ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧನೆಗೆ ಸೃಜನಶೀಲತೆಯ ಸ್ಪರ್ಶ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಕೆಲವು ವರ್ಷದ ಹಿಂದೆ ದಕ್ಷಿಣ ಕನ್ನಡದ ಉಜಿರೆಯಲ್ಲಿ ಶಿಕ್ಷಕರಾಗಿದ್ದ ನನ್ನ ಒಬ್ಬ ಮಿತ್ರರು ತಮ್ಮ ತರಗತಿಯಲ್ಲಿ ಪಾಠದ ನಡುವೆ ಏನೋ ಗೊಂದಲವಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರು.

ಅವರು ವಿವರಣೆ ನೀಡುತ್ತಿದ್ದ ಸಮಯದಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಸಹಪಾಠಿಯ ತಲೆಯ ಮೇಲೆ ಕಾಗದದ ಚೂರುಗಳನ್ನು ಗೋಪುರದಂತೆ ಜೋಡಿಸಿ ಬೇರೆಯವರಿಗೆ ತೋರಿಸಿ ತಮಾಷೆ ಮಾಡುತ್ತಿದ್ದನು. ಇದರಿಂದ ಬೇರೆ ವಿದ್ಯಾರ್ಥಿಗಳ ಗಮನವೆಲ್ಲಾ ಹೆಚ್ಚಾಗಿ ಅಲ್ಲಿಯೇ ಇತ್ತು. ಇದನ್ನು ತಿಳಿದ ಆ ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳ ಗಮನವನ್ನು ಹಾಳು ಮಾಡುತ್ತಿದ್ದ ಆ ವಿದ್ಯಾರ್ಥಿಗೆ ಬೈಯ್ಯದೆ, ಇಬ್ಬರೂ ವಿದ್ಯಾರ್ಥಿಗಳನ್ನು ನಿಲ್ಲಿಸಿ ಇನ್ನೊಮ್ಮೆ ತನ್ನ ಸಹಪಾಠಿಯ ತಲೆಯ ಮೇಲೆ ಕಾಗದದ ಚೂರುಗಳನ್ನು ಗೋಪುರದಂತೆ ಜೋಡಿಸಲು ಹೇಳಿದರು. ಅದು ಆ ವಿದ್ಯಾರ್ಥಿಗೆ ಎಷ್ಟು ಚಂದ ಕಾಣುತ್ತದೆ ಅಲ್ಲವೇ ಎಂದು ಮಿಕ್ಕ ವಿದ್ಯಾರ್ಥಿಗಳಿಗೆ ಹೇಳಿ, ಎಲ್ಲ ವಿದ್ಯಾರ್ಥಿಗಳಿಂದ ಒಮ್ಮೆ ಚಪ್ಪಾಳೆ ತಟ್ಟಿಸಿ ಅವರನ್ನು ಕೂಡಿಸಿದರು. ಇದಾದ ಮೇಲೆ, ತರಗತಿಯಲ್ಲಿ ಪಾಠವು ಯಾವುದೇ ತೊಂದರೆಯಿಲ್ಲದೆ ಸರಾಗವಾಗಿ ನಡೆಯಿತು. ಇಲ್ಲಿ ನಾವೆಲ್ಲಾ ಗಮನಿಸಬೇಕಾದ ಅಂಶವೆಂದರೆ ಒಬ್ಬ ಒಳ್ಳೆ ಶಿಕ್ಷಕನಿಗೆ ಸೃಜನಶೀಲತೆಯ ಅರಿವಿದ್ದರೆ ವಿದ್ಯಾರ್ಥಿಯ ತಪ್ಪನ್ನೂ ಸಹ ಒಳ್ಳೆ ರೀತಿಯಲ್ಲಿ ಬಳಸಿಕೊಂಡು ತನ್ನ ತರಗತಿಯ ಮೇಲೆ ಹಿಡಿತ ಸಾಧಿಸುತ್ತಾರೆ. ಇಂತಹ ಜಾಣ್ಮೆ ಪ್ರತಿಯೊಬ್ಬ ಶಿಕ್ಷಕರಿಗೂ ತುಂಬಾ ಅವಶ್ಯಕ. ಸೃಜನಶೀಲ ಪ್ರಜ್ಞೆ ಯಾವುದೇ ಸಂದರ್ಭದಲ್ಲಿ ಹೇಗೆ ಬೇಕಾದರೂ ಬಳಕೆಗೆ ಬರಬಹುದು ಎಂಬುದಕ್ಕೆ ಮೇಲಿನ ಸನ್ನಿವೇಶ ಒಂದು ಚಿಕ್ಕ ಉದಾಹರಣೆ.

ಬೋಧನೆಗೆ ಪೂರ್ವಸಿದ್ಧತೆ

ಇಂದು ಶೈಕ್ಷಣಿಕ ಬದಲಾವಣೆಗಳೆಲ್ಲಾ ಸೃಜನಶೀಲತೆಯ ಆಧಾರದ ಮೇಲೆ ನಿರ್ಮಾಣವಾಗುತ್ತಿರುವುದು ಗಮನಾರ್ಹವಾಗಿದೆ. ಇಂದಿನ ವಿದ್ಯಾರ್ಥಿಗಳು ತಾಂತ್ರಿಕವಾಗಿ ಸದಾ ಬದಲಾಗುತ್ತಿರುವ ಮತ್ತು ಜ್ಞಾನದ ಚೌಕಟ್ಟಿಗೆ ದಿನೇ ದಿನೇ ಹೊಸ ಅರ್ಥ ಕೊಡುತ್ತಿರುವ ಪ್ರಪಂಚದಲ್ಲಿ ಜೀವಿಸುತ್ತಿದ್ದಾರೆ. ಈ ಹಿಂದೆ ಕೇವಲ ತರಗತಿ ಅಥವಾ ಗ್ರಂಥಾಲಯಗಳಲ್ಲಿ ಸಿಗುತ್ತಿದ್ದ ವಿಷಯಕ್ಕಿಂತ ಹೆಚ್ಚು ಇಂಟರ್ನೆಟ್‌ನಲ್ಲಿ ಇಂದು ಎಲ್ಲರಿಗೂ ಸಿಗುತ್ತಿದೆ. ಇದರಿಂದಾಗಿ, ಶಿಕ್ಷಕರು ತಮ್ಮ ಬೊಧನೆಯಲ್ಲಿ ವಿದ್ಯಾರ್ಥಿಗಳ ಗಮನ ಮತ್ತು ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವುದು ಒಂದು ಸವಾಲಾಗಿದೆ. ಇದರ ಪರಿಣಾಮವಾಗಿ ಇಂದು ಶಿಕ್ಷಕರು ಹೊಸ ಪೀಳಿಗೆಗೆ ಕಲಿಸುವ ಅನೇಕ ಸೃಜನಶೀಲ ವಿಧಾನಗಳನ್ನು ರೂಪಿಸಬೇಕಾಗಿದೆ. ಇದಕ್ಕಾಗಿ ಶಿಕ್ಷಕರು ದೈನಂದಿನ ಬೋಧನೆಯಲ್ಲಿ ಹೊಸ ಮತ್ತು ಸೃಜನಶೀಲ ವಿಧಾನಗಳನ್ನು ಅಳವಡಿಸುವುದು ಅವಶ್ಯಕವಾಗಿದೆ.

 ಶಿಕ್ಷಕರ ಸೃಜನಶೀಲತೆ ಮತ್ತು ಸೃಜನಶೀಲ ಬೋಧನೆಯ ಬಗ್ಗೆ ತಿಳಿಯುವ ಮುನ್ನ ಕೆಲವು ಪ್ರಶ್ನೆಗಳ ಕಡೆ ಗಮನ ಹರಿಸೋಣ.

ಶಿಕ್ಷಕರು ಸಹಜವಾಗಿಯೇ ಸೃಜನಶೀಲರೆ ಅಥವಾ ಕೆಲವೇ ನಿರ್ದಿಷ್ಟ ಶಿಕ್ಷಕರಿಗೆ ಮಾತ್ರ ವಿಶೇಷವಾಗಿ ಬೋಧಿಸಿ ಪ್ರೇರಣೆ ನೀಡಲು ಸಾಧ್ಯವೇ ಅಥವಾ ಸೃಜನಶೀಲತೆಯು ಕೆಲವು ನಿರ್ದಿಷ್ಟ ವ್ಯಕ್ತಿಗಳ ವ್ಯಕ್ತಿತ್ವವೇ? ಹಾಗಿದ್ದಲ್ಲಿ, ಹಲವು ದಶಕಗಳಿಂದ ಅನೇಕ ಶಿಕ್ಷಣತಜ್ಞರು ಕೇವಲ ತರಗತಿಯ ಬೋಧನೆಗೆ ಮಾತ್ರ ಒತ್ತು ಕೊಟ್ಟಿದ್ದು ಏಕೆ?

ಇನ್ನೊಂದೆಡೆಯಲ್ಲಿ ಸೃಜನಶೀಲತೆಯನ್ನು ಕಲಿತು ಅದರ ತತ್ವಗಳನ್ನು ಅರ್ಥಮಾಡಿಕೊಂಡು ಇನ್ನೊಬ್ಬರಿಗೆ ಕಲಿಸಬಹುದಾಗಿದ್ದರೆ ಎಲ್ಲಾ ಶಿಕ್ಷಕರು ಇದನ್ನು ಒಂದು ಅಮೂಲ್ಯ ಉಪಕರಣವಾಗಿ ಬಳಸಿ ತಮ್ಮ ತರಗತಿಗೆ ಮತ್ತು ಬೋಧನೆಗೆ ಜೀವ ತುಂಬುತ್ತಿದ್ದರು. ಕೆಲವು ಶಿಕ್ಷಕರು ಸೃಜನಶೀಲ ದೃಷ್ಟಿಕೋನವನ್ನು ಅವಲಂಬಿಸಿ ತಮ್ಮ ಬೋಧನಾ ಶೈಲಿಗೆ ಮತ್ತು ತರಗತಿಗೆ ಬಣ್ಣ ನೀಡುತ್ತಾರೆ. ಇದೆಲ್ಲದರ ಜೊತೆಯಲ್ಲಿ ಶಿಕ್ಷಕರು ತಮ್ಮ ಬೋಧನೆಯ ಮೂಲಕ ಏನನ್ನು ತಿಳಿಸಲು ಕಲಿಸಲು ಬಯಸುತ್ತಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು.  ವಿದ್ಯಾರ್ಥಿಯು ವಿಷಯ ಜ್ಞಾನದಲ್ಲಿ ಪರಿಣತಿ ಹೊಂದಿ ಯಾವ ಮೌಲ್ಯಗಳನ್ನು ಅದರಿಂದ ಪಡೆಯಲು ಇಚ್ಛಿಸುತ್ತಾನೆ ಎಂಬ ಕಲ್ಪನೆ ಶಿಕ್ಷಕರಿಗೆ ಇರಬೇಕು. ಇದರೊಂದಿಗೆ, ಶಿಕ್ಷಕರು ತಮ್ಮ ಬೋಧನಾ ವಿಷಯವನ್ನು ಆಗಾಗ್ಗೆ ಪರಿಶೀಲಿಸುತ್ತಿರಬೇಕು.

ಪ್ರತಿಯೊಂದು ವಿಷಯದ ಪಠ್ಯಕ್ರಮವು ಅಗಾಧ ಜ್ಞಾನವನ್ನು ನೀಡಬಯಸುತ್ತದೆ. ಇದರಲ್ಲಿ ಯಾವ ವಯಸ್ಸಿನ ವಿದ್ಯಾರ್ಥಿಗೆ ಎಷ್ಟು ವಿಷಯ ಬೇಕು ಎಷ್ಟು ಬೇಡ ಎಂಬುದನ್ನು ಶಿಕ್ಷಕರು ತಿಳಿದಿರಬೇಕು. ಆದ್ದರಿಂದ, ಶಿಕ್ಷಕರು ಇಂತಹ ಬೇಕು - ಬೇಡಗಳ ನಡುವೆ ಯಾವ ವಿಷಯಕ್ಕೆ ಎಷ್ಟು ಒತ್ತು ನೀಡಬೇಕು, ಯಾವುದರಲ್ಲಿ ಅವರು ಪರಿಣತಿ ಹೊಂದಿದರೆ ಅವರಿಗೆ ಪ್ರಯೋಜನವಾಗುತ್ತದೆ ಎಂಬುದನ್ನು ತಿಳಿದಿರಬೇಕು. ಇದರಿಂದ, ವಿದ್ಯಾರ್ಥಿಗಳಿಗೆ ಯಾವುದು ಸೂಕ್ತ ಮತ್ತು ಅವಶ್ಯಕ ಎಂಬುದರ ಅರಿವು ಮೂಡಿಸಿದಂತಾಗುತ್ತದೆ. ಇವೆಲ್ಲವನ್ನೂ ಉತ್ತಮ ಬೋಧನೆ ಮತ್ತು ತರಗತಿಯಲ್ಲಿನ ಸೃಜನಶೀಲ ಚಟುವಟಿಕೆಗಳಿಂದ ಕಾರ್ಯರೂಪಕ್ಕೆ ತರಬಹುದು. ಶಿಕ್ಷಕರಿಂದ ಈ ರೀತಿಯ ಸೃಜನಶೀಲ ಯೋಚನೆ, ಚಟುವಟಿಕೆ ಮತ್ತು ಬೋಧನೆ ವಿದ್ಯಾರ್ಥಿಗಳಿಗೆ ವರವಾಗಿ, ತಮ್ಮ ಶಕ್ತಿ ಸಾಮರ್ಥ್ಯಗಳ ಅರಿವು ಮೂಡಿಸುತ್ತದೆ. ಅವರು ಶಾಲೆ ಮುಗಿಸಿ ಉನ್ನತ ವ್ಯಾಸಂಗಕ್ಕೆ ಹೋದಾಗ ಅಥವಾ ಕೆಲಸಕ್ಕೆ ಸೇರಿದಾಗ ಅವರ ದೈನಂದಿನ ಕಾರ್ಯದಲ್ಲಿಯೂ ನೆರವಾಗುತ್ತದೆ. ಈ ನಿಟ್ಟಿನಲ್ಲಿ ವಿಷಯ ಜ್ಞಾನವೂ ಸೃಜನಾತ್ಮಕವಾಗಿ ಹರಿದು ಬಂದು ಹೊಸ ಮಾರ್ಗಗಳನ್ನು ತೆರೆಯುವಲ್ಲಿ ನೆರವಾಗುತ್ತದೆ.

ಸೃಜನಶೀಲ ಬದಲಾವಣೆಗಳು

ಇದೆಲ್ಲದರ ನಂತರ ಶಿಕ್ಷಕರಿಗೆ ಹೊಸ ಪ್ರಶ್ನೆಗಳು ಕಾಡುತ್ತವೆ. ತಾನು ಯಾವ ಬೋಧನಾ ವಿಧಾನಗಳನ್ನು ಅನುಸರಿಸುತ್ತಿದ್ದೇನೆ? ತಾನು ಮಾಡುವ ಪಾಠದ ಉದ್ದೇಶಗಳು ಯಶಸ್ವಿಯಾಗಲು ಯಾವ ಬೋಧನಾ ಮಾರ್ಗಗಳನ್ನು ಮತ್ತು ಸಾಧನಗಳನ್ನು ಬಳಸುತ್ತಿದ್ದೇನೆ? ತಾನು ತನ್ನ ವಿದ್ಯಾರ್ಥಿಗಳಿಗೆ ಕಲಿಸಿದ ವಿಷಯ ಜ್ಞಾನವನ್ನು ಅವರು ಸಂಪೂರ್ಣವಾಗಿ ಪಡೆದಿದ್ದಾರೆಯೇ ಎಂಬುದನ್ನು ತಿಳಿಯುವುದು ಹೇಗೆ? ಇಂತಹ ಪ್ರಶ್ನೆಗಳಿಗೆ ಹಲವು ಸಂಭಾವ್ಯ ಉತ್ತರಗಳನ್ನು ಹುಡುಕಿದಾಗ, ಒಬ್ಬ ಶಿಕ್ಷಕನಿಗೆ ಹೆಚ್ಚು ಸೃಜನಶೀಲನಾಗುವ ತನ್ನ ಸಾಮರ್ಥ್ಯಕ್ಕೆ ಒಂದು ಒಳ್ಳೆಯ ಬುನಾದಿ ಹಾಕಿಕೊಟ್ಟಂತಾಗುತ್ತದೆ. ಇದಕ್ಕೆ ಶಿಕ್ಷಕರು ತಮ್ಮ ಪಠ್ಯಗಳನ್ನು ಹಲವು ದಿಕ್ಕುಗಳಿಂದ ಗಮನಿಸಲು ಅರಂಭಿಸಬೇಕು. ಶಿಕ್ಷಕರು ತಮ್ಮ ಬೋಧನೆಯಲ್ಲಿ ಅನೇಕ ಸೃಜನಶೀಲ ಶೈಲಿಗಳನ್ನು, ಉಪಕರಣಗಳನ್ನು ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಿದ್ಧರಿರಬೇಕು ಮತ್ತು ತಮ್ಮ ಮೌಲ್ಯಮಾಪನಾ ಸಾಧನ ಮತ್ತು ಮಾನದಂಡಗಳನ್ನು ಬದಲಾಯಿಸಲು ಒಪ್ಪಬೇಕು. ಶಿಕ್ಷಕರು ಅನೇಕ ಶೈಕ್ಷಣಿಕ ಸಿದ್ಧಾಂತಗಳಲ್ಲಿ ಮತ್ತು ವಿಧಾನಗಳಲ್ಲಿ ತರಬೇತಿ ಪಡೆದಿರುತ್ತಾರೆ. ದುರಾದೃಷ್ಟವಶಾತ್, ಶಿಕ್ಷಕರು ಕೆಲವೇ ಬೋಧನಾ ತಂತ್ರಗಳನ್ನು ಅಳವಡಿಸಿ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ಉಪನ್ಯಾಸ ವಿದ್ಯಾರ್ಥಿಗಳಿಗೆ ವಿಷಯವನ್ನು ತಿಳಿಸಲು ಒಂದು ಉತ್ತಮ ಮಾರ್ಗ ನಿಜ. ಆದರೆ, ಅನೇಕ ಶಿಕ್ಷಕರು ಇದು ತುಂಬಾ ಸುಲಭ ಮತ್ತು ಪರಿಣಾಮಕಾರಿ ಎಂದು ತಪ್ಪು ತಿಳಿದು ಅದನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಕೆಲವೆಡೆ ಹೊಸ ಮತ್ತು ನವೀನ ಬೋಧನಾ ವಿಧಾನಗಳನ್ನು ಅಳವಡಿಸಿದರೂ ಅದರ ಉಪಯೋಗಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಬಳಸಲಾಗುತ್ತಿದೆ. ಇದರ ಪರಿಣಾಮವಾಗಿ ನಿಗದಿತ ಗುರಿ ಸಾಧಿಸಲು ಮತ್ತು ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪೂರೈಸುವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದ, ಶಿಕ್ಷಕರು ಹೊಸ ಮತ್ತು ಸೃಜನಶೀಲ ವಿಧಾನಗಳನ್ನು ಬಳಸಲು ಕೇವಲ ಪ್ರಯತ್ನಿಸದೆ, ಆ ವಿಧಾನ ಮತ್ತು ತಂತ್ರಗಳನ್ನು ಬಳಸುವಲ್ಲಿ ನಿಪುಣರಾಗಬೇಕು. ಸರಿಯಾದ ತರಬೇತಿಯಿಂದ ಶಿಕ್ಷಕರು ಒಂದು ಸಂಪೂರ್ಣ ವಿಸ್ಮಯ ಹಾಗು ಸವಾಲುಗಳನ್ನೊಳಗೊಂಡ ಬೋಧನಾ ಪ್ರಪಂಚಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದಂತಾಗುತ್ತದೆ.

ಇಂದು ತಂತ್ರಜ್ಞಾನದ ಸಹಾಯದಿಂದ ಶಿಕ್ಷಕರು ತಾವು ಮಾಡುವ ಪಾಠದ ಬಗ್ಗೆ ವಿದ್ಯಾರ್ಥಿಗಳಿಂದ ಕೇವಲ ವಿಷಯ ಕಲೆಹಾಕಿಸದೆ ಅವರನ್ನು ಹಲವು ಹೊಸ ಯೋಜನೆಗಳಿಗೆ ಪ್ರೇರೇಪಿಸಬಹುದು. ಕಂಪ್ಯೂಟರ್‌ಗಳ ಹೊರತಾಗಿ ಹಲವು ಸಾಧನಗಳನ್ನು ಸೃಜನಶೀಲ ಶಿಕ್ಷಕರು ತಮ್ಮ ಬೋಧನೆಯಲ್ಲಿ ಬಳಸುತ್ತಾರೆ. ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಪ್ರಗತಿಯ ಮೌಲ್ಯಮಾಪನ ಮಾಡಲು ಶಿಕ್ಷಕರು ತಮ್ಮ ಬೋಧನಾ ಸಾಮಗ್ರಿ ಮತ್ತು ವಿಧಾನಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿ ಕೊಳ್ಳುತ್ತಿರಬೇಕು. ಪ್ರಸ್ತುತ ಬರವಣಿಗೆಯ ಪರೀಕ್ಷೆಗಳಿಂದ ಒಬ್ಬ ವಿದ್ಯಾರ್ಥಿಯ ನಿಜವಾದ ಸಾಮರ್ಥ್ಯ ಮತ್ತು ಜ್ಞಾನದ ಮಟ್ಟವನ್ನು ಅಳೆಯಲು ಸಾಧ್ಯವಿಲ್ಲ ಮತ್ತು ಅದು ಸರಿಯೂ ಅಲ್ಲ. ಇಂತಹ ಪರೀಕ್ಷೆಗಳು ಕೇವಲ ಪುಸ್ತಕದಲ್ಲಿರುವ ವಿಷಯವನ್ನು ಓದಿ ಎಷ್ಟರಮಟ್ಟಿಗೆ ಜ್ಞಾಪಕ ಇಟ್ಟುಕೊಂಡು ಬರೆಯುತ್ತಾರೆ ಎಂದು ತಿಳಿಸುತ್ತದೆ. ಶಿಕ್ಷಕರು ವೈವಿಧ್ಯಮಯ ಮೌಲ್ಯಮಾಪನಾ ವಿಧಾನಗಳನ್ನು ಬಳಸಿಕೊಂಡು ಮೂರು ಪ್ರಮುಖ ಉದ್ದೇಶಗಳನ್ನು ಸಾಧಿಸಬಹುದು. ಮೊದಲಿಗೆ, ವಿದ್ಯಾರ್ಥಿಯ ಯಶಸ್ಸಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟಂತಾಗುತ್ತದೆ. ಎರಡನೆಯದಾಗಿ, ಹೆಚ್ಚು ಪರಿಣಾಮಕಾರಿಯಾಗಿ ವಿದ್ಯಾರ್ಥಿಯ ಮೌಲ್ಯಮಾಪನ ಮಾಡುವ ಅವಕಾಶ ಸಿಗುತ್ತದೆ. ಅಂತಿಮವಾಗಿ, ಪರೀಕ್ಷೆಯ ಕಲಿಕೆಯ ವಿಸ್ತರಣೆಯಾಗುತ್ತದೆಯೇ ಹೊರತು ಬಲವಂತದ ಮಾಘಸ್ನಾನವಾಗುವುದಿಲ್ಲ. ಶಿಕ್ಷಕರಿಂದ ಇಂತಹ ನಿರ್ಣಾಯಕ ಬದಲಾವಣೆಗಳು ಬಂದಲ್ಲಿ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಚಿಗುರು ಮೂಡಿಸಿ ಅವರ ಕಲಿಕೆಗೆ ಹೆಚ್ಚು ಅವಕಾಶಗಳನ್ನು ಒದಗಿಸಿಕೊಟ್ಟಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT