ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಪಾಸ್ ರಸ್ತೆ: ಭೂಸ್ವಾಧೀನ ಬೇಡ

Last Updated 2 ಮೇ 2012, 6:35 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿಯಿಂದ ಮೋಕಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶಿತ ಬೈಪಾಸ್ ರಸ್ತೆ ನಿರ್ಮಿಸಲು ತಮ್ಮ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದು ಬೇಡ ಎಂದು ತಾಲ್ಲೂಕಿನ ಸಂಗನಕಲ್ಲು ಗ್ರಾಮದ ರೈತರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.

ಸಂಗನಕಲ್ಲು ಪಕ್ಕದಲ್ಲಿರುವ ಸಿರಿವಾರ- ಚಾಗನೂರು ಗ್ರಾಮಗಳ ನಡುವೆ ವಿಮಾನ ನಿಲ್ದಾಣ ಸ್ಥಾಪಿಸಿದಲ್ಲಿ ಬಳ್ಳಾರಿಯಿಂದ ಮೋಕಾವರೆಗೆ ಚತುಷ್ಪಥ ಬೈಪಾಸ್ ರಸ್ತೆಯ ಅಗತ್ಯವಿದೆ. ಆದರೆ, ಧಾರವಾಡದಲ್ಲಿನ ಹೈಕೋರ್ಟ್ ಸಂಚಾರಿ ಪೀಠವು ಸಿರಿವಾರ- ಚಾಗನೂರು ಗ್ರಾಮಗಳ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ತಡೆ ನೀಡಿ, ಅಧಿಸೂಚನೆಯನ್ನೇ ರದ್ದು ಮಾಡಿದೆ.

ವಿಮಾನ ನಿಲ್ದಾಣ ಸ್ಥಾಪನೆಯೇ ಜಟಿಲವಾದ ಹಿನ್ನೆಲೆಯಲ್ಲಿ ಚತುಷ್ಪಥ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಪಕ್ಕದಲ್ಲಿರುವ ರೈತರ ಜಮೀನನ್ನು ವಶಪಡಿಸಿಕೊಳ್ಳುವುದನ್ನು ಕೈಬಿಡಬೇಕು ಎಂದು ಅವರು ಕೋರಿದ್ದಾರೆ.

ಮೋಕಾ ಗ್ರಾಮದವರೆಗೆ ಈಗಾಗಲೇ ಸಂಗನಕಲ್ಲು ಗ್ರಾಮದ ನಡುವೆಯೇ ಹಾದುಹೋಗುವ 80 ಅಡಿ ರಸ್ತೆಯಿದ್ದು, ಅದಕ್ಕಿಂತ ದೊಡ್ಡ ರಸ್ತೆಯ ಅಗತ್ಯ ಈಗ ಇರುವುದಿಲ್ಲ. ಅಲ್ಲದೆ, ಈ ಜಾಗೆಯಲ್ಲಿ ರೈತರ ಫಲವತ್ತಾದ ನೀರಾವರಿ ಜಮೀನು ಇದ್ದು, ಅದನ್ನು ವಶಪಡಿಸಿಕೊಳ್ಳುವುದರಿಂದ ರೈತರಿಗೆ ಸಾಕಷ್ಟು ಹಾನಿಯಾಗುತ್ತದೆ ಎಂದು ರೈತರು ಹೇಳಿದ್ದಾರೆ.

ಇದೀಗ ವಶಪಡಿಸಿಕೊಳ್ಳಲು ಉದ್ದೇಶಿಸಿರುವ ಪ್ರತಿ ಎಕರೆ ಭೂಮಿಗೆ ಸರ್ಕಾರ ಕೇವಲ ರೂ 3.50 ಲಕ್ಷ ನಿಗದಿಪಡಿಸಿದೆ. ಆದರೆ, ಸಂಗನಕಲ್ಲು ಗ್ರಾಮದ ಜಮೀನು ಬಳ್ಳಾರಿಗೆ ಅನತಿ ದೂರದಲ್ಲೇ ಇದ್ದು, ಎಕರೆಗೆ ಕೋಟ್ಯಂತರ ರೂಪಾಯಿ ಮೌಲ್ಯ ಹೊಂದಿದೆ. ಉದ್ದೇಶಿತ ವಿಮಾನ ನಿಲ್ದಾಣಕ್ಕಾಗಿ ರೈತರಿಗೆ ರೂ 8 ಲಕ್ಷದಿಂದ ರೂ 16 ಲಕ್ಷ ನಿಗದಿ ಮಾಡಿದ್ದು, ಬೈಪಾಸ್ ರಸ್ತೆಗಾಗಿ ಕೇವಲ ರೂ 3.50 ಲಕ್ಷ ನಿಗದಿ ಮಾಡಿರುವುದು ಸರಿಯಲ್ಲ ಎಂದು ರೈತರು ದೂರಿದ್ದಾರೆ.

ಉದ್ದೇಶಿತ ರಸ್ತೆಯ ಎಡಭಾಗದಲ್ಲಿ ಬಳ್ಳಾರಿಯಿಂದ ಮೋಕಾವರೆಗೆ ಬಯಲು ಜಮೀನು ಇದ್ದು, ಅಲ್ಲೇ ಬೈಪಾಸ್ ರಸ್ತೆ ನಿರ್ಮಿಸಬಹುದಾಗಿದೆ ಎಂದೂ ಗ್ರಾಮದ ರೈತರಾದ ಜೆ.ಕೆ. ವಿಜಯಕುಮಾರ್, ದಾಸಪ್ಪ, ಮಲ್ಲಿಕಾರ್ಜುನ, ಕರಿಯಪ್ಪ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT