ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಾಯದ ಖುಷಿ

Last Updated 23 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಜಾಗತೀಕರಣ, ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ಕಂಗಾಲಾಗಿರುವ ಈ ಹೊತ್ತಿನಲ್ಲಿ ಹಳ್ಳಿಗಾಡಿನ ವಿದ್ಯಾವಂತ ಯುವಕರು ಉದ್ಯೋಗ ಹುಡುಕಿಕೊಂಡು ನಗರಗಳತ್ತ ಹೊರಟಿದ್ದಾರೆ. ಆದರೆ ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರಿನ ಎಂಎಸ್ಸಿ ಪದವೀಧರ ವೆಂಕಟೇಶ್ ಊರಲ್ಲೇ ಉಳಿದು ಬೇಸಾಯಮಾಡಿ ಯಶಸ್ವಿಯಾಗಿದ್ದಾರೆ.
                
ಸುಮಾರು ಇಪ್ಪತ್ತೈದು ಎಕರೆ ಭೂಮಿಯಲ್ಲಿ ವೆಂಕಟೇಶ್ ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುತ್ತಾರೆ.  ತೋಟದ ಬೆಳೆಗಳ ಜತೆಗೆ ಆಹಾರ ಧಾನ್ಯಗಳನ್ನು ಬೆಳೆಯುತ್ತಾರೆ. ಸಸ್ಯಶಾಸ್ತ್ರದಲ್ಲಿ ಪಡೆದ ಎಂಎಸ್ಸಿ ಪದವಿ ಅವರಿಗೆ  ನೆರವಾಗಿದೆ.ವೆಂಕಟೇಶ್ ಮನಸ್ಸು ಮಾಡಿದ್ದರೆ ಉತ್ತಮ ಉದ್ಯೋಗ ಪಡೆದು ಪಟ್ಟಣಗಳಲ್ಲಿ ನೆಮ್ಮದಿಯ ಜೀವನ ನಡೆಸಬಹುದಿತ್ತು. ಆದರೆ ಅವರು ಬೇಸಾಯದ ಕಡೆಗೆ ವಾಲಿದರು. ಅದರ ಫಲವಾಗಿ 25 ಎಕರೆಯ ಅವರ ಹೊಲ, ತೋಟ ಹಸಿರಿನಿಂದ ನಳನಳಿಸುತ್ತಿದೆ. ಅದರ ಹಿಂದೆ ಅವರ ಪರಿಶ್ರಮದ ದುಡಿಮೆ ಇದೆ.

ಬಾನುಲಿ ಕೃಷಿ ಬಳಗ: ಮೈಸೂರು ಆಕಾಶವಾಣಿಯ ‘ಕೃಷಿ ಬೆಳಗು’ ಕಾರ್ಯಕ್ರಮ ಆಲಿಸುತ್ತಿದ್ದ ಜಿ.ಬಿ.ಸರಗೂರಿನ ರೈತರು ಪ್ರತಿ ತಿಂಗಳು ಒಬ್ಬ ರೈತನ ಹೊಲದಲ್ಲಿ ಸಭೆ ಸೇರಿ ಬೇಸಾಯದ ವಿಷಯಗಳನ್ನು ತಜ್ಞರೊಂದಿಗೆ ಚರ್ಚಿಸುತ್ತಿದ್ದರು.  ವೆಂಕಟೇಶ್ ಅವರಿಗೆ ಪ್ರೇರಣೆ ನೀಡಿದ್ದು ಇಂತಹ ಸಭೆಗಳು ಮತ್ತು ರೈತರ ಒಡನಾಟ ಮತ್ತು ತಜ್ಞರ ಮಾರ್ಗದರ್ಶನ.

ಒಂದೆಡೆ ಸೇರುತ್ತಿದ್ದ ರೈತರೆಲ್ಲ ಸೇರಿ ‘ಬಾನುಲಿ ಕೃಷಿ ಬಳಗ’ ಕಟ್ಟಿಕೊಂಡರು. ಆ ಬಳಗ ಈಗ ‘ಬಾನುಲಿ ಕೃಷಿಕರ ಕಂಪೆನಿ’ಯಾಗಿ ಜ.31ರಂದು ಮೈಸೂರಿನಲ್ಲಿ ಉದ್ಘಾಟನೆಯಾಯಿತು. ರೈತರೇ ಮೊದಲ ಬಾರಿಗೆ ತಮ್ಮದೇ ಆದ ಕಂಪೆನಿ ಸ್ಥಾಪಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ! ರೈತರೇ ಷೇರುಗಳನ್ನು ಹೂಡಿ ಮಾಡಿರುವ ಈ ಕಂಪೆನಿಗೆ ವೆಂಕಟೇಶ್ ವ್ಯವಸ್ಥಾಪಕ ನಿರ್ದೇಶಕರು.

ಸಾವಯವ ತೊಟ್ಟಿ: ಸಗಣಿ, ಗಂಜಳ, ತರಗೆಲೆಗಳಿಂದ ಇತ್ಯಾದಿಗಳನ್ನು ಕೊಳೆಹಾಕಿ ತಯಾರಿಸಿದ  ದ್ರವ ರೂಪದ ಕಾಂಪೋಸ್ಟ್ ಗೊಬ್ಬರ ಹನಿ ನೀರಾವರಿ ಪೈಪ್‌ಗಳ ಮೂಲಕ ತೋಟದ ಮರಗಳ ಬುಡ ತಲುಪುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ವಿಧಾನ ಬಳಸಿ ಬೆಳೆದ ಮರ,ಗಿಡಗಳಿಂದ ಉತ್ತಮ ಇಳುವರಿ ಸಿಗುತ್ತಿದೆ. ಸಾವಯವ ಗೊಬ್ಬರದಿಂದ ಬೆಳೆದ ಯಾವುದೇ ಬೆಳೆ ವಿಷಮುಕ್ತವಾಗಿರುತ್ತದೆ. ರಾಸಾಯನಿಕ ಗೊಬ್ಬರಕ್ಕೆ ಅವರು ಹಣ ವೆಚ್ಚ ಮಾಡುತ್ತಿಲ್ಲ. ಹೀಗಾಗಿ ಬೇಸಾಯದ ಖರ್ಚು ಕಡಿಮೆಯಾಗಿದೆ.

 ವೆಂಕಟೇಶ್ ಸಾವಯವ ಪದ್ಧತಿಗಷ್ಟೇ ಮಾರು ಹೋಗಿಲ್ಲ. ಆಧುನಿಕ ಯಂತ್ರಗಳನ್ನೂ ಬಳಸುತ್ತಾರೆ. ಕಳೆತೆಗೆಯಲು, ಕೊಯ್ಲು ಮಾಡಲು, ಗುಂಡಿ ತೋಡಲು, ತೆಂಗಿನ ಮರ ಹತ್ತಲು ಯಂತ್ರಗಳು ಹಾಗೂ ಟಿಲ್ಲರ್ ಬಳಸಿ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ.

ತೋಟದಲ್ಲಿ ತೆಂಗು, ಅಡಿಕೆ, ಬಾಳೆ ಮಧ್ಯೆ ಕೋಕೊ ಇತ್ಯಾದಿ ಬೆಳೆಯುವ ಮೂಲಕ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ. ದೇಸಿ ಬತ್ತದ ತಳಿಗಳಾದ ರಾಜಮುಡಿ, ಗಂಧಸಾಲೆಯನ್ನು ಬೆಳೆದು ಯಶಸ್ಸು ಕಂಡಿದ್ದಾರೆ.ಕಾಮಕಸ್ತೂರಿ, ಕಲ್ಲುಬಾಳೆ, ಸೌಗಂಧಿಕಾ ಪುಷ್ಪಸೇರಿದಂತೆ ವಿಶೇಷ ಬೆಳೆಗಳನ್ನೂ ಅವರ ತೋಟದಲ್ಲಿ  ಕಾಣಬಹುದು.

ತೋಟದಲ್ಲಿ 250 ತೆಂಗಿನ ಮರಗಳು, 380 ಅಡಿಕೆ ಮರಗಳು, 500 ಕೋಕೊ ಗಿಡಗಳು, 2 ಸಾವಿರ  ಬಾಳೆ ಗಿಡಗಳ ಜತೆಗೆ ಕೆಲವು ಬೆಟ್ಟದ ನೆಲ್ಲಿ, ಹುಣಸೆ, ಬೇವು, ಸೀತಾಫಲ, ರಾಮಫಲ, ಸೀಬೆ ಇತ್ಯಾದಿ ಮರಗಳನ್ನು ಬೆಳೆದಿದ್ದಾರೆ. ಅವರ ತೋಟದ ಮರ ಗಿಡಗಳಲ್ಲಿ ಸಮೃದ್ಧ ಫಲಗಳು ತೂಗಾಡುತ್ತಿವೆ.

ಅಧಿಕ ಇಳುವರಿ, ಅಧಿಕ ಲಾಭ: ಇಪ್ಪತ್ತೈದು ಎಕರೆ ಜಮೀನಿನ ಪೈಕಿ 10 ಎಕರೆಯಲ್ಲಿರುವ ಬೆಳೆಗಳಲ್ಲಿ ಈಗ ಫಸಲು ಸಿಗುತ್ತಿದೆ.250 ತೆಂಗಿನ ಮರಗಳಿಂದ ವರ್ಷಕ್ಕೆ 1.5 ಲಕ್ಷ ರೂ ಆದಾಯವಿದೆ. 80 ಕ್ವಿಂಟಲ್ ಅಡಿಕೆ ಬೆಳೆಯುತ್ತಾರೆ. ವಾರಕ್ಕೆ 65ಕೆಜಿ ಕೋಕೊ ಬೀಜ ಸಿಗುತ್ತಿದೆ. ಏಲಕ್ಕಿ ಬಾಳೆಯಿಂದ ವಾರಕ್ಕೆ ರೂ.11,500 ರೂ. ಅವರಿಗೆ ವಾರ್ಷಿಕ 5 ಲಕ್ಷ ರೂ ಆದಾಯವಿದೆ.

ಮನೆಗೆ ಅವಶ್ಯವಿರುವ ತರಕಾರಿ, ಸೊಪ್ಪು, ಹಣ್ಣು ಮತ್ತು ಆಹಾರ ಧಾನ್ಯಗಳನ್ನು ಬೆಳೆದುಕೊಂಡು ಸ್ವಾವಲಂಬಿ ರೈತರಾಗಿದ್ದಾರೆ. ಸಣ್ಣ ರೈತರು ಇರುವ ಅಲ್ಪ ಜಮೀನಿನಲ್ಲೇ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬಹುದು ಎನ್ನುವುದು ವೆಂಕಟೇಶ್ ಅವರ ಅಭಿಪ್ರಾಯ. ಅವರ ಮೊಬೈಲ್ ನಂಬರ್: 9945290334.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT