ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಪಾಸ್‌ಗೆ ಭೂಮಿ; ವೈಜ್ಞಾನಿಕ ಬೆಲೆಗೆ ಒತ್ತಾಯ

ಉಪ ವಿಭಾಗಾಧಿಕಾರಿ ಜತೆ ಹಿರಿಯೂರು ತಾಲ್ಲೂಕಿನ ರೈತರ ಸಭೆ
Last Updated 6 ಡಿಸೆಂಬರ್ 2013, 9:32 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯ ಹೆದ್ದಾರಿ ೧೯ಕ್ಕೆ ಪಟ್ಟಣದ ಹೊರ ಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಸ್ವಾಧೀನ ಮಾಡಿಕೊಳ್ಳುತ್ತಿರುವ ಭೂಮಿಗೆ ಸೂಕ್ತ ಬೆಲೆ ನೀಡಬೇಕು ಎಂದು ಭೂಮಿ ಕಳೆದುಕೊಳ್ಳುತ್ತಿರುವ ಹುಲಗಲಕುಂಟೆ, ಸೋಮೇರಹಳ್ಳಿ, ಆದಿವಾಲ ಫಾರಂ, ಪಟ್ರೆಹಳ್ಳಿ  ಮತ್ತಿತರ ಗ್ರಾಮಗಳ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಭೂ ಸ್ವಾಧೀನಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಗುರುವಾರ ಕರೆದಿದ್ದ ರೈತರ ಅನೌಪಚಾರಿಕ ಸಭೆಯಲ್ಲಿ ರೈತರು ಅಧಿಕಾರಿಗಳ ಎದುರು ಮನವಿ ಮಾಡಿಕೊಂಡರು.

ಬಹುತೇಕ ನಿವೇಶನ ಆಗುವ ಜಮೀನನ್ನು ವಶ ಪಡಿಸಿಕೊಳ್ಳಲು ರೈತರಿಗೆ ನೋಟಿಸ್ ನೀಡಿರುವ ಸರ್ಕಾರ ಎಕರೆಗೆ ಕನಿಷ್ಠ ₨ ೮೦ ಲಕ್ಷ ನಿಗದಿ ಮಾಡುವಂತೆ ಭಾಗದ ರೈತರು ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗುತ್ತಿರುವ ಶ್ರೀರಂಗಪಟ್ಟಣ– -ಬೀದರ್ ರಾಷ್ಟ್ರೀಯ ಹೆದ್ದಾರಿ ೧೯ಕ್ಕೆ ಪಟ್ಟಣದ ಹೊರಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಈ  ಪ್ರಕ್ರಿಯೆಯಲ್ಲಿ ರೈತರಿಗೆ ಅನ್ಯಾಯವಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಎಂಬುದು ರೈತರ ಆಗ್ರಹವಾಗಿದೆ.

ರಸ್ತೆಗಾಗಿ ಎಲ್ಲ ರೈತರ ಹೊಲಗಳಲ್ಲಿ ಸುಮಾರು ನೂರು ಮೀಟರ್ ಜಮೀನು ಹೋಗುತ್ತಿದೆ. ಇದರಿಂದ ಅಡಿಕೆ, ತೆಂಗು, ಬಾಳೆ, ಮಾವು, ದಾಳಿಂಬೆ ಮತ್ತಿತರ ತೋಟಗಾರಿಕೆ ಬೆಳೆಗಳು ನಾಶವಾಗುತ್ತವೆ. ಜತೆಗೆ ಫಲವತ್ತಾದ ಭೂಮಿ ಕೂಡ ರಸ್ತೆ ಪಾಲಾಗುತ್ತಿದೆ. ‘ರಸ್ತೆಗೆ ಬಳಸು ಭೂಮಿಗೆ ಮುಕ್ತ ಮಾರುಕಟ್ಟೆ ದರವನ್ನೇ ನೀಡಬೇಕು. ನೋಂದಣಿ ಇಲಾಖೆಯಲ್ಲಿರುವ ಎಸ್.ಆರ್.ದರಕ್ಕೆ ಪರಿಹಾರ ನಿಗದಿ ಮಾಡಿದರೆ ನಾವು ಯಾವುದೇ ಕಾರಣಕ್ಕೂ ಜಮೀನು ನೀಡುವುದಿಲ್ಲ’ ಎಂದು ರೈತರು ಎಚ್ಚರಿಸಿದ್ದಾರೆ.

ಸಣ್ಣ ರೈತರ ಬದುಕು ಕಷ್ಟ: ತರಿ ಭೂಮಿಗೆ ₨ ೬೦ ಸಾವಿರ, ಖುಷ್ಕಿಗೆ ₨ ೪೦ ಸಾವಿರ ದರವಿದ್ದು ಇದರಿಂದ ಇಂದು ಏನು ಬರುವುದಿಲ್ಲ. ಈಗ ಭೂ ಸ್ವಾಧೀನ ಪ್ರಕ್ರಿಯೆಗೆ ಒಳಗಾಗುತ್ತಿರುವ ಜಮೀನುಗಳೆಲ್ಲ ಬಹುತೇಕ ಸಣ್ಣ ರೈತರದ್ದು. ಈ ಜಮೀನು ರಸ್ತೆಗೆ ಬಳಕೆಯಾದರೆ, ಅವರೆಲ್ಲ ಭೂ ರಹಿತರಾಗುತ್ತಾರೆ. ಹಾಗಾಗಿ ಇಲ್ಲಿ ಜಮೀನು ಕಳೆದುಕೊಳ್ಳುವವರಿಗೆ ಬೇರೆ ಕಡೆ ಜಮೀನು ಖರೀದಿಸುವಷ್ಟಾದರೂ ಹಣಕಾಸಿನ ನೆರವು ದೊರೆಯಬೇಕು. ಇಲ್ಲದಿದ್ದರೆ, ಭವಿಷ್ಯದ ಬದುಕು ತೀರಾ ಕಷ್ಟವಾಗುತ್ತದೆ’ ಎಂದು ಸಭೆಯ ನಂತರ ರೈತರು ಪತ್ರಿಕೆ ಬಳಿ ನೋವು ತೋಡಿಕೊಂಡರು.

ರಸ್ತೆ ನಿರ್ಮಾಣದಿಂದ ಕೆಲವು ರೈತರದ್ದು ಪೂರ್ಣ ಜಮೀನು ಹೋಗುತ್ತದೆ. ಇನ್ನು ಕೆಲವರ ಜಮೀನಿನ ಮಧ್ಯಭಾಗದಲ್ಲಿ ರಸ್ತೆ ನಿರ್ಮಾಣವಾಗುತ್ತದೆ. ಹೀಗೆ ಜಮೀನು ಭಾಗವಾಗುವುದರಿಂದ ಬೆಳೆ ಬೆಳೆಯುವುದು ಕಷ್ಟ. ಬೆಳೆಯನ್ನು ಸಾಗಾಟ ಮಾಡುವುದು ದುಸ್ತರ. ಒಂದೆರಡು ಗುಂಟೆ ಒಂದು ಕಡೆ, ಮತ್ತೆರಡು ಗುಂಟೆ ಮತ್ತೊಂದೆಡೆಯಾದರೆ ಉಳುಮೆ ಮಾಡುವುದಾದರೂ ಹೇಗೆ ? ಎಂದು ರೈತರು ಪ್ರಶ್ನಿಸುತ್ತಾರೆ. ಇಂಥ ರೈತರಿಗೆ ಪರ್ಯಾಯ ಭೂಮಿ ನೀಡುವ ಬಗ್ಗೆಯೂ ಜಿಲ್ಲಾಡಳಿತ ಚಿಂತನೆ ಮಾಡಬೇಕೆಂದು ಅವರು ಮನವಿ ಮಾಡಿದರು.

ರೈತರನ್ನು ಅಲೆದಾಡಿಸದಿರಿ: ಭೂಮಿ ಸ್ವಾಧೀನಪಡಿಸಿಕೊಂಡ ನಂತರ, ರೈತರಿಗೆ ತಕ್ಷಣ ನ್ಯಾಯಸಮ್ಮತ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ಪರಿಹಾರ ನೀಡಲು ಮೀನಮೇಷ ಎಣಿಸಬಾರದು. ಅಲ್ಲದೆ ರೈತರು ಕಚೇರಿಗಳಿಗೆ ಅಲೆಸಬಾರದೆಂದು ರೈತರು ಎಚ್ಚರಿಸಿದರು. ಒಂದೇ ಕಂತಿನಲ್ಲಿ ಪರಿಹಾರ ಹಣವನ್ನು ನೀಡಬೇಕು. ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಸರ್ಕಾರದಿಂದ ದೊರೆಯುವ ವಿವಿಧ ಸಂತ್ರಸ್ತರ ಯೋಜನೆಗಳನ್ನು ಜಾರಿಗೆ ತಂದು ಸ್ವಾಭಿಮಾನದಿಂದ ಜೀವನ ಕಟ್ಟಿಕೊಳ್ಳುವ ವ್ಯವಸ್ಥೆ ಮಾಡಬೇಕೆಂದು ಕೋರಿದರು. ಸೋಮೇರಹಳ್ಳಿ, ಸೋಮೇರಹಳ್ಳಿ ಲಂಬಾಣಿ ತಾಂಡಾ, ಹುಲಗಲಕುಂಟೆ, ಲಕ್ಕನಾಳ್, ಆದಿವಾಲ ಗೊಲ್ಲರಹಟ್ಟಿ, ಪಟ್ರೆಹಳ್ಳಿ, ದಿಂಡಾವರ
ರಸ್ತೆಯಲ್ಲಿ ಕೆಲ ಜಮೀನುಗಳ ರೈತರು ಸಭೆಗೆ ಬಂದಿದ್ದರು.

ಚಿತ್ರದುರ್ಗ ಉಪವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ- ೪ ಮತ್ತು ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿ ರಸ್ತೆ ಜೋಡಿಸುವ ಸಂಪರ್ಕ ರಸ್ತೆ ನಿರ್ಮಾಣದ ಉದ್ದೇಶದಿಂದ ಯಾವ ಯಾವ ಜಮೀನಿನಲ್ಲಿ ಮಾರ್ಗ ಹಾದು ಹೋಗುತ್ತದೋ ಅಂಥ ರೈತರಿಗೆ ಈಗ ಸರ್ಕಾರದ ಸೂಚನೆ ಮೇರೆಗೆ ಈಗ ೪೧ ನೋಟಿಫಿಕೇಷನ್ ಮಾಡಲಾಗಿದೆ. ಈ ಸಭೆಯಲ್ಲಿ ರೈತರ ಒಪ್ಪಿಗೆ ಪಡೆಯಲಾಗುತ್ತದೆ. ಅಲ್ಲದೆ ಏನಾದರೂ ಆಕ್ಷೇಪಗಳಿದ್ದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ರೈತರಿಗೆ ಸೂಚನೆ ನೀಡಲಾಗಿದೆ. ಇದಾದ ನಂತರ ೬೧ ಅಧಿಸೂಚನೆ ಹೊರಡಿಸಿ  ನಂತರ ಪರಿಹಾರ ಎಷ್ಟು ಎಂದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ರೈತರಿಗೆ ಯಾವ ಕಾರಣದಿಂದಲೂ ಅನ್ಯಾಯವಾಗದಂತೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ. ಮಾರುಕಟ್ಟೆ ದರಕ್ಕೆ ಮೂರಷ್ಟು ಹೆಚ್ಚಿಗೆ ನೀಡಿ ಭೂವಶ ಮಾಡಿಕೊಳ್ಳಲಾಗುತ್ತದೆ. ಅದರ ಜತೆಯಲ್ಲಿ ಮತ್ತೆ ಶೇ ೩೦ರಷ್ಟನ್ನು ಸೇರಿಸಲಾಗುವುದೆಂದು ತಿಳಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಂಬಂಧಿಸಿದ ಇಲಾಖೆಗೆ ಭೂಮಿಯನ್ನು ಹಸ್ತಾಂತರ ಮಾಡಲಾಗುವುದು ಎಂದು ಉಪ ವಿಭಾಗಾಧಿಕಾರಿಗಳು ತಿಳಿಸಿದರು.

ರೈತರಾದ ಮೃತ್ಯುಂಜಯಪ್ಪ, ತೇಜುಕುಮಾರ್, ಡಿ.ರಂಗನಾಥ್, ತಿಪ್ಪೇಸ್ವಾಮಿ, ಗೋವಿಂದಪ್ಪ, ಹನುಮಂತಪ್ಪ, ಚಿತ್ತಪ್ಪ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ರೈತರಿಗೆ ಅನ್ಯಾಯವಾಗುವುದಿಲ್ಲ
ರೈತರ ಒಪ್ಪಿಗೆ ಪಡೆದೇ ಭೂ ಸ್ವಾಧೀನ ಪ್ರಕ್ರಿಯೆ ಶುರುವಾಗುತ್ತದೆ. ಈ ಸಂಬಂಧ ಪ್ರಕಟಣೆ ಹೊರಡಿಸಿ, ಆಕ್ಷೇಪಣಾ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗುವುದಿಲ್ಲ. ಈ ಬಗ್ಗೆ ರೈತರಿಗೆ ಯಾವುದೇ ಆತಂಕ ಬೇಡ.
– ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT