ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ಮೇಲೆ ಕರಾಮತ್ತು

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಧಕ್ ಧಕ್~, `ಧನಾ ಧನ್~ ಎಂಬ ತಾಳಬದ್ಧ ಹಿನ್ನಲೆ ಸಂಗೀತಕ್ಕೆ ಆತ ಬೈಕ್ ಮೇಲೆ ಕುಳಿತೇ ಡಾನ್ಸ್ ಮಾಡ್ತಾನೆ. ಮನ ಕೆರಳಿಸುವ ಸಂಗೀತ, ಮೈನವಿರೇಳಿಸುವ ನಿರೂಪಣೆಯಿಂದ ಕೆರಳುವ ಸವಾರ, ಬೈಕ್ ಹ್ಯಾಂಡಲ್ ಎತ್ತಿ ಹಿಡಿದು ನಿಂತಲ್ಲೇ `ರೊಯ್ಯೋ...~ ಎಂದು ಬೈಕ್ ಸುತ್ತಿಸುತ್ತಾ ನಿಲ್ಲುತ್ತಾನೆ. ಬಿಟ್ಟ ಕಣ್ಣು ಬಿಟ್ಟಂತೇ ನೋಡುತ್ತಿದ್ದ ಪ್ರೇಕ್ಷಕ ವರ್ಗ ಎದ್ದು ಕುಣಿಯುತ್ತದೆ. ಉಸಿರು ಬಿಗಿಹಿಡಿದು ನಿಂತವರು, ನಿಧಾನಕ್ಕೆ ಉಸಿರು ಬಿಡುತ್ತಾ ಹಾಗೇ ಆಸನಕ್ಕೆ ಒರಗುತ್ತಾರೆ. ಕ್ಷಣ ಕಾಲ ನಡೆಯುವ ಈ ಸಾಹಸ ದೃಶ್ಯ ರೋಮಾಂಚನಗೊಳಿಸುತ್ತದೆ.

ಇದು ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಶುಕ್ರವಾರದಿಂದ ಆರಂಭವಾಗಿರುವ `ಬೈಕ್ ಸ್ಟಂಟ್~ ಪ್ರದರ್ಶನದ ಒಂದು ಝಲಕ್. ಮೂರು ದಿನಗಳ ಕಾಲ ನಡೆಯುವ `ಆಟೊ ಮಾಲ್ 2011~ - ಮೇಳದ ಭಾಗವಾಗಿ `ರಿಲಿಯೋ ಕ್ವಿಕ್ ಆಟೊ ಮಾಲ್~ನವರು ಈ `ಬೈಕ್ ಸಾಹಸ~ ಆಯೋಜಿಸಿದ್ದಾರೆ.

ಮೈನವಿರೇಳಿಸುವ ಮೇಳದಲ್ಲಿ ಒಂದು ಕಡೆ ಅತಿ ಸುಂದರ ಕಾರ್‌ಗಳ ರ‌್ಯಾಂಪ್, ಇನ್ನೊಂದು ಕಡೆ ಮೈ ನವಿರೇಳಿಸುವ ಬೈಕ್ ಸ್ಟಂಟ್, ರೇಸ್, ಡಾನ್ಸ್. ಬಣ್ಣಬಣ್ಣದ ಬೆಳಕಲ್ಲಿ ರೇಸ್‌ಗಾಗಿಯೇ ನಿರ್ಮಿಸಿರುವ 500 ಮೀಟರ್ ಟ್ರಾಕ್‌ನಲ್ಲಿ ವಿಶ್ವಖ್ಯಾತಿ ಬೈಕ್ ರೈಡರ್‌ಗಳು ನವನವೀನ ಸಾಹಸ ಪ್ರದರ್ಶಿಸುತ್ತಿದ್ದಾರೆ.
 

`ಆಟೊ ಮಾಲ್~ನಲ್ಲಿ..
ಬೈಕ್ ಆಸಕ್ತ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಆಯೋಜಿಸಿರುವ ಆಟೊ ಮಾಲ್- 2011 ಮೇಳದಲ್ಲಿ ವೈವಿಧ್ಯಮಯ ಬ್ರಾಂಡೆಡ್ ಕಾರು, ಬೈಕ್, ಜೀಪ್ ಮತ್ತು ಸ್ಪೋರ್ಟ್ಸ್ ವಾಹನಗಳ ಪ್ರದರ್ಶನವಿದೆ.

`ಥಿಂಕ್ ಗ್ರೀನ್, ಡ್ರೈವ್ ಗ್ರೀನ್~ ಎಂಬ ಪರಿಕಲ್ಪನೆಯಲ್ಲಿ ಮೇಳದ ಒಂದು ವಿಭಾಗವನ್ನು ಪರಿಸರ ಸ್ನೇಹಿ ವಾಹನಗಳ ಪ್ರದರ್ಶನಕ್ಕೆ ಮೀಸಲಿಡಲಾಗಿದೆ. ಮಾಲಿನ್ಯ ನಿಯಂತ್ರಿಸುವ ಹಾಗೂ  ಇಂಧನದ ಅವಲಂಬನೆಯಿಲ್ಲದೆ ಚಲಿಸುವಂತಹ ವಾಹನಗಳನ್ನು ಪ್ರದರ್ಶಿಸಲಾಗುತ್ತಿದೆ. ಯುವಕರಲ್ಲಿ `ಪರಿಸರ ಚಳವಳಿ~ ಜಾಗೃತಿ ಮೂಡಿಸುವುದು ಈ ವಿಭಾಗದ ಉದ್ದೇಶ.

ವಾಹನಗಳಷ್ಟೇ ಅಲ್ಲ, ಅವುಗಳನ್ನು ವಿನ್ಯಾಸಗೊಳಿಸುವ ಪ್ರದರ್ಶನ ಕೂಡ ಮೇಳದಲ್ಲಿದೆ. ಈ ಮೇಳದ್ಲ್ಲಲಿ ಶ್ರೇಷ್ಠ ವಾಹನ ವಿನ್ಯಾಸಕಾರರು ನವನವೀನ ವಿನ್ಯಾಸ ಪ್ರದರ್ಶನ ನೀಡುತ್ತಿದ್ದಾರೆ. ಈ ಸಂಬಂಧ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ. ಮೆಕಾನಿಕಲ್, ಆಟೊಮೊಬೈಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.

`ಈ ಸ್ಪರ್ಧೆಯ ಜೊತೆಗೆ, ಪುರಾತನ ಮತ್ತು ಶ್ರೇಷ್ಠ ಕಾರುಗಳು ಓಟದ ಸ್ಪರ್ಧೆ ಆಯೋಜಿಸಲಾಗಿದೆ~ ಎನ್ನುತ್ತಾರೆ ಮೇಳದ ಆಯೋಜಕರು.

ಮೇಳದಲ್ಲಿ ಆಟೊ ಉದ್ಯಮದ ಉತ್ಪನ್ನಗಳ ಪ್ರದರ್ಶನದ ಜೊತೆಗೆ ಯುವ ಪದವಿಧರರಿಗಾಗಿ ಉದ್ಯೋಗ ಮೇಳವನ್ನೂ ಆಯೋಜಿಸಿದೆ. ಇಲ್ಲಿ ದೇಶದ ಪ್ರಮುಖ ಆಟೊ ಮೊಬೈಲ್ ಸಂಸ್ಥೆಗಳು ಸ್ಥಳದಲ್ಲಿಯೇ ಸಂದರ್ಶನ ನಡೆಸುತ್ತಿವೆ.


ಕ್ಲಿಫ್ ಹ್ಯಾಂಗರ್, ಏಪ್‌ಹ್ಯಾಂಗರ್, ಬರ್ನ್‌ಔಟ್, ಸೂಯಿಸೈಡ್‌ವಿಲೀಸ್... ಇದು ಮೇಳದಲ್ಲಿ ನಡೆಯುತ್ತಿರುವ ಬೈಕ್ ಸ್ಟಂಟ್‌ಗಳು. ಹಿಂದಿನ ಚಕ್ರದ ಮೇಲೆ ಬೈಕ್ ಓಡಿಸುವ ಡ್ರಾಗನ್ ರೇಸ್, ವೇದಿಕೆ ಮೇಲಿಂದ ಧುಮುಕುವ ಸಾಹಸ ಇವು ಶುಕ್ರವಾರ ನಡೆದ ಸ್ಟಂಟ್‌ಗಳು.

ಸರದಾರಜೀ ಯುವಕನೊಬ್ಬ ಹಿನ್ನೆಲೆ ಸಂಗೀತಕ್ಕೆ ಬೈಕ್ ಮೇಲೆ ನರ್ತಿಸಿದ್ದು ದಿನದ ಅಪೂರ್ವ ಸಾಹಸವಾಗಿತ್ತು. ಆತ ನರ್ತಿಸುತ್ತಲೇ ಬೈಕ್  ಸುತ್ತಿಸುತ್ತಿದ್ದ. ಬೈಕ್ ವೇಗ ಹೆಚ್ಚುತ್ತಿದ್ದಂತೆ, ಚಂಗನೆ ಬೈಕ್‌ನಿಂದ ಹೊರ ಜಿಗಿದು ನಿಂತ. ಆದರೆ ಬೈಕ್ ಮಾತ್ರ ಚಾಲಕ ರಹಿತವಾಗಿ ಸುತ್ತುತ್ತಲೇ ಇತ್ತು. ಅದನ್ನು ಕಂಡು ಹಿರಿಹಿರಿ ಹಿಗ್ಗಿದ. ಸುತ್ತುವ ಬೈಕ್‌ನಿಂದ ಜಿಗಿದವನು ಅಷ್ಟೇ ಚಾಕಚಕ್ಯತೆಯಿಂದ ಬೈಕ್ ಎದುರು ದೀರ್ಘದಂಡ ಪ್ರಣಾಮ ಮಾಡಿದ. ಈ ಇಡೀ ದೃಶ್ಯ ಪ್ರೇಕ್ಷರನ್ನು `ವಾರೆ ವ್ಹಾ~ ಎನ್ನುವಂತೆ ಮಾಡಿತು.
ಸ್ಕೂಟರ್ - ಅಂದರೆ ಅದೊಂದು `ಫ್ಯಾಮಿಲಿ ವಾಹನ~ ಎನ್ನುವ ನಂಬಿಕೆ. ಈ ಮಾತನ್ನು `ಸಾಹಸ ಮೇಳ~ ಸುಳ್ಳಾಗಿಸಿದೆ. ಸವಾರನೊಬ್ಬ ಸ್ಕೂಟರ್ ಬಳಸಿ `ವ್ಹೀಲಿಂಗ್~ ಮಾಡುತ್ತಾನೆ. ಅದೇ ಸ್ಕೂಟರ್ ಮೇಲೆ ವೃತ್ತಾಕಾರವಾಗಿ ತಿರುಗುವ ಸವಾರನಿಗೆ ಮತ್ತೊಬ್ಬ ಸಾಥ್ ನೀಡುತ್ತಾನೆ. ಈ ಪ್ರದರ್ಶನ `ರಂಗವಲ್ಲಿಯ ನಡುವೆ ನೃತ್ಯ~ ಮಾಡಿದಂತೆ ಕಾಣುತ್ತದೆ.

ಮೇಳದಲ್ಲಿ `ಸ್ಟಂಟ್ ನೋಡಿ, ಆದರೆ ಮಾಡಬೇಡಿ~ ಎಂಬ ಎಚ್ಚರಿಕೆಯ ಮಾತನ್ನು ನಿರೂಪಕರು ಆಗಾಗ್ಗೆ ಉದ್ಘೋಷಿಸುತ್ತಿರುತ್ತಾರೆ. `ಈ ಬೈಕ್ ಸವಾರರು ಪರಿಣತರಿದ್ದಾರೆ. ಅವರನ್ನು ನೀವು ಅನುಕರಿಸಬೇಡಿ~ ಎಂದು ಆಯೋಜಕ ಸುಖಬೀರ್ ಸಿಂಗ್ ಪ್ರೇಕ್ಷಕರಿಗೆ ಮನವಿ ಮಾಡುತ್ತಿರುತ್ತಾರೆ.

ಈ ಬೈಕ್ ಸಾಹಸ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯುತ್ತದೆ. ವರ್ಣರಂಜಿತ ಬೆಳಕಿನ ನಡುವೆ ಸಂಜೆ 6ರ ನಂತರ ನಡೆಯುವ `ಸಾಹಸ ಪ್ರದರ್ಶನ~ ನೋಡುವುದು ಮನಸ್ಸಿಗೆ `ಥ್ರಿಲ್~ ನೀಡುತ್ತದೆ. ಬೈಕ್‌ಪ್ರಿಯರಿಗೆ ಈ ಮೇಳ ರಸದೌತಣ ನೀಡುವುದರಲ್ಲಿ ಯಾವ ಸಂದೇಹವೂ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT