ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೆ ತತ್ತರಿಸಿರುವ ಗ್ರಾಮೀಣ ಜನತೆ

ಐದು ರೂಪಾಯಿಗೆ ಒಂದು ಕೊಡ ನೀರು
Last Updated 6 ಏಪ್ರಿಲ್ 2013, 5:17 IST
ಅಕ್ಷರ ಗಾತ್ರ

ಬಳ್ಳಾರಿ: ಬೇಸಿಗೆಯ ಪ್ರಖರತೆ ತೀವ್ರಗೊಳ್ಳುತ್ತ ಸಾಗಿದ್ದು, ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಅನಿಯಮಿತ ವಿದ್ಯುತ್ ಕಡಿತವೂ ಹೆಚ್ಚಿದ್ದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಆರಂಭವಾಗಿದೆ.

ಕಳೆದ ಎರಡು ವರ್ಷಗಳಿಂದ ತೀವ್ರ ಬರಗಾಲ ಸ್ಥಿತಿ ತಲೆದೋರಿದ್ದರಿಂದ, ಜಿಲ್ಲೆಯಲ್ಲಿನ ಕೆರೆ- ಕಟ್ಟೆಗಳೆಲ್ಲ ಬರಿದಾಗಿವೆ. ಬಳ್ಳಾರಿ ತಾಲ್ಲೂಕಿನಲ್ಲಿ ಕುಡಿಯುವ ನೀರು ದೊರೆಯದೆ ಪರದಾಡುತ್ತಿರುವ ಜನತೆ, ಹಣ ಕೊಟ್ಟು ನೀರು ಖರೀದಿಸುವ ಅನಿವಾರ್ಯತೆಗೆ ಒಳಗಾಗಿದ್ದಾರೆ.

ತಾಲ್ಲೂಕಿನ ಹಲಕುಂದಿ, ಮಿಂಚೇರಿ, ಸಂಜೀವರಾಯನ ಕೋಟೆ, ಜೋಳದರಾಶಿ, ಚರಕುಂಟೆ, ಚೇಳ್ಳಗುರ್ಕಿ ಮತ್ತಿತರ ಗ್ರಾಮಗಳಲ್ಲಿ ನೀರಿಗಾಗಿ ಜನತೆ ಪರದಾಡುವಂತಾಗಿದೆ.

ಮಿಂಚೇರಿ ಮತ್ತು ಹಲಕುಂದಿ ಗ್ರಾಮಗಳಲ್ಲಿ ಕಳೆದ 15 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಪರಿಹಾರ ಕಂಡುಕೊಳ್ಳದ್ದರಿಂದ ಗ್ರಾಮಸ್ಥರ ಸಮಸ್ಯೆ ಮೇರೆಮೀರಿದೆ.

ತುಂಗಭದ್ರಾ ಬಲದಂಡೆಯ ಮೇಲ್ಮಟ್ಟದ ಕಾಲುವೆಯ ನೀರನ್ನು ತುಂಬಿಸುವುದಕ್ಕೆಂದೇ ಮಿಂಚೇರಿ ಗ್ರಾಮದ ಹೊರ ವಲದಯಲ್ಲಿ ಬೃಹತ್ ಕೆರೆ ಕಟ್ಟಿಸಿದ್ದರೂ, ನೀರು ತುಂಬಿಸದ್ದರಿಂದ ಬೇಸಿಗೆಯ ವೇಳೆಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ.

ಮಧ್ಯರಾತ್ರಿ ನೀರು: ಮಿಂಚೇರಿ ಗ್ರಾಮಕ್ಕೆ ಕೊಳವೆ ಬಾವಿಯೇ ಆಸರೆಯಾಗಿದ್ದು, ವಿದ್ಯುತ್ ಸಂಪರ್ಕ ಇರುವ ಸಂದರ್ಭ ಬೆಳಿಗ್ಗೆ 11ರ ನಂತರ ಮತ್ತು ಮಧ್ಯರಾತ್ರಿ 12ರ ನಂತರವೇ ನೀರು ಪೂರೈಸಲಾಗುತ್ತಿದೆ. ಹಗಲಲ್ಲಿ ಕೆಲಸಕ್ಕೆ ತೆರಳುವ ಜನತೆ ಮಧ್ಯರಾತ್ರಿ ನಂತರವೇ ನಿದ್ದೆಗೆಟ್ಟು ನೀರು ತುಂಬಿಕೊಳ್ಳಬೇಕಿದೆ. ಅಲ್ಲದೆ, ಕೊಳವೆಬಾವಿ ನೀರಿನಲ್ಲಿ ಫ್ಲೋರೈಡ್ ಅಂಶ ಇರುವುದರಿಂದ ಕುಡಿಯಲೂ ಯೋಗ್ಯವಾಗಿಲ್ಲ.

ಈ ಕಾರಣದಿಂದಲೇ ಗ್ರಾಮಸ್ಥರು ಖಾಸಗಿ ವ್ಯಕ್ತಿಗಳು ಟ್ಯಾಂಕರ್ ಮೂಲಕ ತಂದು  ಮಾರಾಟ ಮಾಡುವ ಶುದ್ಧೀಕರಿಸಿದ ನೀರನ್ನು ಪ್ರತಿ ಕೊಡವೊಂದಕ್ಕೆರೂ 5 ನೀಡಿ ಖರೀದಿಸುವಂತಾಗಿದೆ ಎಂದು ಗ್ರಾಮದ ಮೆಹಬೂಬ್ ಭಾಷಾ, ಹಸೀನಾಬಿ, ನೂರ್‌ಬಿ ಮತ್ತಿತರರು ಅಳಲು ತೋಡಿಕೊಳ್ಳುತ್ತಾರೆ.

ಪಕ್ಕದ ಹಲಕುಂದಿ ಗ್ರಾಮಕ್ಕೆ 4 ಕಿಮೀ ದೂರದಲ್ಲಿರುವ ಕೊಳವೆ ಬಾವಿಯಿಂದ ಊರಲ್ಲಿರುವ ಹಳೆಯ ಬಾವಿಗೆ ನೀರು ಸರಬರಾಜು ಮಾಡಿ ಸಂಗ್ರಹಿಸಲಾಗುತ್ತಿದ್ದು, ಅದನ್ನು ಗ್ರಾಮದ ಮನೆಮನೆಗೆ ಎರಡು ದಿನಕ್ಕೊಮ್ಮೆ ಕೊಳಾಯಿ (ನಲ್ಲಿ) ಮೂಲಕ ಪೂರೈಸಲಾಗುತ್ತಿದೆ. ಈ ನೀರೂ ಕುಡಿಯಲು ಯೋಗ್ಯವಾಗಿಲ್ಲ.

`ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ಕೈ, ಕಾಲು, ಸಂದುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದು, ಖಾಸಗಿಯವರಿಂದ ರೂ 5ಕ್ಕೆ ಒಂದು ಕೊಡ ಹಾಗೂ ರೂ 10ಕ್ಕೆ ಒಂದು ಕ್ಯಾನ್ ಶುದ್ಧೀಕರಿಸಿದ ನೀರನ್ನು ಖರೀದಿಸುತ್ತಿದ್ದೇವೆ' ಎಂದು ಗ್ರಾಮದ ನಿವಾಸಿ ಮುಮ್ತಾಜ್ `ಪ್ರಜಾವಾಣಿ'ಗೆ ತಿಳಿಸಿದರು.

ಗ್ರಾಮದಲ್ಲಿನ ಬಾವಿಯಲ್ಲಿ ಸಂಗ್ರಹಿಸಲಾಗುವ ನೀರನ್ನು ಶುದ್ಧೀಕರಿಸಲು ಗ್ರಾಮ ಪಂಚಾಯಿತಿಯ ನೆರವಿನಿಂದ ಬಾವಿಯ ಎದುರು ಒಂದು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಅಲ್ಲಿಯೂ ್ಙ 5ಕ್ಕೆ ಒಂದು ಕೊಡ ನೀರು ಮಾರಾಟ ಮಾಡಲಾಗುತ್ತಿದ್ದು, ಬಡವರು ನಿತ್ಯವೂ ಹಣ ಕೊಟ್ಟು ನೀರು ಖರೀದಿಸುವುದು ಅಸಾಧ್ಯ ಎಂಬುದು ಸುರೇಶ್ ಅವರ ಅನಿಸಿಕೆ.

ಬಳ್ಳಾರಿ- ಅನಂತರಪುರ ರಸ್ತೆಯಲ್ಲಿರುವ ಜೋಳದರಾಶಿ ಗ್ರಾಮದಲ್ಲೂ ನೀರಿನ ಸಮಸ್ಯೆ ಇದ್ದು, ಖಾಸಗಿಯವರಿಂದಲೇ ಹಣ ಕೊಟ್ಟು ನೀರು ಖರೀದಿಸುವಂತಾಗಿದೆ. ಜನಪ್ರತಿನಿಧಿಗಳು ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ತಲ್ಲೆನರಾಗಿದ್ದರೆ, ಅಧಿಕಾರಿಗಳು ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿದ್ದಾರೆ. ಇದರಿಂದಾಗಿ ಜನರ ಸಮಸ್ಯೆಯನ್ನೇ ಕೇಳುವವರಿಲ್ಲದ ಸ್ಥಿತಿ ಇದೆ ಎಂಬುದು ಗ್ರಾಮದ ಹುಲುಗಪ್ಪ, ಶರಣಪ್ಪ ಮತ್ತು ರಾಮಣ್ಣ ಅವರ ದೂರು.

ನಿಯಮಿತವಾಗಿ ವಿದ್ಯುತ್ ಪೂರೈಸಿದರೆ ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರು ಪೂರೈಸಬಹುದು. ಆದರೆ, ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಕೊಳವೆ ಬಾವಿ ನೀರನ್ನು ಟ್ಯಾಂಕ್‌ಗಳಿಗೆ ಪಂಪ್ ಮಾಡಲಾಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT