ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೂ ಮುನ್ನವೇ ವಿದ್ಯುತ್ ವ್ಯತ್ಯಯದ ‘ಬಿಸಿ’

ಅನಧಿಕೃತ ಲೋಡ್‌ಶೆಡ್ಡಿಂಗ್‌; ಪರೀಕ್ಷೆಯ ಹೊಸ್ತಿಲಲ್ಲಿ ವಿದ್ಯಾರ್ಥಿಗಳಿಗೆ ಆತಂಕ
Last Updated 10 ಜನವರಿ 2014, 8:58 IST
ಅಕ್ಷರ ಗಾತ್ರ

ದಾವಣಗೆರೆ: ಬೇಸಿಗೆಗೂ ಮುನ್ನವೇ ನಗರ ಹಾಗೂ ಜಿಲ್ಲೆಯಲ್ಲಿ ‘ಅನಧಿಕೃತ ಲೋಡ್‌ಶೆಡ್ಡಿಂಗ್‌’ ಆಗುತ್ತಿರುವುದು ಜನರ ತಲೆನೋವಿಗೆ ಕಾರಣವಾಗಿದೆ. ‘ಈಗಲ್ಲ, ಮುಂದಿದೆ...’ ಎಂಬ ರೀತಿ ಬೆಸ್ಕಾಂ ಸೂಚನೆ ನೀಡುತ್ತಿರುವುದು ರೈತರು ಸೇರಿದಂತೆ ಎಲ್ಲ ವರ್ಗದವರ ಆತಂಕ
ಹೆಚ್ಚಿಸಿದೆ.

ನಗರದಲ್ಲಿ ನಿತ್ಯ ಎರಡರಿಂದ ಮೂರು ಗಂಟೆಗೂ ಹೆಚ್ಚು ಕಾಲ ವಿದ್ಯುತ್‌ ನಿಲುಗಡೆ ಆಗುತ್ತಿದೆ. ಕೆಲವು ವೇಳೆ, ಮುಂಚಿತವಾಗಿ ತಿಳಿಸಲಾಗುತ್ತದೆ. ಕೆಲವು ವೇಳೆ, ದಿಢೀರನೆ ವಿದ್ಯುತ್‌ ‘ಮಾಯ’ವಾಗಿರುತ್ತದೆ! ವಿದ್ಯುತ್‌ ಎಲ್ಲಿ ಕೈಕೋಡುವುದೋ ಎಂಬ ಆತಂಕದ ನಡುವೆಯೇ ತರಾತುರಿಯಲ್ಲಿ ಅಡುಗೆಗೆ ಸಿದ್ಧತೆ ಮಾಡಿಕೊಳ್ಳಬೇಕಾದ ಸ್ಥಿತಿ ಮಹಿಳೆಯರದ್ದಾಗಿದೆ. ಇನ್ನು, ಸಂಜೆಯಾ ಗುತ್ತಿದ್ದಂತೆಯೇ ಮನೆಗಳಲ್ಲಿ ಮೇಣದ ಬತ್ತಿಯನ್ನೋ, ಎಣ್ಣೆ ದೀಪವನ್ನೋ, ಛಾರ್ಜರ್‌ಗಳನ್ನೋ ಸಿದ್ಧವಾಗಿ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ.

ವಾರ್ಷಿಕ ಪರೀಕ್ಷೆಗಳು ಸಮೀಪದಲ್ಲಿರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ‘ವಿದ್ಯುತ್‌ ಕಣ್ಣಾಮುಚ್ಚಾಲೆ’ಯಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಲೋಡ್‌ಶೆಡ್ಡಿಂಗ್‌ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರಾದರೂ ವಾಸ್ತವದಲ್ಲಿ ವಿದ್ಯುತ್‌ ಕಡಿತ ಮಾಡುವುದು ನಡೆಯುತ್ತಲೇ ಇದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್‌ ದೊರೆಯದಿರುವುದು ಹಾಗೂ ದಿನೇದಿನೇ ಬೇಡಿಕೆ ಹೆಚ್ಚುತ್ತಿರುವುದು ಸಹ ಇದಕ್ಕೆ ಕಾರಣವಾಗಿದೆ. ಫೆಬ್ರುವರಿ ತಿಂಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎನ್ನುತ್ತವೆ ಮೂಲಗಳು.

ವ್ಯಾಪಾರಕ್ಕೂ ನಷ್ಟ: ‘ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ವಿದ್ಯುತ್‌ ಉತ್ಪಾದನೆಯಲ್ಲಿಯೂ ಕೊರತೆ ಇಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ, ವಿದ್ಯುತ್‌ ಪದೇ ಪದೇ ಕೊಡುವುದರಿಂದ ತೊಂದರೆಯಾಗಿದೆ. ಜೆರಾಕ್ಸ್‌ ಮಾಡಿಸಿಕೊಳ್ಳಲು ಬರುವವರು ಕರೆಂಟ್‌ ಇಲ್ಲ ಎಂದಾಕ್ಷಣ ಇತರೆಡೆಗೆ ಹೋಗುತ್ತಾರೆ. ಇದರಿಂದ ನಮ್ಮ ವ್ಯಾಪಾರಕ್ಕೂ ನಷ್ಟವಾಗುತ್ತಿದೆ’ ಎಂದು ಪಿ.ಬಿ.ರಸ್ತೆಯ ಜೆರಾಕ್ಸ್‌ ಅಂಡಿಯ ಮಾಲೀಕರೊಬ್ಬರು ಹೇಳುತ್ತಾರೆ.

ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ಹಗಲಿನಲ್ಲಿ ನಾಲ್ಕು ಗಂಟೆ ಮಾತ್ರ ತ್ರೀಫೇಸ್ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಸಿಂಗಲ್‌ ಫೇಸ್‌ ವಿದ್ಯುತ್‌ ದೊರೆಯುತ್ತಿದೆ.

ಈ ನಡುವೆ, ಮಧ್ಯರಾತ್ರಿ 12ರಿಂದ ಬೆಳಿಗ್ಗೆ 6ರವರೆಗೆ 3 ಪಾಳಿಯಲ್ಲಿ ಎರಡು ತಾಸು ತ್ರೀಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಒಟ್ಟಿನಲ್ಲಿ ಹಗಲಿನಲ್ಲಿ 4 ತಾಸು ಹಾಗೂ ರಾತ್ರಿ 2 ತಾಸು ತ್ರೀಫೇಸ್‌ ವಿದ್ಯುತ್‌ ದೊರೆಯುತ್ತಿದೆ. 10 ಗಂಟೆ ಸಿಂಗಲ್‌ ಫೇಸ್‌ ವಿದ್ಯುತ್‌ ನೀಡಲಾಗುತ್ತಿದೆ. ತಾಂತ್ರಿಕ ತೊಂದರೆಯಿಂದ ಅಥವಾ ಉತ್ಪಾದನೆಯಲ್ಲಿ ವಿಫಲವಾದರೆ ಮಾತ್ರ ಅನಿಯಮಿತ ಲೋಡ್‌ಶೆಡ್ಡಿಂಗ್‌ ಮಾಡಲಾಗುತ್ತಿದೆ. ಅದು ತಾತ್ಕಾಲಿಕವಷ್ಟೇ ಎಂಬುದು ಅಧಿಕಾರಿಗಳ ಸಮರ್ಥನೆ.

ಆದರೆ, ನಗರ ಪ್ರದೇಶದಲ್ಲಿಯೂ ಆಗಾಗ ವಿದ್ಯುತ್‌ ಕೈಕೊಡುತ್ತಿರುವ ಪರಿಣಾಮ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲಿಯೂ ಗ್ರಾಮೀಣ ಭಾಗದ ಜನರ ಗೋಳು ಹೇಳತೀರದು. ವಿದ್ಯುತ್‌ ವ್ಯತ್ಯಯದ ನೇರ ಪರಿಣಾಮ ಮಹಿಳೆಯರ ಮೇಲೆ ಬೀರುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆಗೆ ಉಪಹಾರ ಸಿದ್ಧಪಡಿಸಲು ಕರೆಂಟ್‌ಗೋಸ್ಕರ ಕಾಯುತ್ತಾ ಕೂರುವುದು ಸಾಮಾನ್ಯವಾಗಿಬಿಟ್ಟಿದೆ!

ಬೆಳೆಗಳ ಮೇಲೂ ಪರಿಣಾಮ: ‘ಗ್ರಾಮೀಣ ಭಾಗದಲ್ಲಿ ಪದೇ ಪದೇ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ಇದರಿಂದ ಅಲ್ಲಿನ ವಾಸಿಗಳಿಗೆ ತೊಂದರೆಯಾಗಿದೆ. ಅಲ್ಲದೇ, ಈಗ ನೀಡುತ್ತಿರುವ ತ್ರೀಫೇಸ್‌ ವಿದ್ಯುತ್‌ ಸಾಕಾಗದೇ ಬೆಳೆ ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ನೀರಿಲ್ಲದೇ ಬೆಳೆಗಳು ಒಣಗುತ್ತಿವೆ. ರಾತ್ರಿ ವೇಳೆ ತ್ರೀಫೇಸ್‌ ವಿದ್ಯುತ್‌ ಅನ್ನು ಪಾಳಿಯಲ್ಲಿ ನೀಡಿದರೆ ಹೇಗೆ ಬೆಳೆಗಳಿಗೆ ನೀರು ಹಾಯಿಸಬೇಕು’ ಎಂದು ರೈತ ಮುಖಂಡ ತೇಜಸ್ವಿ ವಿ.ಪಟೇಲ್‌ ಪ್ರಶ್ನಿಸುತ್ತಾರೆ. ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ನಿತ್ಯ 12 ಗಂಟೆ ವಿದ್ಯುತ್‌ ಸರಬರಾಜು ಮಾಡಬೇಕು ಎಂಬುದು ಅವರ ಆಗ್ರಹ.

ಅಧಿಕಾರಿ ಏನಂತಾರೆ?: ‘ಜಿಲ್ಲೆಯಲ್ಲಿ ಹತ್ತು ದಿನಗಳ ಹಿಂದೆಯಷ್ಟೇ ವಿದ್ಯುತ್‌ ಕೊರತೆ ಕಂಡುಬಂದಿತ್ತು. ಇದರಿಂದಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿತ್ತು. ಈಗ ಸಮಸ್ಯೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ 6 ಗಂಟೆ ತ್ರೀಫೇಸ್‌ ಹಾಗೂ ನಗರ, ಪಟ್ಟಣದಲ್ಲಿ 24 ಗಂಟೆಯೂ ವಿದ್ಯುತ್‌ ನೀಡಲಾಗುತ್ತಿದೆ. ಕೆಲ ದಿನಗಳ ಹಿಂದೆ 1400ರಿಂದ 1800 ಮೆಗಾವಾಟ್‌ ವಿದ್ಯುತ್‌ ಕೊರತೆ ಇತ್ತು.

ಇದರಿಂದ ಒಂದೂವರೆ ಗಂಟೆ ತ್ರೀಫೇಸ್‌ ವಿದ್ಯುತ್‌ ಪೂರೈಕೆ ಕಡಿಮೆ ಮಾಡಲಾಗಿತ್ತು. ನಗರ ಹಾಗೂ ಪಟ್ಟಣದಲ್ಲಿ 3ರಿಂದ 4 ಗಂಟೆ ವಿದ್ಯುತ್‌ ಕಡಿತ ಮಾಡಬೇಕಾಗಿತ್ತು. ಈಗ, ವಿದ್ಯುತ್‌ ಉತ್ಪಾದನೆಯಲ್ಲಿ ತೊಂದರೆ ಇಲ್ಲ. ಜನವರಿ ಅಂತ್ಯದವರೆಗೆ ತೊಂದರೆ ಉಂಟಾಗದು’ ಎಂದು ಬೆಸ್ಕಾ ಅಧೀಕ್ಷಕ ಎಂಜಿನಿಯರ್‌ ಕೋಟಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎಲ್ಲ ವಿದ್ಯುತ್‌ ಉತ್ಪಾದನಾ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಬೇಸಿಗೆ ವೇಳೆಗೆ ಮತ್ತಷ್ಟು ವಿದ್ಯುತ್‌ ಬೇಡಿಕೆ ಉಂಟಾಗಲಿದೆ. ಕಳೆದ ವರ್ಷ ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿನ ವಿದ್ಯುತ್‌ ಬೇಡಿಕೆ 3,900 ಮೆಗಾವಾಟ್‌ ಬೇಡಿಕೆ ಇದ್ದದ್ದು, ಈಗ 4,300 ಮೆಗಾವಾಟ್‌ಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷ 200 ಮೆಗಾವಾಟ್‌ ಇದ್ದ ಬೇಡಿಕೆ 240 ಮೆಗಾವಾಟ್‌ಗೆ ಹೆಚ್ಚಿದೆ.

ದುರಸ್ತಿ ಹಾಗೂ ಮಾರ್ಗ ಬದಲಾವಣೆ ಕಾಮಗಾರಿ ಕೈಗೊಳ್ಳುವಾಗ ಆ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗುತ್ತದೆಯೇ ಹೊರತು, ಅಧಿಕೃತ ಲೋಡ್‌ಶೆಡ್ಡಿಂಗ್‌ ಮಾಡುತ್ತಿಲ್ಲ. ಸರ್ಕಾರದ ಆದೇಶದಂತೆ ವಿದ್ಯುತ್‌ ನೀಡಲಾಗುತ್ತಿದೆ’ ಎನ್ನುತ್ತಾರೆ ಅವರು.
ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ 12 ಗಂಟೆ ವಿದ್ಯುತ್‌ ಪೂರೈಕೆ ಮಾಡಬೇಕು ಎಂಬುದು ರೈತರ ಆಗ್ರಹ. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ತೀರ್ಮಾನ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT