ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ; ತಪ್ಪದ ನೀರಿನ ಬವಣೆ

Last Updated 9 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕನಕಪುರ ರಸ್ತೆಯಲ್ಲಿರುವ ಜರಗನಹಳ್ಳಿ ಮತ್ತು ಯಲಚೇನಹಳ್ಳಿ ಪ್ರದೇಶಗಳು ಹೆಸರಿಗೆ ತಕ್ಕಂತೆ ಮೂಲ ಸೌಕರ್ಯಗಳಿಂದ ವಂಚಿತವಾಗಿ ಇಂದಿಗೂ ‘ಹಳ್ಳಿ’ಗಂತೆಯೇ ಇವೆ. ಡಾಂಬರು ಕಾಣದ ರಸ್ತೆಗಳು, ತೆರೆದ ಚರಂಡಿ, ಎಲ್ಲೆಡೆ ಕಸದ ರಾಶಿ... ಹೀಗೆ ಒಟ್ಟಾರೆ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಇನ್ನು ಬೇಸಿಗೆ ಬಂತೆಂದರೆ ಈ ಭಾಗದ ಮಹಿಳೆಯರು ನೀರಿಗಾಗಿ ಗಲ್ಲಿ ಗಲ್ಲಿ ತಿರುಗುವುದು ಸಾಮಾನ್ಯ.

ಜರಗನಹಳ್ಳಿಯ ಗೋವಿಂದಪ್ಪ ಬಡಾವಣೆ, ಮುನಿ ಸಂಜೀವಪ್ಪ ಬಡಾವಣೆ, ಅಣ್ಣಸ್ವಾಮಪ್ಪ ಬಡಾವಣೆ, ನಾಯ್ಡು ಬಡಾವಣೆ, ರಾಜೀವ್ ಗಾಂಧಿ ಬಡಾವಣೆ ಹಾಗೂ ಯಲಚೇನಹಳ್ಳಿಯ ಇಲಿಯಾಸ್ ನಗರ, ಕನಕನಗರ, ಕಾಶಿನಗರ, ರಾಜ್ಯೋತ್ಸವ ನಗರ, ರಾಮಯ್ಯ ನಗರದಲ್ಲಿ ಗಾರ್ಮೆಂಟ್ಸ್ ನೌಕರರು, ಆಟೊರಿಕ್ಷಾ, ಲಾರಿ ಚಾಲಕರು, ಕಾರ್ಮಿಕರು... ಹೀಗೆ ಶ್ರಮಿಕ ವರ್ಗದವರೇ ಗಣನೀಯ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಜನಸಂದಣಿ ತೀವ್ರವಾಗಿರುವ ಈ ಪ್ರದೇಶದಲ್ಲಿ ಪ್ರತಿ ಬೇಸಿಗೆಯಲ್ಲೂ ನೀರಿಗಾಗಿ ಜನತೆ  ಪರದಾಡುತ್ತಾರೆ.

ನೀರು ಪೂರೈಕೆ ಅನಿಶ್ಚಿತ: ಬೆಳಿಗ್ಗೆ ಮನೆ ಕೆಲಸ ಮುಗಿಸಿ ಗಾರ್ಮೆಂಟ್ಸ್, ಕಾರ್ಖಾನೆ ಕಡೆಗೆ ಹೆಜ್ಜೆ ಹಾಕುವ ಮಹಿಳೆಯರು ನೀರಿನ ಬಗ್ಗೆಯೇ ಚಿಂತಿಸುತ್ತಾರೆ. ಏಕೆಂದರೆ ಈ ಭಾಗದಲ್ಲಿ ನೀರು ಪೂರೈಕೆಗೆ ನಿಗದಿತ ವೇಳೆ ಎಂದಿಲ್ಲ. ವಾರದಲ್ಲಿ ಯಾವ ದಿನ, ಎಷ್ಟು ಹೊತ್ತು  ನೀರು ಪೂರೈಕೆಯಾಗುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ.

ಹಾಗಾಗಿ ವಾರದ ಏಳೂ ದಿನ ಹಾಗೂ ದಿನದ 24 ಗಂಟೆ ಕಾಲವೂ ನೀರಿನ ಬರುವಿಕೆಯ ನಿರೀಕ್ಷೆಯಲ್ಲೇ ಕಾಲ ದೂಡುತ್ತಾರೆ. ಬೆಳಿಗ್ಗೆಯಾಗುತ್ತಿದ್ದಂತೆ ಬಿಂದಿಗೆ, ಬಕೆಟ್ಟುಗಳನ್ನು ಮನೆ ಮುಂದೆ ಇಟ್ಟು, ಪಕ್ಕದ ಮನೆಯವರಿಗೆ ತಿಳಿಸಿ ನೌಕರಿಗೆ ತೆರಳುವುದು ಸಾಮಾನ್ಯ. ಹಗಲಿನ ಹೊತ್ತು ಮಾತ್ರವಲ್ಲ, ಕೆಲಸ ಮುಗಿಸಿ ಮನೆಗೆ ಬಂದ ನಂತರ ರಾತ್ರಿಯಿಡೀ ನೀರಿಗಾಗಿ ಕಾಯುವುದು ದಿನಚರಿಯ ಭಾಗವೆನಿಸಿದೆ. ಅನಿರ್ದಿಷ್ಟ ದಿನದಲ್ಲಿ ಕೇವಲ ಅರ್ಧಗಂಟೆ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಜಲಮಂಡಳಿಯು ಕೆಲವು ಬಡಾವಣೆಯಲ್ಲಿ 5 ದಿನಗಳಿಗೊಮ್ಮೆ ಕುಡಿಯುವ ನೀರು ಒದಗಿಸುತ್ತಿದ್ದು, ಕೆಲವೆಡೆ ವಾರಕ್ಕೊಮ್ಮೆ ಪೂರೈಸಲಾಗುತ್ತಿದೆ.

ಮನೆಯಲ್ಲೇ ಟ್ಯಾಂಕ್ ವ್ಯವಸ್ಥೆಯಿರುವ ಮಧ್ಯಮ ವರ್ಗದ ಜನ ನೀರು ಸಿಗದಿದ್ದಾಗ 500 ರೂಪಾಯಿ ತೆತ್ತು ಮೂರು ದಿನಗಳಿಗೊಮ್ಮೆ ಖಾಸಗಿ ಟ್ಯಾಂಕರ್ ನೀರು ಪಡೆಯುತ್ತಿದ್ದಾರೆ. ಆದರೆ ಸಂಪ್ ವ್ಯವಸ್ಥೆ ಇರದವರು ಒಂದು ಬಿಂದಿಗೆ 35 ರೂಪಾಯಿ ದರದಲ್ಲಿ ನೀರು ಪಡೆಯಬೇಕಿದೆ.

ನೀರಿನ ಬವಣೆಗೆ ಜಲಮಂಡಳಿ ಮಾತ್ರ ಹೊಣೆಯಲ್ಲ. ಜತೆಗೆ ಕೆಲ ಪ್ರಭಾವಿಗಳು ಹಾಗೂ ವಾಲ್‌ಮನ್‌ಗಳ ದುರಾಸೆಯೂ ಕಾರಣ. ನೀರು ದೊರೆಯದೇ ಇದ್ದರೂ ನೀರಿನ ಬಿಲ್ ಮಾತ್ರ ಏರುತ್ತಿರುತ್ತದೆ. ನೀರಿಗೆ ವಿಧಿಸುವ ಕರವನ್ನು ನಿಗದಿತ ಸಮಯದಲ್ಲಿ ಪಾವತಿಸುತ್ತೇವೆ. ಆದರೆ ನೀರು ಮಾತ್ರ ದೊರೆಯುತ್ತಿಲ್ಲ ಎಂಬುದು ಸ್ಥಳೀಯರ ಅಳಲು.

ನೀರು ಪೂರೈಕೆಯಲ್ಲೂ ತಾರತಮ್ಯ: ಪ್ರಭಾವಿ ವ್ಯಕ್ತಿಗಳು ಗಣನೀಯ ಸಂಖ್ಯೆಯಲ್ಲಿರುವ ಬಡಾವಣೆಗಳಿಗೆ ವಾಲ್ ಮನ್‌ಗಳು ಯಥೇಚ್ಛವಾಗಿ ನೀರು ಪೂರೈಸುತ್ತಾರೆ. ಈ ನಿವಾಸಿಗಳು ಟ್ಯಾಂಕ್ ತುಂಬಿದ ನಂತರವೂ ಅದನ್ನು ವ್ಯವಸ್ಥಿತವಾಗಿ ನಿಲ್ಲಿಸದೇ ಇರುವುದರಿಂದ ನೀರು ಪೋಲಾಗಿ ಚರಂಡಿಗಳಿಗೆ ಹರಿಯುತ್ತದೆ. ಇದರಿಂದ ಮಧ್ಯಮ ಹಾಗೂ ಕೆಳ ವರ್ಗದ ಜನರು ನೀರಿನ ಬವಣೆಯನ್ನು ಅನುಭವಿಸುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.

ವಾಲ್‌ಮನ್‌ಗಳಿಗೆ ತಿಂಗಳಿಗೆ 150ರಿಂದ 200 ರೂಪಾಯಿ ನೀಡಿದರಷ್ಟೇ ನೀರು ಪೂರೈಕೆಯಲ್ಲ ಸ್ವಲ್ಪ ಧಾರಾಳತನ ತೋರುತ್ತಾರೆ. ಆದರೆ ಬಡ ಜನರಿಗೆ ಈ ‘ಶುಲ್ಕ’ವನ್ನು ನೀಡುವಷ್ಟು ಶಕ್ತರಾಗಿರುವುದಿಲ್ಲ. ಹಾಗಾಗಿ ಹಣ ನೀಡಿ ಬಿಂದಿಗೆ ನೀರು ಪಡೆಯುವುದು ಅನಿವಾರ್ಯವಾಗಿದೆ.

ಅಧಿಕಾರಿಗಳು ಹೇಳುವುದೇನು?: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಲ ಮಂಡಳಿಯ ಜರಗನಹಳ್ಳಿ ವಿಭಾಗದ ಎಂಜಿನಿಯರ್ ನಾಗರಾಜ್, ‘ಜಲ ಸಂಗ್ರಹಾಗಾರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರು ಪೂರೈಕೆಯಾಗದ ಕಾರಣ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಜತೆಗೆ ವಿದ್ಯುತ್ ವ್ಯತ್ಯಯದಿಂದಲೂ ಅಡಚಣೆಯಾಗಿದೆ’ ಎಂದರು. ಯಲಚೇನಹಳ್ಳಿ ವಾರ್ಡ್‌ನ ಸದಸ್ಯ ಒ.ಮಂಜುನಾಥ್, ‘ಯಲಚೇನಹಳ್ಳಿ, ಕನಕನಗರ, ರಾಮಕೃಷ್ಣನಗರದಲ್ಲಿ ನೀರಿನ ಬವಣೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ.2ದಿನಗಳಿಗೊಮ್ಮೆ ನೀರು ಪೂರೈಕೆ ಮಾಡು ವಂತೆ ಜಲ ಮಂಡಳಿಗೆ 8 ತಿಂಗಳಿಂದ ಮನವಿ ಮಾಡಲಾಗುತ್ತಿದೆ. ಆದರೂ ಸ್ಪಂದಿಸುತ್ತಿಲ್ಲ’ ಎಂದರು.

ನಿವಾಸಿಗಳು  ಏನನ್ನುತ್ತಾರೆ?
ಏಳು ದಿನಕ್ಕೊಮ್ಮೆ ನೀರು ಪೂರೈಸುವುದರಿಂದ ಮೂರು ಬಿಂದಿಗೆ ನೀರನ್ನು ವಾರವಿಡೀ ಬಂಗಾರದಂತೆ ಜೋಪಾನ ಮಾಡಬೇಕಾದ ಸ್ಥಿತಿ ಇದೆ. ಪರಿಣಾಮ ವಾರದಲ್ಲಿ ಒಂದು ದಿನ ಸ್ನಾನ.  
  -ಭಾಗ್ಯ ( ಗೀತಾ ಕಾಲೋನಿ ನಿವಾಸಿ)

ವಾಲ್‌ಗೇಟ್‌ಗಳು ಚರಂಡಿ ಸಮೀಪವಿರುವುದರಿಂದ ಆ ನೀರು ಕುಡಿಯುವ ನೀರಿಗೆ ಸೇರ್ಪಡೆಯಾಗುತ್ತಿದೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ದೂರು ನೀಡಿದರೆ ಬೇಜವಾಬ್ದಾರಿಯಿಂದ ಉತ್ತರ ನೀಡುತ್ತಾರೆ.   
-ಸೈಯದ್ ಖಲೀಲ್ ( ಕನಕನಗರ ನಿವಾಸಿ)
 
ಈ ಬಡಾವಣೆಗಳ ಸುತ್ತಮುತ್ತ ಕೊಳವೆ ಬಾವಿಗಳಿಲ್ಲ. ಟ್ಯಾಂಕರ್‌ನ ನೀರು ಬಡಾವಣೆಯ ಕೆಲವೇ ಮಂದಿಯ ಪಾಲಾಗುತ್ತಿದೆ. ವಾರದಲ್ಲಿ ಅರ್ಧ ಗಂಟೆ ಪೂರೈಕೆಯಾಗುವ ನೀರು ಎಲ್ಲಾ ಮನೆಗಳಿಗೂ ಸರಬರಾಜು ಆಗುವುದಿಲ್ಲ.           -ಲಕ್ಷ್ಮೀ (ಗೀತಾ ಕಾಲೋನಿ ನಿವಾಸಿ)
 
ಜಲಸಂಗ್ರಹಾಗಾರಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ ಎಂದು ಜಲಮಂಡಳಿ ಎಂಜಿನಿಯರ್‌ಗಳು ತಿಳಿಸುತ್ತಾರೆ. ಆದರೆ ಕೆಲ ಬಡಾವಣೆಗಳಿಗೆ ಸಾಕಷ್ಟು ನೀರು ಪೂರೈಸಲಾಗುತ್ತಿದೆ. ಇದು ಹೇಗೆ ಸಾಧ್ಯ.  -ವಸಂತ ರೆಡ್ಡಿ (ಕನಕನಗರ ನಿವಾಸಿ) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT