ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಂದೂರಿನಲ್ಲಿ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್

Last Updated 2 ಫೆಬ್ರುವರಿ 2011, 17:50 IST
ಅಕ್ಷರ ಗಾತ್ರ


ಬೆಂಗಳೂರು: ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ 58ನೇ ರಾಷ್ಟ್ರೀಯ ಸೂಪರ್ ಲೀಗ್ ಕಬಡ್ಡಿ ಚಾಂಪಿಯನ್‌ಷಿಪ್ ಮಾರ್ಚ್ 3 ರಿಂದ 6ರ ವರೆಗೆ ನಡೆಯಲಿದೆ.

ಬೈಂದೂರಿನ ಗಾಂಧಿಮೈದಾನದಲ್ಲಿ ನಡೆಯುವ ಈ ಚಾಂಪಿಯನ್‌ಷಿಪ್‌ಗೆ ಈಗಾಗಲೆ ಭರದ ಸಿದ್ಧತೆಗಳು ಆರಂಭವಾಗಿವೆ. ಉಡುಪಿ ಜಿಲ್ಲಾ ಸಂಸ್ಥೆ ಮತ್ತು ಪೃಥ್ವಿ ಕ್ರೀಡಾ ಮತ್ತು ಯೂತ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಿಂದ ತಲಾ 16 ತಂಡಗಳು ಭಾಗವಹಿಸಲಿವೆ. ಇದಕ್ಕಾಗಿ ನಾಲ್ಕು ಹೊನಲು ಬೆಳಕಿನ ಅಂಕಣಗಳನ್ನು ಸಿದ್ದಪಡಿಸಲಾಗುವುದು. ಈ ವಿಷಯವನ್ನು ಚಾಂಪಿಯನ್‌ಷಿಪ್‌ನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಲಕ್ಷ್ಮೀನಾರಾಯಣ ಅವರು ಬುಧವಾರ ವರದಿಗಾರರಿಗೆ ತಿಳಿಸಿದರು.

 ಪಂದ್ಯಗಳು ಲೀಗ್ ಮತ್ತು ನಾಕ್‌ೌಟ್ ಮಾದರಿಯಲ್ಲಿ ನಡೆಸಲಾಗುವುದು. ಪುರುಷರ ವಿಭಾಗದಲ್ಲಿ ಪೂರ್ವ ವಲಯದಿಂದ ಭಾರತೀಯ ರೈಲ್ವೆ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ; ಉತ್ತರ ವಲಯದಿಂದ ದೆಹಲಿ, ಹರಿಯಾಣ, ಪಂಜಾಬ್, ಉತ್ತರಖಂಡ; ದಕ್ಷಿಣ ವಲಯದಿಂದ ಸರ್ವಿಸಸ್, ಹೈದರಾಬಾದ್, ತಮಿಳುನಾಡು, ಕೇರಳ; ಪಶ್ಚಿಮ ವಲಯದಿಂದ ರಾಜಾಸ್ತಾನ, ಮಹಾರಾಷ್ಟ್ರ, ಬಿ.ಎಸ್.ಎನ್. ಎಲ್., ಮಧ್ಯಪ್ರದೇಶ ಹಾಗೂ ಮಹಿಳಾ ವಿಭಾಗದಲ್ಲಿ ಪೂರ್ವ ವಲಯದಿಂದ ಭಾರತೀಯ ರೈಲ್ವೆ, ಪಶ್ಚಿಮಬಂಗಾಳ, ಬಿಹಾರ, ಮಣಿಪುರ; ಉತ್ತರ ವಲಯದಿಂದ ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ; ದಕ್ಷಿಣ ವಲಯದಿಂದ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ; ಪಶ್ಚಿಮ ವಲಯದಿಂದ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಾಸ್ತಾನ, ಗೋವಾ ತಂಡಗಳು ಭಾಗವಹಿಸಲಿವೆ.

ಈ ಚಾಂಪಿಯನ್‌ಷಿಪ್‌ನಲ್ಲಿ ಅಖಿಲ ಭಾರತ ಕಬಡ್ಡಿ ಫೆಡರೇಷನ್ ರೂಪಿಸಿದ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು.

ಗೋಷ್ಠಿಯಲ್ಲಿ ಅಖಿಲ ಭಾರತ ಕಬಡ್ಡಿ ಫೆಡರೇಷನ್‌ನ ಚೇರ್‌ಮನ್ ಎಂ. ಸೀತಾರಾಮ್, ಕರ್ನಾಟಕ ಕಬಡ್ಡಿ ಸಂಸ್ಥೆ ಅಧ್ಯಕ್ಷ ಹನುಮಂತೇಗೌಡ, ಕಾರ್ಯದರ್ಶಿ ಸೋಮಶೇಖರ್, ಚಾಂಪಿಯನ್‌ಷಿಪ್‌ನ ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ರಾಜೇಂದ್ರ ಸುವರ್ಣ, ಲಾವಣ್ಯ ಕ್ಲಬ್ ಅಧ್ಯಕ್ಷ ಗಿರೀಶ್ ಬೈಂದೂರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT