ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಗುಳವೇ ಮಂತ್ರ, ಜಬರ್ದಸ್ತ್‌ನಲ್ಲೇ ಮತ ಬೇಟೆ!

Last Updated 6 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ನಮ್‌ದೇನೂ ಇಲ್ರಿ. ಎಲ್ಲಾ ಗೌಡ್ರು ಹೇಳಿದಂಗೇರಿ. ಅವರು ಯಾರಿಗೆ ವೋಟ್‌ ಹಾಕು ಅಂತಾರ್ರಿ. ಅವರಿಗ ಹಾಕೋದ್ರಿ’.
ಬೈಲಹೊಂಗಲದ ಅರಳಿಕಟ್ಟೆ ಮೇಲೆ ರುಮಾಲು ಸುತ್ತಿಕೊಂಡು ಕುಳಿತ ವ್ಯಕ್ತಿ­ಯ ಮಾತು ಇದು. ಆತ ತನ್ನ ಹೆಸ­ರನ್ನು ಹೇಳಲು ಬಯಸಲಿಲ್ಲ. ‘ಇಲ್ಲಿ ನೀವು ಯಾರ­ನ್ನು ಕೇಳಿದರೂ ಇಷ್ಟೇ ಮಾಹಿತಿ ಸಿಗೋದು’ ಎಂದು ಪಕ್ಕದವ ಉಸುರಿದ.

ಬೆಳಗಾವಿ ಜಿಲ್ಲೆಯಲ್ಲಿ ಪಾಳೇಗಾರಿಕೆ ಸಂಸ್ಕೃತಿ ಇನ್ನೂ ಜೀವಂತವಾಗಿರುವ ಕುರುಹು ಇದು. ಇಲ್ಲಿನ ಕೆಲವು ಭಾಗ­ಗಳಲ್ಲಿ ಮತದಾರರಿಗೆ ಅವರದ್ದೇ ಎನ್ನುವ ಆಯ್ಕೆ ಈಗಲೂ ಇಲ್ಲ. ಯಾರಿಗೆ ಮತ ಚಲಾಯಿಸಬೇಕು ಎನ್ನು­ವು­­ದನ್ನು ಊರಿನ ಗೌಡರು, ದೇಸಾಯಿ­ಗಳೇ ನಿರ್ಧರಿಸು­ತ್ತಾರೆ. ಮತದಾರರು ಅದರಂತೆ ನಡೆದು­ಕೊಳ್ಳುತ್ತಾರೆ.

ಸಾಮಾನ್ಯವಾಗಿ ಚುನಾವಣೆ ಬಂದಾಗ ರಾಜಕಾರಣಿಗಳು ಮೆತ್ತ­ಗಾ­ಗುತ್ತಾರೆ. ನಯ, ವಿನಯ ರೂಢಿಸಿ­ಕೊಳ್ಳುತ್ತಾರೆ. ಕೈ ಮುಗಿದು ಮತ ಕೇಳು-ವುದು ಸಂಪ್ರದಾಯ. ಆದರೆ ಬೆಳಗಾವಿ ಜಿಲ್ಲೆಯ ಕೆಲವು ಕಡೆ ಮತ ಕೇಳುವುದು ಎಂದರೆ ಬೈಗುಳಗಳ ಸುರಿಮಳೆ. ಎಲ್ಲ ಅವಾಚ್ಯ ಶಬ್ದಗಳ ಪ್ರಯೋಗ. ಜೊತೆಗೆ ಜಬರ್‌ದಸ್ತ್ ಬೇರೆ.

ಸುಶಿಕ್ಷಿತರು ಕಿವಿ­ಯಿಂದ ಕೇಳಲು ಸಾಧ್ಯವೇ ಇಲ್ಲದ ಶಬ್ದ­ಗಳ ಪ್ರಯೋಗ ಮಾಡಿ, ‘ಈ ಸಲಾ ನಮಗ ವೋಟ್‌ ಕೊಡದಿದ್ದರ ನೋಡ್‌ ಮತ್ತ’ ಎಂಬ ಎಚ್ಚರಿಕೆಯೂ ಅಭ್ಯರ್ಥಿ ಬಾಯಿಂದ ಬರುತ್ತದೆ. ಇದು ನಡೆ­ಯು­ವುದು ಬಹಿರಂಗ ಸಭೆಯಲ್ಲಿ ಅಲ್ಲ. ಗ್ರಾಮ ಗ್ರಾಮಗಳಿಗೆ ತೆರಳಿ ಅಲ್ಲಿನ ಜನರನ್ನು ಒಂದೆಡೆ ಸೇರಿಸಿ ಮತ ಕೇಳು­ವಾಗ ಬರುವ ಮಾತಿನ ಪ್ರಯೋಗಗಳು ಇವು. ಊರ ಗೌಡನ ಮನೆಗಳಲ್ಲಿಯೂ ಇಂತಹ ಬೈಗುಳ ಭಾಷೆ ಮಾಮೂಲು.

ಈ ರೀತಿಯ ಬೈಗುಳ ಬರೀ ಮತ­ದಾ­ರರ ಮೇಲೆ ಮಾತ್ರ ಅಲ್ಲ. ಮಠಗಳ ಸ್ವಾಮೀಜಿ­ಗಳೂ ಇಂತಹ ಪ್ರಯೋಗಗಳ ಬಲಿಪಶು ಆಗುತ್ತಾರಂತೆ. ಬಹಿರಂಗ­ವಾಗಿ ಮಠಾಧೀಶರ ಕಾಲಿಗೆ ಬಿದ್ದು ಆಶೀ­ರ್ವಾದ ತೆಗೆದುಕೊಳ್ಳುವ ಮುಖಂ­ಡರು, ಏಕಾಂತದಲ್ಲಿ ಸ್ವಾಮೀಜಿಗಳಿಗೂ ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ ಎಂದು ಕೆಲವರು ತಾವು ನೋಡಿದ ಸತ್ಯವನ್ನು ಬಹಿರಂಗ ಮಾಡಿದರು.
ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಒಂದು ಸಾಮ್ರಾಜ್ಯವಿದ್ದರೆ ರಾಮದುರ್ಗ­ದಲ್ಲಿ ಮತ್ತೊಂದು ಸಾಮ್ರಾಜ್ಯವಿದೆ. ಹುಕ್ಕೇರಿ­­ಯನ್ನು ಇನ್ನೊಂದು ಮನೆತನ ಆಳುತ್ತಿದೆ. ಅಥಣಿ, ಸೌದತ್ತಿ, ನಿಪ್ಪಾಣಿ, ಬೈಲಹೊಂಗಲದ ಸ್ಥಿತಿ ಸ್ವಲ್ಪ ಪರವಾಗಿಲ್ಲ ಎನ್ನುವ ಹಾಗೆ ಇವೆ.

ಈ ಸಾಮ್ರಾಜ್ಯಗಳನ್ನು ಒಂದೊಂದು ಕುಟುಂಬಗಳು ಆಳುತ್ತಿವೆ. ಅಲ್ಲದೆ ಈ ಕುಟುಂಬ­ಗಳ ಸದಸ್ಯರು ಎಲ್ಲ ಪಕ್ಷ­ದೊಳಗೂ ಇದ್ದಾರೆ. ಒಂದು ಪಕ್ಷ ಹೋಗಿ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದರೂ ಈ ಕುಟುಂಬ ಅಧಿಕಾರದಿಂದ ವಂಚಿತ­ವಾಗುವುದಿಲ್ಲ. ಅಧಿಕಾರ ಇಲ್ಲದೇ ಹೋದರೆ ತಮ್ಮನ್ನು ಮುಗಿಸಿ–ಬಿಡಬಹುದು ಎಂಬ ಭಯ ಸದಾ ಇವರಿಗಿದೆ. ಇಲ್ಲಿ ಪಕ್ಷ ಮುಖ್ಯವಲ್ಲ. ಪಾಳೇಗಾರಿಕೆ ಕುಟುಂಬದ ಕುಡಿಗಳೇ ಮುಖ್ಯ. ಅವರಲ್ಲಿ ಉತ್ತಮ ಹೊಂದಾ­ಣಿಕೆ ಇದೆ. ಒಬ್ಬರ ಸಾಮ್ರಾಜ್ಯದೊಳಕ್ಕೆ ಇನ್ನೊ­ಬ್ಬರು ಕಾಲಿಡುವುದಿಲ್ಲ. ಪರಸ್ಪರ ಸಹಕಾರ ಕೊಡುತ್ತಾರೆ. ಇಲ್ಲಿ ಪಕ್ಷಕ್ಕಿಂತ ಜಾತಿಯೇ ಪ್ರಮುಖ. ಅವರನ್ನು ಗೆಲ್ಲಿ­ಸಲು ಇವರು, ಇವರನ್ನು ಗೆಲ್ಲಿಸಲು ಅವರು ಕೈಜೋಡಿಸುತ್ತಾರೆ.

1981ರಲ್ಲಿ ನಿಪ್ಪಾಣಿಯಲ್ಲಿ ತಂಬಾಕು ಚಳವಳಿ ನಡೆದಿದ್ದು ಬಿಟ್ಟರೆ ಜಿಲ್ಲೆಯಲ್ಲಿ ಅಂತಹ ಜನಾಂದೋಲನ­ಗಳು ಯಾವು­ದೂ ನಡೆದಿಲ್ಲ. ಕಳೆದ ಹತ್ತಾರು ವರ್ಷ­ಗಳಿಂದ ಕಳಸಾ–ಬಂಡೂರಿ ಚಳವಳಿ ನಡೆಯುತ್ತಿದ್ದರೂ ಸರ್ಕಾರ ಅದಕ್ಕೆ ಗಮನ ನೀಡುತ್ತಿಲ್ಲ. ಅತ್ಯಂತ ಅಮಾನವೀ­ಯ­ವಾದ ಸಾಲ­ಹಳ್ಳಿ ಬೆತ್ತಲೆ ಪ್ರಕರಣ, ಬೆಂಡಿ­ಗೇರಿ­ಯಲ್ಲಿ ಮಲ ತಿನ್ನಿ­ಸಿದ ಪ್ರಕ­ರಣ­ಗಳು ನಡೆದ ಈ ಜಿಲ್ಲೆ­ಯಲ್ಲಿ ಆ ಮಟ್ಟದ ಪರಿ­ಸ್ಥಿತಿ ಈಗಿಲ್ಲವಾ­ದರೂ ಪಾಳೇ­ಗಾರಿಕೆ ಇನ್ನೂ ಸಂಪೂರ್ಣ ನಾಶ­ವಾಗಿಲ್ಲ. ಮಹಾ­­ರಾಷ್ಟ್ರದ ಪೇಶ್ವೆಗಳ ಪ್ರಭಾವಕ್ಕೆ ಒಳ­ಗಾದ ಬೆಳಗಾವಿಯಲ್ಲಿ ಇನ್ನೂ ಅದರ ಕುರುಹುಗಳು ಇವೆ. ಮಹಾ­ರಾಷ್ಟ್ರ­ದಿಂದ ಪೇಶ್ವಾಯಿ ಸಂಸ್ಕೃತಿ ಬಂದ ಹಾಗೆ ಶಾಹೂ ಮಹಾರಾಜ್‌, ಅಂಬೇ­ಡ್ಕರ್‌, ಜ್ಯೋತಿಬಾ ಪುಲೆ ಅವರ ಸಂಸ್ಕೃತಿ­ಗಳು ಹರಿದುಬರಲಿಲ್ಲ ಅಥವಾ ಅದು ಉಳಿದಿಲ್ಲ.

ಮತದಾರರು ಮಾಧ್ಯಮದವರಿಗೆ ತಮ್ಮ ಹೆಸರು ಹೇಳಲು ಬಯಸು­ವು­ದಿಲ್ಲ. ಭಾವಚಿತ್ರ ತೆಗೆಯಲು ಅವ­ಕಾಶ ಕೊಡುವುದಿಲ್ಲ. ‘ಹೀಗೆಲ್ಲಾ ಮಾಡಿ­ದರೆ ನಮಗೆ ಹೊಡೀತಾರ್ರಿ’ ಎಂದು ಗುಟ್ಟು ಹೇಳಿ­ದಂತೆ ಹೇಳುತ್ತಾರೆ. ಇಲ್ಲಿ ಚುನಾ­ವಣೆ ಎಂದರೆ ಪಾಳೇಗಾರರ ಆಟ ಅಷ್ಟೆ.
ಜಿಲ್ಲೆಯಲ್ಲಿ ಪಾಳೇಗಾರಿಕೆ ಇನ್ನೂ ಜೀವಂತ­ವಾಗಿರುವುದು ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೂ ಗೊತ್ತಾ­ಗಿದೆ. ‘ಗ್ರಾಮಗಳಲ್ಲಿ ಪ್ರಚಾರಕ್ಕೆ ಹೋಗು­ವಾಗ ಗೌಡರು, ದೇಸಾಯಿ ಅವರನ್ನು ಕರೆದುಕೊಂಡೇ ಹೋಗ­ಬೇಕು. ಅವರು ಹೇಳಿದಂತೆ ಜನರು ಕೇಳುತ್ತಾರೆ’ ಎನ್ನುತ್ತಾರೆ ಅವರು.

ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಕೊರತೆ, ಶೌಚಾಲಯಗಳ ಕೊರತೆ, ಬಾಲ್ಯ ವಿವಾಹದ ಪಿಡುಗು­ಗಳೆಲ್ಲ  ಇವೆ. ಇದಕ್ಕೂ ಪಾಳೇಗಾರಿಕೆ ಸಂಸ್ಕೃತಿ ಜೀವಂತ ಇರುವುದೇ ಕಾರಣ ಎಂಬ ಅನುಮಾನ ಅವರದು. ‘ಪಾಳೇಗಾರಿಕೆಯ ಮತ್ತೊಂದು ರೂಪವೇ ಇಂದಿನ ರಾಜಕಾರಣ’ ಎಂದು ಕಳಸಾ– ಬಂಡೂರಿ ಹೋರಾಟ­ಗಾರ ವಿಜಯ ಕುಲಕರ್ಣಿ ಹೇಳುತ್ತಾರೆ. ‘ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ಗುಲಾಮರಂತೆ ಕಾಣುತ್ತಿದ್ದರು. ಈಗ ನಮ್ಮವರೇ ಜನ­ರನ್ನು ಗುಲಾಮರಂತೆ ಕಾಣು­ತ್ತಿದ್ದಾರೆ. ನಾವು ರಾಜ ಮಹಾ­ರಾಜ­ರನ್ನು ಓಡಿಸಿ­ದ್ದೇವೆ. ಬ್ರಿಟಿಷರನ್ನೂ ಓಡಿಸಿ­ದ್ದೇವೆ. ನವ ಪಾಳೇಗಾರರನ್ನೂ ಓಡಿಸುವ ಕಾಲ ಬಂದೇ ಬರುತ್ತದೆ. ಅಲ್ಲಿಯ­ವರೆಗೆ ಕಾಯಬೇಕು’ ಎಂಬ ಆಶಾ­ಭಾವನೆ­ಯನ್ನು ಅವರು ವ್ಯಕ್ತಪಡಿಸುತ್ತಾರೆ.

ಕಳಸಾ– ಬಂಡೂರಿ ಯೋಜನೆಗೆ 1960ರಲ್ಲಿಯೇ ಗುದ್ದಲಿ ಪೂಜೆ ಆಗಿದೆ. ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ. ಕರ್ನಾಟಕದ ಯಾವುದೇ ರಾಜ­ಕಾರಣಿಗೆ ಈ ಬಗ್ಗೆ ಗಮನವೇ ಇಲ್ಲ. ವಿಧಾನಸಭೆ­ಯಲ್ಲಿ ಬಹುಮತ ನೀಡಿದರೆ ಕಳಸಾ–ಬಂಡೂರಿ ಪೂರ್ಣಗೊಳಿಸು­ವು­ದು­ದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಅವರು ತಮ್ಮ ಮಾತನ್ನು ಮರೆತಿದ್ದಾರೆ ಎಂದು ಬೇಸರ ವ್ಯಕ್ತ­ಪಡಿಸುತ್ತಾರೆ.

ಜಿಲ್ಲೆಯಲ್ಲಿ ಪಾಳೇಗಾರಿಕೆ ಇದೆ. ಗೂಂಡಾ ಸಂಸ್ಕೃತಿ ಇದೆ. ಅತ್ಯಂತ ಶ್ರೀಮಂತರು ಮತ್ತು ಕಡುಬಡವರು ಇಲ್ಲಿ ಜಾಸ್ತಿ. ಮದ್ಯ, ಸಕ್ಕರೆ ಲಾಬಿ ವಿಪ­ರೀತ­. ಇವೆಲ್ಲಾ ಚುನಾ­ವಣೆಯ ಮೇಲೆ ಪರಿ­ಣಾಮ ಬೀರುತ್ತವೆ ಎಂದು ರಾಮ­ದುರ್ಗದ ವಿ.ಪಿ.­ಕುಲ­ಕರ್ಣಿ ಹೇಳುತ್ತಾರೆ.
ರಾಮದುರ್ಗದ ಸ್ಥಿತಿ ಬದಲಾಗಿದೆ ಎನ್ನು­ವುದಕ್ಕೆ ಎಡಪಂಥೀಯ ನಂಬಿಕೆ ಇಟ್ಟುಕೊಂಡಿರುವ ತಾವು ಇನ್ನೂ ಚಳವಳಿ­ಯಲ್ಲಿ ಸಕ್ರಿಯವಾಗಿರುವುದೇ ಉದಾ­ಹರಣೆ ಎಂದೂ ಅವರು ಹೇಳು­ತ್ತಾರೆ. ಗೋಕಾಕದಲ್ಲಿಯೂ ಪಾಳೇ­ಗಾ­ರಿಕೆ ಕಡಿಮೆಯಾಗುತ್ತಿದೆ. ಅಲ್ಲಿನ ಯಜ­ಮಾನರು ಹಳೆ ಪದ್ಧತಿಯನ್ನು ಬಿಡು­ತ್ತಿದ್ದಾರೆ. ಅಥಣಿಯಲ್ಲಿ ಸಕ್ಕರೆ ಲಾಬಿ ಇದೆ. ಸೌದತ್ತಿಯಲ್ಲಿ ವ್ಯಾಪಾರಿ–ಗಳು ಜೋರಾಗಿದ್ದಾರೆ ಎಂದು ಅವರು ವ್ಯಾಖ್ಯಾನಿಸುತ್ತಾರೆ.

‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭು­­ಗಳು. ಆದರೆ ಬೆಳಗಾವಿ ಜಿಲ್ಲೆ­ಯಲ್ಲಿ ಪ್ರಜೆಗಳು ಇನ್ನೂ ಪ್ರಭು–ಗಳಾ­ಗಿಲ್ಲ. ಚುನಾವಣೆಯ ಸಮಯ­ದಲ್ಲಿ­ಯಾ­ದರೂ ಅವರು ಸುಲ್ತಾನ­ರಾಗ­ಬೇಕು. ಆದರೆ ಆಗಲೂ ಅವರು ರಾಜ­ರಲ್ಲ. ಇಲ್ಲಿರುವುದು ಎರಡೇ ವರ್ಗ. ಒಂದು ಆಳುವ ವರ್ಗ. ಇನ್ನೊಂದು ಆಳಿಸಿ­­ಕೊಳ್ಳುವ ವರ್ಗ. ಶ್ರೀಮಂತರು ಮತ್ತು ಬಡವರು ಎಂಬ ಎರಡೇ ದರ್ಜೆಯ ಜನರು ಇಲ್ಲಿದ್ದಾರೆ. ಸರ್ಕಾರಿ ನೌಕರ­ರನ್ನು ಬಿಟ್ಟರೆ ಮಧ್ಯಮ ವರ್ಗ ಇಲ್ಲಿ ಕಡಿಮೆ. ಅದಕ್ಕೇ ಇಲ್ಲಿ ಪಾಳೇ­ಗಾರಿಕೆ ಇನ್ನೂ ನಡೆಯುತ್ತಿದೆ’ ಎಂದು ನಾಟಕ­ಕಾರ ಡಿ.ಎಸ್‌.ಚೌಗಲೆ ಹೇಳುತ್ತಾರೆ.

ಸಾಮಾಜಿಕ ಕಳಕಳಿಯ ನಾಯಕರ ಕೊರತೆ ಇದೆ. ಈಗಿರುವ ನಾಯಕರಿಗೆ ದೂರದೃಷ್ಟಿ ಇಲ್ಲ. ಅದಕ್ಕೇ ಇಲ್ಲಿ ಸಮಾಜವಾದವೂ ಇಲ್ಲ. ಸಾಮಾಜಿಕ ನ್ಯಾಯವೂ ಇಲ್ಲ ಎಂದು ಅವರು ವಿಷಾದಿಸುತ್ತಾರೆ.ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ­ಗಳು ಎಷ್ಟು ಬಾರಿ ಕ್ಷೇತ್ರ ಸುತ್ತಾ­ಡಿ­ದ್ದಾರೆ. ಎಷ್ಟು ಜನರಿಗೆ ಕೈಮುಗಿ­ದ್ದಿ­ದ್ದಾರೆ ಎನ್ನುವುದಕ್ಕಿಂತ, ಸಾಮ್ರಾಜ್ಯದ ಆಳ್ವಿಕೆ ನಡೆಸುವವರು ಎಷ್ಟು ಜಬರ­ದಸ್ತ್ ಮಾಡಿದ್ದಾರೆ ಎನ್ನುವುದರ ಮೇಲೆಯೇ ಸೋಲು ಗೆಲುವು ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT