ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋನಿಗೆ ಬಿದ್ದ ನರಭಕ್ಷಕ ಹುಲಿ

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೈಸೂರು: ಎಚ್‌.ಡಿ. ಕೋಟೆ ತಾಲ್ಲೂ­ಕಿನ ಕಾಡಂಚಿನ ಗ್ರಾಮಗಳಲ್ಲಿ ನರಭಕ್ಷಣೆ ಮೂಲಕ ತಲ್ಲಣ ಸೃಷ್ಟಿಸಿದ್ದ ಹುಲಿಯನ್ನು ಅರಣ್ಯ ಮತ್ತು ಪೊಲೀಸ್‌ ಸಿಬ್ಬಂದಿಯು ದಸರಾ ಆನೆಗಳಿಂದ ವಿಶೇಷ ಕಾರ್ಯಾ­ಚರಣೆ ನಡೆಸಿ ಹೆಡಿಯಾಲ ಅರಣ್ಯ ವಲಯದ ಚಿಕ್ಕಬರಗಿ ಸಮೀಪದ ಕಾರೆಕಟ್ಟೆ ಪ್ರದೇಶದಲ್ಲಿ ಗುರುವಾರ ಸೆರೆ ಹಿಡಿಯಿತು.

ಕೆಲದಿನಗಳಿಂದ ಅರಣ್ಯ ಇಲಾಖೆಗೆ ತಲೆನೋವಾಗಿದ್ದ ಸುಮಾರು 12 ವರ್ಷದ ಈ ಗಂಡು ಹುಲಿಯನ್ನು ಸೆರೆ ಹಿಡಿಯಲು ವಿಶೇಷ ಕಾರ್ಯಾಚರಣೆ ರೂಪಿಸಿದ್ದ ಅರಣ್ಯ ಸಿಬ್ಬಂದಿ ಮತ್ತು ಪೊಲೀಸರು ಗುರುವಾರ ಬೆಳಿಗ್ಗೆ 7 ಗಂಟೆಯಿಂದಲೇ ಮೂರು ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದರು.

ಡಿ. 3ರಂದು ನರಭಕ್ಷಕ ಹುಲಿಯು ಚಿಕ್ಕಬರಗಿ ಗ್ರಾಮದ ಬಸಪ್ಪ ಅವರನ್ನು ಜಮೀನಿನಿಂದ ಹೊತ್ತೊಯ್ದಿದ್ದ ಹಾದಿ­ಯಲ್ಲಿ ರಕ್ತದ ಕಲೆಗಳು, ದೇಹವನ್ನು ಎಳೆದಾಡಿ ಕೊಂದಿದ್ದ ಜಾಗ, ಹುಲಿಯ ಹೆಜ್ಜೆಗಳನ್ನು ಆಧರಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು.  

ಹುಲಿ ಸೆರೆ ಹಿಡಿಯುವುದನ್ನು ನೋಡಲು ಸುತ್ತಮುತ್ತಲಿನ ಗ್ರಾಮ­ಗಳಿಂದ  ಅಪಾರ ಸಂಖ್ಯೆಯ ಗ್ರಾಮಸ್ಥರು ಬಂದಿದ್ದರು. ಒಂದು ವೇಳೆ ಹುಲಿ ಪ್ರತ್ಯಕ್ಷ­ವಾದರೆ ಜನಜಂಗುಳಿ ಮೇಲೆ ಎರಗಬ­ಹುದು ಎಂಬ ಕಾರಣದಿಂದ ಪೊಲೀ­ಸರು, ಜನರನ್ನು ಕಾರ್ಯಾಚರಣೆ ಸ್ಥಳಕ್ಕೆ ತೆರಳದಂತೆ ತಡೆಗಟ್ಟಿದರು.

ಪ್ರತಿ ಆನೆ ಮೇಲೆ ಮಾವುತ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಬೇರೆ ಬೇರೆ ಪ್ರದೇಶ­ಗಳಲ್ಲಿ ಹುಲಿ ಪತ್ತೆ ಕಾರ್ಯಕ್ಕೆ ನಿಯೋಜಿ­ಸಲಾಗಿತ್ತು. ಒಂದು ವೇಳೆ  ಹುಲಿ ಎದುರಾದರೆ ಅದನ್ನು ಕೊಲ್ಲಲು ಬಂದೂಕು­ಧಾರಿ ಪೊಲೀಸರು ಸಜ್ಜಾಗಿ­ದ್ದರು. ಅರಣ್ಯ ಸಿಬ್ಬಂದಿ ಬಲೆಗಳನ್ನು ಹಿಡಿದು ವಿವಿಧೆಡೆ ಎಚ್ಚರಿಕೆಯಿಂದ ಗಸ್ತು ತಿರುಗುತ್ತಿದ್ದರು.

ಹಿಮ್ಮೆಟ್ಟಿದ ಆನೆ: ಕಾಡಿನಲ್ಲಿ ಮುನ್ನುಗ್ಗು­ತ್ತಿದ್ದ ಆನೆ ‘ಕಾಂತಿ’ ಮಧ್ಯಾಹ್ನ 12 ಗಂಟೆ  ವೇಳೆಗೆ ಪೊದೆಯೊಂದರ ಬಳಿ ನಿಂತು ಒಮ್ಮೆಲೇ ಹಿಮ್ಮೆಟ್ಟಿ ಗಾಬರಿಗೊಂಡಿತು. ಪೊದೆ ಬಳಿ ಹುಲಿ ಇರುವಿಕೆಯನ್ನು ಗ್ರಹಿಸಿದ ಆನೆ ಮೇಲಿದ್ದ ಬನ್ನೇರುಘಟ್ಟದ ಅರಣ್ಯದ ಪಶು ವೈದ್ಯ ಡಾ.ಸನತ್‌ ಅವರು ವ್ಯಾಘ್ರನಿಗೆ ಶೂಟ್‌ ಮಾಡಿ ಅರಿವಳಿಕೆ ಚುಚ್ಚಿದರು. ಅಲ್ಲೇ ಇದ್ದ ಅರಣ್ಯ ಸಿಬ್ಬಂದಿ ವ್ಯಾಘ್ರನನ್ನು ಬಲೆಯೊಳಕ್ಕೆ ಬೀಳಿಸಿ ತಕ್ಷಣವೇ ಬೋನಿನೊಳಕ್ಕೆ ಹಾಕಿದರು.

ಕೊಲ್ಲಲು ಒತ್ತಾಯ: ನರಭಕ್ಷಕ ಹುಲಿಯು ಚಿಕ್ಕಬರಗಿ ಗ್ರಾಮದ ಬಸಪ್ಪ ಅವರನ್ನು ಬಲಿ ತೆಗೆದುಕೊಂಡಿದ್ದ ಸ್ಥಳದಿಂದ ಸುಮಾರು 150 ಮೀಟರ್‌ ಅಂತರದಲ್ಲಿ ಹುಲಿಯನ್ನು ಸೆರೆ ಹಿಡಿಯ­ಲಾಗಿದೆ. ಕಾರ್ಯಾಚರಣೆ ಪ್ರದೇಶದಿಂದ ಹುಲಿಯನ್ನು ಅರಣ್ಯ ಇಲಾಖೆಯ ನಿರೀಕ್ಷಣಾ ಗೃಹದೆಡೆಗೆ ತರಲಾಯಿತು. ಕಾರ್ಯಾಚರಣೆ ನೋಡಲು ಸೇರಿದ್ದ ಸುತ್ತಮುತ್ತಲಿನ ಗ್ರಾಮಗಳ ಜನರು ಹುಲಿ ಬೇಟೆ ವಿಚಾರ ತಿಳಿಯುತ್ತಿದ್ದಂತೆ ಅದನ್ನು ನೋಡಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು.

ಮೃತ ಬಸಪ್ಪನ ಕುಟುಂಬದವರು ಮತ್ತು ಸಾರ್ವಜನಿಕರು ಈ ಹುಲಿಯನ್ನು ಯಾವುದೇ ಕಾರಣಕ್ಕೂ ಬದುಕಲು ಬಿಡಬಾರದು ಅದನ್ನು ಕೊಲ್ಲಬೇಕು ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ತೀವ್ರ ವಾಗ್ವಾದ ನಡೆಯಿತು. ಪರಿಸ್ಥಿತಿ ತಿಳಿಗೊ­ಳಿಸಲು ಪೊಲೀಸರು ಹರಸಾಹಸ­ಪಡ­ಬೇಕಾಯಿತು. ಹುಲಿಯನ್ನು ನೋಡಲು ನೂಕುನುಗ್ಗಲು ಉಂಟಾಯಿತು.

ಒಂದು ಹಂತದಲ್ಲಿ ಜನರು ಪ್ರತಿಭಟನೆಗೆ ಮುಂದಾದರು. ಪರಿಸ್ಥಿ­ತಿಯ ಗಂಭೀರತೆ ಅರಿತ ಪೊಲೀಸರು ಜನರನ್ನು ಚದುರಿಸಿ ಟ್ರ್ಯಾಕ್ಟರ್‌ನಲ್ಲಿ ಹುಲಿಯನ್ನು ಸಾಗಿಸಲು ಅನುವು ಮಾಡಿದರು. ಹುಲಿಯನ್ನು ಮೈಸೂರು ಮೃಗಾಲ­ಯಕ್ಕೆ ಸಾಗಿಸಲು ಅಧಿಕಾ­ರಿಗಳು ನಿರ್ಧರಿಸಿದರು. ಮಧ್ಯಾಹ್ನ  2.30ರ ಸುಮಾರಿಗೆ ಟ್ರ್ಯಾಕ್ಟರ್‌ನಲ್ಲಿ ಮೂಲೆಮೊಳೆ ಮಾರ್ಗದಲ್ಲಿ ಸೂಳೆಕಟ್ಟೆ, ಕಲ್ಕೆರೆ ತಲುಪಿ ಅಲ್ಲಿ ಹುಲಿಯನ್ನು ಕ್ಯಾಂಟರ್‌ಗೆ ವರ್ಗಾಯಿಸಿ ಮದ್ದೂರು, ಗುಂಡ್ಲುಪೇಟೆ, ನಂಜನಗೂಡು ಮಾರ್ಗ­ಸವಾಗಿ ರಾತ್ರಿ 7 ಗಂಟೆ ವೇಳೆಗೆ ಮೈಸೂರು ಮೃಗಾಲಯಕ್ಕೆ ತರಲಾಯಿತು.

ಮುಳ್ಳುಹಂದಿ ತಿವಿದು ಗಾಯ: ಮೃಗಾಲಯದಲ್ಲಿ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ­ಧಿಕಾರಿ ವಿನಯ್‌ ಲೂತ್ರಾ ಸುದ್ದಿಗಾರ­ರೊಂದಿಗೆ ಮಾತನಾಡಿ, ಮುಳ್ಳು-­­ಹಂದಿಯೊಂದು ಹುಲಿಯ ಗದ್ದಕ್ಕೆ ತಿವಿದು ಗಾಯವಾಗಿದೆ. ಅದನ್ನು ಮೃಗಾಲಯದ ವೈದ್ಯರು ಪರೀಕ್ಷಿಸು­ತ್ತಿದ್ದಾರೆ. ಅಲ್ಲದೇ, ಹುಲಿಯು ಶಕ್ತಿಹೀನ­ವಾಗಿದೆ. ಹುಲಿ ಸುಧಾರಿಸಿದ ಬಳಿಕ ಬನ್ನೇರುಘಟ್ಟಕ್ಕೆ ಒಯ್ಯಲು ಕ್ರಮ ಕೈಗೊಳ್ಳ­ಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT