ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಕ್ಕಸಕ್ಕೆ ನಷ್ಟವಿಲ್ಲ: ಇಸ್ರೊ

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ ಐಎಎನ್‌ಎಸ್): ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ಘಟಕವಾದ ಅಂತರಿಕ್ಷ್ ಹಾಗೂ ದೇವಾಸ್ ಮಲ್ಟಿಮೀಡಿಯಾ ಎಂಬ ಖಾಸಗಿ ಕಂಪೆನಿ ನಡುವೆ ಏರ್ಪಟ್ಟಿದ್ದ ಎಸ್-ಬ್ಯಾಂಡ್ ತರಂಗಾಂತರ ನೀಡಿಕೆ ಒಪ್ಪಂದದ ರದ್ದತಿ ಪ್ರಕ್ರಿಯೆಗೆ  ಕಳೆದ ವರ್ಷವೇ ಚಾಲನೆ ನೀಡಲಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿಲ್ಲ ಎಂದು ಇಸ್ರೊ ಮುಖ್ಯಸ್ಥ ಕೆ.ರಾಧಾಕೃಷ್ಣನ್ ಹೇಳಿದ್ದಾರೆ.

ಒಪ್ಪಂದ ರದ್ದತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಶೀಘ್ರದಲ್ಲೇ ಮುಕ್ತಾಯವಾಗಲಿದೆ. ದೇವಾಸ್‌ಗಾಗಲೀ ಅಥವಾ ಅಂತರಿಕ್ಷ್‌ಗಾಗಲೀ ನಾವು ಈವರೆಗೆ ತರಂಗಾಂತರವನ್ನಾಗಲೀ ಅಥವಾ ಉಪಗ್ರಹ ಟ್ರಾನ್ಸ್‌ಪಾಂಡರ್‌ಗಳನ್ನಾಗಲೀ ನೀಡಿಲ್ಲ ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ.

2010ರ ಜುಲೈನಲ್ಲಿ ಈ ಒಪ್ಪಂದ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಒಪ್ಪಂದ ರದ್ದತಿ ಒಂದು ಸಂಕೀರ್ಣ ಪ್ರಕ್ರಿಯೆ. ಸರ್ಕಾರಕ್ಕೆ ನಷ್ಟ ತಪ್ಪಿಸುವ ಸಲುವಾಗಿ ಇದೀಗ ಈ ಒಪ್ಪಂದ ರದ್ದತಿ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆದರೆ
ಈ ಒಪ್ಪಂದದಿಂದಾಗಿ ಇಸ್ರೊ ನಿವೃತ್ತ ಅಧಿಕಾರಿ ಸ್ಥಾಪಿಸಿದ ದೇವಾಸ್ ಕಂಪೆನಿ 2 ಉಪಗ್ರಹಗಳ ಶೇ 90ರಷ್ಟು ಟ್ರಾನ್ಸ್‌ಪಾಂಡರ್‌ಗಳ ಬಳಕೆ ಹಕ್ಕನ್ನು ಪಡೆಯಲಿದೆ ಎಂಬ ಮಾಹಿತಿಯನ್ನು ಬಾಹ್ಯಾಕಾಶ ಆಯೋಗದ ಗಮನಕ್ಕಾಗಲೀ ಅಥವಾ ಕೇಂದ್ರ ಸಚಿವ ಸಂಪುಟದ ಗಮನಕ್ಕಾಗಲೀ ತಂದಿರಲಿಲ್ಲ. ಈ ಒಪ್ಪಂದದಿಂದಾಗಿ ಜಿಸ್ಯಾಟ್ 6 ಮತ್ತು ಜಿಸ್ಯಾಟ್ 6 ಎ ಉಪಗ್ರಹಗಳನ್ನು ಹೆಚ್ಚಾಗಿ ಬಳಸಿಕೊಳ್ಳಬೇಕಾಗುತ್ತದೆ ಎಂಬ ಸಂಗತಿಯನ್ನೂ ಕೇಂದ್ರ ಸಂಪುಟಕ್ಕೆ ಸ್ಪಷ್ಟವಾಗಿ ತಿಳಿಸಿರಲಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ.

ಇಸ್ರೊ 2009ರ ಡಿ.8ರಂದು ಈ ಒಪ್ಪಂದದ ಪುನರ್‌ಪರಿಶೀಲನೆಯನ್ನು ಆರಂಭಿಸಿತು. ಈ ಕುರಿತ ಸಮಗ್ರ ಪುನರ್‌ಪರಿಶೀಲನೆಗಾಗಿ 2009ರ ಡಿಸೆಂಬರ್‌ನಲ್ಲಿ ಬಾಹ್ಯಾಕಾಶ ಆಯೋಗದ ಮಾಜಿ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ನಾನೇ ರಚಿಸಿದ್ದೆ. ಒಂದಿಷ್ಟು ಸಮಯವನ್ನೂ ವ್ಯರ್ಥ ಮಾಡದೆ ಪರಿಶೀಲನೆ ನಡೆಸಲಾಗುತ್ತಿದೆ. ಒಪ್ಪಂದ ರದ್ದತಿಯನ್ನು ವಿಳಂಬಗೊಳಿಸುವ ಪ್ರಶ್ನೆಯೇ ಇಲ್ಲ  ಎಂದು ಇಸ್ರೊ ಮಾಜಿ ಮುಖ್ಯಸ್ಥರೂ ಆದ ಯೋಜನಾ ಆಯೋಗ ಸದಸ್ಯ ಕೆ.ಕಸ್ತೂರಿರಂಗನ್ ಇದೇ ವೇಳೆ ಸಮರ್ಥಿಸಿಕೊಂಡರು.

ಪ್ರಧಾನಿಯವರಿಗೆ ಈ ಒಪ್ಪಂದದ ಕುರಿತು ಮಾಹಿತಿ ಇತ್ತೇ ಎಂದು ಕೇಳಿದಾಗ, ‘ಅಂತರಿಕ್ಷ್ ನಿರ್ದೇಶಕರ ಮಂಡಳಿ ಅಂತಿಮಗೊಳಿಸಿದ ಈ ನಿರ್ಧಾರವನ್ನು ನಾನು ಬಾಹ್ಯಾಕಾಶ ಆಯೋಗಕ್ಕೆ ತಿಳಿಸಿದ್ದೆ. ಆನಂತರ ಈ ಕುರಿತು ಪ್ರಧಾನಿ ಬಳಿ ಪ್ರಸ್ತಾಪಿಸಿದ್ದೆ’ ಎಂದರು.

ಪ್ರಧಾನಿ ನೇರ ಉಸ್ತುವಾರಿಯಡಿ ಬರುವ ಬಾಹ್ಯಾಕಾಶ ಇಲಾಖೆ, ದೇವಾಸ್‌ನೊಂದಿಗೆ 20 ವರ್ಷ ಅವಧಿಗೆ 70 ಮೆಗಾಹರ್ಟ್ಜ್ ತರಂಗಾಂತರ ನೀಡಲು ಕೇವಲ ್ಙ1000 ಕೋಟಿ ಒಪ್ಪಂದ ಮಾಡಿಕೊಂಡಿದೆ. ಆದರೆ ವಾಸ್ತವವಾಗಿ ಅದರ ಬೆಲೆ ್ಙ2 ಲಕ್ಷ ಕೋಟಿ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT