ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಮೀರಿಸಿದ ರಾಜಕೀಯ ಬಿಸಿ

Last Updated 10 ಏಪ್ರಿಲ್ 2013, 6:19 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ ಕೇಂದ್ರ ಬೀದರ್ ನಗರ, ನಗರಸಭೆಯ ವ್ಯಾಪ್ತಿ, ಜನವಾಡ ಹಾಗೂ ಮಾಳೆಗಾಂವ್ ವೃತ್ತದ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡು ರಚನೆ ಆಗಿರುವುದೇ ಬೀದರ್ ವಿಧಾನಸಭಾ ಕ್ಷೇತ್ರ. ಭೌಗೋಳಿಕ ವಿಸ್ತಾರ, ವ್ಯಾಪ್ತಿಯಿಂದ ಜಿಲ್ಲೆ ಮಟ್ಟಿಗೆ ಚಿಕ್ಕ ಕ್ಷೇತ್ರ. ಆದರೆ, ಜಿಲ್ಲಾ ಕೇಂದ್ರವಾಗಿರುವ ಕಾರಣ ರಾಜಕೀಯವಾಗಿ ಪ್ರಮುಖ ಕ್ಷೇತ್ರ.

ಕ್ಷೇತ್ರ ಪುನರ್ವಿಂಗಡಣೆಯ ನಂತರ ಈ ಕ್ಷೇತ್ರದ ವ್ಯಾಪ್ತಿಯು ಕಿರಿದಾಗಿದೆ. ಈ ಮೊದಲು ಇದ್ದ ಕೆಲವು ಪ್ರದೇಶಗಳು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿಕೊಂಡಿವೆ. ಜಿಲ್ಲಾ ಕೇಂದ್ರವಾಗಿ, ನಗರಸಭೆಯನ್ನು ಹೊಂದಿದ್ದರೂ ಮೂಲ ಸೌಕರ್ಯಗಳ ಕೊರತೆ ಇಂದಿಗೂ ಕಾಡುತ್ತಿರುವ ಕ್ಷೇತ್ರ ಇದು.

ಕುಡಿಯುವ ನೀರು ಪೂರೈಕೆ, ಅಭಿವೃದ್ಧಿಶೀಲ ನಗರದ ಮೂಲ ಅಗತ್ಯವಾದ ಒಳಚರಂಡಿ ಸೌಲಭ್ಯ, ನೈರ್ಮಲ್ಯ ರಕ್ಷಣೆ, ಪಾದಚಾರಿ ಮಾರ್ಗಗಳ ರಚನೆ ಇನ್ನೂ ಪೂರ್ಣ ಜಾರಿಗೆ ಬಂದಿಲ್ಲ. ಆಡಳಿತದ ಶಕ್ತಿ ಕೇಂದ್ರವಾಗಿ ಪ್ರಮುಖ ಕಚೇರಿಗಳು ಇಲ್ಲೇ ತಳ ಊರಿದ್ದರೂ ಅದು ಅಭಿವೃದ್ಧಿ ಕಟ್ಟಿಕೊಡುವ ನಿಟ್ಟಿನಲ್ಲಿ ಕಳೆದ ವರ್ಷಗಳಲ್ಲಿ ಸ್ಪಂದಿಸಿಲ್ಲ.

ಸಮರ್ಪಕ ಕುಡಿಯುವ ನೀರು ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಮತ್ತಿತರ ಕೆಲಸ ಕಾರ್ಯಗಳು ಒದಗಿಸುವ ನಿಟ್ಟಿನಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿಯಷ್ಟೇ ಪ್ರಯತ್ನ, ಕಾಮಗಾರಿಗಳು ಜಾರಿಯಾಗುತ್ತಿದ್ದು, ಕಣ್ಣು ಬಿಡುತ್ತಿವೆ. ನಗರಸಭೆ, ಅಲ್ಲಿಗೆ ಚುನಾಯಿತರಾದವರ ವೈಫಲ್ಯವೂ ಈ ಸ್ಥಿತಿಗೆ ಕಾರಣವಿರಬಹುದು.

ಕ್ಷೇತ್ರ ಇದಕ್ಕೂ ಮುನ್ನ ಒಟ್ಟು ಎರಡು ಉಪ ಚುನಾವಣೆಯೂ ಸೇರಿದಂತೆ 14 ಚುನಾವಣೆಗಳನ್ನು ಕಂಡಿದೆ. ಕ್ಷೇತ್ರ ಪುನರ್ವಿಂಗಡೆಯ ನಂತರ ಉಪ ಚುನಾವಣೆ ಸೇರಿದಂತೆ ಈಗ ಮೂರನೇ ಬಾರಿಗೆ ಚುನಾವಣೆಗೆ ಕ್ಷೇತ್ರ ಸಜ್ಜಾಗುತ್ತಿದೆ.

1952ರಲ್ಲಿ ಹೈದರಾಬಾದ್ ರಾಜ್ಯದ ವ್ಯಾಪ್ತಿಯಲ್ಲಿದ್ದು, ಕಾಂಗ್ರೆಸ್‌ನ ಶಫಿಯುದ್ದೀನ್ ಅಹಮ್ಮದ್ ಆಯ್ಕೆಯಾಗಿದ್ದರು. ಕ್ಷೇತ್ರದಲ್ಲಿ ಎಂಟು ಬಾರಿ ಕಾಂಗ್ರೆಸ್ ಗೆದ್ದು ಬಂದಿದ್ದರೆ, ಮೂರು ಬಾರಿ ಬಿಜೆಪಿ, ತಲಾ ಒಂದು ಬಾರಿ ಪಕ್ಷೇತರ, ಬಿ.ಎಸ್.ಪಿ ಮತ್ತು ಬಿಜೆಎಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ಕಾಂಗ್ರೆಸ್ ಅಭ್ಯರ್ಥಿಗಳಾಗಿ ಮಕ್ಸೂದ್ ಅಲಿಖಾನ್ (1957, 1962), ಮಾಣಿಕರಾವ್ ಆರ್.ಫುಲೇಕರ್ (1972), ವೀರಶೆಟ್ಟಿ ಕುಶನೂರು (1978), ಮೊಹಸಿನ್ ಕಮಾಲ್ (1982ರ ಉಪಚುನಾವಣೆ), ಮಹ್ಮದ್ ಲೈಕೋದ್ದೀನ್ (1985), ಗುರುಪಾದಪ್ಪ ನಾಗಮಾರಪಳ್ಳಿ (2008), ರಹೀಂ ಖಾನ್ (2009ರ ಉಪಚುನಾವಣೆ) ಆಯ್ಕೆಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳಾಗಿದ್ದ ನಾರಾಯಣರಾವ್ ಮನ್ನಳ್ಳಿ (1983, 1989),  ರಮೇಶ್‌ಕುಮಾರ್ ಪಾಂಡೆ (1999) ಅವರು ಆಯ್ಕೆಯಾಗಿದ್ದರೆ; ಪಕ್ಷೇತರ ಅಭ್ಯರ್ಥಿಯಾಗಿ ಬಂಡೆಪ್ಪಾ ಕಾಶೆಂಪುರ (2004), ಬಿಎಸ್‌ಪಿಯ ಸೈಯದ್ ಜುಲ್ಫೇಕರ್ ಹಾಶ್ಮಿ (1994), ಭಾರತೀಯ ಜನ ಸಂಘದ ಅಭ್ಯರ್ಥಿಯಾಗಿದ್ದ ಚಂದ್ರಕಾಂತ್ ಸಿಂಧೋಲ್ (1967) ಚುನಾಯಿತರಾಗಿದ್ದವರು.

ನಾಲ್ಕುವರೆ ವರ್ಷಗಳಲ್ಲಿ ಬಂದಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದ ಚಿತ್ರಣ ಬದಲಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, ನಂತರದ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷವನ್ನು ಬದಲಿಸಿ ಉಪ ಚುನಾವಣೆಗೆ ಪುತ್ರನನ್ನುಕಣಕ್ಕಿಳಿಸಿದ್ದ ಮಾಜಿ ಸಚಿವ ಗುರುಪಾದಪ್ಪಾ ನಾಗಮಾರಪಳ್ಳಿ ಮತ್ತೆ ಸ್ಪರ್ಧೆಗೆ ಸಜ್ಜಾಗಿದ್ದಾರೆ.

ಈ ಬಾರಿ ಅವರ ಪಕ್ಷವೂ ಬದಲಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಅವರೀಗ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ. ಉಪ ಚುನಾವಣೆಯಲ್ಲಿ ಜಯಗಳಿಸಿದ್ದ ರಹೀಂ ಖಾನ್ ಮತ್ತೆ ಸ್ಪರ್ಧಿಸಲಿದ್ದು, ಪುನರಾಯ್ಕೆ ಬಯಸಿದ್ದಾರೆ. ಬಿಎಸ್‌ಅರ್ ಕಾಂಗ್ರೆಸ್ ಅಯಾಜ್‌ಖಾನ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ್ದರೆ, ಜೆಡಿಎಸ್, ಬಿಜೆಪಿ ಅಭ್ಯರ್ಥಿ ಘೋಷಿಸಬೇಕಿದೆ.

ಪ್ರಮುಖ ಪಕ್ಷಗಳು ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತೀವ್ರ ಹಣಾಹಣಿ ನಿರೀಕ್ಷಿಸಬಹುದು. ರಾಜಕಾರಣದ ಬಿಸಿ, ಬೇಸಿಗೆಯ ಕಾವನ್ನೂ ಮೀರಿ ಅಭ್ಯರ್ಥಿಗಳು ಮತ್ತು ಪಕ್ಷಗಳ ಬೆವರಿಳಿಸಿದರೆ ಆಶ್ಚರ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT