ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕೆಂಬ ಸ್ನೇಹಿತನ ಜೊತೆ ಸಾಗಿದ್ದೇ ದಾರಿ

Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕ್ರಿಕೆಟ್ ಮೇಲಿನ ಪ್ರೀತಿಯಿಂದಾಗಿ ಕತ್ತಲಾಗುವವರೆಗೂ ಗಲ್ಲಿಯಲ್ಲಿ ಬ್ಯಾಟ್ ಹಿಡಿದು ಓಡಾಡುತ್ತಿದ್ದ ಹುಡುಗ ಈಗ `ಕ್ರಿಕೆಟ್ ದೇವರು' ಆಗಿದ್ದಾರೆ. ಅದರಂತೆ ಬೈಕ್ ಮೇಲಿನ ಅತಿಯಾದ ಪ್ರೀತಿ ಹಾಗೂ ಸುತ್ತಾಡುವ ವ್ಯಾಮೋಹದಿಂದಾಗಿ ಬೆಂಗಳೂರಿನ ಹುಡುಗನೊಬ್ಬ ಹಾರ್ಲೆ ಡೆವಿಡ್ಸನ್ ಐಎನ್883 ಬೈಕ್‌ನ ಜತೆಗೆ ದೇಶವನ್ನೇ ಸುತ್ತಿ ಗೆದ್ದಿದ್ದಾರೆ. ಅವರೇ ಹೇಳುವಂತೆ `ಸುತ್ತಾಡಲು ಬೇಕಿರುವುದು ದುಬಾರಿ ಬೈಕ್‌ಗಳಲ್ಲ. ಬದಲಿಗೆ ಸುತ್ತಾಡುವ ಧೈರ್ಯ ಹಾಗೂ ಹೊಸ ಸ್ಥಳಗಳ ನೋಡುವ ತವಕ'. ಈ ಮಾತಿನ ಮೇಲೆ ನಂಬಿಕೆ ಇಟ್ಟಿರುವ ಮಿಲಿಂದ್ ಹಿರೇಮಠ ಮೂಲತಃ ವಿಜಾಪುರದವರು.

ಕಳೆದ ವರ್ಷದ ಕೊನೆಯಲ್ಲಿ ರ‌್ಯಾಂಗ್ಲರ್ ಸಿದ್ಧ ಉಡುಪು ತಯಾರಿಕಾ ಸಂಸ್ಥೆ ಆಯೋಜಿಸಿದ್ದ ಟ್ರೂ ರ‌್ಯಾಂಗ್ಲರ್ 2.0 ಆವೃತ್ತಿಗೆ ಬಂದಿದ್ದ ಸಾವಿರಾರು ಅರ್ಜಿಗಳಲ್ಲಿ ಆಯ್ಕೆಯಾದ ಹತ್ತು ಬೈಕರ್‌ಗಳಲ್ಲಿ ಮಿಲಿಂದ್ ಕೂಡ ಒಬ್ಬರು. ಅದರಂತೆ ಆ ಹತ್ತರಲ್ಲಿ ಅಂತಿಮವಾಗಿ ವಿಜೇತರಾದವರೂ ಅವರೊಬ್ಬರೇ. ಬಾಲ್ಯದಿಂದಲೂ ಬೈಕ್ ಮೇಲಿನ ಅತೀವವಾದ ಪ್ರೀತಿ ಹಾಗೂ ಸುತ್ತಾಟಗಳು ಅವರನ್ನು ಈ ಸ್ಪರ್ಧೆಯಲ್ಲಿ ಗೆಲ್ಲಿಸಿವೆ. ವಾಹನ ಹಾಗೂ ಸುತ್ತಾಟ ಮಿಲಿಂದ್‌ಗೆ ಹೊಸತೇನೂ ಆಗಿರಲಿಲ್ಲ. ತಂದೆ ಟ್ರಕ್ ವ್ಯವಹಾರ ನಡೆಸುತ್ತಿದ್ದವರು.

ಜತೆಗೆ ಅವರ ತಾಯಿಯವರೂ ಪತಿಯವರೊಂದಿಗೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರಿಂದ ಮನೆಯಲ್ಲಿ ವಾಹನಗಳ ಕುರಿತ ಮಾತು ಮಿಲಿಂದ್‌ಗೆ ಸಾಮಾನ್ಯವಾಗಿತ್ತು. ಆದರೆ ವಾಹನಗಳು ಹೊಸತಲ್ಲದಿದ್ದರೂ ಹೊಸ ಸ್ಥಳಗಳಿಗೆ ಭೇಟಿ ನೀಡುವ ಬಯಕೆ ಮಿಲಿಂದ್ ಅವರೊಳಗೆ ಕುಡಿಯೊಡೆದು ಮರವಾಗಿತ್ತು. ಇದಕ್ಕೆ ಅವರು ಕಂಡುಕೊಂಡ ಮಾರ್ಗ ಕೆಎಸ್‌ಆರ್‌ಟಿಸಿ ವಾರದ ಪಾಸ್. ನಾನೂರು ರೂಪಾಯಿ ನೀಡಿ ಪಡೆದ ಪಾಸಿನಲ್ಲಿ ಮಿಲಿಂದ್ ಕರ್ನಾಟಕದ ಕೆಲವು ಭಾಗಗಳನ್ನು ಆಗಲೇ ಸುತ್ತಿ ಬಂದಿದ್ದರು. ಹದಿನೆಂಟು ವಯಸ್ಸಿನ ಗಡಿ ದಾಟಿ ರೆಕ್ಕೆ ಬಿಚ್ಚಿದ ಮಿಲಿಂದ್ ದ್ವಿಚಕ್ರ ವಾಹನ ಚಾಲನಾ ಪರವಾನಗಿ ಪಡೆದು ಬೈಕ್ ಏರಿ ಸುತ್ತಲು ಆರಂಭಿಸಿದರು.

ಮಿಲಿಂದ್‌ಗೆ ಮೊದಲು ಜತೆಯಾಗಿದ್ದು ಹೀರೊ ಹೋಂಡಾ ಸಿಬಿಝೀ ಬೈಕ್. ಕಾರು ಎಷ್ಟೇ ಆರಾಮವಾಗಿದ್ದರೂ ದ್ವಿಚಕ್ರ ನೀಡುವ ಪುಳಕವನ್ನು ಕಾರು ನೀಡದು ಎಂದು ಬಲವಾಗಿ ನಂಬಿರುವ ಮಿಲಿಂದ್ `ಬೈಕ್‌ನಲ್ಲಿ ಸುತ್ತುವಾಗ ಪ್ರಕೃತಿ ಹಾಗೂ ನಮ್ಮ ನಡುವೆ ಬೇರಾರೂ ಇರಲಾರರು. ಅದನ್ನು ಅನುಭವಿಸಿಯೇ ತೀರಬೇಕು' ಎಂದೆನ್ನುತ್ತಾರೆ. ಮಿಲಿಂದ್ ಅವರ ಆಸೆಗಳು ಬಲಿಯುತ್ತಿದ್ದಂತೆ ಬೈಕ್‌ಗಳು ಬದಲಾಗತೊಡಗಿದವು. ಸಿಬಿಝೀ ನಂತರ ಕರಿಜ್ಮಾ, ತದನಂತರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಹೀಗೆ ಬೈಕ್‌ಗಳು ಬದಲಾದಂತೆ ನೋಡದ ಹೊಸ ಹೊಸ ಊರುಗಳತ್ತ ಅಲೆದಾಟ ಆರಂಭಿಸಿದರು. ಮಿಲಿಂದ್ ಅನುಭವ ಹೆಚ್ಚಾಗುವುದರ ಜತೆಗೆ ಬೈಕ್‌ನಲ್ಲಿ ಸುತ್ತುವ ಸಂದರ್ಭದಲ್ಲಿ ಎದುರಾಗಬಹುದಾದ ಎಲ್ಲಾ ಕಷ್ಟಕೋಟಲೆಗಳನ್ನು ಮೀರಿ ನಿಂತಿದ್ದರು. ಹಾಗೆಂದ ಮಾತ್ರಕ್ಕೆ ಮಿಲಿಂದ್ ಬೈಕನ್ನು ಯದ್ವಾತದ್ವಾ ಓಡಿಸುವ ಜಾಯಮಾನದವರಲ್ಲ.

ಹೊಸ ಕೆಲಸ ಸೇರಲು ಬೈಕ್‌ನಲ್ಲೇ ಪ್ರಯಾಣ
ಮಿಲಿಂದ್‌ಗೆ ಬೆಂಗಳೂರು ಆಗಿನ್ನೂ ಹೊಸತು. ಅಲ್ಲಿಯವರೆಗೆ ಕೆಎಸ್‌ಆರ್‌ಟಿಸಿ ಬಸ್ ಪಾಸ್ ಪಡೆದು ಸುತ್ತಿದ್ದರೂ ಬೆಂಗಳೂರು ನೋಡಿರಲಿಲ್ಲ. ಕೆಲಸ ಸಿಕ್ಕ ಖುಷಿಯಲ್ಲಿ ಬೈಕ್‌ನಲ್ಲೇ ಬೆಂಗಳೂರಿಗೆ ಹೋಗುವ ಮನಸ್ಸು ಮಾಡಿದಕ್ಕೆ ಮನೆಯವರದ್ದೇನೂ ವಿರೋಧವಿರಲಿಲ್ಲ. ಅದಾಗಾಗಲೇ ಮಿಲಿಂದ್ ಸಾಮರ್ಥ್ಯದ ಅರಿವು ಮನೆಯವರಿಗಿತ್ತು. ಜತೆಗೆ ಸುರಕ್ಷಿತ ಬೈಕ್ ಚಾಲನೆ ಮಿಲಿಂದ್ ಮಂತ್ರ ಎಂಬುದನ್ನೂ ಅವರು ದೃಢಪಡಿಸಿದ್ದರು. ಹೀಗಾಗಿ ವಿಜಾಪುರದಿಂದ ಬೆಂಗಳೂರಿನ ದಾರಿ ಹಿಡಿದು ಹೊರಟರು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ, ವಾರಾಂತ್ಯ ಇತ್ಯಾದಿಗಳೊಡನೆ ಕಳೆದುಹೋಗದ ಮಿಲಿಂದ್, ತಮ್ಮ ಬೈಕ್ ಹಾಗೂ ಸುತ್ತಾಟಕ್ಕಾಗಿ ಒಂದಿಷ್ಟು ಸಮಯ ಮೀಸಲಿಟ್ಟರು.

`ಕೆಲಸ ಎಷ್ಟೇ ಇರಲಿ, ಅದನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವುದು ನನ್ನ ಅಭ್ಯಾಸ. ಅದರಂತೆ ಬೈಕ್‌ನಲ್ಲಿ ಸುತ್ತಾಡುವ ಸಲುವಾಗಿಯೇ ಒಂದಿಷ್ಟು ಸಮಯವನ್ನು ಮೀಸಲಿಟ್ಟು, ಕಳೆದುಹೋಗುವ ಮಟ್ಟಿಗೆ ಸುತ್ತಾಡುವುದು ನನ್ನ ಖಯಾಲಿ. ಹೀಗಾಗಿ ಆಗೊಮ್ಮೆ ಈಗೊಮ್ಮೆ ಎಂಟರಿಂದ ಹತ್ತು ದಿನ ರಜೆ ಪಡೆದು ಸುತ್ತಾಡಲು ಹೋಗುತ್ತೇನೆ. ಈಗಾಗಲೇ ಕರ್ನಾಟಕ ಸೇರಿದಂತೆ ದಕ್ಷಿಣದ ತಮಿಳುನಾಡು, ಆಂಧ್ರ, ಕೇರಳ, ಪಶ್ಚಿಮದ ಗುಜರಾತ್, ರಾಜಸ್ತಾನ, ಉತ್ತರದ ಲೇಹ್, ಜಮ್ಮು ಮತ್ತು ಕಾಶ್ಮೀರ, ಪೂರ್ವದ ಪಶ್ಚಿಮ ಬಂಗಾಳದವರೆಗೂ ಸುತ್ತಾಟ ನಡೆಸಿದ್ದೇನೆ' ಎನ್ನುವ ಮಿಲಿಂದ್, ದೂರದೂರದ ಊರಿನಲ್ಲಿರುವ ತಮ್ಮ ನೆಂಟರಿಷ್ಟರ ಮನೆಗೂ ಬೈಕ್‌ನಲ್ಲೇ ಸುತ್ತಾಡುತ್ತಾರೆ. ಇಷ್ಟೇ ಏಕೆ, ಸ್ನೇಹಿತರೆಲ್ಲರೂ ಜತೆಗೂಡಿ ಊಟಕ್ಕೆಂದು ಕಾರಿನಲ್ಲಿ ಹೋದರೆ ಮಿಲಿಂದ್ ಮಾತ್ರ ತಮ್ಮ ಬೈಕ್ ಏರಿ ಕಾರಿನೊಂದಿಗೆ ಹೋಗುವಷ್ಟರ ಮಟ್ಟಿಗೆ ಬೈಕ್ ಮೇಲಿನ ಪ್ರೀತಿ ಹೆಚ್ಚಿಸಿಕೊಂಡಿದ್ದಾರೆ.

ಬೈಕ್‌ನ ನಾಡಿ ಮಿಡಿತ
`ನನ್ನ ಬೈಕ್ ನನಗೆ ಅಚ್ಚುಮೆಚ್ಚು. ಹೀಗಾಗಿ ನಾನು ಅದನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಅದರಂತೆಯೇ ನಾವು ಬೈಕ್‌ನ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡರೆ ಅದೂ ನಮ್ಮನ್ನು ಅಷ್ಟೇ ಅರ್ಥ ಮಾಡಿಕೊಂಡು ನಮ್ಮಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತದೆ. ಹೀಗಾಗಿಯೇ ನಾನು ನನ್ನ ಬೈಕ್‌ನ ಸರ್ವೀಸ್, ಟ್ಯೂನಿಂಗ್ ಸೇರಿದಂತೆ ಪ್ರತಿಯೊಂದು ಕೆಲಸವನ್ನೂ ಮಾಡಿಕೊಳ್ಳುತ್ತೇನೆ. ನನ್ನ ಹೋಂಡಾ ಸಿಬಿಆರ್250ಗೆ ಏನು ಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಜತೆಗೆ ಋತುಮಾನಕ್ಕೆ ತಕ್ಕಂತೆ ಅದರ ಅಗತ್ಯಗಳನ್ನು ಪೂರೈಸಿದರೆ, ಅದೂ ಎಂಥದ್ದೇ ಕಠಿಣ ಸವಾಲುಗಳನ್ನು ಎದುರಿಸಲು ಯೋಧನಂತೆ ಸಜ್ಜಾಗುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ನಮ್ಮ ಕೈಬಿಡದು. ಇದರ ಅನುಭವ ನನಗೆ ಟ್ರೂ ವಾಂಡರರ್ಸ್ 2.0ನಲ್ಲಿ ಆಗಿದೆ. ಬೇಸಿಗೆಯಲ್ಲಿ ನನ್ನ ಬೈಕ್‌ಗೆ ಏನು ಬೇಕು, ಚಳಿಗಾಲದಲ್ಲಿ ನನ್ನ ಬೈಕ್ ಹೇಗೆ ವರ್ತಿಸುತ್ತದೆ ಎಂಬ ಅತಿಸೂಕ್ಷ್ಮ ಸಂಗತಿಗಳೂ ನನಗೆ ತಿಳಿದಿರುವುದರಿಂದ ಬೈಕ್ ನನ್ನೊಂದಿಗೆ, ನಾನು ಬೈಕ್‌ನೊಂದಿಗೆ ಅರಿತು ಸಾಗುತ್ತಿದ್ದೇನೆ.' ಎನ್ನುತ್ತಾರೆ ಮಿಲಿಂದ್.

ಬೈಕರ್ ಆಗಲು...
ಬೈಕರ್‌ಗಳಾಗಬೇಕೆಂದರೆ ಮೊದಲು ನಮಗೊಂದು ಶಿಸ್ತು ಇರಬೇಕು. ಏಕೆಂದರೆ ಅಪಘಾತಗಳು ಹೇಳಿಕೇಳಿ ಆಗುವುದಿಲ್ಲ. ಶೇ 30ರಷ್ಟು ಅಪಘಾತಗಳು ನಮ್ಮ ತಪ್ಪಿನಿಂದಲೇ ಆಗುತ್ತವೆ. ಯಾರನ್ನೋ ನೋಡಿ ಅನುಕರಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಅದು ಸುರಕ್ಷಿತವೂ ಅಲ್ಲ. ಜತೆಗೆ ಸುತ್ತಾಡಲು ಇಂಥದ್ದೇ ಬೈಕ್ ಬೇಕು ಎಂದೇನೂ ಇಲ್ಲ. ಟಿವಿಎಸ್ ಎಕ್ಸ್‌ಎಲ್ ಎಂಬ ಮೊಪೆಡ್ ಆಗಿರಲಿ, ಸ್ಪ್ಲೆಂಡರ್ ಎಂಬ ಸಾಧಾರಣ ಬೈಕ್ ಆಗಿರಲಿ ಅಥವಾ ಹೋಂಡಾ, ಹಾರ್ಲೆಯಂಥ ದೊಡ್ಡ ಬೈಕ್‌ಗಳೇ ಆಗಿರಲಿ ಸುತ್ತಾಡುವ ಧೈರ್ಯ ಸವಾರನಲ್ಲಿರಬೇಕು. ಜತೆಗೆ ತಮ್ಮ ಬೈಕ್‌ನ ಅಗತ್ಯಗಳು ಏನೆಂಬುದನ್ನು ಮೊದಲು ಅರಿತರಬೇಕು.

ಸವಾಲುಗಳ ಅರಿವಿರಬೇಕು. ಹಾಗೆಂದ ಮಾತ್ರಕ್ಕೆ ಕೆಲವೊಂದು ಹೇಳಿಕೇಳಿ ಬಾರದು. ಚೀನಾ ಗಡಿ ಬಳಿ ಮರ್ಸಿಮಿಕ್ ಲಾ ಎಂಬ ಸ್ಥಳವಿದೆ. ಅಲ್ಲಿಂದ ಚೀನಾ ಗಡಿ ಕೇವಲ ಮೂರು ಕಿಲೋಮೀಟರ್ ಮಾತ್ರ. ಸಮುದ್ರಮಟ್ಟದಿಂದ 19 ಸಾವಿರ ಅಡಿ ಎತ್ತರವಿದ್ದ ಆ ಸ್ಥಳಕ್ಕೆ ಹೋಗಲೇಬೇಕೆಂಬ ಸಂಕಲ್ಪ ಮಾಡಿದೆ. ಪೊಲೀಸ್, ಸೇನೆ, ಗಡಿ ಯೋಧರ ಅನುಮತಿ ಪಡೆದು ಅಲ್ಲಿಗೆ ಹೋಗಬೇಕು. ಅವೆಲ್ಲವನ್ನು ಮಾಡಿ ಆ ಕಡಿದಾದ ಬೆಟ್ಟವನ್ನು ಹತ್ತಲು ಆರಂಭಿಸಿದೆ. ಅಲ್ಲಿ ರಸ್ತೆಯೇ ಇರಲಿಲ್ಲ. ಬೈಕ್ ಓಡಿಸುವುದಿರಲಿ ನಡೆದು ಹೋಗುವುದೇ ದುಸ್ತರ.

ಆದರೂ ಹಠ ಬಿಡಲಿಲ್ಲ. ಮೂರು ಬಾರಿ ಹತ್ತಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ನಾನು ನನ್ನ ಹೋಂಡಾ ಸಿಬಿಆರ್ ಇಬ್ಬರೂ ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿದ್ದೆವು. ಆದರೂ ಬೈಕನ್ನು ಮೊದಲ ಗೇರ್‌ಗೆ ಹಾಕಿಕೊಂಡು ತಳ್ಳಿಕೊಂಡೇ ಆ ಬೆಟ್ಟ ಏರಿದೆ. ಆರೋಗ್ಯ ತೀರಾ ಹದಗೆಟ್ಟಿತು. ಪುಣ್ಯಕ್ಕೆ ಅಲ್ಲೊಬ್ಬರು ಧಾರವಾಡದವರಿದ್ದರು. ಅವರು ತಕ್ಷಣ ನನಗೆ ಬಿಸಿ ಬಿಸಿ ಅನ್ನ ನೀಡಿ, ಬೆಚ್ಚನೆಯ ಹೊದಿಕೆ ಹೊದಿಸಿ ಮಲಗಿಸಿದರು. ಇಂಥ ಕಠಿಣ ಪರಿಸ್ಥಿತಿಯನ್ನೂ ಎದುರಿಸಬೇಕಾಗುತ್ತದೆ. ಆದರೆ ಮನಸ್ಸಿದ್ದಲ್ಲಿ ಮಾರ್ಗ ಎಂಬುದನ್ನು ಮರೆಯಬಾರದು' ಎಂದೆನ್ನುತ್ತಾರೆ ಅವರು.

`ನನ್ನ ಈ ಎಲ್ಲಾ ಸಾಹಸಗಳು ರ‌್ಯಾಂಗ್ಲರ್ ಟ್ರೂ ವಾಂಡರರ್ಸ್ 2.0ಗೆ ಅನುಕೂಲವಾದವು. ಕರ್ನಾಟಕ ಸುತ್ತಾಡುವ ಅವಕಾಶ ದೊರೆಯಿತು. ಜತೆಗೆ ನಿತ್ಯದ ಘಟನೆಗಳು, ಸ್ವಾರಸ್ಯಕರ ಕ್ಷಣಗಳನ್ನು ಸೆರೆಹಿಡಿದು ಬ್ಲಾಗ್‌ಗೆ ಅಪ್‌ಲೋಡ್ ಮಾಡುವ ಹೊಸ ಅನುಭವವೂ ಸಾಕಷ್ಟು ಖುಷಿ ನೀಡಿತು. ನನ್ನೊಳಗಿರುವ ಪ್ರತಿಭೆ ಅನಾವರಣಕ್ಕೂ ಇದೊಂದು ವೇದಿಕೆಯಾಯಿತು. ಜತೆಗೆ ಅದು ಬಹಳಷ್ಟು ಜನಕ್ಕೆ ಇಷ್ಟವೂ ಆಯಿತು' ಎಂದೆನ್ನುವ ಮಿಲಿಂದ್ ಬಳಿ ಸದ್ಯ ಹೋಂಡಾ ಸಿಬಿಆರ್ 250 ಬೈಕ್ ಇದೆ. ಜತೆಗೆ ಹಾರ್ಲೆ ಡೇವಿಡ್ಸನ್ ಐಎನ್ 883 ಬೈಕ್ ಕೂಡ ಅವರ ಜತೆಗೂಡಿದೆ. ಮುಂದಿನ ದಿನಗಳಲ್ಲಿ ಈಶಾನ್ಯ ರಾಜ್ಯಗಳ ಪ್ರವಾಸ ಮಾಡುವ ಉದ್ದೇಶ ಅವರದ್ದು. ಅವರೇ ಹೇಳುವಂತೆ ಎರಡು ಗಾಲಿಯ ವಾಹನ ಓಡಿಸುವುದೇ ಒಂದು ಸಾಹಸ. ಅದರಲ್ಲೂ ಸುತ್ತಾಟ ನಡೆಸುವ ಮಜವೇ ಬೇರೆ. ಬೈಕ್ ಮೇಲಿನ ಪ್ರೀತಿ ನನಗೆಂದೂ ಕಡಿಮೆಯಾಗದು. ಎಷ್ಟೇ ಒತ್ತಡವಿದ್ದರೂ ಮುಂದೆಯೂ ಬೈಕ್‌ನಲ್ಲಿನ ಸುತ್ತಾಟ ಬಿಡಲಾರೆ ಎಂಬ ಅಚಲ ನಿರ್ಧಾರ ಮಿಲಿಂದ್ ಹಿರೇಮಠ ಅವರದ್ದು.                                            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT