ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯಾಗದು'

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ರಾಜ್ಯದಲ್ಲಿ ಜನವರಿಯಿಂದ ಮೇ ತಿಂಗಳವರೆಗೆ ಹೆಚ್ಚು ವಿದ್ಯುತ್ ಬೇಕು. ಆದರೆ, ಲಿಂಗನಮಕ್ಕಿ, ಸುಪಾ ಹಾಗೂ ಮಾಣಿ ಅಣೆಕಟ್ಟೆಗಳಲ್ಲಿ ನೀರು ಕಡಿಮೆ ಇರುವುದರಿಂದ ವಿದ್ಯುತ್ ಉತ್ಪಾದನೆ  2700 ದಶಲಕ್ಷ ಯುನಿಟ್ ಕೊರತೆ ಆಗುತ್ತದೆ. ಆದರೂ ಕೂಡ ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಆಗದಂತೆ ಸಮರ್ಥವಾಗಿ ನಿರ್ವಹಿಸುತ್ತೇವೆ' ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನವನಗರದ ಹೆಸ್ಕಾಂ ಕೇಂದ್ರ ಕಚೇರಿಯಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವ ಗ್ರಾಹಕರ ಸೇವಾ ಕೇಂದ್ರ, ನಿರಂತರ ಸೇವಾ ವಾಹನ ಹಾಗೂ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಭಾನುವಾರ ಉದ್ಘಾಟಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

`ಕಳೆದ ವರ್ಷ ಲಿಂಗನಮಕ್ಕಿ ಜಲಾಶಯದಲ್ಲಿ ಶೇ 96ರಷ್ಟು ನೀರಿತ್ತು. ಈ ವರ್ಷ ಶೇ 66ರಷ್ಟು ನೀರಿದೆ. ಸುಪಾ ಜಲಾಶಯದಲ್ಲಿ ಶೇ 55ರಷ್ಟು ಮಾತ್ರ ನೀರಿದೆ. ವಿದ್ಯುತ್ ಕೊರತೆಯನ್ನು ಬಳ್ಳಾರಿ ಹಾಗೂ ಉಡುಪಿಯ ವಿದ್ಯುತ್ ಉತ್ಪಾದನಾ ಘಟಕಗಳ ಜೊತೆಗೆ ಇತರ ಘಟಕಗಳಿಂದ ನಿಭಾಯಿಸಿಕೊಂಡು, ಜಲಾಶಯಗಳ ನೀರನ್ನು ಸಮರ್ಪಕವಾಗಿ ಬೇಸಿಗೆಯಲ್ಲಿ ಬಳಸಿಕೊಳ್ಳುತ್ತೇವೆ' ಎಂದು ವಿಶ್ವಾಸವ್ಯಕ್ತಪಡಿಸಿದರು.

ಪುನಶ್ಚೇತನ: `ಹುಬ್ಬಳ್ಳಿ ಸಮೀಪದ ರಾಯಾಪುರದಲ್ಲಿಯ ಎನ್‌ಜಿಇಎಫ್ ಮುಚ್ಚುವ ಹಂತದಲ್ಲಿತ್ತು. ಹೆಸ್ಕಾಂ ಮೂಲಕ ಅನುದಾನ ನೀಡಿ, ಯಂತ್ರ ಕೊಟ್ಟು ಹಾಗೂ `ಕವಿಕಾ'ದಲ್ಲಿ ತರಬೇತಿ ಪಡೆದ ಸಿಬ್ಬಂದಿ ನೀಡಿ ಪುನಶ್ಚೇತನಗೊಳಿಸಿದ್ದೇವೆ. ಇದರಿಂದ ಉತ್ತರ ಕರ್ನಾಟಕಕ್ಕೆ ಬೇಕಾಗುವ ಟ್ರಾನ್ಸ್‌ಫಾರ್ಮರ್ ಉತ್ಪಾದನೆ ಹಾಗೂ ದುರಸ್ತಿ ಕೈಗೊಳ್ಳಲು ಸಾಧ್ಯವಾಗುತ್ತಿದೆ. ಹೀಗೆಯೇ ಇಂಧನ ಇಲಾಖೆಗೆ ಬೆಂಗಳೂರಿನಲ್ಲಿಯ ಎನ್‌ಜಿಇಎಫ್ ನೀಡಿದರೆ ಟ್ರಾನ್ಸ್‌ಫಾರ್ಮರ್ ಉತ್ಪಾದನೆ ಹಾಗೂ ದುರಸ್ತಿ ಕೈಗೊಳ್ಳುವ ಮೂಲಕ ಪುನಶ್ಚೇತನಗೊಳಿಸುತ್ತೇವೆ' ಎಂದು ಅವರು ತಿಳಿಸಿದರು.

`ರಾಜ್ಯದಲ್ಲಿರುವ ವಿವಿಧ ವಿದ್ಯುತ್ ಕೇಂದ್ರಗಳನ್ನು ಮೇಲ್ದೆರ್ಜೆಗೆ ಏರಿಸಲು ಹಾಗೂ ಇತರ ಸೌಲಭ್ಯಗಳ ಮೂಲಕ ಅವುಗಳನ್ನು  ಬಲಪಡಿಸಲು ನಾಲ್ಕು ವರ್ಷಗಳ ಅವಧಿಯಲ್ಲಿ ರೂ 14 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ' ಎಂದರು.

ನೇಮಕಾತಿ: `ಇಂಧನ ಇಲಾಖೆಗೆ 5,000 ಲೈನ್‌ಮನ್‌ಗಳ ಅಗತ್ಯವಿದೆ. ಶೀಘ್ರದಲ್ಲೇ 2,500 ಲೈನ್‌ಮನ್‌ಗಳು ನೇಮಕಗೊಳ್ಳಲಿದ್ದಾರೆ. ಇದರಲ್ಲಿ ಮಹಿಳೆಯರಿಗೂ ಆದ್ಯತೆ ನೀಡಲಾಗಿದೆ.

400 ಸಹಾಯಕ ಹಾಗೂ ಕಿರಿಯ ಎಂಜಿನಿಯರ್‌ಗಳು ಹಾಗೂ 40 ಲೆಕ್ಕಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT