ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೆಕೇರಿಯಲ್ಲಿ ಮರುಕಳಿಸಿದ ಬದುಕು

Last Updated 1 ಜುಲೈ 2012, 10:10 IST
ಅಕ್ಷರ ಗಾತ್ರ

ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಎರಡು ವರ್ಷಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. ಹಗಲು-ರಾತ್ರಿಯೆಂಬ ಭೇದವಿಲ್ಲದೆ ಇಡೀ ದಿನ ಗಿಜಿಗುಡುವ ಜನಸಂದಣಿ, ವಾಹನಗಳ ಸದ್ದಿನಿಂದ ಬೇಲೆಕೇರಿಯ ನಿವಾಸಿಗಳು ಬೇಸತ್ತು ಹೋಗಿದ್ದರು. ಬೇಲೆಕೇರಿ ಬಂದರಿನಿಂದ ರಫ್ತಿನ ಉದ್ದೇಶಕ್ಕಾಗಿ ಮ್ಯೋಂಗನೀಸ್ ಸಾಗಾಟ ಬಿಡುವಿಲ್ಲದೆ ನಡೆಯುತ್ತಿತ್ತು. ದಿನಕ್ಕೆ ಸಾವಿರಾರು ಟಿಪ್ಪರ್, ಲಾರಿಗಳಲ್ಲಿ ಬಂದಿಳಿಯುತ್ತಿದ್ದ ಲಕ್ಷಾಂತರ ಟನ್ ಮ್ಯೋಂಗನೀಸ್ ಅದಿರು ಒಂದೆಡೆ ಪರ್ವತ ದೋಪಾದಿಯಲ್ಲಿ ರಾಶಿ ಬಿದ್ದರೆ, ಇನ್ನೊಂದೆಡೆ ಅದರ ಧೂಳಿನಿಂದ ಊರಿನ ಜನರು ಉಸಿರಾಡುವುದಕ್ಕೇ ಕಷ್ಟಪಡುತ್ತಿದ್ದರು. ಮ್ಯೋಂಗನೀಸ್ ಲಾರಿ ಚಾಲಕರ ಅಜಾಗರೂಕತೆಯಿಂದ ಅಂಕೋಲಾದಿಂದ ಹುಬ್ಬಳ್ಳಿಗೆ ತೆರಳುವ ಇತರ ವಾಹನಗಳ ಮೂಲಕ-ಚಾಲಕರಿಗೆ ಅತಿಯಾದ ಸಂಚಾರ ದಟ್ಟಣೆಯಿಂದ  ಒಪ್ಪತ್ತುಗಟ್ಟಲೆ ರಸ್ತೆಯಲ್ಲಿ ನಿಂತು ತಿರುಗಾಟವೇ ಸಾಕಾಗಿ ಹೋಗುತ್ತಿತು. ಸಂಚಾರ ದಟ್ಟಣೆಯನ್ನು ನಿಯಂತ್ರಿಸಲಾಗದೆ ಅಂಕೋಲಾ ಪೊಲೀಸರಂತೂ ದಿಕ್ಕುಗಾಣದಾಗಿದ್ದರು. ಕೇವಲ ಹಣದ ಆಸೆಗಾಗಿ ಮನುಷ್ಯತ್ವವನ್ನೇ ಕಳೆದುಕೊಂಡವರಂತೆ ವರ್ತಿಸುತ್ತಿದ್ದ ಕೆಲ ಜನರು ಅತ್ಯಲ್ಪ ಸುಖಕ್ಕಾಗಿ ಬದುಕಿನ ನೆಮ್ಮದಿಯನ್ನೇ ತ್ಯಾಗ ಮಾಡಿದ್ದರು! ಕೆಲವು ಮ್ಯೋಂಗನೀಸ್ ಟ್ರಾನ್ಸ್‌ಪೋರ್ಟ್ ಕಂಪೆನಿಗಳ ಅನಾರೋಗ್ಯಕರ ಪೈಪೋಟಿ ದಿನಕ್ಕೊಂದು ಸಮಸ್ಯೆಯನ್ನು ಸೃಷ್ಟಿಸುತ್ತಿತ್ತು. ಅದಿರು ರಫ್ತಿನ ಅಕ್ರಮ ವ್ಯವಹಾರಗಳು ದೇಶವ್ಯಾಪೀ ಪ್ರಚಾರ ಪಡೆದು, ಇಡೀ ದೇಶ ಬೇಲೆಕೇರಿಯನ್ನು ನಿಬ್ಬೆರಗಾಗಿ ನೋಡುವಂತೆ ಮಾಡಿದ್ದವು. ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಪೀಠವಾಗಿರುವ ಸರ್ವೋಚ್ಚ ನ್ಯಾಯಾಲಯವು ಮ್ಯೋಂಗನೀಸ್ ಅದಿರು ರಫ್ತನ್ನು ನಿಷೇಧಿಸಬೇಕೆಂದು ಕೇಂದ್ರ ಸರಕಾರಕ್ಕೆ ಕಟ್ಟಪ್ಪಣೆ ಮಾಡುವವರೆಗೆ ಇಲ್ಲಿನ ಅವ್ಯವಹಾರಗಳು ಸುದ್ದಿ ಮಾಡಿದವು. ಬೇಲೆಕೇರಿಯ ಮುಖ್ಯ ಉದ್ಯಮವಾಗಿರುವ ಮೀನುಗಾರಿಕೆಯೂ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಹಾಗಾದರೆ ಎರಡು ವರ್ಷಗಳ ಹಿಂದೆ ದೇಶದಾದ್ಯಂತ ಸುದ್ದಿ ಮಾಡಿದ ಬೇಲೆಕೇರಿ ಈಗ ಏನೆನ್ನುತ್ತಿದೆ? 

 ಈಗ ಸರಕಾರ ಮ್ಯೋಂಗನೀಸ್ ಅದಿರು ರಫ್ತನ್ನು ನಿಷೇಧಿಸಿರುವುದರಿಂದ ಬೇಲೆಕೇರಿ ಬಂದರಿನಿಂದ ಅದಿರು ಸಾಗಾಟ ಸಂಪೂರ್ಣವಾಗಿ ನಿಂತಿದೆ. ವಾಹನಗಳ ಕಿವಿಗಡಚಿಕ್ಕುವ ಸದ್ದು, ಅದಿರಿನ ದೂಳಿನಿಂದ ಮುಕ್ತರಾದ ಬೇಲೆಕೇರಿ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಗಲಿರುಳೆನ್ನದೆ ಊರಿನ ನಿದ್ದೆಗೆಡಿಸುತ್ತ ಸಂಚರಿಸುತ್ತಿದ್ದ ಲಾರಿ, ಟಿಪ್ಪರ್‌ಗಳ ಸದ್ದು ಅಡಗಿ ಊರಿನಲ್ಲಿ ಈಗ ಪ್ರಶಾಂತ ವಾತಾವರಣ ನೆಲೆಸಿದೆ. ಊರಿನ ಜನರ ಪ್ರಧಾನ ಉದ್ಯೋಗವಾಗಿರುವ ಮೀನುಗಾರಿಕೆ ಕಳೆದೊಂದು ವರ್ಷದಿಂದ ಈ ಮೊದಲಿನಂತೆಯೇ ಚುರುಕಾಗಿ ನಡೆಯುತ್ತಿದೆ. ದೋಣಿ, ಬೋಟುಗಳಲ್ಲಿ ಸಮುದ್ರಕ್ಕೆ ತೆರಳುವ ಮೀನುಗಾರರು ದಂಡಿಯಾಗಿ ಮೀನುಗಳನ್ನು ಹಿಡಿದು ತಂದು ಮಾರಾಟ ಮಾಡಿ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಈಗಂತೂ ಮುಂಗಾರು ಪ್ರಾರಂಭವಾಗಿದೆ. ಕಳೆದ ಜೂನ್ 15ರಿಂದ ಬರುವ ಜುಲೈ 31ರ ವರೆಗೆ ಮಳೆಗಾಲದ ನಿಮಿತ್ತ ಮೀನುಗಾರಿಕಾ ಇಲಾಖೆಯು ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಿದೆ. ಮೀನುಗಾರಿಕೆ ನಿಷೇಧದಿಂದ ಸುಮಾರು ಎರಡು ತಿಂಗಳ ಕಾಲ ಪಶ್ಚಿಮ ಕರಾವಳಿಯ 1.5 ಲಕ್ಷದಷ್ಟು ಮೀನುಗಾರರು ಕೆಲಸವಿಲ್ಲದಂತಾಗಿದ್ದಾರೆ. ಈ ಪರಿಸ್ಥಿತಿ ಬೇಲೆಕೇರಿಗೂ ಅನ್ವಯವಾಗಿದೆ.

ನಿಷೇಧದ ಪರಿಣಾಮವಾಗಿ ಬೇಲೆಕೇರಿಯ ಯಾಂತ್ರಿಕ ಬೋಟುಗಳ ನೂರಾರು ಮೀನುಗಾರರು ಮೀನು ಹಿಡಿಯುವ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಬಿಡುವಿನ ಈ ಅವಧಿಯಲ್ಲಿ ಬಲೆಗಳನ್ನು ಶೇಖರಿಸುವುದು, ಹರಿದ ಬಲೆಗಳನ್ನು ನೆಯ್ದು ದುರಸ್ತಿ ಮಾಡುವುದು ಹಾಗೂ ಅವುಗಳನ್ನು ಸಂರಕ್ಷಿಸಿಡುವಂತಹ ಕಾಯಕದಲ್ಲಿ ತೊಡಗಿದ್ದಾರೆ. 

ಸಾಂಪ್ರದಾಯಿಕ ಹಾಗೂ ನಾಡದೋಣಿಗಳ ಮೀನುಗಾರರು ಸ್ವಇಚ್ಛೆಯಿಂದಲೇ ಮೀನುಗಾರಿಕೆಗೆ ತೆರಳುವುದನ್ನು ನಿಲ್ಲಿಸಿ ದೋಣಿಗಳಿಗೆ ಎಣ್ಣೆ ಲೇಪಿಸುವುದು, ದುರಸ್ತಿ ಮಾಡುವುದು ಹಾಗೂ ಬಲೆ ದುರಸ್ತಿ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಮ್ಯೋಂಗನೀಸ್ ಧೂಳು, ಕಿವಿಗಡಚಿಕ್ಕುವ ಸದ್ದು  ಹಾಗೂ ಅನವಶ್ಯಕ ಜಗಳ ದೊಂಬಿಗಳಿಂದ ಮುಕ್ತವಾಗಿರುವ ಬೇಲೆಕೇರಿಯ ಜನರು ಮೀನುಗಾರರ ಓ ಲೇ...ಲೇ.... ಲೇ..... ಸೋ.....  ಸೊಲ್ಲಿಗಾಗಿ ಕಾದು ಕುಳಿತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT