ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಂಬಾಟ್ ಬಾಲಿವುಡ್

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ವಿದ್ಯಾ ಕುಣಿಯುವಳೆಂದರೆ...

`ದಿ ಡರ್ಟಿ ಪಿಕ್ಚರ್~ ಸಿನಿಮಾ ಯಶಸ್ವಿಯಾಗುತ್ತಿದ್ದಂತೆಯೇ ವಿದ್ಯಾ ಬಾಲನ್ ಇಮೇಜ್ ಬದಲಾಯಿತು. ಬಾಲಿವುಡ್‌ನಲ್ಲಿ ಆಕೆಗೆ ಬೇಡಿಕೆ  ಒಮ್ಮಿಂದೊಮ್ಮೆಗೆ ಹೆಚ್ಚಾಯಿತು. ಸಿನಿಮಾ ಸಮಾರಂಭಗಳಲ್ಲಿ ಆಕೆಯ ಒಂದಾದರೂ ನೃತ್ಯ ಇರಲೇಬೇಕೆಂಬ ಒತ್ತಾಯ ಶುರುವಾಗಿದೆ. ಈಚೆಗಂತೂ ಪ್ರಶಸ್ತಿ ಪ್ರದಾನ ಸಮಾರಂಭಗಳ ಅಬ್ಬರ ಜಾಸ್ತಿಯಾಗಿದೆ.
 
ಆ ಸಮಾರಂಭಗಳಲ್ಲಿ ಸ್ಟಾರ್‌ಗಳ ಡಾನ್ಸ್ ಕಾರ್ಯಕ್ರಮಗಳು ಇರುವುದು ಗೊತ್ತೇ ಇದೆ. ವಿದ್ಯಾ ಮಾಡುವ ಡಾನ್ಸ್‌ಗೆ ಉಳಿದೆಲ್ಲಾ ಸ್ಟಾರ್‌ಗಳ ಡಾನ್ಸ್‌ಗಳಿಗಿಂತ ಬೇಡಿಕೆ ಹೆಚ್ಚಾಗಿದೆ. ಅವರ ಒಂದು ಡಾನ್ಸ್‌ಗೆ 50ರಿಂದ 75 ಲಕ್ಷ ಕೊಡಲೂ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಗಳು ಸಿದ್ಧವಾಗಿವೆ.

ಇದುವರೆಗೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕೇವಲ ಅತಿಥಿಯಾಗಿ ಬಂದು ಅಥವಾ ಪ್ರಶಸ್ತಿ ಪಡೆದು ಹಿಂತಿರುಗುತ್ತಿದ್ದ ವಿದ್ಯಾ ಇದೀಗ ಸಮಾರಂಭದ ಗ್ಲಾಮರ್ ಹೆಚ್ಚಿಸುವ ಸ್ಟಾರ್ ಎನಿಸಿಕೊಳ್ಳುತ್ತಿದ್ದಾರೆ. ಕರೀನಾ ಕಪೂರ್, ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ನೃತ್ಯಗಳಿಗೆ ಇರುವಷ್ಟೇ ಅಥವಾ ಅದಕ್ಕಿಂತ ಹೆಚ್ಚು ವಿದ್ಯಾ ಬಾಲನ್ ಹಾಡು ಮತ್ತು ನರ್ತನಕ್ಕೆ ಸಂಭಾವನೆ ನೀಡುವುದಾಗಿ ಕಂಪೆನಿಗಳು ಸ್ಪರ್ಧೆಗೆ ಒಡ್ಡಿಕೊಂಡಿವೆ. ಅದರಲ್ಲೂ `ದಿ ಡರ್ಟಿ ಪಿಕ್ಚರ್~ನ `ಊ..ಲಾಲ..~ ಹಾಡಿನ ನರ್ತನವನ್ನೇ ಮಾಡಬೇಕೆಂದೂ ಪಟ್ಟು ಹಿಡಿಯುತ್ತಿವೆ.

`ಡಾನ್-2~ ಅಬ್ಬರ

`ರಾ.ಒನ್~ ಸಿನಿಮಾ ಪ್ರೇಕ್ಷಕರನ್ನು  ಸೆಳೆಯುವಲ್ಲಿ ವಿಫಲವಾದದ್ದರಿಂದ ನೊಂದುಕೊಂಡಿದ್ದ ಶಾರುಖ್ ಖಾನ್ ಮುಖದಲ್ಲಿ ಮತ್ತೆ ಮಿಂಚಿನ ಹೊಳಪು ಮೂಡಿದೆ. ಅದಕ್ಕೆ ಕಾರಣ `ಡಾನ್-2~. ಸೋಲಿನಿಂದ ಬೇಸತ್ತಿದ್ದ ಶಾರುಖ್ `ಡಾನ್-2~ ಚಿತ್ರದ ಪ್ರಚಾರ ಕಾರ್ಯದಲ್ಲಿ ಸರಿಯಾಗಿ ಭಾಗವಹಿಸಿರಲಿಲ್ಲ. ಆದರೂ ಸಿನಿಮಾಗೆ ಸಿಕ್ಕ ಭರ್ಜರಿ ಯಶಸ್ಸು ಶಾರುಕ್ ಮತ್ತೆ ಕನಸು ಕಾಣುವಂತೆ ಮಾಡಿದೆ.

ಉತ್ತರ ಅಮೆರಿಕದಲ್ಲಿ 2011ರಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಪಡೆದ ಸಿನಿಮಾ `ಡಾನ್-2~. ಅಲ್ಲಿ 3.3 ಮಿಲಿಯನ್ ಡಾಲರ್ ಹಣ ಮಾಡಿರುವ `ಡಾನ್-2~, `ಜಿಂದಗಿ ನಾ ಮಿಲೇಗಿ ದುಬಾರಾ~ ಸಿನಿಮಾದ ಕಲೆಕ್ಷನ್ ಅನ್ನು ಮೀರಿಸಿದೆ. `ಜಿಂದಗಿ ನಾ ಮಿಲೇಗಿ ದುಬಾರಾ~ 3 ಮಿಲಿಯನ್ ಡಾಲರ್ ಹಣ ಗಳಿಸಿತ್ತು. ಅಮೆರಿಕದಲ್ಲಿ `ಡಾನ್-2~ ಮೊದಲ ವಾರದ ಕಲೆಕ್ಷನ್ 2.64 ಮಿಲಿಯನ್ ಡಾಲರ್. ಭಾರತೀಯ ಸಿನಿಮಾಗೆ ಇಷ್ಟು ಕಲೆಕ್ಷನ್ ಸಿಕ್ಕಿರುವುದು ಹಾಲಿವುಡ್ ಮಂದಿಯನ್ನೂ ಅಚ್ಚರಿಗೆ ದೂಡಿದೆ.

ಇದರೊಂದಿಗೆ ಲಂಡನ್‌ನಲ್ಲಿ ಮೊದಲ ವಾರ ಒಂದು ಮಿಲಿಯನ್ ಮೊತ್ತ ಬಾಚಿಕೊಂಡಿದೆ `ಡಾನ್-2~. ಜೊತೆಗೆ ಭಾರತದಲ್ಲಿ ಇದರ ಕಲೆಕ್ಷನ್ ಮೊತ್ತ ನೂರು ಕೋಟಿ ರೂಪಾಯಿ ತಲುಪುತ್ತಿದೆ. `ಜಿಂದಗಿ ನಾ ಮಿಲೇಗಿ ದುಬಾರಾ~ ಸಿನಿಮಾವನ್ನು ನಿರ್ಮಿಸಿ, ನಟಿಸಿದ್ದ ಮತ್ತು `ಡಾನ್-2~ ಸಿನಿಮಾವನ್ನು ನಿರ್ದೇಶಿಸಿದ್ದ ಫರ‌್ಹಾನ್ ಅಖ್ತರ್ ಸದ್ಯಕ್ಕೆ ಹಾಲಿವುಡ್ ಜನರ ಬಾಯಲ್ಲಿ ಇರುವ ಹೆಸರು.

ಸಾರಾ ಸಿನಿಮಾಗೆ ಬರುವರೇ?

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಮಗಳು ಸಾರಾ ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದಿದ್ದಾಳೆ.  `ಹಲೋ~ ಪತ್ರಿಕೆಯ ಮುಖಪುಟದಲ್ಲಿ ಅಮ್ಮನೊಂದಿಗೆ ಕಾಣಿಸಿಕೊಂಡಿರುವ ಸಾರಾಳನ್ನು, `ಇದು ಬಾಲಿವುಡ್‌ಗೆ ಅಡಿ ಇಡುವ ತಯಾರಿಯೇ?~ ಎಂದು ಕೇಳಿದರೆ, ಉತ್ತರ ನೀಡುವ ಅವಕಾಶವನ್ನು ಅಮ್ಮನಿಗೆ ಬಿಡಬೇಕೆ?

`ಇದು ಸಹಜ ಪ್ರಶ್ನೆ. ಸಾರಾಗೆ ಇದೀಗ 16 ವರ್ಷ ವಯಸ್ಸು. ಆಕೆಗೆ ವೈದ್ಯಳಾಗಬೇಕೆಂಬ ಕನಸಿದೆ. ಇನ್ನೆರಡು ವರ್ಷದಲ್ಲಿ ಆಕೆಯ ಭವಿಷ್ಯ ನಿರ್ಧಾರವಾಗಲಿದೆ. ಅದನ್ನು ಅವಳೇ ನಿರ್ಧರಿಸಬೇಕು. ನಾನು ಕೆಲವು ಸಲಹೆ ನೀಡಬಹುದಷ್ಟೇ. ತನ್ನ ವೃತ್ತಿ ಬದುಕನ್ನು ಆರಿಸಿಕೊಳ್ಳುವಲ್ಲಿ ಸಾರಾಗೆ ಇವು ಕಷ್ಟದ ದಿನಗಳು~ ಎಂದಿರುವ ಅಮೃತಾ ತಮ್ಮ ಮಗಳು ಎಂಥದೇ ವೃತ್ತಿ ಆರಿಸಿಕೊಂಡರೂ ಬೆಂಬಲ ಇರುವುದಾಗಿ ಹೇಳಿದ್ದಾರೆ. `ಸಾರಾ ನಿರ್ಧಾರದ ಹಿಂದೆ ಸೈಫ್ ಇಲ್ಲವೇ?~ ಎಂದರೆ ಮಗಳಂತೆಯೇ ಮೌನ ತಾಳುತ್ತಾರೆ ಅಮೃತಾ.
 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT