ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಗಸೆ ನೀರಿಗೆ ಬಾಯ್ತೆರೆದ ಕೆರೆ

Last Updated 1 ಜೂನ್ 2013, 6:08 IST
ಅಕ್ಷರ ಗಾತ್ರ

ಆ ಊರಿನ ಜನರಿಗೆ ಸಡಗರ. ನಮ್ಮೂರ ಕೆರೆಗೆ ನೀರು ಬರುತ್ತೆ, ಆ ಕೆರೆಯಲ್ಲಿ ಇನ್ಮುಂದೆ ಪಕ್ಷಿಗಳ ಕಲರವ ಕೇಳಬಹುದು. ಬರ ಪರಿಸ್ಥಿತಿ ದೂರವಾಗಿ ಅಂತರ್ಜಲ ವೃದ್ಧಿ ಆಗುತ್ತದೆ. ತೋಟಗಳು ನಳನಳಿಸುತ್ತವೆ. ಬೆಳೆ ಹಸಿರಾದ ಮೇಲೆ ಝಣಝಣ ಕಾಂಚಾಣ ಕೈಸೇರುತ್ತದೆ ಎಂಬ ನಂಬಿಕೆಯಿಂದ ಆ ಗ್ರಾಮದ ಜನರು ಕಳೆದ ಐದು ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ!
ಆದರೆ, ಅವರ ಆಸೆ-ಕನಸು ಇನ್ನೂ ಈಡೇರಿಲ್ಲ. ಅವರ ಕೂಗು ಮಾತ್ರ ವ್ಯವಸ್ಥೆಗೆ ಕೇಳಿಸುತ್ತಿಲ್ಲ.

`ಇನ್ನಾರು ತಿಂಗಳು, ಮೂರೇ ತಿಂಗಳು' ಎಂಬ ಕಾಮಗಾರಿಯ ಗಡುವು ಮುಗಿದು ಹೋಗುತ್ತಿವೆ. ಅಧಿಕಾರಿ- ಜನಪ್ರತಿನಿಧಿಗಳ ಭರವಸೆಗಳು ರೈತರಿಗೆ ರೇಜಿಗೆ ಹುಟ್ಟಿಸಿವೆ. ಎರಡು ವರ್ಷಗಳ ಹಿಂದೆಯೇ ದಾವಣಗೆರೆ ಪೂರ್ವಭಾಗದ ಕೆರೆಗಳಲ್ಲಿ ನೀರು ತುಂಬಿ ರೈತರ ಬದುಕು ಹಸನುಗೊಳ್ಳಬೇಕಿತ್ತು. ಕುಡಿಯುವ ನೀರು ಪೂರೈಕೆಯಲ್ಲಿ 135 ಹಳ್ಳಿಯಲ್ಲಿ ಸಮೃದ್ಧಿ ನೆಲಸಬೇಕಿತ್ತು. ಆದರೆ, ಇಚ್ಛಾಶಕ್ತಿಯ ಕೊರತೆಯಿಂದ ಅದು ಸಾಧ್ಯವಾಗಿಲ್ಲ ಎಂಬುದು ಈ ಭಾಗದ ಅನ್ನದಾತರ ಅಳಲು.

ದಾವಣಗೆರೆ ಜಿಲ್ಲೆ ಪೂರ್ವಭಾಗದಲ್ಲಿ ಬೆದ್ದಲು ಜಮೀನೇ ಹೆಚ್ಚು. ಆದರೂ, ರೈತರು ಕೊಳವೆಬಾವಿ ಕೊರೆಸಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಸುಮಾರು 300ರಿಂದ 400 ಅಡಿಗಳಷ್ಟು ಆಳ ಕೊರೆದರೂ ನೀರು ಸಿಗುತ್ತಿಲ್ಲ. ಸಿಕ್ಕರೂ ಅದು `ಫ್ಲೋರೈಡ್‌ಯುಕ್ತ' ನೀರು. ಕುಡಿಯಲು ಯೋಗ್ಯವಲ್ಲ. ಇದರಿಂದ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವುದುಅಗತ್ಯ. ಯೋಜನೆಯಿಂದ ಅಂತರ್ಜಲವೂ ವೃದ್ಧಿಯಾಗುತ್ತದೆ. ಕುಡಿಯುವ ನೀರಿನ ತೊಂದರೆ ಕೂಡ ನೀಗುತ್ತದೆ ಎಂಬುದು ರೈತರ ನಂಬಿಕೆ.

ಹೋರಾಟ ಆರಂಭ
ಮೊದಲ ಬಾರಿಗೆ 2004ರಲ್ಲಿ ಈ ಯೋಜನೆ ಜಾರಿಗೆ ಬರಬೇಕು ಎಂಬ ಕೂಗು ಕೇಳಿಸಿತು. 2006ರಲ್ಲಿ ಪ್ರತಿಭಟನೆ ತೀವ್ರಗೊಂಡು, ತುಪ್ಪದಹಳ್ಳಿಕೆರೆಯಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ 44 ಕಿ.ಮೀ. ಪಾದಯಾತ್ರೆ ನಡೆಯಿತು. ವಿವಿಧ ಮಠಾಧೀಶರ ನೇತೃತ್ವವದಲ್ಲಿ ನಡೆದ ಪಾದಯಾತ್ರೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ದರು. ಅದಕ್ಕೆ ಸ್ಪಂದಿಸಿದ ಸರ್ಕಾರ, ಯೋಜನೆ ಜಾರಿಗೆ ಹಸಿರು ನಿಶಾನೆ ತೋರಿತು.

ನಿಯಮದಂತೆ 2010ಕ್ಕೆ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ, ಯೋಜನೆ ಕುಂಟುತ್ತಾ, ತೆವಳುತ್ತಾ ಸಾಗುತ್ತಿದೆ. ಇದು ಅನ್ನದಾತನಿಗೆ ಅಸಮಾಧಾನವನ್ನು ತಂದಿದೆ.

ಏನು ಪ್ರಯೋಜನ?: ಯೋಜನೆ ಪೂರ್ಣಗೊಂಡರೆ 135 ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆ ತಪ್ಪಲಿದೆ. ಕೊಳವೆಬಾವಿಯಲ್ಲಿ ಕಡಿಮೆ ಅಂತರದಲ್ಲಿ ನೀರು ಲಭ್ಯವಾಗುತ್ತದೆ. ಜನ-ಜಾನುವಾರುಗಳ ದಾಹ ತೀರಲಿದೆ. ಪ್ರತಿವರ್ಷ ಕುಡಿಯುವ ನೀರಿಗೆ ಸಾಕಷ್ಟು ಹಣ ಖರ್ಚು  ಮಾಡುವುದು  ಸರ್ಕಾರಕ್ಕೆ  ತಪ್ಪುತ್ತದೆ. 150 ದಿನಗಳ ಕಾಲ ನೀರು ಹರಿಯುವುದರಿಂದ ಜಿಲ್ಲೆಯ  ಪೂರ್ವಭಾಗದಲ್ಲಿ ಹಸಿರು ಕಂಗೊಳಿಸಲಿದೆ. ಫಲವತ್ತಾದ ಭೂಮಿಯಿದ್ದು, ನೀರು ಲಭ್ಯವಾದರೆ ಬಾಳೆ, ಕಬ್ಬು, ತೆಂಗು, ಅಡಿಕೆ ತರಕಾರಿ ಬೆಳೆಗೆ ಅನುಕೂಲವಾಗಲಿದೆ ಎಂದು ಹೋರಾಟ ಸಮಿತಿಯ ಕೊಟ್ರೇಶ್ ನಾಯ್ಕ ಆಶಯ.

ರೈತರ ಬೇಡಿಕೆಗಳು...
ಇದರ ಜೊತೆಗೆ ರೈತರ ಹಲವು ಬೇಡಿಕೆಗಳೂ ಇವೆ. ಗ್ರಾಮೀಣಪ್ರದೇಶದಲ್ಲಿ ಪೈಪ್‌ಲೈನ್ ಅಳವಡಿಕೆಗೆ ಸಾಕಷ್ಟುಕಡೆ ತೊಂದರೆ ಉಂಟಾಗಿದೆ. ಆ ಸಮಸ್ಯೆ ಬಗೆಹರಿಸಬೇಕು. 22 ಕೆರೆಗಳ ಏತ ನೀರಾವರಿ ಯೋಜನೆಗೆ ಪ್ರತ್ಯೇಕ ಕಚೇರಿ ತೆರಯಬೇಕು. ಯೋಜನೆಯ ಕೊನೆ ಹಂತದ ಕೆರೆಗಳಾದ ತುಪ್ಪದಹಳ್ಳಿ, ದೊಡ್ಡರಂಗವ್ವನಹಳ್ಳಿ, ಕಬ್ಬೂರು ಮತ್ತು ಬಿಳಿಚೋಡು ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಒದಗಿಸಬೇಕು ಎಂಬುದು ರೈತರ ಪಟ್ಟು.

ಚಿಕ್ಕದಾದ ಕೆರೆ ಅಂಗಳ: 22 ಕೆರೆಗೆ ನೀರು ಬಂದ ತಕ್ಷಣ ಕೆರೆಯಲ್ಲಿ ನೀರು ನಿಲ್ಲುತ್ತದೆ ಎಂಬ ನಿರೀಕ್ಷೆ ರೈತರಿಗಿಲ್ಲ. ಏಕೆಂದರೆ ಕೆರೆ ಅಂಗಳ ಚಿಕ್ಕದಾಗಿದೆ. ಗ್ರಾಮೀಣಪ್ರದೇಶದಲ್ಲಿ ಕೆರೆಗಳ ಒತ್ತುವರಿ ಹಾವಳಿ ಹೆಚ್ಚಾಗಿದೆ. ಯೋಜನೆ ವ್ಯಾಪ್ತಿಗೆ ಒಳಪಡುವ ಕೆರೆಗಳಲ್ಲೂ ಈ ಸಮಸ್ಯೆಯಿದ್ದು, ಹೂಳು ತುಂಬಿದೆ. ಗಿಡ-ಗಂಟಿಗಳು ಬೆಳೆದು ನಿಂತಿವೆ. ಜಿಲ್ಲಾಡಳಿತ ಕೆರೆಯ ಬೌಂಡರಿ ನಿಗದಿಗೊಳಿಸಬೇಕು. ಹೂಳೆತ್ತುವ ಯೋಜನೆಗೆ ಚಾಲನೆ ನೀಡಬೇಕು ಎಂಬ ಕೂಗು ಸಹ ಈಗ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT