ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಸಾಖಿಯಲ್ಲಿ ಪಂಜಾಬಿ ಸ್ವಾದ

Last Updated 20 ಜೂನ್ 2012, 19:30 IST
ಅಕ್ಷರ ಗಾತ್ರ

ಆ ರೆಸ್ಟೋರೆಂಟ್‌ನಲ್ಲಿ ಆಲೂಗೆಡ್ಡೆ ಬೇಯಿಸಿದ ವಾಸನೆ ಮೂಗಿಗೆ ತಾಗುತಲಿತ್ತು. ಮಾಣಿಯೊಬ್ಬ ಎರಡೂ ಕೈಗಳಲ್ಲಿ ತಟ್ಟೆ ಹಿಡಿದುಕೊಂಡು ಬಂದ. ಒಂದರಲ್ಲಿ ಅಮೃತಸರಿ ಕುಲ್ಚಾ ಮತ್ತೊಂದು ತಟ್ಟೆಯಲ್ಲಿ ದಾಲ್ ಮಖಾನಿ.

ಆರ್ಡರ್ ಮಾಡಿದ ಆ ದಂಪತಿ ಪಕ್ಕಾ ಬೆಂಗಳೂರಿಗರು. ಆದರೂ ಉತ್ತರಭಾರತೀಯ ಊಟದ ರುಚಿ ಸವಿಯಲು ಬಂದಿದ್ದರು.ಬೈಸಾಖಿ ರೆಸ್ಟೋರೆಂಟ್‌ಗೆ ಬಂದಿದ್ದ ಆ ದಂಪತಿ ಪಂಜಾಬಿ ರುಚಿ ನೋಡುವ ಕಾತರದಲ್ಲಿದ್ದರು.

ಮಾಣಿ ತಂದಿಟ್ಟ ಅಮೃತಸರಿ ಕುಲ್ಚಾ ರುಚಿ ನೋಡಿ ಮುಖವರಳಿಸಿದ ಯುವಕ ಹೆಂಡತಿಗೆ ಹೇಳಿದ `ನಾನು ಹೋಳಿಗೆ ಅಂದುಕೊಂಡೆ ಆದರೆ ಇದು ಸ್ಪೈಸಿಯಾಗಿದೆ ಇಷ್ಟವಾಯ್ತು~ ಎಂದು ಉಳಿದ ಪೂರ್ತಿ ಕುಲ್ಚಾ ತಿಂದು ಮುಗಿಸಿಬಿಟ್ಟರು.

ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿರುವ `ಬೈಸಾಖಿ~ ವೆಜ್ ರೆಸ್ಟೋರೆಂಟ್‌ಗೆ ಪಂಜಾಬಿ ರುಚಿ ನೋಡಲು ನಗರದ ಅನೇಕ ಮಂದಿ ಬರುತ್ತಾರೆ. “ಇಲ್ಲಿಗೆ ಬರುವ ಬಹುತೇಕರು `ನಿಂಬು ಕಾ ಶಿಕಂಜಿ~ (ಶರಬತ್ತು), `ಬೇಬಿ ಕಾರ್ನ್ ಸಾಟೆ~, `ಚಿಲ್ಲಿ ನಾನ್~, ಅಮೃತ್‌ಸರಿ ಕುಲ್ಚಾ~  ಇಷ್ಟ ಪಡುತ್ತಾರೆ ಎಂಬುದು ಸರ್ವರ್ ಹರೀಶ್ ಅವರ ಅನುಭವದ ಮಾತಾಗಿತ್ತು.

ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ, ಮೆಣಸಿನಕಾಯಿ, ಧನಿಯಾ, ಕೋವಾ ಹಾಗೂ ಪನ್ನೀರ್ ಮಿಶ್ರಣವನ್ನು ಬಾಣಲೆಯಲ್ಲಿ ಹದವಾಗಿ ಹುರಿಯಬೇಕು. ನಂತರ ಅದನ್ನು ದೊಡ್ಡ ಗೋಲಿಯಾಕಾರದಲ್ಲಿ ಮಾಡಿ ಇಟ್ಟುಕೊಳ್ಳಬೇಕು. (ಕೋಫ್ತಾ). ನಂತರ ಬೆಳ್ಳುಳ್ಳಿ, ಹಸಿ ಶುಂಠಿ, ಈರುಳ್ಳಿ ಚೂರು, ಮಸಾಲೆ ಹಾಗೂ ಕೋವಾವನ್ನು  ಸೂರ್ಯಕಾಂತಿ ಎಣ್ಣೆಯಲ್ಲಿ ಹುರಿಯಬೇಕು.

ನಂತರ ಅದಕ್ಕೆ ಟೊಮೆಟೊ ರಸವನ್ನು ಹಾಕಿ ಸ್ವಲ್ವ ಹುಳಿ ಹಾಗೂ ಸ್ವಲ್ಪ ಸ್ಪೈಸಿಯಾದ ರುಚಿ ಇರುವಂತೆ ಸೂಪ್ ರೀತಿ ಕುದಿಸಬೇಕು. ನಂತರ ಉಂಡೆಯಾಕಾರ ಮಾಡಿಟ್ಟುಕೊಂಡ ಕೋಫ್ತಾವನ್ನು ಹಾಕಬೇಕು ಅಂತಿಮವಾಗಿ `ಹರಾ ಧನಿಯಾ ಕೋಫ್ತಾ~ ಸಿದ್ಧವಾಗುತ್ತದೆ. ಇದು ಪಂಜಾಬಿ ಜನರಿಗೆ ಇಷ್ಟದ ಮೈನ್ ಕೋರ್ಸ್ ಎಂದು ವಿವರಣೆ ನೀಡುತ್ತಾರೆ ಬಾಣಸಿಗ ಬಿಕಾಸ್ ಮೊಹಲಿಕ್.

ಜೊತೆಗೆ ಮೈದಾಹಿಟ್ಟಿನಿಂದ ಮಾಡಿದ ಚಪಾತಿಗೆ ಕೋವಾ, ಕ್ಯಾರೇಟ್, ಒಣದ್ರಾಕ್ಷಿ ಹಾಗೂ ಸಕ್ಕರೆ ಹಾಕಿ ಮಾಡಿದ `ಕಾಂದಾರಿ ನಾನ್~ ಖಾದ್ಯವಂತೂ ಇಲ್ಲಿನ ಮಕ್ಕಳಿಗೆ ಹೆಚ್ಚು ಅಚ್ಚುಮೆಚ್ಚು ಎಂಬುದನ್ನು ಹೇಳಲು ಆ ಬಾಣಸಿಗ ಮರೆಯಲಿಲ್ಲ. ಮೂಲತಃ ಪಂಜಾಬ್‌ನವರೇ ಆದ ಬಿಕಾಸ್ ಅಲ್ಲಿನ ರುಚಿಯನ್ನು ಒಂದಿಷ್ಟು ಕಡಿಮೆ ಮಾಡದೆ ಅಡುಗೆ ಸಿದ್ಧಮಾಡುತ್ತಾರೆ.

ಹದಿನಾಲ್ಕು ವರ್ಷಗಳ ಹಿಂದೆ ಜಿ.ಎಸ್.ಬಿಂದ್ರಾ ಅವರು ಪಂಜಾಬ್‌ನಿಂದ ಬೆಂಗಳೂರಿಗೆ ಬಂದು ನೆಲೆಸಿದರು. ಆಗ ಆರಂಭಿಸಿದ್ದು ಕನಕಪುರ ರಸ್ತೆಯಲ್ಲಿರುವ `ಹಾಲಿಡೇ ವಿಲೇಜ್~ ರೆಸಾರ್ಟ್. ನಂತರ ಈ ರೆಸಾರ್ಟ್‌ಅನ್ನು ಬಿಂದ್ರಾ ಅವರ ಮಗ ಅಜಿತ್ ಬಿಂದ್ರಾ ನಡೆಸಿಕೊಂಡು ಬರುತ್ತಿದ್ದಾರೆ. 

ಪಂಜಾಬ್‌ನಲ್ಲಿ ಪ್ರತಿ ವರ್ಷ ಏಪ್ರಿಲ್ 13ರಂದು ಬೈಸಾಖಿ ಹಬ್ಬ ಆಚರಿಸುತ್ತಾರೆ. ಈ ಹಬ್ಬ ಇಲ್ಲಿನ ಮಂದಿಗೆ ಹೊಸ ವರ್ಷಾಚರಣೆ ಇದ್ದಂತೆ, ಹಾಗಾಗಿ ಈ ರೆಸ್ಟೋರೆಂಟ್‌ಗೆ `ಬೈಸಾಖಿ~ ಎಂಬ ಹೆಸರು ಇಡಲಾಗಿದೆ ಎನ್ನುತ್ತಾರೆ ಮಾಲೀಕ ಅಜಿತ್ ಬಿಂದ್ರಾ. ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿ (ಸಂಗೀತಾ ಮೊಬೈಲ್ಸ್ ಶಾಪ್ ಎದುರು) 2009ರಲ್ಲಿ `ಬೈಸಾಖಿ~ ಆರಂಭಿಸಲಾಯಿತು.

ದಕ್ಷಿಣ ಭಾರತದ ಮಂದಿಯೂ ಹೆಚ್ಚಾಗಿ ಪಂಜಾಬಿ ಆಹಾರ ಇಷ್ಟಪಡುತ್ತಾರೆ. ಹಾಗಾಗಿ ಪಂಜಾಬಿ ಮೆನು ಮತ್ತು ಸ್ಪೈಸಿ ಮೆನು ಎಂಬುದಾಗಿ ಪಂಜಾಬಿ ಆಹಾರವನ್ನು ಎರಡು ವಿಧದಲ್ಲಿ ಬೇರ್ಪಡಿಸುತ್ತೇವೆ. ಸ್ವಲ್ಪ ಖಾರ ಹಾಗೂ ಮಸಾಲೆ ಹೆಚ್ಚಾಗಿ ಹಾಕಲಾಗುತ್ತದೆ ಎಂದು ಬಿಂದ್ರಾ ಹೇಳುತ್ತಾರೆ.

ಮಧ್ಯಾಹ್ನ 12ರಿಂದ 4 ಹಾಗೂ ಸಂಜೆ 7ರಿಂದ 11ರವರೆಗೆ ರೆಸ್ಟೋರೆಂಟ್ ತೆರೆದಿರುತ್ತದೆ. ಕೆಟರಿಂಗ್ ಸೌಲಭ್ಯವೂ ಇಲ್ಲಿದೆ. ಮಾಹಿತಿಗೆ: 92430 39999, 6533 9999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT