ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈರಮಂಗಲ ಗ್ರಾಮಗಳಲ್ಲಿ ಕುಡಿಯಲು ಶುದ್ಧ ನೀರಿಲ್ಲ!

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ಬಿಡದಿ ಹೋಬಳಿಯ ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 31 ಗ್ರಾಮಗಳ ಪೈಕಿ 24 ಗ್ರಾಮಗಳಲ್ಲಿನ ಕೊಳವೆ ಬಾವಿಗಳಲ್ಲಿ ಕುಡಿಯಲು ಯೋಗ್ಯವಾದ ನೀರಿಲ್ಲ ! ಇದರಿಂದ ಈ ಭಾಗದ ಜನತೆಯ ಗೋಳು ಹೇಳತೀರದಾಗಿದೆ.

ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ಮತ್ತು ಉದ್ಯಾನನಗರಿಯ ಜನತೆಯ ತ್ಯಾಜ್ಯವನ್ನು ಹೊತ್ತು ತರುವ ವೃಷಭಾವತಿ ನದಿಯು ಈ ಭಾಗದ ಬೈರಮಂಗಲ ಕೆರೆಯನ್ನು ಕಲುಷಿತಗೊಳಿಸಿದ ಪರಿಣಾಮ ಇಲ್ಲಿನ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.

ಈ ಗ್ರಾಮಗಳಲ್ಲಿ ಎಲ್ಲಿ ಕೊಳವೆ ಬಾವಿ ಕೊರೆಸಿದರೂ ವಿಷಕಾರಿ ನೀರು ದೊರೆಯುತ್ತದೆಯೇ ಹೊರತು ಕುಡಿಯಲು ಯೋಗ್ಯವಾದ ನೀರು ದೊರೆಯುತ್ತಿಲ್ಲ. ಹಾಗಾಗಿ ವಿಧಿಯಿಲ್ಲದೆ ಈ ಭಾಗದ ಜನತೆ ಇದೇ ರಾಸಾಯನಿಕ ನೀರನ್ನು ಸೇವಿಸಬೇಕಾದ ದುಸ್ತಿತಿ ಬಂದೆರಗಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರ ರವಾನಿಸಿರುವ ಬೈರಮಂಗಲ ಗ್ರಾಮ ಪಂಚಾಯಿತಿಯೇ ಇದನ್ನು ಒಪ್ಪಿಕೊಂಡಿದೆ. 31 ಗ್ರಾಮಗಳಲ್ಲಿನ ಏಳು ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿದ್ದು, ಉಳಿದ 24 ಗ್ರಾಮಗಳಲ್ಲಿನ ಕೊಳವೆ ಬಾವಿಗಳಲ್ಲಿ ವಿವಿಧ ರಾಸಾಯನಿಕ ಪದಾರ್ಥಗಳು ಸೇರಿಕೊಂಡಿವೆ ಎಂದು ತಿಳಿಸಿದೆ.

ರಾಸಾಯನಿಕಗಳು ಯಾವುವು? :
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಮಾದರಿಗಲನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಬಹುತೇಕ ಗ್ರಾಮಗಳಲ್ಲಿನ ಕೊಳವೆ ಬಾವಿಗಳಲ್ಲಿ ಕ್ಲೋರೈಡ್, ಸಲ್ಫೇಟ್, ಫ್ಲೋರೈಡ್, ನೈಟ್ರೇಟ್, ಐರನ್, ವಿಸರ್ಜಿತ ಪದಾರ್ಥಗಳು ಯಥೇಚ್ಛವಾಗಿವೆ ಎಂಬ ವರದಿ ಬಂದಿದೆ ಎಂದು ಪಂಚಾಯಿತಿ ತಿಳಿಸಿದೆ.

ಈ ನೀರಿನ ಸೇವನೆಯಿಂದ ಜನರಿಗೆ ಚರ್ಮ  ಕಾಯಲೆ, ಅಲರ್ಜಿ, ತುರಿಕೆ, ಅಸ್ತಮಾ, ದಮ್ಮು, ಥೈರಾಯ್ಡ, ಬೇಸಿಗೆಯಲ್ಲಿ ವಾಂತಿ, ಭೇದಿಯಂತಹ ಕಾಯಿಲೆಗಳು ಬರುತ್ತಿವೆ. 2009ರಲ್ಲಿ ವಾಂತಿ- ಭೇದಿಯಿಂದ ಒಬ್ಬ ವ್ಯಕ್ತಿ ಮೃತ ಪಟ್ಟಿರುವ ಘಟನೆಯೂ ನಡೆದಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ನೀರಿನಿಂದಾಗಿ ತೆಂಗಿನ ಮರಗಳು ರೋಗಗ್ರಸ್ತವಾಗಿವೆ. ಕಬ್ಬಿನ ಇಳುವರಿ ಕಡಿಮೆಯಾಗಿದ್ದು, ಕಬ್ಬು ರುಚಿ, ಸಿಹಿಯನ್ನು ಕಳೆದುಕೊಂಡಿದೆ. ಭತ್ತಕ್ಕೆ ಬೂದಿ ರೋಗ ಬರುತ್ತಿದೆ.

ಈ ಭಾಗದಲ್ಲಿ ಬೆಳೆಯುವ ರೇಷ್ಮೆಗೂಡನ್ನು ಕಳಪೆ ಎಂದು ಹರಾಜಿನಲ್ಲಿ ಕಡಿಮೆ ಬೆಲೆಗೆ ಕೂಗಲಾಗುತ್ತಿದೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.

ಇವುಗಳ ಜತೆಗೆ ಈ ಭಾಗದ ದನ ಕರುಗಳ ಮೇಲೂ ಈ ನೀರು ವ್ಯತಿರಿಕ್ತ ಪರಿಣಾಮ ಬೀರಿದೆ. ದನ ಕರುಗಳಿಗೆ ಹೆಚ್ಚಾಗಿ ಕಾಲು ಬಾಯಿ ರೋಗಗಳು ಕಾಣಿಸಿಕೊಳ್ಳುತ್ತಿರುತ್ತವೆ ಎಂದು ಅವರು ವಿವರ ಒದಗಿಸಿದ್ದಾರೆ. ಅಲ್ಲದೆ ಈ ಭಾಗದಲ್ಲಿನ ಕೆಲವು ಹಸುಗಳಿಗೆ ಸುಗಮವಾಗಿ ಹೆರಿಗೆ ಆಗಿಲ್ಲ ಎಂದೂ ತಿಳಿದು ಬಂದಿದೆ. ಇದರಿಂದ ಹಸುಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿರುವ ಉದಾಹರಣೆಗಳು ಇವೆ ಎಂದು ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ: ಬೈರಮಂಗಲ ಗ್ರಾಮ ಪಂಚಾಯಿತಿ ನೀಡಿರುವ ಮಾಹಿತಿ ಪ್ರಕಾರ ಬೈರಮಂಗಲ, ಕೋಡಿಹಳ್ಳಿ, ಅಂಚಿಪುರ, ಅಂಚಿಪುರ ಕಾಲೊನಿ, ಚಿಕ್ಕ ಬೈರಮಂಗಲ, ಚಿಕ್ಕಕುಂಟನಹಳ್ಳಿ, ಜನತಾ ಕಾಲೊನಿ, ಇಟ್ಟಮಡು, ತೋರೆದೊಡ್ಡಿ, ಅಬ್ಬನಕುಪ್ಪೆ, ವೃಷಭಾವತಿಪುರ, ರಾಮನಹಳ್ಳಿ, ಆಶ್ರಮದೊಡ್ಡಿ, ತಿಮ್ಮೇಗೌಡನದೊಡ್ಡಿ, ಎಂ.ಗೋಪಳ್ಳಿ, ಕೆ.ಗೋಪಳ್ಳಿ, ಚೌಕಳ್ಳಿ ಕಾಲೊನಿ, ಹೊಸೂರು, ಬನ್ನಿಗಿರಿ, ತಾಳಗುಪ್ಪೆ, ಅಂಗರಹಳ್ಳಿ, ಹೆಗ್ಗಡಗೆರೆ, ಬಾಣಂದೂರು, ಹುಚ್ಚಮ್ಮದೊಡ್ಡಿ ಗ್ರಾಮಗಳ ನೀರು ವಿವಿಧ ರಾಸಾಯನಿಕ ಪದಾರ್ಥಗಳ ಮಿಶ್ರಣವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಪಿಡಿಒ ವಿವರ ನೀಡಿದ್ದಾರೆ.

ಬಿಳ್ಳೆದೊಡ್ಡಿ, ಚೌಕಳ್ಳಿ, ಸಂಜೀವಯ್ಯನ ದೊಡ್ಡಿ, ಕೆಂಪಯ್ಯನಪಾಳ್ಯ, ಕೆಂಪಶೆಟ್ಟಿದೊಡ್ಡಿ, ಶಾನಮಂಗಲ, ವಡ್ಡರದೊಡ್ಡಿಯಲ್ಲಿನ ಕೊಳವೆ ಬಾವಿಗಳಲ್ಲಿನ ನೀರು ಸ್ವಲ್ಪ ಮಟ್ಟಿಗೆ ಕುಡಿಯಬಹುದಾಗಿದೆ ಎಂದು ವರದಿ ತಿಳಿಸಿರುವುದಾಗಿ ಪಂಚಾಯಿತಿ ಮಾಹಿತಿ ನೀಡಿದೆ.

ಕೃಷಿಯಲ್ಲಿ ಗಣನೀಯ ಕುಸಿತ: ಬೈರಮಂಗಲ ಜಲಾಶಯದಲ್ಲಿ ತುಂಬಿರುವ ಕಲುಷಿತ ನೀರಿನಿಂದ ಈ ಭಾಗದ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಅಂತರ್ಜಲ ಅಷ್ಟೇ ಅಲ್ಲ ಭೂಮಿಯ ಫಲವತ್ತತೇ ನಾಶವಾಗುತ್ತಿದೆ. ಒಂದೆಡೆ ಕುಡಿಯಲು ಯೋಗ್ಯವಲ್ಲದ ನೀರಿನಿಂದ ಜನತೆ ವಿವಿಧ ರೋಗ ರುಜಿನಗಳಿಂದ ನರಳುತ್ತಿದ್ದರೆ, ಮತ್ತೊಂದೆಡೆ ಭೂಮಿ ಫಲವತ್ತತೆ ಕುಸಿತದಿಂದ ದಿನೇ ದಿನೇ ಈ ಭಾಗದ ಜನತೆ ಕೃಷಿಯಿಂದ ವಿಮುಖರಾಗುತ್ತಿರುವುದು ಅಂಕಿ ಅಂಶಗಳಿಂದ ದೃಢವಾಗುತ್ತದೆ.

ಬೈರಮಂಗಲ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 5000 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಮೊದಲು ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು. 10ರಿಂದ 15 ವರ್ಷಗಳಲ್ಲಿ ಈ ಕೆರೆ ಎಷ್ಟು ಕಲುಷಿತವಾಗಿದೆ ಎಂದರೆ, ಈ ಭಾಗದ ಜನತೆ ಇದನ್ನು `ಆ್ಯಸಿಡ್ ಕೆರೆ~ ಎಂದೇ ಕರೆಯುತ್ತಾರೆ.

ಈ ನೀರು ಹರಿಯುವ ಮಾರ್ಗ ಹಲವೆಡೆ ಸುಟ್ಟು ಹೋದಂತೆ ಕಾಣುತ್ತದೆ. ಇನ್ನೂ ಈ ನೀರಿನಲ್ಲಿ ಕೃಷಿ ಮಾಡಿ ನಷ್ಟದ ಮೇಲೆ ನಷ್ಟವನ್ನು ಅನುಭವಿಸಿದ ರೈತರು ಕೃಷಿಯಿಂದಲೇ ದೂರು ಸರಿಯುತ್ತಿದ್ದಾರೆ.

ರಾಮನಗರ ತಾಲ್ಲೂಕು ಕೃಷಿ ಇಲಾಖೆಯ ಮಾಹಿತಿ ಪ್ರಕಾರ 2011- 12ನೇ ಸಲಿನಲ್ಲಿ ಬೈರಮಂಗಲ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೇವಲ 600 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. ತೆಂಗು, ಮಾವು, ಮುಸುಕಿನ ಜೋಳ, ಬತ್ತ, ಕಬ್ಬು, ರೇಷ್ಮೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.
 

ಕುಡಿಯುವ ನೀರಿಗೆ ಪರ್ಯಾಯ ಏನು?

ಬೆಂಗಳೂರಿನ ಜನತೆಯ ತ್ಯಾಜ್ಯ ನೀರಿನಿಂದ ತೊಂದರೆಗೆ ಒಳಗಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೈರಮಂಗಲ ಸುತ್ತಮುತ್ತಲ ಗ್ರಾಮಗಳ ಜನತೆಗೆ ಕುಡಿ ಯಲು ಕಾವೇರಿ ನೀರು ಒದಗಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ ಎಂದು ಪಂಚಾಯಿತಿ ತಿಳಿಸಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ರೂ.90 ಕೋಟಿ ವೆಚ್ಚದ ಕಾವೇರಿ ನೀರು ಯೋಜನೆ ಯ ಪ್ರಸ್ತಾವ ಸಿದ್ಧವಾಗಿದೆ.
 
ತೊರೆಕಾಡನ ಹಳ್ಳಿಯಿಂದ ಈ ಭಾಗಕ್ಕೆ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ. ಜಿ.ಪಂ ಎಂಜಿನಿಯರ್‌ಗಳು ಈ ವಿಚಾರವನ್ನು ಈಗಾ ಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಿಗೆ ತಿಳಿಸಿದ್ದಾರೆ. ಇಬ್ಬರೂ ಸಚಿವರು ಈ ಯೋಜನೆ ಕೈಗೆತ್ತಿ ಕೊಳ್ಳಲು ಸ್ಪಂದಿಸಿದ್ದು, ಪ್ರಸ್ತವವನ್ನು ಆದಷ್ಟು ಬೇಗ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT