ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬೇಸಿಗೆ ಬತ್ತಕ್ಕೆ ನೀರು ಬಿಡುವುದಿಲ್ಲ'

ತುಂಗಭದ್ರಾ ಎಡದಂಡೆ ಕಾಲುವೆ
Last Updated 13 ಡಿಸೆಂಬರ್ 2012, 8:03 IST
ಅಕ್ಷರ ಗಾತ್ರ

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಸದ್ಯ ಬೆಳೆದು ನಿಂತ ಬೆಳೆ ರಕ್ಷಣೆ ಮಾಡುವುದು, ಹತ್ತಿ, ಮೆಣಸಿನಕಾಯಿ, ಜೋಳದಂಥ ಮಿತ ನೀರಾವರಿ ಬೆಳೆ ರಕ್ಷಣೆಗೆ ನೀರು ದೊರಕಿಸುವುದು ಹಾಗೂ ಕುಡಿಯಲು ನೀರು ಒದಗಿಸುವ ಉದ್ದೇಶದಿಂದ ತುಂಗಭದ್ರಾ ನೀರಾವರಿ ಕಾಲುವೆ ನೀರಾವರಿ ಸಲಹಾ ಸಮಿತಿ ಸಭೆಯು ಅತ್ಯಂತ ಕಟ್ಟು ನಿಟ್ಟಿನ ನಿರ್ಧಾರ ಕೈಗೊಂಡಿದೆ.

ಬೇಸಿಗೆ ಬತ್ತಕ್ಕೆ ಯಾವುದೇ ಕಾರಣಕ್ಕೂ ನೀರು ಒದಗಿಸುವುದಿಲ್ಲ. ಒಂದು ವೇಳೆ ರೈತರು ಬತ್ತ ಬೆಳೆದರೆ ಅದರಿಂದಾಗುವ ನಷ್ಟಕ್ಕೆ ಅವರೇ ಹೊಣೆಗಾರರು ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ್ ಹೇಳಿದರು.

ಬುಧವಾರ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿ ಒಟ್ಟು 13 ಟಿಎಂಸಿ ನೀರಿನ ಕೊರತೆ ಇದೆ. ಭದ್ರಾದಿಂದ ನೀರು ತರುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಆಧರಿಸಿ ಮಾರ್ಚ್‌ವರೆಗೆ ನೀರು ಬಿಡುವ ತೀರ್ಮಾನವನ್ನು ನೀರಾವರಿ ಸಲಹಾ ಸಮಿತಿ(ಐಸಿಸಿ) ಕೈಗೊಂಡಿದೆ. ಬೇಸಿಗೆಯಲ್ಲಿ ಬತ್ತ ಬೆಳೆಯಬಾರದು ಎಂದೂ ರೈತರಿಗೆ ಮನವಿ ಮಾಡಲಾಗಿದೆ. ನೋಟಿಸ್ ಜಾರಿಗೊಳಿಸಲಾಗಿದೆ. ಇದನ್ನು ಮೀರಿ ಬತ್ತ ಬೆಳೆಯುವ ಸಾಹಸ ಮಾಡಿದರೆ ಆಗುವ ನಷ್ಟಕ್ಕೆ ಅವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ವಿಶೇಷ ವ್ಯವಸ್ಥೆ: ಮುಂದಿನ ತಿಂಗಳಲ್ಲಿ ಈಗ ರೈತರು ಬೆಳೆಯುತ್ತಿರುವ ಬೆಳೆಗೆ ಹೆಚ್ಚಿನ ನೀರು ಬೇಕಾಗುತ್ತದೆ. ಕೆಳಭಾಗಕ್ಕೆ ಸಮರ್ಪಕ ನೀರು ದೊರಕಿಸಲು ಇಲಾಖೆಯು ಈ ಬಾರಿ ವಿಶೇಷ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗೇಜ್ 47, 69 ಹಾಗೂ 104ನಲ್ಲಿ  ನಿಗದಿತ ಗೇಜ್ ನಿರ್ವಹಣೆಗೆ ಎಚ್ಚರಿಕೆ ವಹಿಸಲಾಗುತ್ತದೆ. ಮುಖ್ಯವಾಗಿ ವಡ್ಡರಹಟ್ಟಿ ಹತ್ತಿರ ಇರುವ ಕಾಲುವೆಯ ಎಲ್ಲ ಗೇಟ್ ಮುಚ್ಚಿ ಕೆಳ ಭಾಗಕ್ಕೆ ನೀರು ಕೊಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಐಸಿಸಿ ಸಭೆ ತೀರ್ಮಾನ ಪರಿಷ್ಕರಣೆ ಮಾಡಿ 3,600 ಕ್ಯುಸೆಕ್ ನೀರು ಕೆಳಭಾಗಕ್ಕೆ ಹರಿಸಬೇಕು ಎಂದು ರೈತರು, ಮುಖಂಡರು ಮನವಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ರೈತರ ಬೇಡಿಕೆಯಂತೆ ನೀರು ಹರಿಸಲು ಜಲಾಶಯದಲ್ಲಿ ನೀರಿನ ಮಟ್ಟ ಇಲ್ಲ.

ಇರುವ ನೀರಿನ ಲಭ್ಯತೆ ಮೇಲೆ ಮಾರ್ಚ್ ತಿಂಗಳವರೆಗೆ ಕುಡಿಯುವ ನೀರಿನ ವ್ಯವಸ್ಥೆ, ಮಿತ ಬೆಳೆಗೆ ನೀರು ದೊರಕಿಸುವ ಪ್ರಯತ್ನ ಮಾಡಲಾಗುತ್ತದೆ.  ಐಸಿಸಿ ಸಭೆ ತೀರ್ಮಾನ ಕೇವಲ ತಾವೊಬ್ಬರೇ ಕೈಗೊಂಡ ತೀರ್ಮಾನವಲ್ಲ. ಶಾಸಕರು, ಸಚಿವರು, ಅಧಿಕಾರಿಗಳು ಕೈಗೊಂಡ ತೀರ್ಮಾನವಾಗಿದೆ. ಜಲಾಶಯದಲ್ಲಿ ನೀರಿನ ಲಭ್ಯತೆಯೇ ಕಡಿಮೆ ಇರುವುದರಿಂದ ಐಸಿಸಿ ಸಭೆ ತೀರ್ಮಾನ ಪರಿಷ್ಕರಣೆ ಅಸಾಧ್ಯ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT