೆನ್ನಕೇಶವ ದೇವಸ್ಥಾನದ ಗರ್ಭಗೃಹದಲ್ಲಿರುವ ಒಂಬತ್ತು ಅಡಿಗಳ ಎತ್ತರದ ವಿಷ್ಣು ದೇವರ  ಮೂಲ ಮೂರ್ತಿಗೆ ಪಾಂಚಾರಾತ್ರಾಗಮದ ಅನ್ವಯ ನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರತಿ ಮಾಸದ ವಿಶೇಷ ಪೂಜೆಗಳು, ನಕ್ಷತ್ರ ವಿಶೇಷ ಪೂಜೆಗಳು, ವಾರ್ಷಿಕ ಪೂಜೆಗಳು ವೈಭವದಿಂದ ನಡೆಯುತ್ತವೆ.

ವಿಷ್ಣುವು ಮೋಹಿನಿಯ ರೂಪದಲ್ಲಿ ಭಸ್ಮಾಸುರನನ್ನು ಸಂಹಾರ ಮಾಡಿದ್ದು ಇ್ಲ್ಲಲಿಯೇ ಎಂಬ ಸ್ಥಳ ಪುರಾಣವನ್ನು ಆಧರಿಸಿ ಚೆನ್ನಕೇಶವ ಸ್ವಾಮಿಯನ್ನು ಮೋಹಿನಿಯ ರೂಪದಲ್ಲಿ ಅಲಂಕರಿಸುತ್ತಾರೆ. ನಿತ್ಯವೂ ವಜ್ರದ ಮೂಗುತಿ,ಡಾಬು ಇತ್ಯಾದಿ ಸ್ತ್ರೀಯರು ಧರಿಸುವ ಆಭರಣಗಳಿಂದ ಅಲಂಕರಿಸುವುದು ಇಲ್ಲಿನ ಪೂಜಾ ಸಂಪ್ರದಾಯ.

ಪ್ರತಿ ವರ್ಷ ಚೈತ್ರಮಾಸದಲ್ಲಿ ರಥೋತ್ಸವ ನಡೆಯುತ್ತದೆ. ಆಗ ಹದಿನೈದು ದಿನಗಳ ಕಾಲ ಚೆನ್ನಕೇಶವಮೂರ್ತಿಗೆ  ವಿವಿಧ ಅಲಂಕಾರೋತ್ಸವ ನಡೆಯುತ್ತದೆ. ಇದರಲ್ಲಿ ಗರುಡ, ಹನುಮಂತ, ಮೋಹಿನಿ ರೂಪದ ಅಲಂಕಾರ ಹಾಗೂ ಉತ್ಸವಗಳು ಭಕ್ತರ ಶ್ರದ್ಧೆಯ ಪ್ರತೀಕಗಳು. ಈ ಉತ್ಸವಗಳಲ್ಲದೆ ವರ್ಷವಿಡೀ ವಿವಿಧ ಹಬ್ಬಗಳು, ತಿರು ನಕ್ಷತ್ರಗಳು ಆಚರಣೆಯಲ್ಲಿವೆ.

ಚೆನ್ನಕೇಶವ ದೇವಾಲಯದ ಅಂಗ ಭಾಗಗಳಾಗಿ ಸೌಮ್ಯನಾಯಕಿ ಮತ್ತು ರಂಗನಾಯಕಿ ಅಮ್ಮನವರ ಗುಡಿಗಳು ಶ್ರೀದೇವಿ, ಭೂದೇವಿಯನ್ನು ಪ್ರತಿನಿಧಿಸುತ್ತವೆ. ಇವಲ್ಲದೆ ಶ್ರೀರಾಮ, ನರಸಿಂಹ, ಮುಖ್ಯಪ್ರಾಣ ದೇವರು, ಆಳ್ವಾರರುಗಳು ಸೇರಿದಂತೆ ಹಲವು ಉಪ ಗುಡಿಗಳು ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿವೆ.

ಪ್ರತಿ ಶನಿವಾರ ಚೆನ್ನಕೇಶವನ ಮೂಲ ವಿಗ್ರಹಕ್ಕೆ ಅಭಿಷೇಕ ನಡೆಯುತ್ತದೆ. ಬೆಳಿಗ್ಗೆ 7.30 ರಿಂದ ಸಂಜೆ 7.30ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ.
ಬೇಲೂರು, ಬೆಂಗಳೂರಿನಿಂದ 220 ಕಿ.ಮೀ ಹಾಗೂ ಹಾಸನದಿಂದ 37 ಕಿ.ಮೀ. ದೂರದಲ್ಲಿದೆ.

ಬೆಂಗಳೂರು, ಹಾಸನ, ಮೈಸೂರು, ಮಂಗಳೂರು, ಧರ್ಮಸ್ಥಳ, ಶಿವಮೊಗ್ಗ, ಮಡಿಕೇರಿ, ಸಕಲೇಶಪುರ, ಮೂಡಿಗೆರೆ, ಚಿಕ್ಕಮಗಳೂರುಗಳಿಂದ ನೇರ ಬಸ್‌ಗಳಿವೆ. ಮಂಗಳೂರಿನಿಂದ ತಮಿಳುನಾಡಿನ ತಿರುವಣ್ಣಾಮಲೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234 ಬೇಲೂರು ಮೂಲಕ ಹಾದು ಹೋಗುತ್ತದೆ.

ದೇವಸ್ಥಾನಕ್ಕೆ ಬರುವ ಭಕ್ತರಿಗೆ ನಿತ್ಯ ಮಧ್ಯಾಹ್ನ 1ಗಂಟೆಯಿಂದ 3 ಗಂಟೆಯವರೆಗೆ ಭೋಜನ ವ್ಯವಸ್ಥೆ ಇದೆ.  ದೇವಸ್ಥಾನದ ಸಮೀಪದಲ್ಲಿ ಹೋಟೆಲ್‌ಗಳಿವೆ. ಭಕ್ತರು ತಂಗಲು ದೇವಸ್ಥಾನದ ವತಿಯಿಂದ ವಸತಿ ವ್ಯವಸ್ಥೆ ಇಲ್ಲ. ಆದರೆ ಖಾಸಗಿ ವಸತಿ ಗೃಹಗಳಿವೆ.

ರಾಜ್ಯ ಪ್ರವಾಸೋದ್ಯಮ ನಿಗಮದ ಮಯೂರ ವೇಲಾಪುರಿ ಹೆಸರಿನ ಐಷಾರಾಮಿ ವಸತಿ ಗೃಹವಿದೆ. ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಅರ್ಧ ಕಿ.ಮೀ. ದೂರವಿದೆ. ದೇವಸ್ಥಾನದ ದೂರವಾಣಿ ಸಂಖ್ಯೆ- 08177-222218

ಸೇವಾ ವಿವರಗಳು
* ತುಳಸಿ ಅಷ್ಟೋತ್ತರ...   15 ರೂ
* ಕುಂಕುಮ ಅಷ್ಟೋತ್ತರ...  15 ರೂ
* ತುಳಸಿ ಸಹಸ್ರನಾಮ...   75 ರೂ
* ಡೋಲೋತ್ಸವ ...   600 ರೂ
* ಕುಂಕುಮ ಸಹಸ್ರನಾಮ...    75 ರೂ
* ಹನ್ನೆರಡು ಮಂಗಳಾರತಿ....   750 ರೂ
* ಮೂಲ ಮೂರ್ತಿಗೆ ಅಭಿಷೇಕ...  1500 ರೂ
* ಉತ್ಸವ ಮೂರ್ತಿ ಅಭಿಷೇಕ ...   800 ರೂ
* ಅಮ್ಮನವರ ಉತ್ಸವ ಮೂರ್ತಿ ಅಭಿಷೇಕ..  800 ರೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT