ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈರಾಪೂರ: ಜಾನಪದ ವಿವಿಗೆ ಸ್ಥಳ ಪರಿಶೀಲನೆ

Last Updated 3 ಜನವರಿ 2011, 7:10 IST
ಅಕ್ಷರ ಗಾತ್ರ

ಗಜೇಂದ್ರಗಡ: ‘ಗ್ರಾಮೀಣ ಬದುಕಿನ ಪದ್ಧತಿಗಳು, ಎಲ್ಲ ಕಲೆ, ಭಾಷೆ, ವೇಷ-ಭೂಷಣಗಳನ್ನು ಒಳಗೊಂಡಂತೆ ಇಡೀ ಗ್ರಾಮ ಭಾರತ ನಿರ್ಮಾಣದ ಮಹತ್ತರ ಉದ್ಧೇಶವನ್ನು ಜಾನಪದ ವಿಶ್ವವಿದ್ಯಾಲಯ ಒಳಗೊಂಡಿದೆ’ ಎಂದು ಜಾನಪದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗೋ.ರು.ಚನ್ನಬಸಪ್ಪ ತಿಳಿಸಿದರು. ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಸಮೀಪದ ಬೈರಾಪೂರ ಗುಡ್ಡದಲ್ಲಿ ಭಾನುವಾರ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ‘ಜಾನಪದ ಸತ್ವ ಇರುವುದು ಈ ನಾಡಿನ ಕಾರ್ಮಿಕರು, ಶ್ರಮಜೀವಿಗಳು, ದಲಿತರು, ಶೋಷಿತರ ಬದುಕಿನಲ್ಲಿ. ಹೀಗಾಗಿ ಜಾನಪದ ವಿ.ವಿ. ಆ ಜನರ ಬದುಕು, ಅಧ್ಯಯನ, ಪ್ರಚಾರ, ಸಂಶೋಧನೆಯನ್ನು ಕೇಂದ್ರಿಕೃತಗೊಂಡಿರುತ್ತದೆ’ ಎಂದು ಅವರು ಹೇಳಿದರು.

‘ಜಾನಪದ ವಿ.ವಿ. ಸ್ಥಾಪನೆ ಜಗತ್ತಿನಲ್ಲಿ ಪ್ರಥಮವಾಗಿದ್ದು, ಇಂಥ ವಿಶಿಷ್ಟ ಯೋಜನೆಯನ್ನು ಒಪ್ಪಿಕೊಂಡಿರುವ ರಾಜ್ಯ ಸರ್ಕಾರದ ಕ್ರಮ ಅತ್ಯಂತ ಶ್ಲಾಘನೀಯ. ಇಂದು ಜನರಿಗೆ ಆಧುನಿಕತೆ ಸಾಕಾಗಿ ಹೋಗಿದೆ. ಅವರೆಲ್ಲ ಮತ್ತೆ ಹಿಂದಿನ ನಮ್ಮ ಸಂಸ್ಕೃತಿ, ಪರಂಪರೆ, ಆಹಾರ, ವೇಷ-ಭೂಷಣಗಳತ್ತ ಆಸಕ್ತಿ ಬೆಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಡೀ ಗ್ರಾಮ ಭಾರತದ ದರ್ಶನ ಮಾಡಿಸುವ ವಿಭಿನ್ನ ವಿ.ವಿ. ಸ್ಥಾಪನೆಯ ಗುರಿ ನಮ್ಮೆಲ್ಲರ ಮುಂದಿದೆ’ ಎಂದು ತಿಳಿಸಿದರು.

‘ಬೈರಾಪೂರ ಗ್ರಾಮವು ತನ್ನ ಗರ್ಭದಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡಿರುವ ಅದ್ಭುತ ಸ್ಥಳವಾಗಿದೆ. ಜಾನಪದ ವಿ.ವಿ. ಸ್ಥಾಪನೆಗೆ ರಾಜ್ಯದ ಬೇರೆ ಬೇರೆ ಕಡೆಗಳ ಜನರು ಆಪೇಕ್ಷೆ ವ್ಯಕ್ತಪಡಿಸಿದ್ದು, ಶನಿವಾರ ಹಾವೇರಿ ಜಿಲ್ಲೆ ಮತ್ತು ಭಾನುವಾರ ಗದಗ ಜಿಲ್ಲೆಯ ಪಾಪನಾಶಿ, ಬಿಂಕದಕಟ್ಟಿ, ನಾಗಾವಿ ಯಲ್ಲಿಸ್ಥಳ ಪರಿಶೀಲನೆ ಮಾಡಲಾಗಿದೆ. ಶಾಸಕ ಕಳಕಪ್ಪ ಬಂಡಿ ಅವರು ಇಲ್ಲಿಗೆ ಆಹ್ವಾನಿಸಿದ್ದರಿಂದ ಬೈರಾಪೂರ ಗುಡ್ಡವನ್ನು ಪರಿಶೀಲಿಸಲಾಯಿತು’ ಎಂದು ಅವರು ನುಡಿದರು.

ಜಾನಪದ ವಿದ್ವಾಂಸ ಡಾ. ಅಂಬಳಕೆ ಹಿರಿಯಣ್ಣ ಮಾತನಾಡಿ, ‘ಜಾನಪದ ವಿ.ವಿ.ಯನ್ನು ಮಧ್ಯ ಕರ್ನಾಟಕದಲ್ಲಿ ಸ್ಥಾಪನೆ ಮಾಡಬೇಕೆಂದು ನಿರ್ಧರಿಸಲಾಗಿದೆ. ಇದಕ್ಕೆ ಅರಣ್ಯ ಮತ್ತು ಸಮಸ್ಯೆ ಮುಕ್ತವಾಗಿರುವ 500ಎಕರೆ ಭೂಮಿ ಬೇಕಿದ್ದು, ಅಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಇರಬೇಕು. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಜಾನಪದ ವಿದ್ವಾಂಸರು, ಕಲಾವಿದರು ಭೇಟಿ ಕೊಡುವುದರಿಂದ ರೈಲು, ವಿಮಾನ ನಿಲ್ದಾಣಗಳು ಹತ್ತಿರ ಇರುವ ಸ್ಥಳಗಳು ಹೆಚ್ಚು ಅನುಕೂಲವಾಗುತ್ತದೆ’ ಎಂದರು.

ಡಾ.ಮಲ್ಲಶೆಟ್ಟಿ ಮಾತನಾಡಿ,  ಜಾನಪದ ವಿ.ವಿ. ಯಲ್ಲಿ ವಿದ್ವಾಂಸರಿಗಿಂತ ಕಲಾವಿದರಿಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು ಎಂದರು. ಸಿ.ವೀರಣ್ಣ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ, ಡಾ.ರಾಮು ಮೂಲಗಿ, ಶ್ರೀಶೈಲ ಹುದ್ದಾರ,  ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎ.ಬಿ.ಹಿರೇಮಠ, ಉಪನ್ಯಾಸಕ ಬಿ.ಎ.ಕೆಂಚರಡ್ಡಿ, ಬಿ.ಎಂ. ಸಜ್ಜನರ, ರವಿತೇಜ ಅಬ್ಬಿಗೇರಿ, ಶಂಕ್ರಣ್ಣ ಸಂಕನವರ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT