ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಗೆ ಹಂಗಾಮಿಗೆ ನೀರುಬಿಡಲು ಒತ್ತಾಯ

Last Updated 11 ಡಿಸೆಂಬರ್ 2012, 11:01 IST
ಅಕ್ಷರ ಗಾತ್ರ

ದಾವಣಗೆರೆ: ತುಂಗಭದ್ರಾ ಜಲಾಶಯದಿಂದ ಬೇಸಗೆ ಹಂಗಾಮಿಗೆ ಜ. 10ರ ನಂತರ ನೀರು ಬಿಡುವಂತೆ ಒತ್ತಾಯಿಸಿ `ಕಾಡಾ' ಹಾಗೂ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಲು ಸೋಮವಾರ ನಡೆದ ಭಾರತೀಯ ರೈತ ಒಕ್ಕೂಟ ಭದ್ರಾ ನಾಲೆ ಅಚ್ಚಕಟ್ಟು ರೈತರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಸಿ. ನರಸಿಂಹಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಜಲಾಶಯದಲ್ಲಿ ಈ ಹಿಂದೆ 158 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದ ಸಂದರ್ಭದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಆತಂಕವಿಲ್ಲದೇ ಬೇಸಗೆ ಹಂಗಾಮು ಬೆಳೆ ಬೆಳೆದಿದ್ದಾರೆ. ಆದರೆ, ಈಗ ಜಲಾಶಯದಲ್ಲಿ 164 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದರೂ, ಬೇಸಗೆ ಹಂಗಾಮಿಗೆ ನೀರಿನ ಪೂರೈಕೆ ಮಾಡಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ, ಭದ್ರಾಅಚ್ಚುಕಟ್ಟು ಪ್ರದೇಶದಲ್ಲಿ ಬರುವ 2.65 ಲಕ್ಷ ಎಕರೆ ಭೂಮಿಗೆ 32 ಟಿಎಂಸಿ ನೀರು ಸಾಕಾಗುತ್ತದೆ. ಕುಡಿಯಲು 26.27 ಟಿಎಂಸಿ ನೀರು ಉಪಯೋಗಿಸಲಾಗುತ್ತದೆ. ಇದನ್ನು `ಕಾಡಾ', ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ ಎಂದರು.

ಭದ್ರಾ ಎಡದಂಡೆ ನಾಲೆಯಲ್ಲಿ ಅಕ್ರಮ ಪಂಪ್‌ಸೆಟ್‌ಗಳ ಹಾವಳಿ ಹೆಚ್ಚಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ. ಅಕ್ರಮ ಪಂಪ್‌ಸೆಟ್ ಹಾವಳಿ ಹೆಚ್ಚಲು ದೊಡ್ಡವರ ಕುಮ್ಮಕ್ಕು ಇದೆ ಎಂದು ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮೇಯರ್ ಗುರುನಾಥ್, ಶಿವರಾಜ ಪಾಟೀಲ ನಿಟ್ಟೂರು, ಲೋಕಿಕೆರೆ ಕೆಂಚಪ್ಪ, ಕೆ.ಎನ್. ಸೋಮಶೇಖರಪ್ಪ, ಕೆ.ಎಚ್. ನಾಗರಾಜ್ ಕುಕ್ಕುವಾಡ, ಯು.ಕೆ. ಚಂದ್ರಶೇಖರಪ್ಪ, ಪರಮಶಿವಯ್ಯ, ಎಚ್.ಬಿ. ರೇವಣಸಿದ್ದಪ್ಪ ಬೆಳವನೂರು ಉಪಸ್ಥಿತರಿದ್ದರು.ಸಭೆಯಲ್ಲಿ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ 500 ರೈತರು ಭಾಗವಹಿಸಿದ್ದರು.

ಪಾಲಿಕೆ ಚುನಾವಣೆ: ಕೆಜೆಪಿ ಅಭ್ಯರ್ಥಿಗಳು ಕಣಕ್ಕೆ
ದಾವಣಗೆರೆ:  
ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆಜೆಪಿಯಿಂದ  41ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಕೆಜೆಪಿ ಮುಖಂಡ ಬಿ.ಎಸ್. ಜಗದೀಶ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಾವೇರಿಯಲ್ಲಿ ನಡೆದ ಕೆಜೆಪಿ ಬೃಹತ್ ಸಮಾವೇಶದ ಅಭೂತಪೂರ್ವ ಯಶಸ್ಸಿನ ನಂತರ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಪ್ರಮುಖರು ಕೆಜೆಪಿ ಸೇರ್ಪಡೆಯಾಗಲು ಒಲವು ತೋರಿಸಿದ್ದಾರೆ. ಹಾವೇರಿ ಸಮಾವೇಶಕ್ಕೆ ಜಿಲ್ಲೆಯಿಂದ 40 ಸಾವಿರ ಬೆಂಬಲಿಗರು ಭಾಗವಹಿಸ್ದ್ದಿದರು. ಯಡಿಯೂರಪ್ಪ ಒಂದು ಶಕ್ತಿ ಇದ್ದಂತೆ. ಅವರು ಬಿಜೆಪಿ ತೊರೆದ ನಂತರ ಬಿಜೆಪಿ `ದೇವರಿಲ್ಲದ ಗುಡಿ'ಯಂತಾಗಿದೆ. ವಿಧಾನಸಭಾ ಚುನಾವಣೆಗೂ ಮುಂದೆ ಬಿಜೆಪಿಯ ಶೇ 80ರಷ್ಟು ಮುಖಂಡರು ಕೆಜೆಪಿ ಸೇರಲಿದ್ದಾರೆ ಎಂದರು.

ಶೀಘ್ರದಲ್ಲಿ ಪಕ್ಷದ ರಾಜ್ಯ, ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿವಾರು ಸಮಿತಿಗಳನ್ನು ರಚಿಸಲಾಗುವುದು. ಅದೇ ರೀತಿಯಲ್ಲಿ ಪಕ್ಷದ ಸಂಘಟನೆ ಬಲಗೊಳಿಸುವ ಕಾರ್ಯಕ್ಕೆ ಚಾಲನೆ ದೊರೆತ್ತಿದ್ದು, ಅಲ್ಪಸಂಖ್ಯಾತರಮಹಿಳಾ ಘಟಕ, ಕೆಜೆಪಿ ವಕೀಲರ ವೇದಿಕೆ ಅಸ್ತಿತ್ವಕ್ಕೆ ತರಲಾಗುತ್ತಿದೆ. ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯತೆ ನೀಡುವ ಉದ್ದೇಶದಿಂದ ಯುವಕರ ಸಮೂಹಗಳನ್ನು ಸೃಷ್ಟಿಸಲಾಗುತ್ತಿದೆ.

ನಗರದಲ್ಲಿ ಶೀಘ್ರದಲ್ಲಿ ಕೆಜೆಪಿ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಮುಖಂಡರು ಚಿಂತನೆ ನಡೆಸಿದ್ದಾರೆ ಎಂದು ವಿವರಿಸಿದರು.ಕೆಜೆಪಿ ಮುಖಂಡರಾದ ಕೆ. ಹೇಮಂತ್‌ಕುಮಾರ್, ಷಣ್ಮುಖ ಆವರಗೊಳ್ಳ, ರೇವಣಸಿದ್ದಪ್ಪ, ಕಡ್ಲೆಬಾಳು ಬಸವರಾಜ್, ಕೊಟ್ರೇಶ್‌ನಾಯ್ಕ, ಕಲ್ಲೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT